ಡ್ರಗ್ಸ್ ಆರೋಪಿ ವಿದ್ಯಾರ್ಥಿಗಳ ವಿರುದ್ಧ ಶಿಕ್ಷಣ ಸಂಸ್ಥೆಯಿಂದ ಶಿಸ್ತು ಕ್ರಮ: ಎಸ್ಪಿ ಅಕ್ಷಯ್
ಮಣಿಪಾಲ ಮಾಹೆಯ ಇಬ್ಬರು ಹೊರರಾಜ್ಯದ ವಿದ್ಯಾರ್ಥಿಗಳ ಅಮಾನತು
ಉಡುಪಿ, ಫೆ.14: ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡುವ ಮೂಲಕ ಮಣಿಪಾಲ ಮಾಹೆ ವಿದ್ಯಾಲಯವೂ ಅಕ್ರಮದಲ್ಲಿ ತೊಡಗಿರುವವ ವಿರುದ್ಧ ಶಿಸ್ತು ಕ್ರಮ ಜರಗಿಸಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದ್ದಾರೆ.
ಮಾದಕ ವಸ್ತು ಸೇವನೆ, ಮಾರಾಟ ಹಾಗೂ ಸಾಗಾಟಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಾದ್ಯಂತ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಇದನ್ನು ನಿಯಂತ್ರಿಸಲು ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ವಿದ್ಯಾರ್ಥಿಗಳು ಸೇವನೆ ಮಾತ್ರವಲ್ಲದೆ ಮಾದಕ ವಸ್ತುಗಳ ಮಾರಾಟದಲ್ಲೂ ತೊಡಗಿಸಿಕೊಂಡಿರುವ ವಿಚಾರ ತನಿಖೆಯಿಂದ ದೃಢಪಟ್ಟಿದೆ ಎಂದರು.
ಈ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಾಲೇಜಿನ ಆಡಳಿತ ಮಂಡಳಿಗೆ ಮನವಿ ಮಾಡಿಕೊಂಡಿದ್ದೇವೆ. ಪೊಲೀಸ್ ಇಲಾಖೆಯಿಂದ ಕಾನೂನು ಕ್ರಮ ತೆಗೆದು ಕೊಳ್ಳುವುದರ ಜೊತೆಗೆ ಆಡಳಿತ ಮಂಡಳಿಯೂ ಕೈಜೋಡಿಸಿದರೆ ವಿದ್ಯಾರ್ಥಿ ಗಳಿಗೆ ಸ್ಪಷ್ಟ ಸಂದೇಶ ನೀಡಲು ಸಾಧ್ಯವಾಗುತ್ತದೆ. ಇದಕ್ಕೆ ಮಾಹೆ ಆಡಳಿತ ಮಂಡಳಿ ಸಕರಾತ್ಮವಾಗಿ ಸ್ಪಂದಿಸಿದೆ ಎಂದು ಅವರು ಹೇಳಿದರು.
ಇಬ್ಬರು ವಿದ್ಯಾರ್ಥಿಗಳ ಬಂಧನ: ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಮಾಹೆಯ ಇಬ್ಬರು ವಿದ್ಯಾರ್ಥಿಗಳಾದ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದ ಯುವಕರನ್ನು ಬಂಧಿಸಲಾಗಿತ್ತು. ಈ ಬಗ್ಗೆ ಮಣಿಪಾಲ ಮತ್ತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರು ನ್ಯಾಯಾಂಗ ಬಂಧನದ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು ಎಂದು ಎಸ್ಪಿ ತಿಳಿಸಿದರು.
ಈ ಇಬ್ಬರು ವಿದ್ಯಾರ್ಥಿಗಳ ಪಟ್ಟಿಯನ್ನು ನಾವು ಮಾಹೆ ಆಡಳಿತ ಮಂಡಳಿಗೆ ನೀಡಿದ್ದೇವು. ಅದರಂತೆ ಮಾಹೆಯವರು ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಗೊಳಿಸಿ ಆಂತರಿಕ ಶಿಸ್ತು ಕ್ರಮ ತೆಗೆದುಕೊಳ್ಳುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ. ನಮಗೆ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಉದ್ದೇಶ ಇಲ್ಲ. ಬದಲು ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ನೆರವಿಗೆ ಯಾರು ಬರುವುದಿಲ್ಲ ಎಂಬ ಸಂದೇಶ ವಿದ್ಯಾರ್ಥಿ ಸಮುದಾಯಕ್ಕೆ ಹೋಗಬೇಕಾಗಿದೆ ಎಂದರು.
ನಮ್ಮ ಮನವಿಗೆ ಮಾಹೆಯವರು ಸಕಾರತ್ಮಕವಾಗಿ ಸ್ಪಂದಿಸಿದ್ದು, ಅದೇ ರೀತಿ ಜಿಲ್ಲೆಯ ಇತರ ಶಿಕ್ಷಣ ಸಂಸ್ಥೆಗಳು ಕೂಡ ಮಾದಕ ವಸ್ತು ಮಾರಾಟದಲ್ಲಿ ತೊಡ ಗುವ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು. ಈ ಮೂಲಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಈ ಚಟಕ್ಕೆ ಬೀಳದಂತೆ ತಡೆಯುವ ಪ್ರಯತ್ನ ಮಾಡಬಹುದಾಗಿದೆ ಎಂದು ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಹೇಳಿದರು.
ಸ್ಮಾರ್ಟ್ ವಾಚ್ ಪಾರ್ಸೆಲ್‌ನಲ್ಲಿ ಡ್ರಗ್ಸ್!
ಮಣಿಪಾಲ ಸೇರಿದಂತೆ ವಿವಿಧ ಕಡೆಗಳಲ್ಲಿ ಹಲವು ರೀತಿಯಲ್ಲಿ ಡ್ರಗ್ಸ್‌ಗಳನ್ನು ಸಾಗಾಟ ಮಾಡುತ್ತಿರುವುದನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿದೆ. ಕೆಲವು ತಿಂಗಳ ಹಿಂದೆ ರೆಮ್ಯಾಟೋ ಫುಟ್ ಪಾರ್ಸೆಲ್ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವವರನ್ನು ಬಂಧಿಸಲಾಗಿತ್ತು. ಅದೇ ರೀತಿ ಕಳೆದ ಡಿ.31ರಂದು ಮಣಿಪಾಲದಲ್ಲಿ ಸ್ಮಾರ್ಟ್ ವಾಚ್ ಡಿಲಿವರಿ ಮಾಡುವ ನೆಪದಲ್ಲಿ ಪ್ಯಾಕ್ ಮಾಡಿದ ಬಾಕ್ಸ್‌ನಲ್ಲಿ ಡ್ರಗ್ಸ್ ಸಾಗಾಟ ಮಾಡ ಲಾಗುತ್ತಿತ್ತು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕಾನೂನು ಕ್ರಮ ಜರಗಿಸಲಾಗಿತ್ತು. ಪರಿಶೀಲನೆ ನಡೆಸಿದಾಗ ವಾಚ್ ಬಾಕ್ಸ್‌ನ ಒಳಗೆ ಇರುವ ಬುಕ್‌ಲೆಟ್‌ನಲ್ಲಿ ಡ್ರಗ್ಸ್ ಸಾಗಿಸುತ್ತಿರುವುದು ಬೆಳಕಿಗೆ ಬಂತು ಎಂದು ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಮಾಹಿತಿ ನೀಡಿದರು.
ಮಣಿಪಾಲದಲ್ಲಿ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದ್ದು, ಪಬ್, ಬಾರ್ ಬಂದ್ ಆದ ನಂತರ ಕೆಲವು ವಿದ್ಯಾರ್ಥಿಗಳು ಸೇರಿಕೊಂಡು ಡ್ರಗ್ಸ್ ಗಾಂಜಾ ಸೇವನೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದೆ. ಅಂತಹ ಪಾರ್ಟಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಅದೇ ರೀತಿ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪಬ್, ಬಾರ್‌ಗಳ ವಿರುದ್ಧವೂ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳುತ್ತಿದೆ.
-ಅಕ್ಷಯ್ ಹಾಕೇ ಮಚ್ಚಿಂದ್ರ, ಎಸ್ಪಿ