ನ್ಯಾಯಾಂಗವನ್ನು ಭ್ರಷ್ಟಗೊಳಿಸುವ ಆಮಿಷಗಳು
2020ರಲ್ಲಿ ಸಿಂಗಪೂರ್‌ನ ಮೂರು ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಒಟ್ಟುಗೂಡಿ ಭಾರತದ ಉನ್ನತ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಒಂದು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಅವರು 1999-2014ರ ನಡುವೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರವೂ ಪಾರ್ಟಿಯಾಗಿರುವ 2,000ಕ್ಕೂ ಹೆಚ್ಚು ಪ್ರಕರಣಗಳನ್ನು ಅಧ್ಯಯನ ಮಾಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಕೇಂದ್ರ ಸರಕಾರದ ಪರವಾಗಿ ಎಷ್ಟು ತೀರ್ಮಾನಗಳು ಬಂದಿವೆ ಮತ್ತು ಅಂತಹ ತೀರ್ಮಾನಗಳನ್ನು ಕೊಟ್ಟ ನ್ಯಾಯಾಧೀಶರುಗಳಿಗೆ ನಿವೃತ್ತಿಯ ನಂತರ ಯಾವುದಾದರೂ ಲಾಭಗಳಾಗಿವೆಯೇ ಎಂಬುದು ಅವರ ಅಧ್ಯಯನದ ವಸ್ತು.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕರ್ನಾಟಕದ ಅಬ್ದುಲ್ ನಝೀರ್ ಅವರನ್ನು ಮೋದಿ ಸರಕಾರ ಆಂಧ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಿದೆ. ನ್ಯಾ. ನಝೀರ್ ಅವರು ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದದಲ್ಲಿ ಸಂಘಪರಿವಾರದ ಮತ್ತು ಮೋದಿ ಸರಕಾರದ ಪರವಾಗಿ ತೀರ್ಮಾನ ನೀಡಿದ್ದ ಐವರು ನ್ಯಾಯಾಧೀಶರಲ್ಲಿ ಒಬ್ಬರಾಗಿದ್ದರು ಹಾಗೂ ಆ ಪೀಠದಲ್ಲಿದ್ದ ಏಕೈಕ ಮುಸ್ಲಿಮ್ ನ್ಯಾಯಾಧೀಶರೂ ಆಗಿದ್ದರು. ಇದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಏಕೆಂದರೆ ಸಂಘಪರಿವಾರದ ಪರವಾಗಿ ನ್ಯಾಯ ಸಂಹಿತೆಯನ್ನು ಬಗ್ಗಿಸುವಲ್ಲಿ ಸಹಕರಿಸಿದ ಎಲ್ಲಾ ನ್ಯಾಯಾಧೀಶರಿಗೂ ಮೋದಿ ಸರಕಾರ ಒಂದಲ್ಲ ಒಂದು ಪದವಿಯನ್ನು ಕೊಟ್ಟು ಋಣಸಂದಾಯ ಮಾಡುತ್ತಾ ಬಂದಿದೆ. ಉದಾಹರಣೆಗೆ, ಅಯೋಧ್ಯಾ ಅನ್ಯಾಯವನ್ನೇ ನೋಡೋಣ. ಈ ವಿವಾದವನ್ನು ಬಗೆಹರಿಸಲು ಸುಪ್ರೀಂ ಕೋರ್ಟ್‌ನ ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ರಂಜನ್ ಗೊಗೊಯಿ ಅವರು ತಮ್ಮನ್ನೂ ಒಳಗೊಂಡಂತೆ ನ್ಯಾ. ಅಶೋಕ್ ಭೂಷಣ್, ನ್ಯಾ. ಬೊಬ್ಡೆ, ನ್ಯಾ. ಚಂದ್ರಚೂಡ್ ಮತ್ತು ನ್ಯಾ. ಅಬ್ದುಲ್ ನಝೀರ್ ಅವರನ್ನು ಒಳಗೊಂಡ ಐವರು ನ್ಯಾಯಾಧೀಶರ ಪೀಠವನ್ನು ರಚಿಸಿದ್ದರು. ಈ ಸಾಂವಿಧಾನಿಕ ಪೀಠದ ಮುಂದೆ ಮಂಡಿಸಲಾದ ವಾದಗಳಲ್ಲಿ ವಿವಾದಿತ ಸ್ಥಳವು ಮಸೀದಿಯೇ ಆಗಿತ್ತು ಎನ್ನುವುದನ್ನು ಎಲ್ಲಾ ಸಾಕ್ಷಿ-ಪುರಾವೆಗಳು ರುಜುವಾತು ಪಡಿಸುತ್ತಿದ್ದವು ಮತ್ತು ಅಲ್ಲಿ ರಾಮಮಂದಿರವಿತ್ತು ಎಂಬುದರ ಬಗ್ಗೆ ಸಂಘಪರಿವಾರ ಬಹುಸಂಖ್ಯಾತರ ನಂಬಿಕೆಯನ್ನು ಬಿಟ್ಟು ವಿಶೇಷವಾದ ಯಾವುದೇ ಸಾಕ್ಷಿ ಪುರಾವೆಗಳನ್ನು ಒದಗಿಸಿರಲಿಲ್ಲ. ಇದನ್ನು 1,200 ಪುಟಗಳ ಪೀಠದ ಆದೇಶ ಹಲವಾರು ಕಡೆ ಸ್ಪಷ್ಟವಾಗಿ ಹೇಳುತ್ತದೆ. ಆದರೆ ಮೋದಿ ಸರಕಾರಕ್ಕೆ ಹಿಂದುತ್ವ ಸಿದ್ಧಾಂತವನ್ನು ಜನರ ನಡುವೆ ಗಟ್ಟಿಗೊಳಿಸಲು ಈ ವಿವಾದದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪರವಾದ ಆದೇಶ ಬರುವುದು ಅತ್ಯಗತ್ಯವಾಗಿತ್ತು. ಪರಿಣಾಮ: ಈ ವಿವಾದದಲ್ಲಿ ಐವರು ನ್ಯಾಯಾಧೀಶರು ಸಾಕ್ಷಿ ಮತ್ತು ಪುರಾವೆಗಳಿಗಿಂತ ಬಹುಸಂಖ್ಯಾತರ ನಂಬಿಕೆಯು ಹೆಚ್ಚು ಮೌಲಿಕವಾದದ್ದು ಎಂಬ ಮೋದಿ ಸಂಹಿತೆಯನ್ನು ಸರ್ವ ಸಮ್ಮತಿಯಿಂದ ಎತ್ತಿ ಹಿಡಿದರು. ಬಾಬರಿ ಮಸೀದಿ ಕೆಡವಿದ್ದು ತಪ್ಪು ಎಂದರೂ ಕೆಡವಿದವರಿಗೆ ಕೆಡವಿದ ಜಾಗದಲ್ಲೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದರು.
ಇದು ಪ್ರಾಯಶಃ ಸ್ವತಂತ್ರ ಭಾರತದ ಇತಿಹಾಸದಲ್ಲೇ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿರಬಹುದಾದ ಅತ್ಯಂತ ಅನ್ಯಾಯದ ಹಾಗೂ ಸಂವಿಧಾನ ವಿರೋಧಿ ತೀರ್ಪು. ಆದರೆ ಈ ತೀರ್ಪು ಭಾರತದಲ್ಲಿ ಬಿಜೆಪಿಯ ರಾಜಕೀಯ ಅಧಿಕಾರವನ್ನು ಸಂಘಪರಿವಾರದ ದ್ವೇಷ ರಾಜಕಾರಣವನ್ನು ಮತ್ತಷ್ಟು ಬಲಗೊಳಿಸಿತು. ಸಂಘಪರಿವಾರದ ಹಿಂದುತ್ವ ರಾಜಕಾರಣಕ್ಕೆ ನ್ಯಾಯದ ಮುದ್ರೆಯನ್ನು ಒತ್ತಿತು. ತಮ್ಮ ನರಮೇಧದ ರಾಜಕೀಯಕ್ಕೆ ರೆಕ್ಕೆಕೊಟ್ಟ ನ್ಯಾಯಾಧೀಶರನ್ನು ಮೋದಿ ಸರಕಾರ ಮರೆಯಲಿಲ್ಲ. ಉದಾಹರಣೆಗೆ ಮೋದಿ ಪರವಾದ ನ್ಯಾಯ ತೀರ್ಮಾನ ಕೊಟ್ಟ ಐವರು ನ್ಯಾಯಾಧೀಶರಲ್ಲಿ:
1. ನ್ಯಾ. ರಂಜನ್ ಗೊಗೊಯಿ ಅವರನ್ನು ಮೋದಿ ಸರಕಾರ ನಿವೃತ್ತಿಯಾದ ನಾಲ್ಕೇ ತಿಂಗಳಲ್ಲಿ, 2020ರ ಮಾರ್ಚ್‌ನಲ್ಲಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಿತು...
2. ನ್ಯಾ. ಅಶೋಕ್ ಭೂಷಣ್ ಅವರನ್ನು ನಿವೃತ್ತಿಯಾದ ನಾಲ್ಕೇ ತಿಂಗಳಲ್ಲಿ 2021ರ ನವೆಂಬರ್‌ನಲ್ಲಿ ಮೋದಿ ಸರಕಾರ ದೇಶದ ಅತ್ಯಂತ ದೊಡ್ಡ ಕಾರ್ಪೊರೇಟ್‌ಗಳ ಕೋಟ್ಯಂತರ ಮೌಲ್ಯದ ವ್ಯಾಜ್ಯಗಳನ್ನು ಬಗೆಹರಿಸುವ Company Law Appellate Tribunalನ ಅಧ್ಯಕ್ಷರನ್ನಾಗಿ ನೇಮಿಸಿತು...
3. ನ್ಯಾ. ಅಬ್ದುಲ್ ನಝೀರ್ ಅವರನ್ನು ನಿವೃತ್ತಿಯಾಗಿ ನಲವತ್ತು ದಿನಗಳಾಗುವ ಮುನ್ನವೇ ಇದೇ ಫೆಬ್ರವರಿ 12ರಂದು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ...
ಇನ್ನುಳಿದವರು...
4. ನ್ಯಾ. ಬೊಬ್ಡೆ ಅವರು ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾದ ಮೇಲೆ ನಾಗಪುರದ ಪರವಾಗಿ ಸಿಕ್ಕಾಪಟ್ಟೆ ಬ್ಯಾಟಿಂಗ್ ಮಾಡುತ್ತಿದ್ದಾರೆ.... ಹೀಗಾಗಿ ಪ್ರಾಯಶಃ ದೇಶಕ್ಕೆ ಇನ್ನೂ ದೊಡ್ಡದಾದ ಆಶ್ಚರ್ಯ ಕಾದಿರಬಹುದು...!
ಕೊನೆಯದಾಗಿ
5. ಆ ಪೀಠದ ಸದಸ್ಯರಾಗಿದ್ದ ನ್ಯಾ. ಚಂದ್ರಚೂಡ್ ಅವರು...(ಇವರೇ ಇಡೀ ಅಯೋಧ್ಯಾ ಆದೇಶವನ್ನು ಬರೆದವರು ಎಂಬ ಪರೋಕ್ಷ ಸೂಚನೆಯನ್ನು ಗೊಗೊಯಿ ಅವರು ತಮ್ಮ ಪುಸ್ತಕದಲ್ಲಿ ನೀಡಿದ್ದಾರೆ...)
ಅವರೀಗ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದಾರೆ....ಇಷ್ಟೆಲ್ಲಾ ಆದರೂ ದೇಶ ಇವರ ಬಗ್ಗೆ ಅಪಾರ ನಿರೀಕ್ಷೆಗಳನ್ನು ಇನ್ನೂ ಇಟ್ಟುಕೊಂಡಿದೆ...ಆದರೆ ವಿಪರ್ಯಾಸವೆಂದರೆ ದೇಶ ಹಾಗೂ ಸಂಘಪರಿವಾರ... ಎರಡಕ್ಕೂ ತದ್ವಿರುದ್ಧ ಕಾರಣಗಳಿಗಾಗಿ ನ್ಯಾ. ಚಂದ್ರಚೂಡ್ ಅವರ ಬಗ್ಗೆ ಏಕಕಾಲದಲ್ಲಿ ಆತಂಕ ಹಾಗೂ ಭರವಸೆಗಳಿವೆ. ಆದರೆ ಈವರೆಗೆ ನ್ಯಾ. ಚಂದ್ರಚೂಡ್ ಅವರು, ಅಗತ್ಯವಿದ್ದರೂ, ಅವಕಾಶವಿದ್ದರೂ ದೇಶಕ್ಕೆ ನಿರಾಳ ಒದಗಿಸಬಹುದಾದ ಹಾಗೂ ಮೋದಿ ಸರಕಾರದ ಸಂವಿಧಾನ ವಿರೋಧಿ ಕೃತ್ಯಗಳಿಗೆ ಲಗಾಮು ಹಾಕುವಂತಹ ಯಾವುದೇ ದೊಡ್ಡ ನ್ಯಾಯ ತೀರ್ಮಾನ ಕೈಗೊಂಡಿಲ್ಲ...
ಇದು ಅಯೋಧ್ಯಾ ವಿವಾದದಲ್ಲಿ ಮೋದಿ ಸರಕಾರಕ್ಕೆ ಪೂರಕವಾಗಿ ಸೇವೆ ಸಲ್ಲಿಸಿದವರಿಗೆ ದಕ್ಕಿದ ಗೌರವವಾದರೆ ಹಿಜಾಬ್ ವಿವಾದದಲ್ಲಿ ನ್ಯಾಯಾಧೀಶರು ಸಲ್ಲಿಸಿದ ಸೇವೆಗಳನ್ನು ಸಹ ಮೋದಿ ಸರಕಾರ ಮರೆಯಲಿಲ್ಲ.
6. ನ್ಯಾ. ಋತು ರಾಜ್ ಆವಸ್ಥಿ: ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಕೊಟ್ಟ ಕೋಮುವಾದಿಗಳ ಪರವಾದ ಮತ್ತು ವಿದ್ಯಾರ್ಥಿ ವಿರೋಧಿ ಆದೇಶ ನೆನಪಿನಲ್ಲಿರಬಹುದು. ಆ ಆದೇಶದಲ್ಲಿ, ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ಋತು ರಾಜ್ ಆವಸ್ಥಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಶಾಲೆಗಳ ಪ್ರಮುಖ ಉದ್ದೇಶ ಶಿಕ್ಷಣ ಒದಗಿಸುವುದಕ್ಕಿಂತ ಹೆಚ್ಚಾಗಿ ಸಮವಸ್ತ್ರ ಶಿಸ್ತು ಪಾಲಿಸುವುದು ಎಂಬಂತಹ ಸಂವಿಧಾನ ವಿರೋಧಿ ಕುತರ್ಕವನ್ನು ಎತ್ತಿಹಿಡಿಯಿತು ಮತ್ತು ಕರ್ನಾಟಕದ ಬಿಜೆಪಿ ಸರಕಾರದ ಕೋಮುವಾದಿ ಅಜೆಂಡಾಗೆ ಪುಷ್ಟಿ ಕೊಟ್ಟಿತು. ನ್ಯಾ. ಅವಸ್ಥಿಯವರು 2022ರ ಜುಲೈನಲ್ಲಿ ನಿವೃತ್ತರಾದರೆ, ಮೋದಿ ಸರಕಾರ ಅವರನ್ನು ನಾಲ್ಕೇ ತಿಂಗಳಲ್ಲಿ 22ನೇ ಲಾ ಕಮಿಷನ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡಿತು!
ಅಷ್ಟಕ್ಕೇ ಮುಗಿಯಲಿಲ್ಲ.
7. ನ್ಯಾ. ಹೇಮಂತ್ ಗುಪ್ತಾ: ಈ ಹಿಜಾಬ್ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಾಯಿತು. ಅದರ ವಿಚಾರಣೆಯನ್ನು ನ್ಯಾ. ಹೇಮಂತ್ ಗುಪ್ತಾ ಮತ್ತು ನ್ಯಾ. ಸುಧಾಂಶು ಧುಲಿಯಾ ಅವರ ದ್ವಿಸದಸ್ಯ ಪೀಠ ನಡೆಸಿತು. ಹೇಮಂತ್ ಗುಪ್ತಾ ಅವರು ನಿವೃತ್ತರಾಗುವ ಕೆಲವೇ ದಿನಗಳ ಮುನ್ನ ಪೀಠವು ಆದೇಶವನ್ನು ನೀಡಿತು. ನ್ಯಾ. ಧುಲಿಯಾ ಅವರು ಶಾಲೆಗಳ ಮೂಲಭೂತ ಉದ್ದೇಶ ಶಿಕ್ಷಣ ನೀಡುವುದು, ಮಿಕ್ಕೆಲ್ಲವು ಅದಕ್ಕೆ ಒಳಪಟ್ಟಿರಬೇಕು. ಹೀಗಾಗಿ ಹಿಜಾಬನ್ನು ಮುಂದೊಡ್ಡಿ ಶಾಲೆಗಳಲ್ಲಿ ಶಿಕ್ಷಣ ನಿರಾಕರಿಸುವುದು ಮೂಲಭೂತ ಹಕ್ಕುಗಳ ನಿರಾಕರಣೆ ಎಂದು ಅಭಿಪ್ರಾಯ ಪಟ್ಟು ಹೈಕೋರ್ಟ್‌ನ ಆದೇಶವನ್ನು ರದ್ದು ಪಡಿಸಿದರು. ಆದರೆ ಅದಕ್ಕೆ ತದ್ವಿರುದ್ಧವಾಗಿ ನ್ಯಾ. ಹೇಮಂತ್ ಗುಪ್ತಾ ಅವರು ಹಿಜಾಬ್ ಭಾರತೀಯವಲ್ಲ, ಇಸ್ಲಾಮ್ ಭಾರತೀಯ ಸಂಸ್ಕೃತಿಗೆ ಒಳಪಟ್ಟಿದ್ದಲ್ಲ, ಈ ದೇಶದಲ್ಲಿ ತೆರಿಗೆ ಕಟ್ಟುತ್ತಿರುವವರು ಕೇವಲ ಶೇ. 4ರಷ್ಟು ಮಾತ್ರವಾದ್ದರಿಂದ ಎಲ್ಲಾ ಜನರಿಗೂ ಸರಕಾರ ಜವಾಬ್ದಾರ ಹೇಗಾಗುತ್ತದೆ ಎಂದು ಬಿಜೆಪಿ ಕಾರ್ಯಕರ್ತರಂತೆ ಪ್ರಶ್ನಿಸಿ ಅಂತಿಮವಾಗಿ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದರು.
ನ್ಯಾ. ಹೇಮಂತ್ ಗುಪ್ತಾ ಅವರು 2022ರ ಅಕ್ಟೋಬರ್‌ನಲ್ಲಿ ನಿವೃತ್ತರಾದರೆ, ಮೋದಿ ಸರಕಾರ ಅವರ 'ಸೇವೆಯನ್ನು' ಪರಿಗಣಿಸಿ 2022ರ ಡಿಸೆಂಬರ್‌ನಲ್ಲೇ New Delhi International Arbitration Centre ನ ಅಧ್ಯಕ್ಷರನ್ನಾಗಿ ನೇಮಿಸಿದರು. ಇದಕ್ಕೆ ಮುಂಚೆ,
8. ನ್ಯಾ. ಪಿ ಸದಾಶಿವಂ: 2014ರಲ್ಲಿ ಆಗತಾನೇ ಮೋದಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಆಗ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ್ ಶಾ ಅವರ ಮೇಲೆ ತುಳಸಿ ಪ್ರಜಾಪತಿ ಎಂಬ ವ್ಯಕ್ತಿಯನ್ನು ಗುಜರಾತಿನಲ್ಲಿ ಸುಳ್ಳು ಎನ್‌ಕೌಂಟರ್ ಮಾಡಿ ಕೊಲೆ ಮಾಡಿದ ಪ್ರಕರಣದ ಮರುವಿಚಾರಣೆ ಮಾಡಬೇಕೆಂಬ ಬಲವಾದ ಮನವಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಾಡಲಾಗಿತ್ತು. ಆಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದವರು ಪಿ. ಸದಾಶಿವಂ ಅವರು.
ನ್ಯಾ. ಸದಾಶಿವಂ ಅವರು ಅಮಿತ್ ಶಾ ಮೇಲೆ ದಾಖಲಿಸಿಕೊಳ್ಳಲಾಗಿದ್ದ ಎರಡನೇ ಎಫ್‌ಐಅರ್ ಅನ್ನು 2013ರಲ್ಲಿ ರದ್ದು ಪಡಿಸಿದರು. ಆ ಮೂಲಕ ಅಮಿತ್ ಶಾ ಅವರಿಗೂ, 2014ರಲ್ಲಿ ಚುನಾವಣೆ ಎದುರಿಸಬೇಕಿದ್ದ ಬಿಜೆಪಿಗೂ ದೊಡ್ಡ ನಿರಾಳ ಸಿಕ್ಕಿತು. ನ್ಯಾ. ಸದಾಶಿವಂ ಅವರು 2014ರ ಎಪ್ರಿಲ್‌ನಲ್ಲಿ ನಿವೃತ್ತರಾದರೆ ಐದೇ ತಿಂಗಳ ನಂತರ 2014ರ ಸೆಪ್ಟಂಬರ್‌ನಲ್ಲಿ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ಮೋದಿ ಸರಕಾರ ನೇಮಿಸಿತು. ನಿವೃತ್ತ ಮುಖ್ಯ ನ್ಯಾಯಾಧೀಶರೊಬ್ಬರು ಭಾರತದ ಇತಿಹಾಸದಲ್ಲಿ ರಾಜ್ಯಪಾಲರನ್ನಾಗಿ ನೇಮಕವಾದದ್ದು ಅದೇ ಮೊದಲು.. ಇದಕ್ಕೆ ತದ್ವಿರುದ್ಧವಾಗಿ ಇದೇ ಅಮಿತ್ ಶಾ ಅವರೇ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಎಂಬವರ ಮತ್ತೊಂದು ಸುಳ್ಳು ಎನ್ ಕೌಂಟರ್ ಹತ್ಯೆಯಲ್ಲಿ ಅಮಿತ್ ಶಾ ಅವರ ಪಾತ್ರವನ್ನು ವಿಚಾರಣೆ ಮಾಡಲು 2014ರ ಜೂನ್ ನಲ್ಲಿ ನ್ಯಾ. ಲೋಯಾ ಅವರು ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕವಾಗುತ್ತಾರೆ.
ವಿಚಾರಣೆಯ ಪ್ರಕ್ರಿಯೆಯಲ್ಲಿ ಆರೋಪಿ ಅಮಿತ್ ಶಾ ಅವರು ನ್ಯಾಯಾಲಯದ ಮುಂದೆ ಹಾಜರಾಗಲೇಬೇಕೆಂದು ಆದೇಶ ಮಾಡುತ್ತಾರೆ. ಆದರೆ ಅವರು ಅತ್ಯಂತ ನಿಗೂಢವಾಗಿ 2014ರ ಡಿಸೆಂಬರ್‌ನಲ್ಲಿ ಸಾವಿಗೀಡಾಗುತ್ತಾರೆ. ನ್ಯಾ. ಲೋಯಾ ಸಾವಿನ ಹಿಂದಿನ ನಿಗೂಢತೆ ಮತ್ತು ಅದರ ಹಿಂದೆ ಇರಬಹುದಾದ ಅಮಿತ್ ಶಾ ಅವರ ಪಾತ್ರವನ್ನು ತನಿಖೆ ಮಾಡಲು ಆಗ್ರಹಿಸಿ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಇನ್ನಿತರರು 2018ರ ಎಪ್ರಿಲ್‌ನಲ್ಲಿ ಮನವಿ ಸಲ್ಲಿಸುತ್ತಾರೆ. ಆದರೆ ಸುಪ್ರೀಂ ಕೋರ್ಟಿನ ತ್ರಿಸದಸ್ಯಪೀಠ ಆ ಮನವಿಯನ್ನು ತಿರಸ್ಕರಿಸುತ್ತದೆ. ಆ ಪೀಠದಲ್ಲಿ ಇಂದು ಮುಖ್ಯ ನ್ಯಾಯಾಧೀಶರಾಗಿರುವ ನ್ಯಾ. ಚಂದ್ರಚೂಡ್ ಅವರೂ ಒಬ್ಬ ಸದಸ್ಯ ನ್ಯಾಯಾಧೀಶರಾಗಿದ್ದರು. ಅಷ್ಟು ಮಾತ್ರವಲ್ಲ. ಇದೇ ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟಿನ ನಾಯಾಧೀಶರಾಗಿದ್ದ ನ್ಯಾ. ಅಖಿಲ್ ಖುರೇಶಿ ಅವರು ಆರೋಪಿ ಅಮಿತ್ ಶಾರನ್ನು 2010ರಲ್ಲಿ ಸಿಬಿಐ ಕಸ್ಟಡಿಗೆ ತೆಗೆದುಕೊಳ್ಳುವಂತೆ ಆದೇಶಿಸಿದ್ದರು. ಈ ಹಗೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಆಗ ಅತ್ಯಂತ ಹಿರಿಯ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಖುರೇಷಿಯವರನ್ನು ಹೈಕೋರ್ಟ್‌ಗಳ ಪಟ್ಟಿಯಲ್ಲಿ ಅತ್ಯಂತ ಕೆಳಸ್ತರದಲ್ಲಿ ಬರುವ ದೂರದ ತ್ರಿಪುರಕ್ಕೆ ವರ್ಗಾಯಿಸಿತು. 2017ರಿಂದ ಸತತವಾಗಿ ಸುಪ್ರೀಂ ಕೋರ್ಟಿನ ಕೊಲಿಜಿಯಂ ಖುರೇಷಿಯವರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ಭಡ್ತಿ ನೀಡಲು ಶಿಫಾರಸು ಮಾಡುತ್ತಲೇ ಬಂದಿತ್ತು. ಆದರೆ ಮೋದಿ ಸರಕಾರ ಸೇವಾ ಹಿರಿತನದಲ್ಲಿ ಅವರಿಗಿಂತ ಕಿರಿಯರನ್ನು ಸುಪ್ರೀಂ ಕೋರ್ಟ್‌ಗೆ ಭಡ್ತಿ ಮಾಡಲು ಒಪ್ಪಿಕೊಂಡಿತೇ ವಿನಾ ಖುರೇಷಿಯವರ ಹೆಸರನ್ನು ಪರಿಗಣಿಸಲೇ ಇಲ್ಲ. ಕೊನೆಗೂ ಖುರೇಷಿಯವರು ಎಲ್ಲಾ ಅರ್ಹತೆ ಮತ್ತು ಹಿರಿತನಗಳಿದ್ದರೂ ಸುಪ್ರೀಂ ಕೋರ್ಟಿಗೆ ಭಡ್ತಿಯಾಗದೆ 2022ರಲ್ಲಿ ನಿವೃತ್ತರಾದರು. ಅಂದಹಾಗೆ ಖುರೇಷಿಯವರು ಸೇವಾ ಹಿರಿತನದಲ್ಲಿ ನ್ಯಾ. ನಝೀರ್ ಅವರಿಗಿಂತ ತುಂಬಾ ಹಿರಿಯರಾಗಿದ್ದರು!
9. ನ್ಯಾ. ಅರುಣ್ ಮಿಶ್ರಾ: ಈವರೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಪ್ರಧಾನಿ ಮೋದಿಯನ್ನು ಅತಿ ಹೆಚ್ಚು ಹಾಡಿ ಹೊಗಳಿದ ಕೀರ್ತಿ ಸಲ್ಲುವುದು ನ್ಯಾ.ಅರುಣ್ ಮಿಶ್ರಾರವರಿಗೆ. ಜೊತೆಗೆ ಸಹರಾ-ಬಿರ್ಲಾ ಪ್ರಕರಣದಲ್ಲಿ, ಹರೇನ್ ಪಾಂಡ್ಯಾ ಹತ್ಯೆ ಪ್ರಕರಣದಲ್ಲಿ, ಮೋದಿಯವರಿಗೆ ಕ್ಲೀನ್ ಚಿಟ್ ಕೊಟ್ಟವರು ನ್ಯಾ. ಮಿಶ್ರಾರವರು. ಇದಲ್ಲದೆ, ಸಿಬಿಐ ಮುಖ್ಯಸ್ಥರ ನಡುವಿನ ಜಟಾಪಟಿ ಪ್ರಕರಣದಲ್ಲಿ ಮೋದಿ ಸರಕಾರದ ಅಭ್ಯರ್ಥಿಯ ಪರವಾಗಿ ತೀರ್ಪು ಕೊಟ್ಟವರು ಇದೇ ನ್ಯಾಯಾಧೀಶರು. ತಮ್ಮ ನಿವೃತ್ತಿಗೆ ಮುಂಚೆ ರಾಜಸ್ಥಾನ ರೈತರ ಹಿತಾಸಕ್ತಿಯ ವಿರುದ್ಧವಾಗಿ ಮತ್ತು ಅವರಿಗೆ ವಿದ್ಯುತ್ ಪೂರೈಕೆ ಮಾಡುತ್ತಿದ್ದ ಈಗ ಹಗರಣದಲ್ಲಿ ಸಿಲುಕಿಕೊಂಡಿರುವ ಮೋದಿಯವರ ಪರಮಾಪ್ತ ಸ್ನೇಹಿತ ಅದಾನಿ ಪರವಾಗಿ ಸಾಲುಸಾಲು ತೀರ್ಪುಗಳನ್ನು ಕೊಟ್ಟು ನಿವೃತ್ತರಾದವರು. ನ್ಯಾ. ಅರುಣ್ ಮಿಶ್ರಾ ಅವರು ನಿವೃತ್ತರಾದ ಕೆಲವೇ ತಿಂಗಳುಗಳಲ್ಲಿ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ದ ಅಧ್ಯಕ್ಷರನ್ನಾಗಿ ಮೋದಿ ಸರಕಾರ ನೇಮಿಸಿತು. ಅದಕ್ಕಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರು ಮಾತ್ರ ಆಯೋಗದ ಅಧ್ಯಕ್ಷರಾಗಬೇಕೆಂಬ ಎನ್‌ಎಚ್‌ಆರ್‌ಸಿ ಕಾನೂನಿಗೆ ತಿದ್ದುಪಡಿಯನ್ನು ತರಲಾಗಿತ್ತು!
10. ನ್ಯಾ. ಆರ್. ಕೆ. ಗೋಯಲ್: ಸುಪ್ರೀಂನ ಹಿರಿಯ ನ್ಯಾಯಾಧೀಶರಾಗಿದ್ದ ಆರ್. ಕೆ. ಗೋಯಲ್ ಅವರು ಮೋದಿಯವರ ಭಂಟ ಆಸ್ಥಾನಾರವರೇ ಸಿಬಿಐ ಮುಖ್ಯಸ್ಥರಾಗುವಂತಹ ತೀರ್ಪು ನೀಡಿದವರು. ಇಂತಹ ಹಲವು ಪ್ರಕರಣಗಳಲ್ಲಿ ಗೋಯಲ್ ಅವರು ಕೊಟ್ಟ ತೀರ್ಪುಗಳು ಮೋದಿ ಸರಕಾರದ ಆಸಕ್ತಿಯನ್ನು ರಕ್ಷಿಸಿತ್ತು. ಹೀಗಾಗಿ ಇವರು 2018ರ ಜುಲೈ 6ರಂದು ನಿವೃತ್ತರಾದರೆ ಅಂದೇ ಅವರನ್ನು ರಾಷ್ಟ್ರೀಯ ಹಸಿರು ನ್ಯಾಯ ಪಂಚಾಯತ್- ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್‌ಗೆ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.! ಇವು, ನೋದಿ ಸರಕಾರವು ನ್ಯಾಯಾಂಗವನ್ನು ಭ್ರಷ್ಟಗೊಳಿಸುತ್ತಿರುವ ಮತ್ತು ಕೇಸರೀಕರಿಸುತ್ತಿರುವ ಕೇವಲ ಕೆಲವು ಕಣ್ಣುಕುಕ್ಕುವ ಉದಾಹರಣೆಗಳು ಮಾತ್ರ. ಈ ಸಾಲಿನಲ್ಲಿ ಈಗ ನ್ಯಾ. ಅಬ್ದುಲ್ ನಝೀರ್ ಅವರೂ ಸೇರುತ್ತಾರೆ.
ಸುಪ್ರೀಂ ಭ್ರಷ್ಟಾಚಾರ-ಅಪರೂಪವೋ? ಸಾಂಸ್ಥಿಕವೋ?
ಅದರರ್ಥ ನಿವೃತ್ತ ನ್ಯಾಯಾಧೀಶರನ್ನು ರಾಜ್ಯಸಭಾ ಸದಸ್ಯರನ್ನಾಗಿಯೋ, ರಾಜ್ಯಪಾಲರನ್ನಾಗಿಯೋ ಮಾಡುತ್ತಿರುವುದು ಬಿಜೆಪಿ ಮಾತ್ರ ಎಂದೇನಲ್ಲ. ಇದನ್ನು ಕಾಂಗ್ರೆಸ್ ಸರಕಾರವೂ ಮಾಡಿದೆ. ಆದರೆ ಅದರ ಬಗ್ಗೆ ಆಗ ದೊಡ್ಡ ತಕರಾರು ತೆಗೆದ ವಿರೋಧ ಪಕ್ಷದಲ್ಲಿದ್ದ ಬಿಜೆಪಿಯೇ ಈಗ ಕಾಂಗ್ರೆಸ್ ಕೂಡ ನಾಚುವ ಮಟ್ಟಿಗೆ ನ್ಯಾಯಾಂಗವನ್ನು ಭ್ರಷ್ಟಗೊಳಿಸುತ್ತಿದೆ.
2020ರಲ್ಲಿ ಸಿಂಗಪೂರ್‌ನ ಮೂರು ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಒಟ್ಟುಗೂಡಿ ಭಾರತದ ಉನ್ನತ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಒಂದು ಅಧ್ಯಯನ ನಡೆಸಿದ್ದಾರೆ. ಆ ವರದಿಯು Jobs for Justice(s): Corruption in the Supreme Court of India ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.
ಈ ಅಧ್ಯಯನದಲ್ಲಿ ಅವರು 1999-2014ರ ನಡುವೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರಕಾರವೂ ಪಾರ್ಟಿಯಾಗಿರುವ 2,000ಕ್ಕೂ ಹೆಚ್ಚು ಪ್ರಕರಣಗಳನ್ನು ಅಧ್ಯಯನ ಮಾಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಕೇಂದ್ರ ಸರಕಾರದ ಪರವಾಗಿ ಎಷ್ಟು ತೀರ್ಮಾನಗಳು ಬಂದಿವೆ ಮತ್ತು ಅಂತಹ ತೀರ್ಮಾನಗಳನ್ನು ಕೊಟ್ಟ ನ್ಯಾಯಾಧೀಶರುಗಳಿಗೆ ನಿವೃತ್ತಿಯ ನಂತರ ಯಾವುದಾದರೂ ಲಾಭಗಳಾಗಿವೆಯೇ ಎಂಬುದು ಅವರ ಅಧ್ಯಯನದ ವಸ್ತು.
Jobs for Justice(s): Corruption in the Supreme Court of India ವರದಿಯ ಪ್ರಕಾರ ಕೇಂದ್ರ ಸರಕಾರದ ಪರವಾಗಿ ತೀರ್ಮಾನ ನೀಡಿದ ಶೇ. 93ಕ್ಕಿಂತಲೂ ಹೆಚ್ಚಿನ ನ್ಯಾಯಾಧೀಶರುಗಳಿಗೆ ನಿವೃತ್ತಿಯ ನಂತರ ಹಲವು ಬಗೆಯ ಲಾಭಗಳಾಗಿವೆ. ಅವರ ಅಧ್ಯಯನದ ಪ್ರಕಾರ ಈ ಬಗೆಯಲ್ಲಿ ತೀರ್ಪು ಕೊಟ್ಟ 40ಕ್ಕೂ ಹೆಚ್ಚು ನ್ಯಾಯಾಧೀಶರುಗಳಿಗೆ ನಿವೃತ್ತಿಯ ನಂತರ ರಾಜ್ಯಪಾಲ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ರಾಯಭಾರಿ, ವಿದ್ಯುತ್ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷ, ಅಂತರ್ ರಾಷ್ಟ್ರೀಯ ಕೋರ್ಟ್‌ನ ಸದಸ್ಯ ನ್ಯಾಯಾಧೀಶ ಸ್ಥಾನ, ಲಾ ಕಮಿಷನ್ ಅಧ್ಯಕ್ಷ, ಗ್ರಾಹಕ ವ್ಯಾಜ್ಯ ಪರಿಹಾರ ಮಂಡಳಿ, ರಾಷ್ಟ್ರೀಯ ಹಸಿರು ಪೀಠ ಇನ್ನಿತ್ಯಾದಿ ಹತ್ತು ಹಲವು ಪುನರ್ವಸತಿಗಳನ್ನು ಮಾಡಿಕೊಡಲಾಗಿದೆ.
ಆಸಕ್ತರು ಅ ವರದಿಯ ಪೂರ್ಣ ಪಠ್ಯವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು :
https://papers.ssrn.com/sol3/papers.cfm?abstract_id=3087464
ಹೀಗಾಗಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಕಪೋಲ ಕಲ್ಪಿತವೂ ಅಲ್ಲ. ವ್ಯಕ್ತಿಗತವಾದದ್ದೂ ಅಲ್ಲ. ಅದು ಕಳೆದೆರಡು ದಶಕಗಳಲ್ಲಿ ಸಾಂಸ್ಥಿಕವಾಗಿದೆ.
ಮೇಲಿನ ಅಧ್ಯಯನದ ಅವಧಿಯಲ್ಲಿ 1999-2004ರ ನಡುವಿನ ಬಿಜೆಪಿ ನೇತೃತ್ವದ ಅವಧಿಯೂ ಇತ್ತು ಎಂಬುದನ್ನು ಮರೆಮಾಚುವ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಮಾತ್ರ ಈ ನ್ಯಾಯಾಂಗ ಭ್ರಷ್ಟತೆಯ ಬಗ್ಗೆ ಅತಿ ದೊಡ್ಡ ಧ್ವನಿ ಎತ್ತಿದ್ದ ನಾಟಕ ಮಾಡಿತ್ತು. ಬಿಜೆಪಿಯ ಸೋಗಲಾಡಿ ವಿರೋಧವೂ, ನ್ಯಾಯಾಧೀಶರ ಆಮಿಷಗಳೂ
ಉದಾಹರಣೆಗೆ 2012ರಲ್ಲಿ ರಾಜ್ಯಸಭೆಯಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬಿಜೆಪಿ ನಾಯಕ ಅರುಣ್ ಜೇಟ್ಲಿಯವರು ''ಈ ದೇಶದಲ್ಲಿ ಕೆಲವು ನ್ಯಾಯಾಧೀಶರಿಗೆ ಮಾತ್ರ ಕಾನೂನು ಗೊತ್ತು. ಇನ್ನುಳಿದವರಿಗೆ ಕೇವಲ ಕಾನೂನು ಮಂತ್ರಿ ಮಾತ್ರ ಗೊತ್ತು'' ಎಂದು ಹೇಳಿದ್ದರು.
ನ್ಯಾಯಾಧೀಶರುಗಳ ನಿವೃತ್ತಿಪೂರ್ವ ತೀರ್ಮಾನಗಳು ನಿವೃತ್ತಿಯ ನಂತರದ ಸೌಲಭ್ಯಗಳ ಲಾಲಸೆಯಿಂದ ಪ್ರಭಾವಿತವಾಗಿರುತ್ತವೆ ಎಂದು ಕೂಡಾ ನೇರವಾಗಿ ಆರೋಪಿಸಿದ್ದರು. ಆಗ ಬಿಜೆಪಿಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ''ನಿವೃತ್ತಿಯಾದ ನಂತರ ಕನಿಷ್ಠ ಎರಡು ವರ್ಷಗಳ ಕಾಲ ನ್ಯಾಯಾಧೀಶರು ಯಾವ ಸಾರ್ವಜನಿಕ ಹುದ್ದೆಯನ್ನೂ ಅಲಂಕರಿಸದಿದ್ದರೆ ಮಾತ್ರ ನ್ಯಾಯಾಂಗದ ಬಗ್ಗೆ ಜನರಿಗೆ ಗೌರವ ಉಳಿಯುತ್ತದೆ'' ಎಂದು ಹೇಳಿದ್ದರು. ಇದೇ ಮಾತುಗಳನ್ನು ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿ ಯಾಗಿ ನಿವೃತ್ತರಾದ ಯು.ಯು. ಲಲಿತ್, ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಲೋಧಾ, ಸಭರ್ವಾಲ್ ಎಲ್ಲರೂ ಹೇಳಿದ್ದಾರೆ. ಆದರೆ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮಾಡಿದ್ದೇನು?
ಮೋದಿ ಸರಕಾರ: ಹೆಚ್ಚಾದ ನ್ಯಾಯಾಂಗದ ಭ್ರಷ್ಟೀಕರಣ ಮತ್ತು ಸಾಂಸ್ಥಿಕ ಕೇಸರೀಕರಣ ವಾಸ್ತವದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ, 2014 ರಿಂದಲೇ, ಸಾಮ, ದಾನ, ಭೇದ, ದಂಡ ಮತ್ತು ಹಿಂದುತ್ವೀಕರಣದ ಮೂಲಕ ನ್ಯಾಯಾಂಗವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಕ್ರಮವನ್ನು ಪ್ರಾರಂಭಿಸಿತು. ವಿರೋಧ ಪಕ್ಷದಲ್ಲಿದ್ದಾಗ ನ್ಯಾಯಾಧೀಶರು ನಿವೃತ್ತಿಯಾದ ಎರಡು ವರ್ಷಗಳವರೆಗೆ ಯಾವ ಸರಕಾರೀ ಹುದ್ದೆಯನ್ನು ವಹಿಸಿಕೊಳ್ಳದಂತೆ ಕಾನೂನು ತರುವ ಭರವಸೆ ಕೊಟ್ಟಿದ್ದ ಬಿಜೆಪಿ 2014ರ ಮೇಯಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನ್ಯಾ. ಸದಾಶಿವಂ ಅವರು ನಿವೃತ್ತರಾಗಿ ಕೇವಲ ನಾಲ್ಕೇ ತಿಂಗಳಾಗಿದ್ದ�