varthabharthi


ಅನುಗಾಲ

ಅಂಧ ಮೂರ್ತಿಗಳು

ವಾರ್ತಾ ಭಾರತಿ : 16 Feb, 2023
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕಣ್ತೆರೆದು ನ್ಯಾಯ ನೀಡುವ ನ್ಯಾಯಮೂರ್ತಿಗಳು ತಮ್ಮ ವೃತ್ತಿಯ ಆನಂತರ ಸಮಾಜದ ಚೌಕಟ್ಟಿನೊಳಗೆ ಈ ನ್ಯಾಯನೀಡಿಕೆಯ ಆಧಾರದಲ್ಲಿ ಗೌರವಸಂಪನ್ನರಾಗಿ ಉಳಿಯಬೇಕೇ ಹೊರತು ಕೈಚಾಚಿ ನಿಲ್ಲಬಾರದು. ಅವರು ಒಂದು ಉದ್ಯೋಗವನ್ನಷ್ಟೇ ನಡೆಸುವುದಿಲ್ಲ. ನ್ಯಾಯಾಂಗವೆಂಬ ಕ್ಷೇತ್ರದ ಕಾವಲುಗಾರನಾಗಿ ಬದುಕಿರುತ್ತಾರೆ; ದುಡಿದಿರುತ್ತಾರೆ. ಅವರಿಗೆ ನಿವೃತ್ತಿವೇತನವಿದೆ. ಕೆಲವಾರು ಸೌಕರ್ಯಗಳೂ, ಸವಲತ್ತುಗಳೂ, ರಕ್ಷಣೆಗಳೂ ಇವೆ. ನಿವೃತ್ತ ನ್ಯಾಯಮೂರ್ತಿಗಳೇ ಇರಬೇಕಾದ ಹಲವಾರು ಕಾನೂನಿನ ಸ್ಥಾನಮಾನಗಳು ಅವರಿಗೆ ಸುಲಭಸಾಧ್ಯವಾಗುತ್ತವೆ. ಇವೆಲ್ಲದರ ಜೊತೆಗೆ ಅವರನ್ನು ದಾರ್ಶನಿಕರೆಂದು ನೋಡುವ ಒಂದು ವರ್ಗವೇ ಇದೆ. ನಿವೃತ್ತಿಯ ಆನಂತರ ನ್ಯಾಯಾಂಗದ ಹೊರಗೆ ಉದ್ಯೋಗ ಮತ್ತು ಸ್ಥಾನಮಾನಗಳನ್ನು ಪಡೆಯುವುದೆಂದರೆ ತಮ್ಮ ನ್ಯಾಯಮೂರ್ತಿಯ ಪವಾಡ ಸದೃಶ ವ್ಯಕ್ತಿತ್ವವನ್ನು ಅಳಿಸಿಕೊಳ್ಳುವುದೇ ಆಗಿದೆ.


ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮತ್ತು ಕನ್ನಡಿಗ ಶ್ರೀ ಅಬ್ದುಲ್ ನಝೀರ್ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟು ಸ್ಥಿತಿಯನ್ನು ಚರ್ಚಿಸಬಹುದು:

ಮಹಾಭಾರತದ ಅಂಧ ನೃಪಾಲ ಧೃತರಾಷ್ಟ್ರನು ಭಗವದ್ಗೀತೆಯನ್ನು ಕೇಳಲು, ನೋಡಲು ಉದ್ದೇಶಿಸಿದ್ದನೆಂಬ ಬಗ್ಗೆ ಸ್ಪಷ್ಟ ವಿವರಗಳಿಲ್ಲ. ಆದರೆ ತನ್ನ ಮಕ್ಕಳು ಮತ್ತು ಪಾಂಡವರು ‘ಒಂದೆಡೆ ಸೇರಿ’ ಏನು ಮಾಡಿದರು ಎಂದು ವಿಚಾರಿಸುವಷ್ಟು ಸಹಜ ಕುತೂಹಲ ಅವನಲ್ಲಿತ್ತು. ಒಂದೆಡೆ ಸೇರಿ ಎಂಬ ವ್ಯಂಗ್ಯ ಒಕ್ಕಣೆಯೂ ಇದೆ. ಈ ‘ಒಂದೆಡೆ ಸೇರಿ’ ಎನ್ನುವುದು ಒಗ್ಗಟ್ಟಿಗಾಗಿ ಅಲ್ಲ, ಯುದ್ಧಕ್ಕಾಗಿ ಎನ್ನುವುದೂ ಅವನಿಗೆ ಗೊತ್ತಿದೆ. ಸೇರಿಲ್ಲವೆನ್ನುವುದು ಒಂದು ವ್ಯಂಗ್ಯ. ಆದರೂ ಸದ್ಯ ಏನು ನಡೆಯಿತು ಎಂಬುದನ್ನು ತಿಳಿಯುವ ಆಸೆ. ‘ಏನು ನಡೆಯುತ್ತಿದೆ’ ಎಂಬ ಪ್ರಶ್ನೆಯಿಲ್ಲ. ಆದ್ದರಿಂದ ಇದು ಈಗಾಗಲೇ ಆಗಿರುವ ಘಟನೆಯನ್ನು ಸಂಜಯನು ಆತನಿಗೆ (ಕೆಲವು ವೀಕ್ಷಕ ವಿವರಣೆಗಳು ತುಸು ಕಳೆದು ಪ್ರದರ್ಶಿತವಾಗುತ್ತವೆಯಲ್ಲ, ಹಾಗೆ) ವಿಸ್ತರಿಸಿ ಹೇಳುತ್ತಾನೆಂದೂ ತಿಳಿಯಬಹುದು. ಧೃತರಾಷ್ಟ್ರನ ಪತ್ನಿ ಗಾಂಧಾರಿ ಕುರುಡಿಯಲ್ಲದಿದ್ದರೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಪತಿಯನ್ನನುಸರಿಸಿದಳು ಎಂದು ಹೇಳಲಾಗಿದೆ. ಆ ಕಾಲದಲ್ಲಿ ಕೆಲವರಲ್ಲಾದರೂ ಇದ್ದ ಪಾತಿವ್ರತ್ಯ ನಿಷ್ಠೆಯೋ ಅಥವಾ ಬಾಹ್ಯ ಜಗತ್ತಿನ, ಸಮಾಜದ, ತನ್ನ ಸ್ಥಿತಿಯ ಕುರಿತು ಗಾಂಧಾರಿಗಿದ್ದ ತಿರಸ್ಕಾರವೋ ಅಂತೂ ಆಕೆ ಕಣ್ಣಪಟ್ಟಿಯಲ್ಲೇ ತನ್ನ ಸತಿತನವನ್ನು ಕಳೆದಂತೆ ಕಾಣುತ್ತದೆ. ಕಣ್ಣಪಟ್ಟಿ ಕಟ್ಟಿಕೊಂಡು ಕೃತಕವಾಗಿ ಅನುಭವಿಸುವ ಕುರುಡುತನಕ್ಕೆ ಹಲವು ಅರ್ಥಗಳನ್ನು ಕಲ್ಪಿಸಬಹುದು. ನಮ್ಮ ನಡುವೆ ಸುಳ್ಳೇ ಕಣ್ಣು ಕಾಣುವುದಿಲ್ಲವೆಂದು ಹೇಳಿ ಭಿಕ್ಷೆ ಬೇಡುವ ಮನುಷ್ಯರೂ ಇದ್ದಾರೆ. ಜಾಣ ಕುರುಡುತನವನ್ನು ಪ್ರದರ್ಶಿಸುವ ಆಷಾಢಭೂತಿಗಳೂ ಇದ್ದಾರೆ. ನಮ್ಮ ನ್ಯಾಯದೇವತೆಗೆ ಕಣ್ಣಪಟ್ಟಿ ಕಟ್ಟಲಾಗಿದೆ. ಇದರ ಸಂಕೇತಕ್ಕೆ ಬಹಳಷ್ಟು ಅರ್ಥಗಳಿವೆ. ನ್ಯಾಯ ನೀಡಿಕೆಯು ವಸ್ತುನಿಷ್ಠವಾಗಿರಬೇಕು, ವ್ಯಕ್ತಿನಿಷ್ಠವಾಗಿರಬಾರದು ಎಂದೇ ಈ ಸಂಕೇತವನ್ನು ಸಾಮಾನ್ಯವಾಗಿ ಅರ್ಥವಿಸಲಾಗುತ್ತದೆ. ಹಾಗೆಯೇ ಯಾರ ಮುಂದೆಯೂ ತಲೆಬಾಗಬಾರದು ಮತ್ತು ಜಗತ್ತಿನ ಯಾವ ಆಕರ್ಷಣೆಯೂ ಅದನ್ನು ಸೋಲಿಸಬಾರದು ಎಂಬುದೂ ಒಳಾರ್ಥ. ನ್ಯಾಯದೇವತೆಯೆಂದರೆ ಸಂತೆಗೆ ಬಂದ ಕುರುಡು ನಾಯಿಯಲ್ಲ. ಆನೆಯನ್ನು ಹೀಗೇ ಎಂದು ಭಾವಿಸಿದ ಅಂಧಕನೂ ಅಲ್ಲ. ಇಲ್ಲಿಯ ಕುರುಡುತನಕ್ಕೆ ಸಮಗ್ರ ದೃಷ್ಟಿಕೋನವಿರಬೇಕು ಮತ್ತು ಒಳಗಣ್ಣು ಸದಾ ತೆರೆದಿರಬೇಕು. ನಮ್ಮ ನ್ಯಾಯಮೂರ್ತಿಗಳು ದೇವಾರಾಧನೆಯ ಸಂದರ್ಭದಲ್ಲಿ ಈ ನ್ಯಾಯದೇವತೆಯ ಅರ್ಚಕರು ಅಥವಾ ಭೂತಾರಾಧನೆಯ ಸಂದರ್ಭವನ್ನು ನೆನಪಿಸುವುದಾದರೆ ನರ್ತಕರು. ಅವರು ನ್ಯಾಯದೇವತೆಯನ್ನು ಪ್ರತಿನಿಧಿಸುತ್ತಾರೆ. ಯಾವುದೇ ವ್ಯಕ್ತಿ, ಇಲ್ಲವೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ನೀಡುವ, ನೀಡಬೇಕಾದ ನ್ಯಾಯವನ್ನು ಅವರು ನೀಡುತ್ತಾರೆಂದು ನಂಬಿದ್ದೇವೆ. ಅವರಾಡುವ ಮಾತುಗಳು, ನೀಡುವ ತೀರ್ಪುಗಳು ಎಷ್ಟೇ ಅಪಥ್ಯವಾದರೂ ಜನರು ಸುಮ್ಮನಿರಬೇಕು. ಮೇಲ್ಮನವಿಯಂತಹ ಅವಕಾಶಗಳಿರುವಾಗ ಅದು ತಲುಪಬಹುದಾದಷ್ಟು ಎತ್ತರಕ್ಕೆ ತಲುಪಿ ಅಲ್ಲಿಂದ ತೀರ್ಪು ಘೋಷಿಸಲ್ಪಡುತ್ತದೆ. ಆ ಅತ್ಯುಚ್ಚ ಹಂತದಲ್ಲಿ ಅದು ಸ್ವೀಕೃತಿಗೆ, ಪುರಸ್ಕಾರಕ್ಕೆ, ಅರ್ಹ. ನ್ಯಾಯಮೂರ್ತಿಗಳು ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳುವುದಿಲ್ಲ. ಅಮೂರ್ತವಾದ ಶಕ್ತಿಗೆ ಮೂರ್ತ ರೂಪ ಕೊಟ್ಟಾಗ ಅದು ನಮ್ಮ ನಿಮ್ಮಂತೆ ಜೀವಿಯ ರೂಪದಲ್ಲಿರಬೇಕಾಗುತ್ತದೆ. ಪುರಾಣ, ಸಂಪ್ರದಾಯ, ಅಧ್ಯಾತ್ಮ ಇವನ್ನು ನಂಬಿಕೊಂಡು ನ್ಯಾಯಮೂರ್ತಿಗಳಿಗೆ ಕಣ್ಣಪಟ್ಟಿ ಕಟ್ಟಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಸದ್ಯ ಈ ದೇಶದಲ್ಲಿ ವೈಜ್ಞಾನಿಕ ಮನೋಭಾವದ ಪ್ರವಾಹಕ್ಕೆ ಕಟ್ಟೆಕಟ್ಟಿ ಆರ್ಷೇಯ ಪರಂಪರೆಯ ಹೆಸರಿನಲ್ಲಿ ಎಲ್ಲವನ್ನೂ ಹಿಂದೆ ಸರಿಸುವ ಯತ್ನದಲ್ಲಿ ಈ ಸಂಗತಿಯೂ ಘಟಿಸಬಹುದು. ನ್ಯಾಯಮೂರ್ತಿಗಳೂ ಮನುಷ್ಯರೇ. ಅವರಿಗೂ ಮನುಷ್ಯನ ಸ್ವಭಾವ ವಿಕಾರಗಳು ಇಲ್ಲದೇ ಇರುವುದಿಲ್ಲ. ಆದರೆ ಅವರು ಶಾಪಗ್ರಸ್ತ ದೇವತೆಗಳಂತೆ ಬದುಕಬೇಕೆಂದು ನಿಯಮಗಳನ್ನು ರೂಪಿಸಲಾಗಿದೆ. ಅವರಿಗೂ ಸಂಸಾರವಿದೆ; ಆಸ್ತಿಯಿದೆ; ನೆಂಟರಿಷ್ಟರಿರುತ್ತಾರೆ; ಆಸೆ ಆಕಾಂಕ್ಷೆಗಳಿರುತ್ತವೆ. ಇವನ್ನೆಲ್ಲ ನಡೆಸಿಯೂ ಅವರು ನಿಷ್ಪಕ್ಷಪಾತಿಗಳು. ವ್ಯಾವಹಾರಿಕವಾಗಿ ಮತ್ತು ತಮ್ಮ ಕರ್ತವ್ಯದಲ್ಲಿ ಸಾಧು-ಸಂತ-ಸನ್ಯಾಸಿಗಳಂತೆ ಅವರು ಇರಬೇಕಾಗುತ್ತದೆಂದು ನಂಬಲಾಗಿದೆ. ಆದ್ದರಿಂದಲೇ ಅವರು ಸಂಬಳ-ಸಾರಿಗೆ ಮತ್ತಿತರ ಸೌಕರ್ಯಗಳನ್ನು ಸರಕಾರದಿಂದ ಪಡೆದರೂ ಇತರರಿಗಿಂತ ಹೆಚ್ಚು ಮಾನ್ಯರೆಂದು ಕಾಣಲಾಗುತ್ತದೆ. ಕಾನೂನಿನನ್ವಯ ಅವರು ನೀಡುವ ತೀರ್ಪಿನ ಮಿತಿಯಿಂದಾಗಿ ಅವರ ಅಧಿಕಾರ ವ್ಯಾಪ್ತಿಯಲ್ಲಿ ಅವರು ನಿಷ್ಪಕ್ಷಪಾತಿಗಳಾಗಿರಬೇಕೆಂದು ಬಯಸಬೇಕೇ ವಿನಾ ಸತ್ಯಪಕ್ಷಪಾತಿಗಳಾಗಿರಬೇಕೆಂದು ಅಪೇಕ್ಷಿಸುವಂತಿಲ್ಲ. ಏಕೆಂದರೆ ಮೂರ್ತ ಸತ್ಯಕ್ಕೂ ಮಿತಿಯಿದೆ. ಇಂದ್ರಿಯಗೃಹೀತ ಸಾಕ್ಷದೆದುರಲ್ಲಿ ಸತ್ಯವೇ ಪ್ರತ್ಯಕ್ಷವಾಗುತ್ತದೆಂಬ ಖಾತ್ರಿಯಿಲ್ಲ. ಆದರೆ ಕಣ್ತೆರೆದು ನ್ಯಾಯ ನೀಡುವ ನ್ಯಾಯಮೂರ್ತಿಗಳು ತಮ್ಮ ವೃತ್ತಿಯ ಆನಂತರ ಸಮಾಜದ ಚೌಕಟ್ಟಿನೊಳಗೆ ಈ ನ್ಯಾಯನೀಡಿಕೆಯ ಆಧಾರದಲ್ಲಿ ಗೌರವಸಂಪನ್ನರಾಗಿ ಉಳಿಯಬೇಕೇ ಹೊರತು ಕೈಚಾಚಿ ನಿಲ್ಲಬಾರದು. ಅವರು ಒಂದು ಉದ್ಯೋಗವನ್ನಷ್ಟೇ ನಡೆಸುವುದಿಲ್ಲ. ನ್ಯಾಯಾಂಗವೆಂಬ ಕ್ಷೇತ್ರದ ಕಾವಲುಗಾರನಾಗಿ ಬದುಕಿರುತ್ತಾರೆ; ದುಡಿದಿರುತ್ತಾರೆ. ಅವರಿಗೆ ನಿವೃತ್ತಿವೇತನವಿದೆ. ಕೆಲವಾರು ಸೌಕರ್ಯಗಳೂ, ಸವಲತ್ತುಗಳೂ, ರಕ್ಷಣೆಗಳೂ ಇವೆ. ನಿವೃತ್ತ ನ್ಯಾಯಮೂರ್ತಿಗಳೇ ಇರಬೇಕಾದ ಹಲವಾರು ಕಾನೂನಿನ ಸ್ಥಾನಮಾನಗಳು ಅವರಿಗೆ ಸುಲಭಸಾಧ್ಯವಾಗುತ್ತವೆ. ಇವೆಲ್ಲದರ ಜೊತೆಗೆ ಅವರನ್ನು ದಾರ್ಶನಿಕರೆಂದು ನೋಡುವ ಒಂದು ವರ್ಗವೇ ಇದೆ. ನಿವೃತ್ತಿಯ ಆನಂತರ ನ್ಯಾಯಾಂಗದ ಹೊರಗೆ ಉದ್ಯೋಗ ಮತ್ತು ಸ್ಥಾನಮಾನಗಳನ್ನು ಪಡೆಯುವುದೆಂದರೆ ತಮ್ಮ ನ್ಯಾಯಮೂರ್ತಿಯ ಪವಾಡ ಸದೃಶ ವ್ಯಕ್ತಿತ್ವವನ್ನು ಅಳಿಸಿಕೊಳ್ಳುವುದೇ ಆಗಿದೆ. ಕಳೆದ ಕೆಲವು ದಶಕಗಳಲ್ಲಿ ನಮ್ಮ ನ್ಯಾಯಾಂಗವು ತನ್ನ ವರ್ಚಸ್ಸನ್ನು ಬಹಳಷ್ಟರ ಮಟ್ಟಿಗೆ ಉಳಿಸಿಕೊಂಡು ಬಂದಿದ್ದರೂ ಕೆಲವು ಮಂದಿಯಾದರೂ ಈ ವರ್ಚಸ್ಸಿಗೆ, ಘನತೆಗೆ ಕುಂದು ಬರುವಂತೆ ನಡೆದುಕೊಂಡಿದ್ದಾರೆ. 75 ವರ್ಷಗಳ ದೀರ್ಘ ಇತಿಹಾಸದ ನ್ಯಾಯಪಾಲನೆಯಲ್ಲಿ ನಿವೃತ್ತ ನ್ಯಾಯಮೂರ್ತಿಯೆಂಬ ಘನತೆಯನ್ನು ಉಳಿಸಿಕೊಂಡು ತೀರಾ ಸರಳ ಸಾಧಾರಣವಾಗಿ ಬದುಕಿದವರು ಹಲವರಿದ್ದಾರೆ. ಆದರೆ ಅಷ್ಟೇ ಕೆಟ್ಟದಾಗಿ ನಿವೃತ್ತಿಯಾದವರೂ ಇದ್ದಾರೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ನಿವೃತ್ತಿಯ ನಂತರ ಯಾವುದೇ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಭಾಗವಹಿಸುವಂತಿಲ್ಲ. ಆದರೆ ಸಂಬಂಧಿಸಿದ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳಾಗುವ ಯೋಗ್ಯತೆಯ ಅಗತ್ಯವಿರುವ ಯಾವುದೇ ಹುದ್ದೆಯಲ್ಲಿ ಅವರನ್ನು ನೇಮಿಸಬಹುದು. ಉದಾಹರಣೆಗೆ ಮಾನವ ಹಕ್ಕುಗಳ ಆಯೋಗ, ಪತ್ರಿಕಾ ಮಂಡಳಿ ಮುಂತಾದ ರಾಷ್ಟ್ರೀಯ ಸ್ವಾಯತ್ತ ಸಂಸ್ಥೆಗಳ ಅಧ್ಯಕ್ಷತೆಯೇ ಮುಂತಾದ ಹುದ್ದೆಗಳಿಗೆ ನೇಮಕವಾಗಬೇಕಾದರೆ ಆ ವ್ಯಕ್ತಿಯು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ದುಡಿದ ಅನುಭವದ ಅರ್ಹತೆಯಿರಬೇಕು. ಇದನ್ನು ಸರಕಾರಿ ಉದ್ಯೋಗವೆನ್ನುವಂತಿಲ್ಲ. ಅಂದರೆ ನ್ಯಾಯಾಂಗ ಸಂಬಂಧೀ ಹೊಣೆಯನ್ನು ಯಾವುದೇ ನಿವೃತ್ತ ನ್ಯಾಯಮೂರ್ತಿಯೂ ನಿಭಾಯಿಸುವುದು ಒಳ್ಳೆಯದು ಮತ್ತು ಅದನ್ನು ಬಹುಪಾಲು ಅನುಸರಿಸಲಾಗಿದೆ. ಕಟ್ಜು ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿದ್ದರು. ಎಂ.ಎನ್.ವೆಂಕಟಾಚಲಯ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದರು. (ಇನ್ನೂ ಅನೇಕರಿದ್ದಾರೆ, ಎಲ್ಲವನ್ನೂ ಹೆಸರಿಸುವುದು ಇಲ್ಲಿ ಪ್ರಸ್ತುತವಲ್ಲ.) ನ್ಯಾಯಾಂಗದ ಘನತೆಯ ಸೂಚ್ಯಂಕವನ್ನು ಗಮನಿಸಿದರೆ ಸುಮಾರು 70 ಶೇಕಡಾ ನ್ಯಾಯಮೂರ್ತಿಗಳು ಇತರ ಹುದ್ದೆಗಳನ್ನು ಸ್ವೀಕರಿಸಿದ್ದಾರೆಂಬ ಉಲ್ಲೇಖವಿದೆ. ಆದರೆ ಇವುಗಳಲ್ಲಿ ಬಹುಪಾಲು ಮೇಲೆ ಹೇಳಿದ ಹುದ್ದೆಗಳೇ ಆಗಿದ್ದವು. ಆದ್ದರಿಂದ ಈ ಸೂಚ್ಯಂಕವು ವಾಸ್ತವವನ್ನು ಅಥವಾ ನ್ಯಾಯಾಂಗದ ವಿಕೃತಿಯನ್ನು ಸೂಚಿಸಿದೆಯೆಂದು ಹೇಳುವಂತಿಲ್ಲ. ಇಂದಿರಾಗಾಂಧಿ ಕಾಲದಲ್ಲಿ ಹಿರಿಯ ನ್ಯಾಯಮೂರ್ತಿಗಳನ್ನು ಅಲಕ್ಷಿಸಿ ಕಿರಿಯರನ್ನು ನೇಮಿಸಿದ ಕಾರಣಕ್ಕೆ ಮೂವರು ಹಿರಿಯ ನ್ಯಾಯಮೂರ್ತಿಗಳಾದ ಶೆಲಟ್, ಗ್ರೋವರ್ ಮತ್ತು ಹೆಗ್ಡೆ ಇವರು ಹುದ್ದೆಯನ್ನು ತ್ಯಜಿಸಿ ಹೊರಬಂದಿದ್ದರು. ಅದು ನ್ಯಾಯಾಂಗದ ಒಳಗಿನ ವ್ಯಥೆಯಾದರೆ, ನ್ಯಾಯಾಂಗದ ಹೊರಗಿನ ಹುದ್ದೆಯನ್ನು ಪಡೆಯುವುದು ಲೋಕದ ವ್ಯಥೆ. ಈ ಪೈಕಿ ಹೆಗ್ಡೆ ಲೋಕಸಭೆಗೆ ಸ್ಪರ್ಧಿಸಿ ಸಭಾಪತಿಯೂ ಆದರು. ಅದು ಆ ಪರಿಸ್ಥಿತಿಯ ಅತಿರೇಕಕ್ಕೆ ಅವರು ಮತ್ತು ಅವರು ಪ್ರತಿನಿಧಿಸಿದ ರಾಜಕೀಯ ನಿಲುವು ನೀಡಿದ ಪ್ರತ್ಯುತ್ತರವಾಗಿತ್ತು.

ಆದರೆ ಕೆಲವು ನ್ಯಾಯಮೂರ್ತಿಗಳು ಸ್ವಯಿಚ್ಛೆಯಿಂದ ಇಲ್ಲವೇ ರಾಜಕೀಯ ಆಸೆ-ದುರಾಸೆಗಳಿಂದಾಗಿ ತಮ್ಮ ಘನತೆ-ಗೌರವಗಳಿಗೆ ತಿಲಾಂಜಲಿ ನೀಡಿ ಇತರ ಕ್ಷೇತ್ರಗಳನ್ನು ಪ್ರವೇಶಿಸುವುದಕ್ಕೆ ಹಿಂಜರಿಯುವುದಿಲ್ಲ ಅಥವಾ ಅದಕ್ಕೆ ಸಿದ್ಧರಾಗುತ್ತಾರೆ ಮತ್ತು ಇತ್ತೀಚೆಗಿನ ಕೆಲವು ಉದಾಹರಣೆಗಳನ್ನು ಗಮನಿಸಿದರೆ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಾರೆ. ಎಲ್ಲ ಅಂತಹ ನೇಮಕಗಳೂ ರಾಜಕೀಯಗೊಳ್ಳುವುದಿಲ್ಲ. ಉದಾಹರಣೆಗೆ ಸರ್ವೋಚ್ಚ ನ್ಯಾಯಾಲಯವು 1950ರಲ್ಲಿ ಸ್ಥಾಪಿತವಾದಾಗ ಅದರ ನ್ಯಾಯಮೂರ್ತಿಯಾಗಿ ನೇಮಕಗೊಂಡವರಲ್ಲಿ ಆಗಿನ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಫಝಲ್‌ಅಲಿ ಒಬ್ಬರು. ಅವರು ತಮ್ಮ ನಿರ್ಬಿಢೆಯ ತೀರ್ಪಿಗೆ ಹೆಸರುವಾಸಿಯಾಗಿದ್ದವರು. ಸಂವಿಧಾನದ ಮೂಲಭೂತ ಹಕ್ಕಿನ ವಿಚಾರದಲ್ಲಿ ಹೆಸರುವಾಸಿಯಾದ ಎ.ಕೆ.ಗೋಪಾಲನ್ ಪ್ರಕರಣದಲ್ಲಿ ನ್ಯಾಯಮೂರ್ತಿ ಫಝಲ್‌ಅಲಿಯವರು ಸರಕಾರಕ್ಕೆ ವಿರುದ್ಧವಾಗಿ ಭಿನ್ನ ಮತದ ತೀರ್ಪನ್ನು ನೀಡಿದ್ದರು. ಆದರೆ ಅವರು ನಿವೃತ್ತರಾದಾಗ ನೆಹರೂ ಸರಕಾರವು ಈ ಭಿನ್ನಮತವನ್ನು ರಾಜಕೀಯಗೊಳಿಸದೆ ಅವರನ್ನು ಒಡಿಶಾ ರಾಜ್ಯದ ರಾಜ್ಯಪಾಲರನ್ನಾಗಿ ನೇಮಿಸಿತು. ಮುಂದೆ ನ್ಯಾಯಮೂರ್ತಿ ಫಝಲ್‌ಅಲಿಯವರ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಾಲಯವು ಮೇನಕಾ ಗಾಂಧಿ ಪ್ರಕರಣದಲ್ಲಿ ಎತ್ತಿಹಿಡಿಯಿತು. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಅವರನ್ನು ಘನ ಹುದ್ದೆಗೆ ನೇಮಿಸಿ ಗೌರವಿಸಿತೇ ಹೊರತು ರಾಜಕೀಯವಾಗಿ ಪುರಸ್ಕರಿಸಿತೆಂದು ಹೇಳಲಾಗದು. (ಆಗ ರಾಜ್ಯಪಾಲರ ಹುದ್ದೆಗೂ ಗೌರವವಿತ್ತು!)


ಆನಂತರದ ದಿನಗಳಲ್ಲಿ ರಾಜ್ಯಪಾಲರೆಂದರೆ ರಾಜ್ಯಗಳಲ್ಲಿ ಕೇಂದ್ರ ಸರಕಾರದ ಏಜೆಂಟರೆಂಬ ಹಂತಕ್ಕಿಳಿಯಿತು. ಅದೀಗ ಸಾಕಷ್ಟು ಕುಸಿದಿದೆ. ಕಳೆದ ಕೆಲವು ದಶಕಗಳಲ್ಲಿ ಆಳುವ ಪಕ್ಷಗಳಲ್ಲಿ ತೊಂದರೆ/ಕಿರಿಕಿರಿ ಮಾಡುವ ಹಿರಿಯ ರಾಜಕಾರಣಿಗಳಿಗೆ, ಪಕ್ಷಕ್ಕಾಗಿ ದುಡಿದ ಆದರೆ ಯಾವುದೇ ಹುದ್ದೆಯನ್ನು ಪಡೆಯದ ಹಿರಿಯ ನಾಯಕರಿಗೆ, ಅಧಿಕಾರಪೀಠಕ್ಕೆ ಸಮೀಪರಾದ ನಿಷ್ಠಾವಂತ ಹಿರಿಯ ಅಧಿಕಾರಿಗಳಿಗೆ ಪುನರ್ವಸತಿ ಕಲ್ಪಿಸಲು ಈ ಹುದ್ದೆಯನ್ನು ಆರಿಸಲಾಯಿತು. ಇದು ಅನೇಕ ಬಾರಿ ಅಂತಹ ವ್ಯಕ್ತಿಗಳು ನಿಭಾಯಿಸಿದ್ದ ಹುದ್ದೆಗಳಿಗಿಂತ ಕೆಳ ದರ್ಜೆಯದ್ದಾಗಿದ್ದವು. ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಸದಾಶಿವಂ ಅವರನ್ನು ನಿವೃತ್ತಿಯ ಆನಂತರ ರಾಜ್ಯಪಾಲರಾಗಿ ನಿಯುಕ್ತಿಮಾಡಲಾಗಿತ್ತು. ಇದು ಅವರ ಹುದ್ದೆಗಿಂತ ಕೆಳದರ್ಜೆಯದ್ದಾಗಿತ್ತು. ಪ್ರಧಾನಿ ಬಂದರೆ ವಿಮಾನನಿಲ್ದಾಣಕ್ಕೆ ಹೋಗಬೇಕಾಗಿ ಬರುವ ಇಂತಹ ಹುದ್ದೆಯನ್ನು ಅವರು ಸ್ವೀಕರಿಸುತ್ತಾರೆಂಬುದು ಆ ಸಂದರ್ಭದಲ್ಲಿ ಯಾರೂ ನಿರೀಕ್ಷಿಸಿರಲಿಲ್ಲ. ಸಂಘಪರಿವಾರದ ಮುಖ್ಯರಾಗಿದ್ದ ರಾಮಾಜೋಯಿಸ್ ಉಚ್ಚ ನ್ಯಾಯಮೂರ್ತಿಯಾಗಿ ಬಳಿಕ ಪಂಜಾಬ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿಯ ಬಳಿಕೆ ರಾಜ್ಯಪಾಲರಾಗಿ ನೇಮಕವಾಗಿದ್ದರು. ಈಚೆಗೆ ರಂಜನ್ ಗೊಗೊಯಿ ನಿವೃತ್ತಿಯ ಕೆಲವೇ ದಿನಗಳಲ್ಲಿ ರಾಜ್ಯಸಭೆಗೆ ನೇಮಕವಾದರು. ಇದು ಅವರು ನೀಡಿದ ಸರಕಾರಪರ ತೀರ್ಪುಗಳಿಗೆ ಸಂದ ಬಹುಮಾನವೆಂದೇ ವಿಶ್ಲೇಷಿಸಲಾಗಿತ್ತು. ಕಾಂಗ್ರೆಸ್ ನಾಯಕ ಬಹರುಲ್ ಇಸ್ಲಾಮ್ ಇಂದಿರಾ ಯುಗದಲ್ಲಿ ರಾಜ್ಯಸಭಾ ಸದಸ್ಯರಾಗಿದ್ದವರು, ಅದನ್ನು ತ್ಯಜಿಸಿ 1980ರಲ್ಲಿ ಸರ್ವೋಚ್ಚ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 1983ರಲ್ಲಿ ಅದನ್ನು ತ್ಯಜಿಸಿ ಬಳಿಕ ಮತ್ತೆ ರಾಜ್ಯಸಭೆಗೆ ಮರಳಿದರು. ಏಕೆಂದರೆ ಅವರು ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ಇದ್ದ ಭ್ರಷ್ಟಾಚಾರ ಪ್ರಕರಣವನ್ನು ರದ್ದು ಮಾಡಿದರೆಂಬ ಅಪವಾದವಿತ್ತು. ಇದೊಂದು ಕೊಡುಕೊಳ್ಳುವಿಕೆಯ ನೇರ ರಾಜಕೀಯವಾಗಿತ್ತು.

ಭಾರತದ ಸರ್ವೋಚ್ಚ ನ್ಯಾಯಮೂರ್ತಿಗಳಾಗಿದ್ದ ಎಸ್.ಎಚ್.ಕಪಾಡಿಯ, ಆರ್.ಎಮ್.ಲೋಧಾ, ಜೆ.ಎಸ್.ಠಾಕೂರ್ ಮಾತ್ರವಲ್ಲ, ಈಚೆಗೆ ನಿವೃತ್ತರಾದ ಜೆ.ಚಲಮೇಶ್ವರ್, ಕುರಿಯನ್ ಜೋಸೆಫ್ ಮುಂತಾದವರು ನಿವೃತ್ತಿಯ ಬಳಿಕ ಯಾವ ಹುದ್ದೆಯನ್ನಾಗಲೀ, ಗೌರವವನ್ನಾಗಲೀ ಸ್ವೀಕರಿಸುವುದಿಲ್ಲವೆಂದು ಘೋಷಿಸಿದ್ದರು. ಯಾವುದೇ ಕಳಂಕವಿಲ್ಲದೆ ಅನ್ಯಕ್ಷೇತ್ರಕ್ಕೂ ಕಾಲಿಟ್ಟವರೂ ಇದ್ದರು. ಎಚ್.ಆರ್.ಖನ್ನಾ, ವಿ.ಎಸ್.ಕೃಷ್ಣ ಅಯ್ಯರ್, ಕೋಕಾ ಸುಬ್ಬರಾವ್ ನಿವೃತ್ತಿಯ ಬಹುನಂತರ ರಾಷ್ಟ್ರ/ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿದ್ದರು. ಇದಕ್ಕೂ ಅವರು ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಕ್ಕೂ ಸಂಬಂಧವಿರಲಿಲ್ಲ. ಅವರ ಸೋಲು ಪ್ರಜಾತಂತ್ರದ ಸೋಲು; ಆ ವಿಚಾರ ಬೇರೆ.
ಈ ಹಿನ್ನೆಲೆಯಲ್ಲಿ ಅಬ್ದುಲ್ ನಝೀರ್ ಅವರ ಆಯ್ಕೆ ಅನಿರೀಕ್ಷಿತವೇನಲ್ಲ. ಅವರು ನಿವೃತ್ತಿಯಾಗುವ ಮೊದಲೇ ರಾಜ್ಯಪಾಲರಾಗುವ ಸುಳಿವು ಇತ್ತು. ಅವರು ನೀಡಿದ ತೀರ್ಪುಗಳಲ್ಲಿ ಕಳಂಕವನ್ನು ಆರೋಪಿಸುವುದು ಅತಿಯಾಗುತ್ತದಾದರೂ ಅವರಿಂದ ಈ ಸರಕಾರಕ್ಕೆ ಅಪಾರ ಸಹಾಯವಾಯಿತೆಂದರೆ ತಪ್ಪಲ್ಲ. ಸರಕಾರಕ್ಕೂ ಹರಕೆಯ ಕುರಿಯ ರೂಪದಲ್ಲಿ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿ ಬೇಕಾಗಿತ್ತು. ಅವರಿಗಿಂತ ಹಿರಿಯರನೇಕರಿದ್ದರೂ ಅವರನ್ನು ಆರಿಸಿದ್ದರಲ್ಲಿ ಈ ರಾಜಕೀಯ ಸ್ಪಷ್ಟವಾಗಿದೆ. ಅಲ್ಲದೆ ಅವರು ನಿವೃತ್ತಿಪೂರ್ವ ಮತ್ತು ಉತ್ತರದಲ್ಲಿ ನೀಡುತ್ತಿದ್ದ ಸರಕಾರದ ನಿಲುವುಗಳನ್ನು ಹೋಲುವ ಭಾಷಣಗಳು ಈ ಅಂಶವನ್ನು ತೋರಿಸುತ್ತಿದ್ದವು. ಕುರ್‌ಆನ್‌ನನ್ನು ಉಲ್ಲೇಖಿಸದಿದ್ದರೂ ಅವರು ಮನುಸಂಸ್ಕೃತಿಯನ್ನು, ಆತ್ಮನಿರ್ಭರತೆಯನ್ನು, ಭಾರತೀಯತೆಯನ್ನು ಹೇಳುತ್ತಿದ್ದ ರೀತಿ ಮತ್ತು ವೈಖರಿ ಅವರನ್ನು ಆಳುವ ಸರಕಾರದ ನೀಲಿಗಣ್ಣಿನ ಹುಡುಗರನ್ನಾಗಿ ಮಾಡಿತ್ತು. ಪರಿಣಾಮ ಮತ್ತು ಫಲಿತಾಂಶದಲ್ಲಿ ಅವರು ‘ಡಿಸ್ಟಿಂಕ್ಷನ್’ ಪಡೆದರು. ಇಂದಿನ ಮತೀಯ ರಾಜಕಾರಣದಲ್ಲಿ ಅವರ ಈ ಹುದ್ದೆ ಅವರಿಗೆ ಘನತೆಯನ್ನು ತಂದೀತೆಂದು ಅನ್ನಿಸುವುದಿಲ್ಲ.
ನ್ಯಾಯಮೂರ್ತಿಯು ಕಣ್ಣು ಪಟ್ಟಿಹಾಕಿಕೊಂಡು ದುಡಿದಾಗಲೂ ದೃಷ್ಟಿ ಇನ್ನೇನನ್ನೋ ಯಾಚಿಸುತ್ತದೆ ಮತ್ತು ಯೋಚಿಸುತ್ತದೆ. ಜನರು ತಮ್ಮ ಕಣ್ಣುಪಟ್ಟಿಯನ್ನು ತೆರೆದಾಗ ಇವೆಲ್ಲ ಗೋಚರಿಸುತ್ತವೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)