ರಾಷ್ಟ್ರೀಯ
ಬಳಕೆದಾರರ ಪರ ಮಾತನಾಡಲು ಟ್ವಿಟರ್ ಗೆ ಹಕ್ಕಿಲ್ಲ: ಹೈಕೋರ್ಟ್ ನಲ್ಲಿ ಕೇಂದ್ರ ಸರಕಾರದ ವಾದ

ಹೊಸದಿಲ್ಲಿ, ಫೆ. 8: ಟ್ವಿಟರ್ ವಿದೇಶಿ ವಾಣಿಜ್ಯ ಸಂಸ್ಥೆಯಾಗಿರುವುದರಿಂದ, ಸರಕಾರದ ಆದೇಶಗಳಿಗೆ ಅನುಗುಣವಾಗಿ ಖಾತೆಗಳು ಸ್ತಂಭನಗೊಂಡವರ ಪರವಾಗಿ ಮಾತನಾಡಲು ಅದಕ್ಕೆ ಹಕ್ಕಿಲ್ಲ ಎಂದು ಕೇಂದ್ರ ಸರಕಾರದ ಮಂಗಳವಾರ ಕರ್ನಾಟಕ ಹೈಕೋರ್ಟ್ನಲ್ಲಿ ವಾದಿಸಿದೆ.
2021 ಫೆಬ್ರವರಿ ಮತ್ತು 2022 ಫೆಬ್ರವರಿ ನಡುವಿನ ಅವಧಿಯಲ್ಲಿ 39 ಟ್ವೀಟ್ಗಳು ಮತ್ತು ಖಾತೆಗಳನ್ನು ಸ್ತಂಭನಗೊಳಿಸುವಂತೆ ಸೂಚಿಸುವ ಕೇಂದ್ರ ಸರಕಾರದ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ.
ನೋಟಿಸ್ ಜಾರಿಗೊಳಿಸದೆ ಜನರ ಖಾತೆಗಳನ್ನು ಸ್ತಂಭನಗೊಳಿಸಿದರೆ ಸಂವಿಧಾನದ 19ನೇ ವಿಧಿ (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸಂಬಂಧಿಸಿದ್ದು)ಯನ್ನು ಉಲ್ಲಂಘಿಸಿದಂತಾಗುತ್ತದೆ ಹಾಗೂ ಖಾತೆಗಳನ್ನು ನಿರ್ಬಂಧಿಸಿರುವುದಕ್ಕೆ ಕಾರಣವನ್ನು ಕೊಡಬೇಕಾಗುತ್ತದೆ ಎಂದು ಟ್ವಿಟರ್ ನ್ಯಾಯಾಲಯದಲ್ಲಿ ವಾದಿಸಿತು.
ಅರ್ಜಿಯ ಅರ್ಹತೆಯನ್ನು ಪ್ರಶ್ನಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್. ಶಂಕರನಾರಾಯಣ, ಈ ಪ್ರಕರಣದಲ್ಲಿ ಟ್ವಿಟರ್ ಸಂತ್ರಸ್ತ ಪಕ್ಷವಲ್ಲ. ಸರಕಾರ ಸ್ವೇಚ್ಛಾನುಸಾರ ವರ್ತಿಸಿದರೆ ಮಾತ್ರ 14ನೇ ವಿಧಿಯಡಿಯಲ್ಲಿ (ಕಾನೂನಿನ ಎದುರು ಸಮಾನತೆ) ಟ್ವಿಟರ್ ನ್ಯಾಯಾಲಯಕ್ಕೆ ಹೋಗಬಹುದಾಗಿದೆ ಎಂದು ಹೇಳಿದರು.
‘‘ಯಾವುದೇ ಖಾತೆಯನ್ನು ಸ್ತಂಭನಗೊಳಿಸುವುದನ್ನು ಟ್ವಿಟರ್ ಪ್ರಶ್ನಿಸುವಂತಿಲ್ಲ. ಯಾಕೆಂದರೆ ಅದಕ್ಕೆ ಸಂವಿಧಾನದ ಅಡಿಯಲ್ಲಿ ಯಾವುದೇ ಕಾನೂನು ಅಥವಾ ಮೂಲಭೂತ ಹಕ್ಕಿಲ್ಲ’’ ಎಂದು ಅವರು ನುಡಿದರು.
ಬಳಕೆದಾರರ ಖಾತೆಗಳನ್ನು ಸ್ತಂಭನಗೊಳಿಸುವಂತೆ ಕೇಂದ್ರ ಸರಕಾರ ನೀಡಿರುವ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಜುಲೈನಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ