ಕರ್ನಾಟಕ
ಹಾಸನ: ಅಪಹರಣಕ್ಕೊಳಗಾಗಿದ್ದ ಉದ್ಯಮಿಯ ಮೃತದೇಹ ಕಾಡಿನಲ್ಲಿ ಪತ್ತೆ

ಲಿಖಿತ್ ಗೌಡ- ಮೃತ ಉದ್ಯಮಿ
ಹಾಸನ. ಫೆ.8: ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಹಾಸನದ ಉದ್ಯಮಿಯೋರ್ವನ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದ್ದು, ಹಣಕಾಸು ವಿಚಾರಕ್ಕೆ ಆತನನ್ನ ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್ ಗೌಡ (26) ಮೃತ ಯುವಕನಾಗಿದ್ದು, ಈತನ ಮೃತದೇಹ ಹಾಸನ ತಾಲೂಕಿನ ಯೋಗೀಹಳ್ಳಿ ಅರಣ್ಯದಲ್ಲಿ ಪತ್ತೆಯಾಗಿದೆ. ಲಿಖಿತ್ ಗೌಡ ಕೇವಲ ಐದು ತಿಂಗಳ ಹಿಂದೆ ವಿವಾಹವಾಗಿದ್ದರೆನ್ನಲಾಗಿದೆ.
ಈತನ ಸರ್ವೀಸ್ ಸ್ಟೇಷನ್‌ಗೆ ಟ್ಯಾಂಕರ್ ಸರ್ವೀಸ್‌ಗೆ ಬರುತ್ತಿದ್ದ ಟ್ಯಾಂಕರ್ ಚಾಲಕ ಸಾಗ ನೊಂದಿಗೆ ಲಿಖಿತ್ ಗೌಡಗೆ ಸ್ನೇಹ ಬೆಳೆದಿದ್ದು, ಈ ವೇಳೆ ಲಿಖಿತ್‌ಗೌಡನಿಂದ ಸಾಗರ್ ಎಂಬವರು 2.5 ಲಕ್ಷ ರೂ. ಸಾಲ ಪಡೆದಿದ್ದ ಎನ್ನಲಾಗಿದೆ. ಇತ್ತೀಚೆಗೆ ಹಣ ವಾಪಸ್ ಕೇಳಿದಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಫೆ.5ರಂದು ಸಂಜೆ 6:30ರ ಸುಮಾರಿಗೆ ಹಣ ಕೊಡುವುದಾಗಿ ಸಾಗರ್ ಹಾಗೂ ಸ್ನೇಹಿತರು ಓಮಿನಿ ಕಾರಿನಲ್ಲಿ ಲಿಖಿತ್ ಗೌಡನನ್ನು ಕರೆದುಕೊಂಡು ಹೋದರು. ಇದಾದ ಬಳಿಕ ಅಂದಿನಿಂದಲೂ ಎಲ್ಲರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಲಿಖಿತ್ ಗೌಡನ ಪತ್ನಿ ಹಾಗೂ ಪೋಷಕರು ಆರೋಪಿಸಿ ಲಿಖಿತ್ ಗೌಡ ಪತ್ತೆ ಮಾಡಿಕೊಡುವಂತೆ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕುಟುಂಬಸ್ಥರ ದೂರಿನನ್ವಯ ಕೆಲವು ಮಾಹಿತಿಗಳ ಆಧಾರದಲ್ಲಿ ಬುಧವಾರ ಮುಂಜಾನೆಯಿಂದಲೇ ನೂರಾರು ಪೊಲೀಸರು ಕಾಡು ಪ್ರದೇಶದಲ್ಲಿ ಹುಡುಕಿದ್ದು, ಅಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು | ಸೀರೆ ಜೊತೆ ಬೈಕ್ ಚಕ್ರಕ್ಕೆ ಸಿಲುಕಿದ ಕಾಲು: ಗಂಟೆಗಳ ಕಾಲ ನರಳಾಡಿದ ಮಹಿಳೆ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ