varthabharthi


ದಕ್ಷಿಣ ಕನ್ನಡ

ಸುರತ್ಕಲ್: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಫಾಝಿಲ್ ಸಹೋದರನಿಗೆ ಹಲ್ಲೆ; ಆರೋಪ

ವಾರ್ತಾ ಭಾರತಿ : 8 Feb, 2023

ಸುರತ್ಕಲ್: ಇತ್ತೀಚೆಗೆ ಸುರತ್ಕಲ್‌ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಂಗಳಪೇಟೆಯ ಫಾಝಿಲ್ ಅವರ ಸಹೋದರ ಆದಿಲ್‌ರಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಕಾಟಿಪಳ್ಳ ಗಣೇಶಪುರ ಪೇಟೆಯಲ್ಲಿ ಬುಧವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

‘ತಾನು ಬುಧವಾರ ರಾತ್ರಿ 8:30ರ ಸುಮಾರಿಗೆ ಮಂಗಳೂರು ಕಡೆಯಿಂದ ಮಂಗಳಪೇಟೆಯ ತನ್ನ ಮನೆಗೆ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ, ಕಾಟಿಪಳ್ಳ ಗಣೇಶಪುರ ಪೇಟೆಯಲ್ಲಿ ಕಾರಿಗೆ ಸ್ಕೂಟರ್ ಢಿಕ್ಕಿ ಹೊಡೆಸಿದ್ದಾರೆ. ಬಳಿಕ ಕೆಲವರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾರೆ’ ಎಂದು ಆದಿಲ್ ಆರೋಪಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು, ತಕ್ಷಣ ಸ್ಥಳಕ್ಕೆ ಆಗಮಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಯಿಂದ ಗಾಯಗೊಂಡಿರುವ ಆದಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನಾ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಸ್ಥಳಕ್ಕೆ  ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೊಳಗಾದ ಆದಿಲ್‌ರಿಂದ ಮಾಹಿತಿ ಕಲೆ ಹಾಕಿದ್ದಾರೆ.

ಕಾಟಿಪಳ್ಳ ಗಣೇಶಪುರ ಜಂಕ್ಷನ್‌ನಲ್ಲಿ ಇಂದು ರಾತ್ರಿ ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ತಕ್ಷಣ ಸಾರ್ವಜನಿಕರು ಮತ್ತು ಪೊಲೀಸರು ಮಧ್ಯ ಪ್ರವೇಶಿಸಿ ಇತ್ತಂಡಗಳನ್ನು ಚದುರಿಸಿದ್ದಾರೆ. ಎರಡೂ ಕಡೆಯವರು ದೂರು ನೀಡಲು ಬಯಸಿರುವುದಾಗಿ ಹೇಳಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಎನ್. ಶಶಿಕುಮಾರ್,ಪೊಲೀಸ್ ಆಯುಕ್ತರು, ಮಂಗಳೂರು ನಗರ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)