varthabharthi


ದಕ್ಷಿಣ ಕನ್ನಡ

ಕೊಂಕಣಿ ಭಾಷಿಗರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ವಿಶ್ವ ಕೊಂಕಣಿ ಕೇಂದ್ರ ಮಹತ್ವದ ಹೆಜ್ಜೆ:ಗೋವಾ ಸಿಎಂ ಪ್ರಮೋದ್ ಸಾವಂತ್

ವಾರ್ತಾ ಭಾರತಿ : 8 Feb, 2023

ಮಂಗಳೂರು, ಫೆ.8: ವಿಶ್ವಾದ್ಯಂತ ಹಂಚಿಹೋಗಿರುವ ಕೊಂಕಣಿ ಭಾಷಿಗರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಮತ್ತು ಭಾಷೆ ಸಂಸ್ಕೃತಿ ಉಳಿವಿಗಾಗಿ ಬಸ್ತಿ ವಾಮನ ಶೆಣೈ ನೇತೃತ್ವದ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರ ಮಹತ್ವದ ಹೆಜ್ಜೆ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಬಸ್ತಿ ವಾಮನ ಶೆಣೈ ಪ್ರತಿಮೆ ಅನಾವರಣ, ಕೇಂದ್ರದ ಸಭಾಂಗಣ, ವಸ್ತು ಪ್ರದರ್ಶನ ಸಭಾಂಗಣ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೊಂಕಣಿ ಭಾಷೆಯ ಬೆಳವಗೆಯಲ್ಲಿ ಕೊಂಕ ಚಲನಚಿತ್ರ, ನಾಟಕ, ಇನ್ನಿತರ ಸಾಹಿತ್ಯ ಪ್ರಕಾರಗಳ ಪಾತ್ರವಿದೆ. ಕೊಂಕಣಿ ಭಾಷಾ ಬೆಳವಗೆಗೆ ಶಿಕ್ಷಣ ದಲ್ಲಿ ಪದವಿ ಹಂತದಲ್ಲಿ ತೃತೀಯ ಭಾಷೆಯಾಗಿ ಓದಲು ಅವಕಾಶವಿದೆ. ದೇಶದ ಅಭಿವೃದ್ಧಿಯಲ್ಲಿ ಭಾಷೆಯ ಬೆಳವಣಿಗೆ, ಸಂಸ್ಕೃತಿಯ ಬೆಳವಣಿಗೆಯೂ ಮುಖ್ಯವಾಗಿದೆ ಎಂದ ಅವರು, ಗೋವಾದಲ್ಲಿ ವಿಶ್ವ ಕೊಂಕ ಸಮ್ಮೇಳನ ನಡೆಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವ ಕೊಂಕಣಿ ಕೇಂದ್ರದ ಪೋಷಕ ಡಾ.ದಯಾನಂದ ಪೈ ಮಾತನಾಡಿ, ಬಸ್ತಿ ವಾಮನ ಶೆಣೈಯವರ ಮೂಲಕ ಕೊಂಕಣಿ ಭಾಷೆ, ಸಾಹಿತ್ಯ ಸಂಸ್ಕೃತಿಯ ಬೆಳಣಿಗೆಗೆ ಕೊಡುಗೆ ನೀಡಲು ಸ್ಥಾಪನೆಗೊಂಡ ಕೇಂದ್ರ ಅದರಂತೆ ಮುಂದುವರಿಯುವಂತಾಗಲಿ ಮತ್ತು ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡಲು ಕರೆ ನೀಡಿದರು.

ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ವಿಶ್ವ ಕೊಂಕಣಿ ಕೇಂದ್ರದ ಪೋಷಕರಾದ ಉಲ್ಲಾಸ್ ಕಾಮತ್, ಮೈಕಲ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ ಸ್ವಾಗತಿಸಿದರು.

ಪ್ರದೀಪ್ ಜಿ. ಪೈ ವಂದಿಸಿದರು. ಸಮಾರಂಭದಲ್ಲಿ ಸಭಾಂಗಣ ಮತ್ತು ವಸ್ತು ಪ್ರದರ್ಶನ ಕೊಠಡಿಗಳ ಕೊಡುಗೆ ನೀಡಿದ ನಂದಗೋಪಾಲ್ ದಂಪತಿ, ಡಾ.ರಮೇಶ್ ನಾಯಕ್ ಮೈರಾ ಅವರನ್ನು ಸಭಾಂ ಗಣದಲ್ಲಿ ಸನ್ಮಾನಿಸಲಾಯಿತು. ವಿನ್ಯಾಸಕಾರ ದಿನೇಶ್ ಶೇಟ್, ಗುತ್ತಿಗೆದಾರ ಸುಧೀರ್ ಶೆಣೈ, ಒಳಾಂಗಣ ವಿನ್ಯಾಸಕಾರ ಬಸ್ತಿ ಮಿಲಿಂದ್ ಶೆಣೈ ಮೊದಲಾದ ವರನ್ನು ಗೌರವಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)