ಅದಾನಿ ಆಟ ಮತ್ತು ಗೋದಿ ಮೀಡಿಯಾಗಳ ಸಂಕಟ
ತನ್ನದು ಗೋಲ್ಡ್ ಸ್ಟ್ಯಾಂಡರ್ಡ್ ಪತ್ರಿಕೋದ್ಯಮ ಎಂದು ಘೋಷಿಸಿಕೊಂಡಿರುವ ಈ ದೇಶದ ಅತಿದೊಡ್ಡ ಮಾಧ್ಯಮ ಸಮೂಹಗಳಲ್ಲಿ ಒಂದು ಇಂಡಿಯಾ ಟುಡೇ ಗ್ರೂಪ್. ಆ ಇಂಡಿಯಾ ಟುಡೇ ತೀರಾ ಇತ್ತೀಚೆಗೆ ತನ್ನ ಮ್ಯಾಗಝಿನ್ ಹಾಗೂ ಎಲ್ಲ ಟಿವಿ ಚಾನೆಲ್‌ಗಳಲ್ಲಿ ಗೌತಮ್ ಅದಾನಿಗೆ 2022ರ ವರ್ಷದ ವ್ಯಕ್ತಿ ಪಟ್ಟ ಕೊಟ್ಟು ಸರಣಿ ಲೇಖನಗಳು, ವಿಶೇಷ ಸಂದರ್ಶನಗಳನ್ನು ಪ್ರಸಾರ ಮಾಡಿತು, ಪ್ರಕಟಿಸಿತು. ''ದಿ ಗ್ರೋಥ್ ಕಿಂಗ್'' ಎಂದು ಬಣ್ಣಿಸಿತ್ತು. ಸಾಲದ್ದಕ್ಕೆ ''ಡಾರ್ಲಿಂಗ್ ಆಫ್ ದಿ ಸ್ಟಾಕ್ ಮಾರ್ಕೆಟ್'' ಎಂದೂ ಕಿರೀಟ ತೊಡಿಸಿತ್ತು.
ಆ ಸಂದರ್ಶನದಲ್ಲಿ ಅದಾನಿ ಇನ್ನಿಲ್ಲದ ಸುಲಲಿತ ಇಂಗ್ಲಿಷ್‌ನಲ್ಲಿ ಒಂದೇ ಒಂದು ಪದ ಆಚೀಚೆ ಆಗದಷ್ಟು ಸ್ಪಷ್ಟವಾಗಿ ಪ್ರತೀ ಪ್ರಶ್ನೆಗೆ ಉತ್ತರಿಸಿ ತಿಂಗಳು ಕಳೆಯುವಾಗ ಅಮೆರಿಕದಿಂದ ಹಿಂಡನ್‌ಬರ್ಗ್ ವರದಿ ಬಂತು. ಎರಡು ವರ್ಷಗಳ ತನಿಖೆಯ ಬಳಿಕ 106 ಪುಟಗಳ 32,000 ಪದಗಳ ಹಾಗೂ 720 ದಾಖಲೆಗಳ ಬಹಳ ವಿವರವಾದ ತನಿಖಾ ವರದಿಯನ್ನು ಅದು ಪ್ರಕಟಿಸಿತು. ಅದಾನಿ ಸಮೂಹ ದಶಕಗಳಿಂದಲೇ ಹೇಗೆ ಸ್ಟಾಕ್ ಮಾರ್ಕೆಟ್‌ನಲ್ಲಿ ವಂಚನೆ ಮಾಡುತ್ತಾ ಬಂದಿದೆ ಎಂದು ಎಳೆಎಳೆಯಾಗಿ ಆ ವರದಿ ಬಯಲು ಮಾಡಿತು. ವರದಿಯ ಕೊನೆಗೆ ಅದಾನಿ ಸಮೂಹಕ್ಕೆ 88 ಪ್ರಶ್ನೆಗಳನ್ನು ಕೇಳಿತು.
ಮೊದಲು ಹಿಂಡನ್‌ಬರ್ಗ್ ವರದಿಯೇ ಆಧಾರರಹಿತ ಎಂದಿತು ಅದಾನಿ ಸಮೂಹ. ಬಳಿಕ ಹಿಂಡನ್‌ಬರ್ಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದಿತು. ಅಮೆರಿಕಕ್ಕೆ ಬಂದು ಇಲ್ಲೇ ನಮ್ಮ ವಿರುದ್ಧ ದಾವೆ ಹೂಡಿ ಎಂದು ಹಿಂಡನ್‌ಬರ್ಗ್ ಕೂಡ ತಿರುಗೇಟು ಕೊಟ್ಟಿತು. ಇದು ಭಾರತದ ಮೇಲಿನ ವ್ಯವಸ್ಥಿತ ದಾಳಿ ಎಂದಿತು ಅದಾನಿ ಸಮೂಹ. ನೀವು ತ್ರಿವರ್ಣ ಧ್ವಜ ಹೊದ್ದುಕೊಂಡು ಭಾರತವನ್ನು ಲೂಟಿ ಹೊಡೆಯುತ್ತಿದ್ದೀರಿ, ನಿಮ್ಮಿಂದಾಗಿ ಭಾರತ ಅಪಾಯದಲ್ಲಿದೆ, ರಾಷ್ಟ್ರೀಯತೆಯ ಹೆಸರಲ್ಲಿ ಈ ವಂಚನೆಯನ್ನು ಮರೆಮಾಚಲು ಅಸಾಧ್ಯ ಎಂದಿತು ಹಿಂಡನ್‌ಬರ್ಗ್. ಅಲ್ಲಿಗೆ ಅದಾನಿ ಸಮೂಹ ಕಾನೂನು ಕ್ರಮದ ಮಾತಾಡುವುದನ್ನು ನಿಲ್ಲಿಸಿತು. ಹಿಂಡನ್‌ಬರ್ಗ್ ಕೇಳಿದ 88 ಪ್ರಶ್ನೆಗಳ ಪೈಕಿ ಯಾವುದಕ್ಕೂ ಅದಾನಿ ಸಮೂಹ ಉತ್ತರಿಸಲಿಲ್ಲ.
ಇಂತಹದೊಂದು ಬೃಹತ್ ತನಿಖಾ ವರದಿ ಮಾಡುವ ಸಾಮರ್ಥ್ಯವಾಗಲಿ, ಉದ್ದೇಶವಾಗಲಿ ನಮ್ಮ ದೇಶದ ಒಂದೇ ಒಂದು ಬೃಹತ್ ಮಾಧ್ಯಮ ಸಂಸ್ಥೆ ತೋರಿಸಲಿಲ್ಲ. ಇರಲಿ. ಅಮೆರಿಕದ ಸಂಸ್ಥೆಯೊಂದು ನಿಮ್ಮ ದೇಶದಲ್ಲಿ ಹೀಗಾಗಿದೆ ಎಂದು ದಾಖಲೆ ಸಮೇತ ತೋರಿಸಿದಾಗಲೂ ಏನಿವು ಗಂಭೀರ ಆರೋಪಗಳು, ಈ ಬಗ್ಗೆ ಅದಾನಿ ಏನು ಹೇಳುತ್ತಾರೆ, ಇಷ್ಟು ದೊಡ್ಡ ಆರೋಪದ ಬಗ್ಗೆ ಸರಕಾರ ಯಾಕೆ ಮಾತಾಡುತ್ತಿಲ್ಲ, ಅದಾನಿ ವಿರುದ್ಧದ ಆರೋಪಗಳ ತನಿಖೆಗೆ ಯಾಕೆ ಇನ್ನೂ ಆದೇಶಿಸಿಲ್ಲ, ಹೀಗಾದರೆ ಜನರ ಹೂಡಿಕೆಯ ಗತಿಯೇನು ಎಂಬಿತ್ಯಾದಿ ಪ್ರಮುಖ ಪ್ರಶ್ನೆಗಳನ್ನಾದರೂ ಕೇಳುವ ಕನಿಷ್ಠ ಜವಾಬ್ದಾರಿ ಇಲ್ಲಿನ ಮಾಧ್ಯಮಗಳಿಗಿತ್ತು.
ಆದರೆ ಈ ದೇಶದ ಬಹುತೇಕ ಮಾಧ್ಯಮಗಳಿಗೂ ವಾಸ್ತವಕ್ಕೂ ದೂರ ದೂರದ ಸಂಬಂಧವೂ ಇಲ್ಲ ಎಂಬುದು ಅದಾನಿ ಹಿಂಡನ್‌ಬರ್ಗ್ ಪ್ರಕರಣದಲ್ಲಿ ಮತ್ತೆ ಸಾಬೀತಾಗಿದೆ.
ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಸಾಮ್ರಾಜ್ಯ ಕುಸಿದಿದೆ. ಅದಾನಿ ಸಮೂಹದ ಎಲ್ಲ ಷೇರುಗಳ ಮೌಲ್ಯ ಪತನಗೊಳ್ಳುತ್ತಲೇ ಇದೆ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಅದಾನಿ ಆಗಲೇ ಟಾಪ್ 20 ಶ್ರೀಮಂತರ ಪಟ್ಟಿಯಿಂದಲು ಹೊರಬಿದ್ದಾಗಿದೆ. ಇದರಿಂದ ದೇಶದ ಅರ್ಥವ್ಯವಸ್ಥೆಗೇ ಅಪಾಯವಾಗಲಿರುವ ಸಾಧ್ಯತೆಗಳ ಬಗ್ಗೆಯೂ ಆರ್ಥಿಕ ಪರಿಣಿತರು ಹೇಳುತ್ತಿದ್ದಾರೆ.
ಆದರೆ ಇವೆಲ್ಲದರ ನಡುವೆ ಅತ್ಯಂತ ಎದ್ದು ಕಾಣುತ್ತಿರುವುದು ಈ ದೇಶದ ಗೋದಿ ಮೀಡಿಯಾಗಳ ಸಂಕಟ. ಜನರ ಬದುಕಿಗೆ ಯಾವ ಸಂಬಂಧವೂ ಇಲ್ಲದ ಯಾವ್ಯಾವುದೋ ಕೆಲಸಕ್ಕೆ ಬಾರದ ವಿಷಯಗಳಿಗೆ ದಿನವೆಲ್ಲ ಬೊಬ್ಬಿಡುವ ಮಾಧ್ಯಮಗಳಿಗೆ ಇದೇಕೆ ಕಾಣಿಸುತ್ತಿಲ್ಲ? ಅವುಗಳ ಆ ಚೀರಾಟ, ಕೂಗಾಟ ಈಗೇಕಿಲ್ಲ?
ಅಮೆರಿಕದಲ್ಲಿ ಕೂತೇ ಹಿಂಡನ್‌ಬರ್ಗ್, ಅದಾನಿಯನ್ನು ಇಷ್ಟೆಲ್ಲಾ ಜಾಲಾಡುವಾಗ ಇಲ್ಲಿನ ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳೆಲ್ಲ ಅದಾನಿಯ ಗುಣಗಾನ ಮಾಡುತ್ತಿದ್ದವು. ಹೋಗಲಿ, ಹಿಂಡನ್‌ಬರ್ಗ್ ವರದಿ ಅಂತಹ ಗಂಭೀರ ಆರೋಪಗಳನ್ನು ಮಾಡಿದ ಮೇಲಾದರೂ ಈ ವಿಚಾರವನ್ನೆತ್ತಿಕೊಂಡು ಚರ್ಚೆ ಮಾಡಿದ, ಅದಾನಿಯನ್ನು ಪ್ರಶ್ನಿಸಿದ ಮಾಧ್ಯಮಗಳೆಷ್ಟು?
ಅದಾನಿ ಹೇಳಿದ ಹಾಗೆ ಹಿಂಡನ್‌ಬರ್ಗ್ ವರದಿಯೇ ಸರಿ ಇಲ್ಲ ಎಂದಿಟ್ಟುಕೊಳ್ಳೋಣ. ಹಾಗಾದರೆ ಹಿಂಡನ್‌ಬರ್ಗ್ ಕೇಳಿರುವ ಆ 88 ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಟ್ಟು ಅದರ ಬಾಯಿ ಮುಚ್ಚಿಸುತ್ತಿಲ್ಲ ಯಾಕೆ ಎಂದು ಅದಾನಿಯನ್ನು ಪ್ರಶ್ನಿಸುವ ಧೈರ್ಯ ಇಲ್ಲಿನ ಒಂದೇ ಒಂದೇ ಟಿವಿ ಚಾನೆಲ್‌ಗಳಿಗೆ ಇಲ್ಲ.
ದೇಶದ ದೊಡ್ಡ ದೊಡ್ಡ ಚಾನೆಲ್‌ಗಳ ಖ್ಯಾತ ನಿರೂಪಕರು, ತಾವು ಮಾತನಾಡಿದರೆ ದೇಶವೇ ತಿರುಗಿ ನೋಡುತ್ತದೆ ಎಂದುಕೊಂಡವರೆಲ್ಲ ಅದಾನಿ ವಿವಾದದ ಬಗ್ಗೆ ಒಂದೇ ಒಂದು ವಸ್ತುನಿಷ್ಠ ಕಾರ್ಯಕ್ರಮ ಕೊಡಲಿಲ್ಲ. ಆಜ್ ತಕ್‌ನ ಸುಧೀರ್ ಚೌಧರಿ, ರಿಪಬ್ಲಿಕ್‌ನ ಅರ್ನಬ್ ಗೋಸ್ವಾಮಿ, ನ್ಯೂಸ್ 18 ಇಂಡಿಯಾದ ಅಮೀಶ್ ದೇವಗನ್, ಅಮನ್ ಚೋಪ್ರಾ, ಟೈಮ್ಸ್ ನೆಟ್‌ವರ್ಕ್‌ನ ನಾವಿಕಾ ಕುಮಾರ್, ರಾಹುಲ್ ಶಿವಶಂಕರ್ ಇವರಾರೂ ತಮ್ಮ ಪ್ರೈಮ್ ಟೈಮ್ ಶೋಗಳಲ್ಲಿ ಅದಾನಿ ಬಗ್ಗೆ ಬಂದಿರುವ ಆರೋಪಗಳ ಬಗ್ಗೆ ಅದಾನಿಯನ್ನು, ಸರಕಾರವನ್ನು ಪ್ರಶ್ನಿಸುವ ಗಂಭೀರ ಚರ್ಚೆ ನಡೆಸಲೇ ಇಲ್ಲ. ಬದಲಿಗೆ ಇವರು ಅದಾನಿ ಕುರಿತ ವರದಿ ನೀಡಿದವರನ್ನೇ ಪ್ರಶ್ನಿಸುವ, ಅದರ ಉದ್ದೇಶವನ್ನು ಶಂಕಿಸುವ ಅದಾನಿ ವಕ್ತಾರರ ಕೆಲಸ ಮಾಡುತ್ತಿದ್ದಾರೆ. ಹಿಂಡನ್‌ಬರ್ಗ್ ವರದಿಯ ಹಿಂದೆ ಅಂತರ್‌ರಾಷ್ಟ್ರೀಯ ಸಂಚಿದೆ, ಗುಜರಾತ್ ಹತ್ಯಾಕಾಂಡದ ಬಗ್ಗೆ ಡಾಕ್ಯುಮೆಂಟರಿ ಮಾಡಿದ ಬಿಬಿಸಿಗೂ ಹಿಂಡನ್‌ಬರ್ಗ್‌ಗೂ ನಂಟಿದೆ, ಚೀನಾ ಪಾತ್ರ ಇರಬಹುದು ಇತ್ಯಾದಿ ಇತ್ಯಾದಿ ಕತೆ ಕಟ್ಟಿ ಜನರನ್ನು ವಂಚಿಸುತ್ತಿದ್ದಾರೆ. ಅದಾನಿಯನ್ನು, ಮೋದಿ ಸರಕಾರವನ್ನು ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಬಹುತೇಕ ಮೀಡಿಯಾ ಸಂಸ್ಥೆಗಳು ಹಿಂಡನ್‌ಬರ್ಗ್ ವರದಿ ಹೊರಬೀಳುತ್ತಿದ್ದಂತೆ, ಯಾರಿಗೂ ಸಣ್ಣ ನೋವಾಗದಂತೆ ಜಾಗರೂಕತೆ ವಹಿಸುತ್ತ, ಪದಗಳನ್ನು ಹೆಕ್ಕಿ ಹೆಕ್ಕಿ ಶಾಸ್ತ್ರಕ್ಕೆ ಒಂದು ವರದಿ ಹಾಕಲು ತಿಣುಕಾಡಿದ್ದೂ ನಡೆಯಿತು.
ಇನ್ನು ಅದಾನಿ ಒಡೆತನಕ್ಕೆ ಬಂದಿರುವ ಎನ್‌ಡಿಟಿವಿಯಂತೂ ಹಿಂಡನ್‌ಬರ್ಗ್ ವರದಿ ಹೊರಬಿದ್ದ ಜನವರಿ 25ರಿಂದ ಜನವರಿ 27ರ ಸಂಜೆಯವರೆಗೂ ಆ ವರದಿ ಬಗ್ಗೆ ಚಕಾರವೆತ್ತದೇ ಕೂತಿತ್ತು. ಅದಾದ ಬಳಿಕ ಎರಡು ಪಿಟಿಐ ವರದಿಗಳನ್ನು ಪ್ರಸಾರ ಮಾಡಿತು. ಒಂದು ಹಿಂಡನ್‌ಬರ್ಗ್ ವರದಿ ನಂತರ ಅದಾನಿ ಗ್ರೂಪ್ ಷೇರುಗಳ ಕುಸಿತಕ್ಕೆ ಸಂಬಂಧಿಸಿದ್ದಾದರೆ, ಇನ್ನೊಂದು, ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದ್ದರ ಕುರಿತ ವರದಿಯಾಗಿತ್ತು. ಅಲ್ಲಿಗೆ, ಏನೋ ಒಂದು ಶಾಸ್ತ್ರ ಮುಗಿಸುವ ತೀರ್ಮಾನಕ್ಕೆ ಬಂದ ಹಾಗಿತ್ತು. ಅದೇ ಸಮೂಹದ ಎನ್‌ಡಿಟಿವಿ ಪ್ರಾಫಿಟ್ ಮತ್ತಿತರ ಚಾನೆಲ್‌ಗಳು ಹಿಂಡನ್‌ಬರ್ಗ್ ಈ ಹಿಂದೆ ಮಾಡಿದ್ದ ಬೇರೆ ಕಂಪೆನಿಗಳ ಕುರಿತ ತನಿಖಾ ವರದಿಗಳ ಬಗ್ಗೆ ವಿವರವಾಗಿ ವರದಿ ಮಾಡಿದ್ದವು.
ಬಿಸಿನೆಸ್ ಸ್ಟ್ಯಾಂಡರ್ಡ್, ಮಿಂಟ್, ಹಿಂದೂ ಬಿಸಿನೆಸ್ ಲೈನ್‌ನಂತಹ ಮುದ್ರಣ ಮಾಧ್ಯಮದ ಪ್ರಮುಖ ಪ್ರಕಟಣೆಗಳು ಮಾತ್ರವೇ ಸ್ವಲ್ಪಗಟ್ಟಿ ದನಿಯಲ್ಲಿ ಹಿಂಡನ್‌ಬರ್ಗ್ ವರದಿಯ ಬಗ್ಗೆ ಪ್ರಕಟಿಸಿದ್ದವು. ಉಳಿದ ಕೆಲವು ಪತ್ರಿಕೆಗಳು ಸಮತೋಲನ ಕಾಯುವ ಅಥವಾ ಅದಾನಿಯ ಪ್ರತಿಕ್ರಿಯೆಯನ್ನು ಮುಖ್ಯವಾಗಿಸುವ ಆಟವಾಡಿದ್ದೂ ಕಂಡುಬಂತು.
ಕೆಲ ತಿಂಗಳ ಹಿಂದೆ, ವಾಶಿಂಗ್ಟನ್ ಪೋಸ್ಟ್ ಕೂಡ ಅದಾನಿ ಕಲ್ಲಿದ್ದಲು ಉದ್ಯಮದ ವಿಚಾರವಾಗಿ ಒಂದು ವರದಿ ಪ್ರಕಟಿಸಿತ್ತು. ಅದಾನಿಯ ಜಾರ್ಖಂಡ್‌ನ ಗೊಡ್ಡಾ ಕಲ್ಲಿದ್ದಲು ಸ್ಥಾವರದ ಬಗ್ಗೆ, ಅದು ಹೇಗೆ ದೇಶಕ್ಕಾಗಲೀ ಜಾರ್ಖಂಡ್‌ಗಾಗಲೀ ಉಪಯೋಗವಿಲ್ಲದಿದ್ದರೂ ಅದಾನಿಗೆ ಮಾತ್ರ ಲಾಭ ತಂದುಕೊಡುತ್ತದೆ ಮತ್ತು ಅದಾನಿ ಕಲ್ಲಿದ್ದಲು ಉದ್ಯಮಕ್ಕೆ ನೆರವಾಗಲು ಮತ್ತು ಸಾವಿರಾರು ಕೋಟಿ ರೂ. ಲಾಭ ಮಾಡಿಕೊಡಲು ಹೇಗೆ ಸರಕಾರ ಕನಿಷ್ಠ ಮೂರು ಬಾರಿ ಕಾನೂನುಗಳನ್ನು ಪರಿಷ್ಕರಿಸಿದೆ ಎಂಬುದನ್ನು ಆ ವರದಿ ಹೇಳಿತ್ತು. ಆಗಲೂ ಇಲ್ಲಿನ ಮಾಧ್ಯಮಗಳದ್ದು ದಿವ್ಯ ಮೌನ.
ಈ ದೇಶದಲ್ಲಿ ಯಾವ ವಿಚಾರವಾಗಿ ಮಾತನಾಡಬೇಕೋ, ಯಾವುದರ ಬಗ್ಗೆ ಧ್ವನಿಯೆತ್ತಬೇಕೋ ಅದನ್ನು ಮಾಧ್ಯಮಗಳು ಮರೆತು ಬಹಳ ಕಾಲವೇ ಆಗಿದೆ. ಅವುಗಳಿಗೆ ತಾವೇನು ಅನ್ನುವುದೇ ಮರೆತುಹೋಗಿದೆ. ಸರಕಾರದ ನಿಷ್ಠಾವಂತ ಆಳುಗಳ ಹಾಗಾಗಿರುವಾಗ, ಅದೇ ಸರಕಾರದ ನಾಯಕರ ಆಪ್ತ ಸ್ನೇಹಿತ ಉದ್ಯಮಿಯ ಬಗ್ಗೆ ಅವು ಹೇಗಾದರೂ ಮಾತನಾಡಲು ಸಾಧ್ಯ, ಅಲ್ಲವೆ?