varthabharthi


ಉಡುಪಿ

ʼಬಿ.ಸಿ.ರೋಡ್‌ ನ ವಸ್ತುಪ್ರದರ್ಶನದಲ್ಲಿ ಜಯಂಟ್‌ ವೀಲ್‌ ಅನಾಹುತʼ ಎಂಬ ವೈರಲ್‌ ವೀಡಿಯೋದ ಅಸಲಿಯತ್ತೇನು?

ವಾರ್ತಾ ಭಾರತಿ : 8 Feb, 2023

ಮಂಗಳೂರು: ಕಳೆದ ಕೆಲವು ದಿನಗಳಿಂದ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ದೈತ್ಯ ಚಕ್ರದ (giant wheel) ಅಪಘಾತದ ವಿಡಿಯೋ ಒಂದು ದಕ್ಷಿಣ ಕನ್ನಡದ ಬಿಸಿ ರೋಡಿನಲ್ಲಿ ನಡೆದ ಘಟನೆ ಎಂದು ಹರಿದಾಡುತ್ತಿದೆ. ಹಾಗೂ ಈ ಘಟನೆಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿರುವುದಾಗಿಯೂ ಉಲ್ಲೇಖಿಸಲಾಗಿದೆ ಮತ್ತು ಬಾಲಕಿಯ ಫೋಟೊ ಮತ್ತು ವಾಯ್ಸ್‌ ಕ್ಲಿಪ್‌ ಅನ್ನೂ ಹರಿಬಿಡಲಾಗುತ್ತಿದೆ.

ಆದರೆ, ಹರಿದಾಡುತ್ತಿರುವ ವಿಡಿಯೋ 4 ವರ್ಷ ಹಳೆಯ ವಿಡಿಯೋವಾಗಿದ್ದು, ಆಂಧ್ರಪ್ರದೇಶದಲ್ಲಿ ನಡೆದ ಘಟನೆಯ ವಿಡಿಯೋವಾಗಿದೆ ಎಂದು ತಿಳಿದು ಬಂದಿದೆ. 

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದ ಜಾತ್ರೆಯೊಂದರಲ್ಲಿ ಎಂಟು ವರ್ಷದ ಬಾಲಕಿ ದೈತ್ಯ ಚಕ್ರದಿಂದ ಬಿದ್ದು ಮೃತಪಟ್ಟಿದ್ದಳು. ಈ ದುರ್ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ದಕ್ಷಿಣ ಕನ್ನಡ ಬಂಟ್ವಾಳದ ಬಿಸಿ ರೋಡಿನಲ್ಲಿ ನಡೆಯುತ್ತಿರುವ ವಸ್ತುಪ್ರದರ್ಶನದಲ್ಲಿ ಸಂಭವಿಸಿದ ಘಟನೆಯೆಂದು ತಪ್ಪಾಗಿ ಹಂಚಲಾಗುತ್ತಿದೆ.

ʼವಾರ್ತಾಭಾರತಿʼ ಇದರ ಮೂಲವನ್ನು ಇಂಟರ್‌ನೆಟ್‌ ನಲ್ಲಿ ಹುಡುಕಿದಾಗ indiatoday.in 2018ರಲ್ಲಿ ಈ ಕುರಿತ ಸುದ್ದಿಯೊಂದನ್ನು ಪ್ರಕಟಿಸಿರುವುದು ತಿಳಿದು ಬಂತು. 2018ರ ಮೇ 28ರಂದು ಈ ಸುದ್ದಿ ಪ್ರಕಟಿಸಲಾಗಿತ್ತು. ಇದು ಆಂಧ್ರಪ್ರದೇಶದ ಅನಂತಪುರಿಯಲ್ಲಿ ನಡೆದ ಘಟನೆ ಇದಾಗಿದ್ದು, ಮೃತಪಟ್ಟ ಬಾಲಕಿಯ ಹೆಸರು ಶಿವಾನಿ (16) ಎಂದು ಸುದ್ದಿಯಲ್ಲಿ ಉಲ್ಲೇಖಿಸಲಾಗಿತ್ತು. 

ಈ ವೀಡಿಯೊಗೂ ಬಿ.ಸಿ.ರೋಡ್‌ ನಲ್ಲಿ ನಡೆಯುತ್ತಿರುವ ವಸ್ತುಪ್ರದರ್ಶನದಲ್ಲಿರುವ ಜಯಂಟ್‌ ವೀಲ್‌ ಗೂ ಯಾವುದೇ ಸಂಬಂಧವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)