ದಿಕ್ಸೂಚಿ ಭಾಷಣಕ್ಕೆ ಯಕ್ಷಗಾನ ಕ್ಷೇತ್ರದ ಸಾಧಕರು ಯಾರೂ ಸಿಗಲಿಲ್ಲವೇ?
ಮಾನ್ಯರೇ,
ಕರಾವಳಿಯ ಯಕ್ಷಗಾನವು ಇವತ್ತು ವಿಶ್ವ ಪ್ರಸಿದ್ಧ ಕಲೆಯಾಗಿ ಬೆಳೆದಿದೆ. ಕಳೆದ ಆರು ಶತಮಾನಗಳಿಂದ ಈ ಕಲೆಯು ಬೆಳೆದು ಬಂದ ರೀತಿಯು ಅಚ್ಚರಿ ಹುಟ್ಟಿಸುತ್ತದೆ. ಆ ಕಲೆಯನ್ನು ಅತ್ಯದ್ಭುತವಾಗಿ ಸಂಘಟಿಸುವ ಮಹನೀಯರಿದ್ದಾರೆ, ಯಕ್ಷಗಾನ ಪ್ರಸಂಗಗಳನ್ನು ಬರೆದು ಪ್ರಸಿದ್ಧರಾದವರಿದ್ದಾರೆ. ಯಕ್ಷಗಾನ ಕಲಾವಿದರು ಪುರಾಣ, ಇತಿಹಾಸ ಮತ್ತು ವರ್ತಮಾನಗಳನ್ನು ಬೆಸೆದು ರಂಗಭೂಮಿಯ ಮೇಲೆ ವಿಸ್ಮಯಗಳನ್ನೇ ಸೃಷ್ಟಿಸಿದ್ದಾರೆ. ಯಕ್ಷಗಾನ ವಿಮರ್ಶೆಯೂ ಸರ್ವಾಂಗೀಣವಾಗಿ ಬೆಳೆದಿದೆ. ಈ ಕಲೆಯಲ್ಲಿನ ಭಾಗವತರು, ಚಂಡೆ ವಾದಕರು, ಮದ್ದಲೆ ವಾದಕರು ತಮ್ಮದೇ ರೀತಿಯ ಶೈಲಿಗಳನ್ನೇ ನಿರ್ಮಿಸಿ ಕರ್ನಾಟಕ ಸಂಸ್ಕೃತಿಯ ಘನತೆಯನ್ನು ವಿಸ್ತರಿಸಿದ್ದಾರೆ. ಇಂತಹ ಮಹಾನ್ ಕಲೆಯೊಂದರ ರಾಜ್ಯ ಸಮ್ಮೇಳನ ನಡೆಯುವುದು ಅತ್ಯಂತ ಅವಶ್ಯಕವಾಗಿತ್ತು ಮತ್ತು ಅದೀಗ ನಡೆಯುತ್ತಿದೆ. ಹಿರಿಯ ಕಲಾವಿದರಾದ ಪ್ರಭಾಕರ ಜೋಶಿಯವರು ಅದರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಇದು ಯಕ್ಷಗಾನ ಪ್ರಿಯರಿಗೆ ಸಂತೋಷ ಕೊಡುವ ವಿಷಯವೇ ಹೌದು.
ಆದರೆ, ಸಮ್ಮೇಳನದ ದಿಕ್ಸೂಚಿ ಭಾಷಣಕ್ಕೆ ಸಂಘಟಕ, ಕಲಾವಿದ, ಪ್ರಸಂಗ ಕರ್ತ ಅಥವಾ ವಿಮರ್ಶಕನೂ ಅಲ್ಲದ ರೋಹಿತ್ ಚಕ್ರತೀರ್ಥರನ್ನು ಆರಿಸಲಾಗಿದೆ. ಯಕ್ಷಗಾನ ಲೋಕದಲ್ಲಿ ಚಕ್ರತೀರ್ಥರಿಗಿಂತ ಬಹಳ ಸಾಧನೆ ಮಾಡಿರುವ ಡಾ. ವಿವೇಕ ರೈ, ಡಾ. ಚಿನ್ನಪ್ಪಗೌಡ, ಡಾ. ಚಂದ್ರಶೇಖರ ದಾಮ್ಲೆ, ಡಾ. ರಾಘವ ನಂಬಿಯಾರ್, ಡಾ. ಪಾದೆಕಲ್ಲು ವಿಷ್ಣು ಭಟ್, ಡಾ. ವಸಂತ ಭಾರದ್ವಾಜ್, ಡಾ. ನಾಗವೇಣಿ ಮಂಚಿ, ರಾಧಾಕೃಷ್ಣ ಕಲ್ಚಾರ್, ಕಲಾವಿದ ಜಬ್ಬಾರ್ ಸಮೋ, ಡಾ. ಪೃಥ್ವಿರಾಜ ಕವತ್ತಾರ್, ಡಾ. ಆನಂದ ರಾಮ ಉಪಾಧ್ಯಾಯ, ಡಾ. ಜಿ.ಎಸ್. ಭಟ್, ಗೋಪಾಲಕೃಷ್ಣ ಭಾಗವತ, ಕೆರೆಮನೆ ಶಿವಾನಂದ ಹೆಗಡೆ, ವಿದ್ವಾನ್ ರಂಗ ಭಟ್ಟ ಮೊದಲಾದ ಅಸಂಖ್ಯ ಮಹನೀಯರಿದ್ದಾರೆ. ಈ ಮಹನೀಯರು ಯಕ್ಷಗಾನದ ಯಾವುದೇ ಕ್ಷೇತ್ರದ ಮೇಲೆ ಅಧಿಕೃತವಾಗಿ ಮಾತಾಡಬಲ್ಲ ಧೀಮಂತರು. ಇಂತಹವರನ್ನು ಬದಿಗೊತ್ತಿ, ದಿಕ್ಸೂಚಿ ಭಾಷಣಕ್ಕೆ ರೋಹಿತ್ ಚಕ್ರತೀರ್ಥರಂಥವರನ್ನು ಕರೆದಿರುವುದು ಆ ಕಲೆಗೆ ಮಾಡಿದ ಬಹುದೊಡ್ಡ ಅವಮಾನ ಎಂದು ನಾವು ಭಾವಿಸುತ್ತೇವೆ. ಸಂಘಟಕರು ಈ ಕಡೆ ಗಮನ ಹರಿಸಬೇಕೆಂದು ನಾವು ಒತ್ತಾಯಿಸುತ್ತೇವೆ.
-ಪುರುಷೋತ್ತಮ ಬಿಳಿಮಲೆ
ಉದ್ಯಾವರ ನಾಗೇಶ ಕುಮಾರ್
ಕುಂಬ್ಳೆ ಸದಾಶಿವ ಮಾಸ್ತರ್
ಶ್ರೀನಿವಾಸ ಕಾರ್ಕಳ