ಚಿಕ್ಕಮಗಳೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ವ್ಯಕ್ತಿ ಮೃತ್ಯು
ಚಿಕ್ಕಮಗಳೂರು, ಫೆ.11: ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರೊಂದು ಪಲ್ಟಿಯಾದ ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ಕಬ್ಬಿಣದ ರಾಡಿನ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಲಿಂಗದಹಳ್ಳಿ ಗ್ರಾಮದ ರಾಜಣ್ಣ(44) ಎಂದು ಗುರುತಿಸಲಾಗಿದ್ದು, ಶನಿವಾರ ತರೀಕೆರೆ ಪಟ್ಟಣದಿಂದ ಕಬ್ಬಿಣ ರಾಡುಗಳನ್ನು ಖರೀದಿಸಿ ಅದನ್ನು ಟ್ರ್ಯಾಕ್ಟರ್ ನಲ್ಲಿ ಲಿಂಗದಹಳ್ಳಿ ಗ್ರಾಮಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆ ಬದಿಗೆ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್ ನ ಟ್ರಾಲಿಯಲ್ಲಿದ್ದ ಕಬ್ಬಿಣದ ರಾಡುಗಳು ಮೇಲೆ ಕುಳಿತಿದ್ದ ರಾಜಣ್ಣ ನೆಲಕ್ಕೆ ಬಿದ್ದಿದ್ದು, ರಾಜಣ್ಣ ಅವರ ಮೇಲೆ ಕಬ್ಬಿಣದ ರಾಡುಗಳು ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಪರಿಣಾಮ ರಾಜಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.