ಜನತೆಯ ವಿಶ್ವಾಸದ ರಕ್ಷಾ ಕವಚದ ಮರೆಯಲ್ಲಿ ಘನತೆ ಮರೆತ ಮಾತುಗಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ರಧಾನಿ ಮೋದಿಯವರನ್ನು ದೇಶದ ಬಹುಪಾಲು ಮಾಧ್ಯಮಗಳು ಅತ್ಯುತ್ತಮ ವಾಗ್ಮಿ ಮತ್ತು ಜನರ ಜೊತೆ ಸಹಜವಾಗಿ ಸಂವಾದಿಸಬಲ್ಲ ಸಂವಹನಕಾರ ಎಂದೆಲ್ಲಾ ಬಣ್ಣಿಸುತ್ತವೆ. ಆದರೆ ಮೊನ್ನೆ ಪ್ರಧಾನಿಗಳು ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಮರ್ಪಿಸುತ್ತಾ ಮಾಡಿದ ಭಾಷಣ ಪ್ರಾಯಶಃ ಭಾರತದ ಸಂಸದೀಯ ಇತಿಹಾಸದಲ್ಲಿ ಪ್ರಧಾನಿಯೊಬ್ಬರ ಅತ್ಯಂತ ಕೆಟ್ಟ ಭಾಷಣ ಎಂದು ದಾಖಲಾಗುತ್ತದೆ. ಪ್ರಧಾನಿಗಳ 80 ನಿಮಿಷಗಳ ಭಾಷಣದಲ್ಲಿ ಎಂದಿನಂತೆ ಕಾವ್ಯಾತ್ಮಕ ಪದಪುಂಜಗಳು, ಏಕವಾಕ್ಯ ಕುಟುಕುಗಳು, ವಿರೋಧಿಗಳ ಕಾಲೆಳೆಯುವ ವಿಡಂಬನೆ, ತಮ್ಮ ಸರಕಾರದ ಸಾಧನೆಗಳ ಪಟ್ಟಿ ಎಲ್ಲವೂ ಇದ್ದವು. ಆದರೆ ಅದರಲ್ಲಿ ಜಗತ್ತಿನ ಅತಿದೊಡ್ಡ ಪ್ರಜಾತಂತ್ರದ ದೇಶವೊಂದರ ಪ್ರಧಾನಿ ತೋರಬೇಕಿದ್ದ ಘನತೆ ಮತ್ತು ನೈತಿಕತೆ ಮಾತ್ರ ಸಂಪೂರ್ಣವಾಗಿ ಗೈರುಹಾಜರಾಗಿತ್ತು. ಈ ಸಂಸತ್ ಅಧಿವೇಶನವು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಾರ್ಪೊರೇಟ್ ಭ್ರಷ್ಟಾಚಾರ ಮತ್ತು ಅದಕ್ಕೆ ಆಡಳಿತಾರೂಢ ಸರಕಾರ ಕುಮ್ಮಕ್ಕಾಗಿರುವ ಬಗ್ಗೆ ಬಯಲಾದ ವರದಿಯ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಸಹಜವಾಗಿಯೇ ವಿರೋಧ ಪಕ್ಷಗಳು ಈ ಕಾರ್ಪೊರೇಟ್ ವಂಚನೆ ಹಾಗೂ ಅದನ್ನು ತಡೆಗಟ್ಟದ ಸರಕಾರ ನೀಡಿರಬಹುದಾದ ಕುಮ್ಮಕ್ಕಿನ ಬಗ್ಗೆ ಜವಾಬ್ದಾರಿಯುತವಾಗಿಯೇ ಪ್ರಶ್ನೆಗಳನ್ನು ಕೇಳಿವೆ.
ಒಂದು ಪ್ರಜಾತಂತ್ರದಲ್ಲಿ ಆಡಳಿತಾರೂಢ ಸರಕಾರದಷ್ಟೇ ವಿರೋಧ ಪಕ್ಷಗಳಿಗೂ ದೇಶದ ಮತ್ತು ಜನರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿ ಇರುತ್ತದೆ. ಈ ಪ್ರಶ್ನೆಗಳನ್ನು ಸಂಸತ್ತಿನ ಮೂಲಕ ದೇಶದ ಮುಂದೆ ಇರಿಸಿ ವಿರೋಧ ಪಕ್ಷಗಳು ಜನರು ತಮಗೆ ವಹಿಸಿರುವ ಕರ್ತವ್ಯವನ್ನು ನಿರ್ವಹಿಸಿವೆ. ಆದರೆ ಸರಕಾರ ಮತ್ತು ಪ್ರಧಾನಿ ಮೋದಿ ಅಷ್ಟೇ ಜವಾಬ್ದಾರಿಯಿಂದ ನಡೆದುಕೊಳ್ಳಲಿಲ್ಲ. ಮಾತ್ರವಲ್ಲ, ಸಂಸತ್ತಿನಲ್ಲಿ ಪ್ರಧಾನಿ ಮೋದಿ ನಡೆದುಕೊಂಡ ರೀತಿ ಮಾತ್ರ ಪ್ರಜಾತಂತ್ರವನ್ನೇ ಅವಹೇಳನ ಮಾಡುವಂತಿತ್ತು. ಅವರು ದೇಶವು ಕೇಳಿದ ಗಂಭೀರ ಪ್ರಶ್ನೆಗಳನ್ನು ಪರಿಗಣಿಸುವ ಗೋಜಿಗೂ ಹೋಗಲಿಲ್ಲ. ಬದಲಿಗೆ ತಮ್ಮ ಎಂದಿನ ಚುನಾವಣಾ ಪ್ರಚಾರದ ಶೈಲಿಯಲ್ಲಿ ಸರಕಾರದ ವೈಫಲ್ಯಗಳ ಬಗ್ಗೆ ಉತ್ತರ ಕೊಡದೆ ಈ ಹಿಂದಿನ ಯುಪಿಎ ಸರಕಾರದ ವೈಫಲ್ಯಗಳ ಬಗ್ಗೆಯೇ ಅತ್ಯಂತ ಕೀಳು ಅಭಿರುಚಿಯಲ್ಲಿ ಲೇವಡಿ ಮಾಡತೊಡಗಿದರು. ವಾಸ್ತವದಲ್ಲಿ ಅದಾನಿ ಸಮೂಹದ ಭ್ರಷ್ಟಾಚಾರ ಮತ್ತು ಮೋಸದ ಹಗರಣದಲ್ಲಿ ಅತಿಮುಖ್ಯ ಪ್ರಶ್ನೆಗಳು ಹುಟ್ಟಿರುವುದು ಪ್ರಧಾನಿ ಮೋದಿಯವರ ಪಾತ್ರದ ಬಗ್ಗೆಯೇ. ಹೀಗಾಗಿ ಅದನ್ನು ಅನುಮಾನಕ್ಕೆಡೆಗೊಡದಂತೆ ಬಗೆಹರಿಸುವ ಜವಾಬ್ದಾರಿ ಪ್ರಧಾನಿಯವರಿಗಿತ್ತು ಮತ್ತು ಸಂಸತ್ತು ಅದಕ್ಕೆ ಸರಿಯಾದ ವೇದಿಕೆಯಾಗಿತ್ತು. ಏಕೆಂದರೆ ಮೋದಿಯವರ ಪಾತ್ರದ ಬಗ್ಗೆ ಎದ್ದಿರುವ ಅನುಮಾನಗಳಿಗೆ ಹಲವಾರು ಐತಿಹಾಸಿಕ ಹಾಗೂ ಸಮಕಾಲೀನ ಕಾರಣಗಳೂ ಇವೆ. 2002ರಲ್ಲಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಡೆದ ಮುಸ್ಲಿಮರ ನರಮೇಧದಲ್ಲಿ ಮೋದಿಯವರ ಪರೋಕ್ಷ ಪಾತ್ರವನ್ನು ಈ ದೇಶದ ಕಾರ್ಪೊರೇಟ್ ಉದ್ಯಮಿಗಳು ಒಕ್ಕೊರಲಿನಿಂದ ಖಂಡಿಸಿದ್ದರು. ಆ ಹೊತ್ತಿನಲ್ಲಿ ಮೋದಿಯ ಸಹಾಯಕ್ಕೆ ಬಂದವರು ಅದಾನಿ. ಅದಾನಿಯವರ ಸಹಕಾರದಿಂದಾಗಿಯೇ ಕೆಲವೇ ವರ್ಷಗಳಲ್ಲಿ ಕಾರ್ಪೊರೇಟ್ ವಲಯವು ಒಕ್ಕೊರಲಿನಿಂದ ಪ್ರಧಾನಿ ಸ್ಥಾನಕ್ಕೆ ಅಭ್ಯರ್ಥಿಯಂತೆ ಘೋಷಿಸುವಂತಾಗಿತ್ತು. ಇದಕ್ಕೆ ಪ್ರತಿಯಾಗಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲೂ, 2014ರ ನಂತರ ಪ್ರಧಾನಿಯಾದ ಮೇಲೂ ಅದಾನಿಯವರ ಸಾಮ್ರಾಜ್ಯದ ವಿಸ್ತರಣೆಗೆ ಎಲ್ಲಾ ಕಾನೂನು ಕಟ್ಟಲೆಗಳನ್ನು ಉಲ್ಲಂಘಿಸಿ ಸಹಾಯ ಮಾಡಿದರು ಎಂಬುದು ಅವರ ಮೇಲಿರುವ ಆರೋಪ.
ಅಷ್ಟು ಮಾತ್ರವಲ್ಲ, ದೇಶದ ಹಲವಾರು ಸಾರ್ವಜನಿಕ ಸಂಸ್ಥೆಗಳ ನಿರ್ವಹಣೆಯನ್ನು ಯಾವುದೇ ಪರಿಣತಿ ಇಲ್ಲದಿದ್ದರೂ ಅದಾನಿಯವರ ವಶಕ್ಕೆ ನೀಡಿದ ಮತ್ತು ಸಾರ್ವಜನಿಕ ಬ್ಯಾಂಕುಗಳು ಮತ್ತು ವಿಮಾ ಸಂಸ್ಥೆಗಳು ಮುಳುಗುತ್ತಿರುವ ಅದಾನಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಒತ್ತಡ ಮಾಡಿದರೆಂಬ ಆರೋಪವೂ ಮೋದಿಯವರ ಮೇಲಿದೆ. ಉದಾಹರಣೆಗೆ ವಿರೋಧ ಪಕ್ಷಗಳು ಪ್ರಧಾನಿಯವರಿಂದ ಉತ್ತರಬಯಸಿದ ಪ್ರಶ್ನೆಗಳು ಇವು: ಯಾವುದೇ ಪರಿಣತಿ ಇಲ್ಲದ ಅದಾನಿ ಸಮೂಹಕ್ಕೆ ಏರ್‌ಪೋರ್ಟ್ ನಿರ್ವಹಣೆಯ ಗುತ್ತಿಗೆಯನ್ನು ನೀಡಬಾರದೆಂದು ಸರಕಾರದ ಹಣಕಾಸು ಇಲಾಖೆ ಮತ್ತು ನೀತಿ ಅಯೋಗವು ಆಕ್ಷೇಪಣೆ ಮಾಡಿದ್ದರೂ ಸರಕಾರ ಅದಾನಿ ಸಮೂಹಕ್ಕೆ ಗುತ್ತಿಗೆ ನೀಡಿದ್ದೇಕೆ? ಅದಾನಿ ಸಮೂಹದ ಅವ್ಯವಹಾರಗಳ ಬಗ್ಗೆ ಹಿಂಡನ್‌ಬರ್ಗ್ ಸಂಶೋಧನಾ ಸಂಸ್ಥೆ ಎತ್ತಿದ ಪ್ರಶ್ನೆಗಳನ್ನು ಭಾರತದ ರೆಗ್ಯುಲೇಟರಿ ಸಂಸ್ಥೆಗಳಾದ ಸೆಬಿ ಮತ್ತು ಆರ್‌ಬಿಐಗಳು ಏಕೆ ಈ ಹಿಂದೆಯೇ ಕೇಳಲಿಲ್ಲ? ಪ್ರತೀ ಕಂಪೆನಿಯ ಶೇರಿನ ಗಳಿಕೆಯ ಮಾರುಕಟ್ಟೆ ಮೌಲ್ಯ ಮತ್ತು ಅದರ ಪ್ರತೀ ಶೇರಿನ ಗಳಿಕೆಯ ಅನುಪಾತ ಸಾಮಾನ್ಯವಾಗಿ 20ಕ್ಕಿಂತ ಜಾಸ್ತಿ ಇರುವುದಿಲ್ಲವಾದರೂ, ಅದಾನಿ ಸಮೂಹದ ಅನುಪಾತ 800ರಷ್ಟು ಹೆಚ್ಚಾಗಿದ್ದರೂ ರೆಗ್ಯುಲೇಟರಿ ಸಂಸ್ಥೆಗಳಿಗೇಕೆ ಅನುಮಾನ ಬರಲಿಲ್ಲ? ಹೊರದೇಶಗಳ ಕೆಲವು ಶೆಲ್ ಕಂಪೆನಿಗಳು ಕೇವಲ ಅದಾನಿ ಸಮೂಹದಲ್ಲಿ ಮಾತ್ರ ಹೂಡುತ್ತಿರುವುದರ ರಹಸ್ಯವೇನು? ಖಾಸಗಿ ಮ್ಯೂಚ್‌ವೆಲ್ ಫಂಡ್ ಸಂಸ್ಥೆಗಳು ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರದಿದ್ದರೂ ಸಾರ್ವಜನಿಕ ಸಂಸ್ಥೆಗಳಾದ ಎಲ್‌ಐಸಿ ಮತ್ತು ಸ್ಟೇಟ್ ಬ್ಯಾಂಕ್ ಮಾತ್ರ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದೇಕೆ? ಮುಂಬೈ ಏರ್‌ಪೋರ್ಟ್ ನಿರ್ವಹಣೆ ಮಾಡುತ್ತಿದ್ದ ಜಿವಿಕೆ ಸಂಸ್ಥೆಯ ಕಾಂಟ್ರಾಕ್ಟನ್ನು ರದ್ದು ಮಾಡಿ ಅದಾನಿ ಸಮೂಹಕ್ಕೆ ಕೊಟ್ಟ ಕಾರಣವೇನು? ಇವಲ್ಲದೆ ಮೋದಿಯವರು ವಿದೇಶಿ ಪ್ರವಾಸಕ್ಕೆ ಹೋದ ದೇಶಗಳಲ್ಲೆಲ್ಲಾ ಅದಾನಿ ಸಮೂಹಕ್ಕೆ ಮಾತ್ರ ಕಾಂಟ್ರಾಕ್ಟ್ ಸಿಕ್ಕಿದ ಗುಟ್ಟೇನು? ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಆರ್ಥಿಕತೆಯ ಮೇಲೆ ವಿಶ್ವಾಸವೇ ಕದಡುವಂತೆ ಮಾಡಿರುವ ಅದಾನಿ ಶೇರು ಹಗರಣವು ಆಗಲು ಅವಕಾಶ ಮಾಡಿಕೊಟ್ಟ ಹಣಕಾಸು ಇಲಾಖೆ, ಸೆಬಿ, ಆರ್‌ಬಿಐ, ಇವುಗಳಿಗೆ ಮೋದಿ ಸರಕಾರ ಕೊಟ್ಟ ನಿರ್ದೇಶನಗಳೇನು? ಈ ಎಲ್ಲಾ ಕಾರಣಗಳಿಂದಲೇ 2014-2023ರ ನಡುವೆ ಅದಾನಿಯವರ ಸಂಪತ್ತು 17 ಪಟ್ಟು ಹೆಚ್ಚಾಗಿದೆ.
2022ರಲ್ಲಿ ಕೆಲವು ಕಾಲ ಅದಾನಿಯವರು ಜಗತ್ತಿನ ಎರಡನೇ ಅತೀ ದೊಡ್ಡ ಶ್ರೀಮಂತರಾಗಿಬಿಟ್ಟಿದ್ದರು. ಹಿಂಡನ್‌ಬರ್ಗ್ ವರದಿಯ ನಂತರ ಅದಾನಿಯವರ ಸಂಪತ್ತಿನ ಮಾರುಕಟ್ಟೆ ಮೌಲ್ಯವು 10 ಲಕ್ಷ ಕೋಟಿ ರೂ. ಗಳಷ್ಟು ಕುಸಿದಿದೆ. ಹಾಗೆಯೇ ಅದರ ಜೊತೆಗೆ ಅದರಲ್ಲಿ ಹೂಡಿದ್ದ ಭಾರತದ ಸಾರ್ವಜನಿಕ ಸಂಸ್ಥೆಗಳಾದ ಎಲ್‌ಐಸಿ ಮತ್ತು ಸ್ಟೇಟ್ ಬ್ಯಾಂಕ್‌ಗಳಲ್ಲಿದ್ದ ಸಾಮಾನ್ಯ ಜನರ ಹೂಡಿಕೆಯ ಸಂಪತ್ತಿನ ಮೌಲ್ಯವೂ ಕುಸಿದಿದೆ. ಅದರ ಜೊತೆಗೆ ಇಡೀ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಭಾರತದ ಆರ್ಥಿಕತೆಯ ಬಗ್ಗೆ ವಿಶ್ವಾಸವು ಅಲುಗಾಡಿದೆ. ಇವೆಲ್ಲವೂ ಗಂಭೀರವಾದ ವಿಷಯವಾಗಿದ್ದು ಒಬ್ಬ ಜವಾಬ್ದಾರಿಯುತ ಪ್ರಧಾನಿ ಸಂಸತ್ತಿನಲ್ಲಿ ಉತ್ತರಿಸುವ ಮೂಲಕ ಭಾರತದ ಬಗ್ಗೆ ಇಡೀ ಜಗತ್ತಿನ ವಿಶ್ವಾಸವನ್ನು ಹೆಚ್ಚಿಸುವ ಹಾಗೆ ಮಾಡಬಹುದಾಗಿತ್ತು. ಆದರೆ ಅದಾನಿಯವರು ಹೇಗೆ ಹಿಂಡನ್‌ಬರ್ಗ್ ಕೇಳಿದ ಪ್ರಶ್ನೆಗಳಿಗೆ ಹಾರಿಕೆ ಉತ್ತರ ಕೊಡುತ್ತಾ ತಮ್ಮ ಮೇಲಿನ ದಾಳಿಯನ್ನು ದೇಶದ ಮೇಲಿನ ದಾಳಿಯೆಂಬಂತೆ ಚಿತ್ರಿಸಿ ತಮ್ಮ ಭ್ರಷ್ಟಾಚಾರ ಹಾಗೂ ಬ್ರಹ್ಮಾಂಡ ಮೋಸಗಳಿಗೆ ಭಾರತದ ಬಾವುಟದಡಿಯಲ್ಲಿ ರಕ್ಷಣೆ ಪಡೆದುಕೊಳ್ಳಲು ಪ್ರಯತ್ನಿಸಿದರೋ, ಅದೇ ರೀತಿಯಲ್ಲಿ ಪ್ರಧಾನಿ ಮೋದಿಯವರು ಸಹ ಈ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ 140 ಕೋಟಿ ಜನರ ವಿಶ್ವಾಸದ ರಕ್ಷಾ ಕವಚವು ತಮ್ಮನ್ನು ಕಾಯುತ್ತಿದೆಯೆಂದು ಹೇಳುತ್ತಾ ದೇಶವು ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದ್ದಾರೆ.
ಇದರಿಂದ ಪ್ರಧಾನಿಯವರ ಮೇಲೂ ಮತ್ತು ಅದಾನಿಯವರ ಮೇಲೂ ಹುಟ್ಟಿಕೊಂಡಿರುವ ಅನುಮಾನ ಇನ್ನಷ್ಟು ದಟ್ಟವಾಗುತ್ತಿದೆ. ಚುನಾವಣೆಯ ಗೆಲುವನ್ನು ದೇಶದ ಮತ್ತು ಜನರ ರಕ್ಷಣೆಗೆ ಬಳಸಬೇಕೇ ವಿನಾ ಭ್ರಷ್ಟಾಚಾರದ ಮೋಸ ಹಾಗೂ ವಂಚನೆಗಳ ರಕ್ಷಣೆಗೆ ಬಳಸುವುದು ಏಕಕಾಲದಲ್ಲಿ ಜನದ್ರೋಹವೂ ಮತ್ತು ದೇಶದ್ರೋಹವೂ ಆಗುವುದಿಲ್ಲವೇ?