ಯುಎಇ-ಇಂಡಿಯ ಬಿಝ್ ನೆಸ್ ಕೌನ್ಸಿಲ್ ನ ಯುಎಇ ಘಟಕ ಸ್ಥಾಪನೆ
UIBC-UC ಅಧ್ಯಕ್ಷರಾಗಿ ಫೈಝಲ್ ಕೊಟ್ಟಿಕೊಲ್ಲನ್ ನೇಮಕ
ದುಬೈ: ಭಾರತ ಮತ್ತು ಯುಎಇಗಳಲ್ಲಿರುವ ಮಹತ್ವದ ಉದ್ಯಮಗಳ ನಡುವೆ ಸಹಕಾರ ಏರ್ಪಡಿಸುವ ಉದ್ದೇಶದ ಯುಎಇ-ಇಂಡಿಯ ಬಿಝ್ನೆಸ್ ಕೌನ್ಸಿಲ್ ನ ಯುಎಇ ಘಟಕವನ್ನು (UIBC-UC) ಇತ್ತೀಚೆಗೆ ಸ್ಥಾಪಿಸಲಾಗಿದೆ. ಹೂಡಿಕೆಗಳು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೌನ್ಸಿಲ್ ಕೆಲಸ ಮಾಡುತ್ತಿದೆ.
ಭಾರತ ಮತ್ತು ಯುಎಇ ದೇಶಗಳು ಸಹಿ ಹಾಕಿರುವ ಸಮಗ್ರ ಆರ್ಥಿಕ ಭಾಗೀದಾರಿಕೆ ಒಪ್ಪಂದ (ಕಾಂಪ್ರಿಹೆನ್ಸಿವ್ ಎಕನಾಮಿಕ್ ಪಾರ್ಟ್ನರ್ಶಿಪ್ ಅಗ್ರೀಮೆಂಟ್- ಸೆಪ)ದ ಮೊದಲ ವಾರ್ಷಿಕ ದಿನದಂದು ಈ ಘಟಕದ ಸ್ಥಾಪನೆಯಾಗಿರುವುದು ಗಮನಾರ್ಹವಾಗಿದೆ.
ದುಬೈಯಲ್ಲಿ ಇತ್ತೀಚೆಗೆ ಕೌನ್ಸಿಲ್ ನ ಯುಎಇ ಘಟಕ (ಯುಐಬಿಸಿ- ಯುಸಿ)ವನ್ನು ಯುಎಇಯ ವಿದೇಶ ವ್ಯಾಪಾರ ಖಾತೆಯ ಸಹಾಯಕ ಸಚಿವ ಡಾ. ತಾನಿ ಬಿನ್ ಅಹ್ಮದ್ ಅಲ್ ಝೆಯೂದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯುಎಇಗೆ ಭಾರತದ ರಾಯಭಾರಿ ಸಂಜಯ್ ಸುಧೀರ್, ದುಬೈಯಲ್ಲಿರುವ ಭಾರತೀಯ ಕೌನ್ಸುಲ್ ಜನರಲ್ ಡಾ. ಅಮನ್ ಪುರಿ ಮತ್ತು ಯುಐಬಿಸಿ- ಯುಸಿಯ ಸ್ಥಾಪಕ ಸದಸ್ಯರು ಉಪಸ್ಥಿತರಿದ್ದರು.
‘‘ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಉಭಯ ದೇಶಗಳ ನಡುವಿನ ಹೂಡಿಕೆ ಮತ್ತು ವ್ಯಾಪಾರ ಕಾರಿಡಾರ್ ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ನಿಟ್ಟಿನಲ್ಲಿ ಉಭಯ ದೇಶಗಳ ಉದ್ಯಮಗಳ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ನಾವು ಬಯಸಿದ್ದೇವೆ. ಇನ್ನಷ್ಟು ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಹೇಗೆ ಸೃಷ್ಟಿಸಬಹುದು ಎಂಬ ಬಗ್ಗೆ ಅವರು ವಿಚಾರ ವಿನಿಮಯ ಮಾಡುತ್ತಾರೆ’’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಸಂಜಯ್ ಸುಧೀರ್ ಹೇಳಿದರು.
(ಫೈಝಲ್ ಕೊಟ್ಟಿಕೊಲ್ಲನ್)
ಕೌನ್ಸಿಲ್ ನ ಮುಖ್ಯ ಉದ್ದೇಶ ವಿಶ್ವಾಸ ನಿರ್ಮಾಣವಾಗಿದೆ ಎಂದು ಕೌನ್ಸಿಲ್ ನ ಯುಇಎ ಘಟಕದ ಅಧ್ಯಕ್ಷ ಫೈಝಲ್ ಕೊಟ್ಟಿಕೊಲ್ಲನ್ ಹೇಳಿದರು. ‘‘ಹಿಂದೆ, ಯುಎಇಯ ಹಲವಾರು ಕಂಪೆನಿಗಳು, ಭಾರತದಲ್ಲಿ ಹೂಡಿಕೆಯ ವಿಚಾರದಲ್ಲಿ ಅಪಕ್ವ ನಿರ್ಧಾರಗಳನ್ನು ತೆಗೆದುಕೊಂಡಿವೆ. ಯಾಕೆಂದರೆ ದೊಡ್ಡ ಮೊತ್ತದ ಹಣವನ್ನು ಹೂಡುವ ಧೈರ್ಯ ಅವುಗಳಲ್ಲಿರಲಿಲ್ಲ’’ ಎಂದು ಅವರು ಹೇಳಿದರು. ‘‘ಈಗ ನಾವು ಸೇತುವೆಯಾಗಿ ಕೆಲಸ ಮಾಡುತ್ತೇವೆ. ವಿಶ್ವಾಸವು ಯಾವುದೇ ವ್ಯಾಪಾರದ ತಳಹದಿಯಾಗಿದೆ. ವಿಶ್ವಾಸ ಹುಟ್ಟಿದಾಗ ಎಲ್ಲವೂ ಸುಗಮವಾಗುತ್ತದೆ’’ ಎಂದರು.
"ಈ ಕೌನ್ಸಿಲ್ ಸಂದರ್ಭೋಚಿತವಾಗಿದೆ. ಕೋವಿಡ್ ನಂತರ ಯುಎಇ ವಿಶ್ವದ ಕೇಂದ್ರವಾಗಿದೆ" ಎಂದು ಕೆಇಎಫ್ ಹೋಲ್ಡಿಂಗ್ಸ್‌ನ ಅಧ್ಯಕ್ಷರೂ ಆಗಿರುವ ಫೈಝಲ್ ಹೇಳಿದರು.
ಯುಎಇ-ಇಂಡಿಯ ಬಿಝ್ನೆಸ್ ಕೌನ್ಸಿಲ್ ನ ಯುಎಇ ಘಟಕದ ಯುಎಇ ವಿಭಾಗದ ಸ್ಥಾಪಕ ಸದಸ್ಯರು: ಮುಬದಲ, ವಿಝ್ ಫೈನಾನ್ಶಿಯಲ್, ಡಿಪಿ ವರ್ಲ್ಡ್, ಎಮಾರ್, ಎಮಿರೇಟ್ಸ್ ಏರ್ಲೈನ್ ಮತ್ತು ಎಮಿರೇಟ್ಸ್ ಎನ್ಬಿಡಿ.
ಭಾರತೀಯ ವಿಭಾಗದ ಸ್ಥಾಪಕ ಸದಸ್ಯರು: ಟಾಟಾ, ರಿಲಯನ್ಸ್, ಅದಾನಿ, ಓಲಾ, ಝಿರೋದಾ, ಉಡಾನ್, ಈಸಿ ಟ್ರಿಪ್, ಕೆಇಎಫ್ ಹೋಲ್ಡಿಂಗ್ಸ್, ಬೂಮರ್ಕ್ ಕಾರ್ಪೊರೇಶನ್, ಅಪಾರೆಲ್ ಗ್ರೂಪ್, ಎಎಫ್ಎಸ್ ಮತ್ತು ಲುಲು ಫೈನಾನ್ಶಿಯಲ್.
ಡಿಪಿ ವರ್ಲ್ಡ್ ಸಿಇಒ ಮತ್ತು ಆಡಳಿತ ನಿರ್ದೇಶಕ (ಭಾರತೀಯ ಉಪಖಂಡ) ರಿಝ್ವಾನ್ ಸೂಮರ್ ಕೌನ್ಸಿಲ್ ನ ಯುಎಇ ಘಟಕದ ಸಹ-ಅಧ್ಯಕ್ಷರಾಗಿರುವರು. ಕೌನ್ಸಿಲ್ ನ ಭಾರತೀಯ ಘಟಕದ ಅಧ್ಯಕ್ಷರಾಗಿರುವ ಶರಫುದ್ದೀನ್ ಶರಾಫ್ ಯುಎಇ ಘಟಕದಲ್ಲಿ ಉಪಾಧ್ಯಕ್ಷ ಹುದ್ದೆಯನ್ನೂ ನಿಭಾಯಿಸಲಿದ್ದಾರೆ.
ಯುಎಇ ಘಟಕದ ಕಚೇರಿಯು ಅಬುಧಾಬಿಯಲ್ಲಿರುತ್ತದೆ. ಕೌನ್ಸಿಲ್ ನ ಭಾರತೀಯ ಘಟಕವನ್ನು 2015ರಲ್ಲಿ ಹೊಸದಿಲ್ಲಿಯಲ್ಲಿ ಸ್ಥಾಪಿಸಲಾಗಿತ್ತು.