varthabharthi


ಸಂಪಾದಕೀಯ

ಬೆಳಗಾವಿ: ಮರಾಠಿ ಭಾಷಿಗರಿಗೆ ಬೆಣ್ಣೆ

ವಾರ್ತಾ ಭಾರತಿ : 8 Feb, 2023

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ಬೆಳಗಾವಿ  ಸರಕಾರಕ್ಕೆ ನೆನಪಾಗುವುದು ಗಡಿ ವಿವಾದದ ಸಂದರ್ಭದಲ್ಲಿ ಮಾತ್ರ. ಇತ್ತೀಚೆಗೆ ಬೆಳಗಾವಿ ಗಡಿಯನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದಾಗ, ಸರಕಾರ ಪ್ರತಿ ಹೇಳಿಕೆಗಳನ್ನು ನೀಡಿ ತನ್ನ ಕನ್ನಡ ಪ್ರೇಮವನ್ನು ಮೆರೆಯಿತು. ‘ಬೆಳಗಾವಿ ಎಂದೆಂದಿಗೂ ಕರ್ನಾಟಕದ ಭಾಗ’ ಎಂದು ಘೋಷಿಸಿ ಮೀಸೆ ತಿರುವಿಕೊಂಡಿತು. ಇದೇ ಸಂದರ್ಭದಲ್ಲಿ ಗಡಿ, ಭಾಷೆಯ ಹೆಸರಿನಲ್ಲಿ ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಜನರು ಕೈ ಕೈ ಮಿಲಾಯಿಸಿದರು. ಸರಕಾರ ಅದೇನೇ ಘೋಷಣೆಗಳನ್ನು ಮಾಡಿದರೂ, ಸವಾಲುಗಳು ಹಾಕಿದರೂ ಅಂತಿಮವಾಗಿ ಬೆಳಗಾವಿ ಮರಾಠಿಗರಿಗೆ ಸೇರಬೇಕೋ, ಕನ್ನಡಿಗರಿಗೆ ಸೇರಬೇಕೋ ಎನ್ನುವುದನ್ನು ನಿರ್ಧರಿಸುವುದು ಬೆಳಗಾವಿಯ ಜನರು. ಎಲ್ಲಿಯವರೆಗೆ ಬೆಳಗಾವಿಯ ಜನರಲ್ಲಿ ಕನ್ನಡತನವಿರುತ್ತದೋ ಅಲ್ಲಿಯವರೆಗೆ ಬೆಳಗಾವಿ ಕನ್ನಡಿಗರದ್ದಾಗಿರುತ್ತದೆ. ಬೆಳಗಾವಿಯ ಜನರು ಕನ್ನಡವನ್ನು ಮರೆತು ಮರಾಠಿಯ ಬೆನ್ನು ಹತ್ತಿದರೆ, ಬೆಳಗಾವಿ ಭೌಗೋಳಿಕವಾಗಿ ಕರ್ನಾಟಕದಲ್ಲಿದ್ದರೂ, ಮಾನಸಿಕವಾಗಿ ಮಹಾರಾಷ್ಟ್ರ ದ ಪಾಲಾಗಿರುತ್ತದೆ. ಆದುದರಿಂದ ಬೆಳಗಾವಿಯನ್ನು ಕರ್ನಾಟಕದ ಭಾಗವಾಗಿ ಉಳಿಸುವ ಒಂದೇ ಒಂದು ದಾರಿಯೆಂದರೆ, ಬೆಳಗಾವಿಯಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವುದು.

ಬೆಳಗಾವಿ ವಿಚಾರದಲ್ಲಿ ಮಹಾಜನ ವರದಿಯೇ ಅಂತಿಮ ಎನ್ನುವ ಹೇಳಿಕೆಗಳನ್ನು ಆಗಾಗ ರಾಜ್ಯದ ನಾಯಕರು ನೀಡುತ್ತಾರೆ. ಮಹಾಜನ ವರದಿ ನೀಡುವಾಗ ಬೆಳಗಾವಿಯಲ್ಲಿ ಕನ್ನಡ ಭಾಷಿಗರ ಸಂಖ್ಯೆ ಎಷ್ಟಿತ್ತೋ ಅದೇ ಪ್ರಮಾಣದಲ್ಲಿ ಇಂದಿಗೂ ಬೆಳಗಾವಿಯಲ್ಲಿ ಕನ್ನಡಿಗರ ಸಂಖ್ಯೆ ಇದೆಯೆ? ಎನ್ನುವ ಪ್ರಶ್ನೆಯನ್ನು ನಮ್ಮನ್ನಾಳುವ ನಾಯಕರು ತಮಗೆ ತಾವೇ ಕೇಳಿಕೊಳ್ಳಬೇಕು. ಮಹಾಜನ ವರದಿ ಹೊರ ಬಂದಾಗ ಅದು ಉಲ್ಲೇಖಿಸಿದ ಹತ್ತು ಹಲವು ವಿವರಗಳು ಇಂದು ತಿರುವು ಮುರುವಾಗಿವೆ. ಇಂದಿಗೂ ಬೆಳಗಾವಿಯ ಕುರಿತಂತೆ ರಾಜ್ಯ ಸರಕಾರ ಬೆಂಗಳೂರಿನಲ್ಲೊಂದು ನಿಲುವು, ಬೆಳಗಾವಿಯಲ್ಲೊಂದು ನಿಲುವನ್ನು ತಳೆಯುತ್ತಾ ಬಂದಿದೆ. ಬೆಂಗಳೂರಿನಲ್ಲಿ ಬೆಳಗಾವಿಯ ಕನ್ನಡಿಗರ ಪರವಾಗಿ ಹೇಳಿಕೆಯನ್ನು ನೀಡುವ ಬಿಜೆಪಿ ನಾಯಕರು, ಬೆಳಗಾವಿಯಲ್ಲಿ  ಕನ್ನಡಿಗರ ಜೊತೆಗೆ ಮಲತಾಯಿ ಧೋರಣೆಯನ್ನು ತಳೆಯುತ್ತಾ ಬರುತ್ತಿದ್ದಾರೆ. ಬೆಳಗಾವಿ ಕನ್ನಡಿಗರಿಗೆ ಸೇರಿದ್ದು ನಿಜವೇ ಆಗಿದ್ದರೆ, ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನವನ್ನು ಬಿಜೆಪಿ ಯಾಕೆ ಮರಾಠಿ ಮಾತೃ ಭಾಷಿಗರಿಗೆ ಬಿಟ್ಟುಕೊಟ್ಟಿತು ಎನ್ನುವ ಪ್ರಶ್ನೆಯನ್ನು ಇದೀಗ ಬೆಳಗಾವಿಯ ಕನ್ನಡಿಗರು ಕೇಳುತ್ತಿದ್ದಾರೆ. ಬೆಳಗಾವಿಯಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ ಮಾತ್ರವಲ್ಲ, ಅವರ ಅಳಲನ್ನು ಕೇಳುವವರೇ ಇಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಪೂರ್ಣ ಪ್ರಮಾಣದಲ್ಲಿ ಬಿಜೆಪಿಯ ತೆಕ್ಕೆಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಕನ್ನಡಿಗರನ್ನೇ ಮೇಯರ್, ಉಪಮೇಯರ್ ಆಗಿ ಆಯ್ಕೆ ಮಾಡಿ ಆ ಮೂಲಕ ಬೆಳಗಾವಿಯು ಕನ್ನಡಿಗರ ಸೊತ್ತು ಎನ್ನುವುದನ್ನು  ಘೋಷಿಸುವ ಅವಕಾಶ ಬಿಜೆಪಿಗೆ ಇತ್ತು. ಅಥವಾ ಕನಿಷ್ಠ ಮೇಯರ್ ಸ್ಥಾನವನ್ನಾದರೂ ಕನ್ನಡಿಗರಿಗೆ ಮೀಸಲಿಡಬಹುದಿತ್ತು. ಆದರೆ ಬಿಜೆಪಿ ಕನ್ನಡತನವನ್ನು ಬದಿಗಿಟ್ಟು ‘ರಾಷ್ಟ್ರೀಯತೆ-ಹಿಂದುತ್ವ’ದ ಮರೆಯಲ್ಲಿ  ಬೆಳಗಾವಿ ಮಹಾನಗರ ಪಾಲಿಕೆಯನ್ನು ಮರಾಠಿಗರ ಕೈಗೆ ಒಪ್ಪಿಸಿದೆ. ಪರೋಕ್ಷವಾಗಿ ಬೆಳಗಾವಿ ಯಾರ ಕೈಯಲ್ಲಿದೆ ಎನ್ನುವುದನ್ನು ಬಿಜೆಪಿಯ ಈ ನಿರ್ಧಾರ ಬಹಿರಂಗಪಡಿಸುತ್ತದೆ.  ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಮರಾಠಿ ಭಾಷಿಗರ ಮತಗಳನ್ನು ತಮ್ಮದಾಗಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನುವುದು ಬೆಳಗಾವಿ ಕನ್ನಡಿಗರ ಅಳಲಾಗಿದೆ. ಬೆಳಗಾವಿಯಲ್ಲಿ ಮರಾಠಿಗರು ಪ್ರಬಲರಾಗಿದ್ದಾರೆ ಮತ್ತು ಚುನಾವಣೆಯಲ್ಲಿ ಅವರ ಮತಗಳೇ ನಿರ್ಣಾಯಕ ಎನ್ನುವ ಕಾರಣದಿಂದ ಸರಕಾರ ಮೇಯರ್, ಉಪಮೇಯರ್ ಸ್ಥಾನಗಳನ್ನು ಮರಾಠಿ ಭಾಷಿಗರಿಗೆ ನೀಡಿದೆ ಎನ್ನುವುದನ್ನು ಬಿಜೆಪಿಯೊಳಗಿರುವ ಕನ್ನಡಿಗರು ಆಡಿಕೊಳ್ಳುತ್ತಿದ್ದಾರೆ. ಕನ್ನಡಿಗರ ಕಣ್ಣಿಗೆ ಮಣ್ಣೆರಚುವುದಕ್ಕಾಗಿ, ಮೇಯರ್ ಅವರು ಮರಾಠಿ ಲಿಪಿಯಲ್ಲಿ ಬರೆದು ಕನ್ನಡ ಭಾಷಣ  ಓದುವಂತಹ ಸ್ಥಿತಿ ನಿರ್ಮಾಣವಾಯಿತು.

ಬೆಳಗಾವಿಯಲ್ಲಿ ಮರಾಠಿಗರಿಗೆ ಸದಾ ರಾಜ್ಯ ಸರಕಾರ ಬೆಣ್ಣೆಯನ್ನೇ ಹಂಚಿಕೊಂಡು ಬಂದಿದೆ. ಹಂಪಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡದ ಅಭಿವೃದ್ಧಿಗೆ ನೀಡುತ್ತಿರುವ ಅನುದಾನಗಳನ್ನು ಇಳಿಸುತ್ತಾ ಬಂದಿರುವ ಸರಕಾರ ಇದೇ ಸಂದರ್ಭದಲ್ಲಿ, ಮರಾಠಿ ಅಭಿವೃದ್ಧಿ ನಿಗಮವೊಂದನ್ನು ಸ್ಥಾಪಿಸಿ ಅದಕ್ಕೆ ೫೦ ಕೋಟಿ ರೂಪಾಯಿಯನ್ನು ವಾರ್ಷಿಕವಾಗಿ ಮೀಸಲಿರಿಸಿತು. ಒಂದೆಡೆ ಕರ್ನಾಟಕದಲ್ಲಿ ಕನ್ನಡವೇ ಅಳಿವಿನಂಚಿಗೆ ಬಂದು ನಿಂತಿದೆ. ಇದೇ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಅಳಿದುಳಿದ ಕನ್ನಡದ ಜಾಗವನ್ನು ಮರಾಠಿ ಭಾಷೆ ಕಬಳಿಸಿದೆ. ಹೀಗಿರುವಾಗ, ಸರಕಾರ ಏಕಾಏಕಿ ಮರಾಠಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಅದಕ್ಕೆ ೫೦ ಕೋಟಿ ರೂಪಾಯಿಯನ್ನು ಯಾಕೆ ಮೀಸಲಿಸಿರಿಸಿತು? ರಾಜ್ಯದ ಇತರ ಭಾಷೆಗಳನ್ನು ಉಳಿಸುವುದಕ್ಕೆ ಸಹಾಯ ಮಾಡಬಾರದು ಎಂದಲ್ಲ. ರಾಜ್ಯದಲ್ಲಿ ಮಲಯಾಳಂ, ತೆಲುಗು, ತುಳು, ತಮಿಳು ಮೊದಲಾದ ದಕ್ಷಿಣ ಭಾರತದ ಹೆಗ್ಗಳಿಕೆಯಾಗಿರುವ ದ್ರಾವಿಡ ಭಾಷೆಗಳಿಗೆ ಸಣ್ಣ ಪ್ರಮಾಣದಲ್ಲಿ ನೆರವಾದರೆ ಅದಕ್ಕೊಂದು ಸಕಾರಣವಿದೆ. ಆದರೆ ರಾಜ್ಯದಲ್ಲಿ ಮರಾಠಿ ಭಾಷೆಯ ಏಳಿಗೆಗಾಗಿ ನಿಗಮ ಸ್ಥಾಪಿಸುವ ಅಗತ್ಯವೇನಿದೆ? ಯಾಕೆಂದರೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಗಡಿಭಾಗದಲ್ಲಿ ರುವ ಮರಾಠಿಗರನ್ನು ಓಲೈಸಿ ಅವರ ಮತಗಳನ್ನು ತನ್ನದಾಗಿಸುವ ಏಕೈಕ ಉದ್ದೇಶ ಇದರ ಹಿಂದೆ ಇದೆ. ಸರಕಾರವೇ ಈ ಮೂಲಕ ಬೆಳಗಾವಿಯಲ್ಲಿ  ಮರಾಠಿಗರ ಪ್ರಾಬಲ್ಯವನ್ನು ಒಪ್ಪಿಕೊಂಡಂತೆ ಆಗಿದೆ. ಬೆಳಗಾವಿಯಲ್ಲಿ ಮರಾಠಿ ಭಾಷೆಗೆ ಪ್ರೋತ್ಸಾಹ ನೀಡುತ್ತಾ, ಮರಾಠಿ ಮಾತೃಭಾಷಿಗರಿಗೆ ರಾಜಕೀಯವಾಗಿ ಅತ್ಯುನ್ನತ ಸ್ಥಾನಗಳನ್ನು ನೀಡಿ ಕನ್ನಡಿಗರ ಹಿತಾಸಕ್ತಿಯನ್ನು ಕಡೆಗಣಿಸಿದರೆ ಬೆಳಗಾವಿಯನ್ನು ಕರ್ನಾಟಕದ ಭಾಗವಾಗಿ ಉಳಿಯುವುದೆ?  ಸರಕಾರ ಬೆಳಗಾವಿಯ ಕುರಿತಂತೆ ಇರುವ ತನ್ನ ದ್ವಂದ್ವ ನೀತಿಯನ್ನು ಮೊದಲು ಸರಿಪಡಿಸಿಕೊಳ್ಳಬೇಕು.

ಬೆಳಗಾವಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ದಾರಿಯನ್ನು ಸರಕಾರ ಕಂಡುಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಬೆಳಗಾವಿ ಮಹಾರಾಷ್ಟ್ರದ ಪಾಲಾಗುವುದರಲ್ಲಿ ಎರಡು ಮಾತಿಲ್ಲ.  ಬೆಳಗಾವಿಯ ಎಲ್ಲ ಸರಕಾರಿ ಕಚೇರಿಗಳನ್ನು ಮೊತ್ತ ಮೊದಲಾಗಿ ಕನ್ನಡಮಯವಾಗಿಸಬೇಕು. ಅಷ್ಟೇ ಅಲ್ಲ, ಕಚೇರಿಗಳಲ್ಲಿ ಕನ್ನಡ ಅಧಿಕಾರಿಗಳಿಗೆ ಆದ್ಯತೆ ನೀಡಬೇಕು. ರಾಜಕೀಯವಾಗಿ ಅತ್ಯುನ್ನತ ಸ್ಥಾನಗಳನ್ನು ಕನ್ನಡಿಗರಿಗೆ ನೀಡಬೇರಕು. ಬೆಳಗಾವಿಯ ಮೇಯರ್ ಆಗಿ ಕನ್ನಡ ಮಾತೃ ಭಾಷಿಗರನ್ನು ಆಯ್ಕೆ ಮಾಡಿದ್ದಿದ್ದರೆ ಅದು ಬೆಳಗಾವಿಯಲ್ಲಿರುವ ಮರಾಠಿಗರಿಗೆ ಮಾತ್ರವಲ್ಲ, ಮಹಾರಾಷ್ಟ್ರದ ಕಿಡಿಗೇಡಿ ನಾಯಕರಿಗೂ ಸ್ಪಷ್ಟ ಸಂದೇಶವೊಂದನ್ನು ನೀಡಿದಂತಾಗುತ್ತಿತ್ತು.  ಬೆಳಗಾವಿಯಲ್ಲಿರುವ ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬಿದಂತಾಗುತ್ತಿತ್ತು. ಆದರೆ ಬೆಳಗಾವಿ ವಿಷಯದಲ್ಲಿ ಸರಕಾರದ ಮಾತಿಗೂ ಕೃತಿಗೂ ಅಜಗಜಾಂತರವಿದೆ. ಇದು ಖಂಡನೀಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)