ರಾಷ್ಟ್ರೀಯ
ಕಳೆದ ಐದು ವರ್ಷಗಳಲ್ಲಿ 669 ಕಸ್ಟಡಿ ಸಾವುಗಳು: ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ,ಫೆ.8: ಕಳೆದ ಐದು ವರ್ಷಗಳಲ್ಲಿ (ಎ.1,2017-ಮಾ.31,2022) ದೇಶಾದ್ಯಂತ ಪೊಲೀಸ್ ಕಸ್ಟಡಿಯಲ್ಲಿ ಸಾವಿನ ಒಟ್ಟು 669 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯಸಭೆಯಲ್ಲಿ ತಿಳಿಸಿದೆ.
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ವಿಷಯವನ್ನು ತಿಳಿಸಿರುವ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ)ವು ಒದಗಿಸಿರುವ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.
2021-22ರಲ್ಲಿ 175,2020-21ರಲ್ಲಿ 100,2019-20ರಲ್ಲಿ 112,2018-19ರಲ್ಲಿ 136 ಮತ್ತು 2017-18ರಲ್ಲಿ 146 ಕಸ್ಟಡಿ ಸಾವುಗಳ ಪ್ರಕರಣಗಳು ವರದಿಯಾಗಿದ್ದವು ಎಂದು ರಾಯ್ ತಿಳಿಸಿದರು.
ಎನ್ಎಚ್ಆರ್ಸಿಯು ಎ.1,2017ರಿಂದ ಮಾ.31,2022ರ ನಡುವಿನ ಅವಧಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವಿನ 201 ಪ್ರಕರಣಗಳಲ್ಲಿ ಒಟ್ಟು 5,80,74,998 ರೂ.ಗಳ ವಿತ್ತೀಯ ಪರಿಹಾರವನ್ನು ಮತ್ತು ಒಂದು ಪ್ರಕರಣದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದೆ ಎಂದರು. ಆದರೆ ಸಚಿವರು,ಸಂವಿಧಾನದ ಏಳನೇ ಅನುಸೂಚಿಯಂತೆ ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಾಗಿವೆ ಎಂದು ಸ್ಪಷ್ಟಪಡಿಸಿದರು.
ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ಪ್ರಾಥಮಿಕವಾಗಿ ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ ರಾಯ್,ಆದರೂ ಕೇಂದ್ರ ಸರಕಾರವು ಕಾಲಕಾಲಕ್ಕೆ ಸಲಹಾ ಸೂಚಿಗಳನ್ನು ಹೊರಡಿಸುತ್ತದೆ ಮತ್ತು ಮಾನವ ಹಕ್ಕುಗಳ ರಕ್ಷಣೆ (ಪಿಎಚ್ಆರ್) ಕಾಯ್ದೆ,1993ನ್ನೂ ಜಾರಿಗೊಳಿಸಿದೆ ಎಂದರು. ಸರಕಾರಿ ನೌಕರರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳನ್ನು ಪರಿಶೀಲಿಸಲು ಎನ್ಎಚ್ಆರ್ಸಿ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳು ಈ ಕಾಯ್ದೆಯಡಿ ಸ್ಥಾಪನೆಗೊಂಡಿವೆ.
ಎನ್ಎಚ್ಆರ್ಸಿಯು ಮಾನವ ಹಕ್ಕುಗಳ ಉಲ್ಲಂಘನೆ ದೂರುಗಳನ್ನು ಸ್ವೀಕರಿಸಿದಾಗ ಅದು ಪಿಎಚ್ಆರ್ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ ರಾಯ್,ಮಾನವ ಹಕ್ಕುಗಳ ಕುರಿತು ಉತ್ತಮ ತಿಳುವಳಿಕೆಗಾಗಿ,ವಿಶೇಷವಾಗಿ ಕಸ್ಟಡಿಯಲ್ಲಿರುವ ವ್ಯಕ್ತಿಗಳ ಹಕ್ಕುಗಳ ರಕ್ಷಣೆಯ ಕುರಿತು ಸರಕಾರಿ ನೌಕರರನ್ನು ಸಂವೇದನಾಶೀಲಗೊಳಿಸಲು ಎನ್ಎಚ್ಆರ್ಸಿಯು ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನೂ ಆಯೋಜಿಸುತ್ತದೆ ಎಂದು ತಿಳಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ