varthabharthi


ಮನೋ ಚರಿತ್ರ

ಆಧುನೀಕರಣ ಮತ್ತು ಸ್ವಾತಂತ್ರ್ಯಹರಣ

ವಾರ್ತಾ ಭಾರತಿ : 19 Feb, 2023
ಯೋಗೇಶ್ ಮಾಸ್ಟರ್

ಮಗುವೊಂದು ತನ್ನ ಜೊತೆಯ ಹುಡುಗರು ಆಡುವುದನ್ನು ನೋಡಿ ತಂದೆಯ ಬಳಿ ಆಟವಾಡುವ ರಿಮೋಟ್ ಕಂಟ್ರೋಲ್ ಕಾರನ್ನು ಕೇಳಿತು. ತಂದೆ ತಾನು ದಾರ ಕಟ್ಟಿ ಎಳೆದುಕೊಂಡು ಓಡಾಡುತ್ತಾ ಆಟವಾಡುತ್ತಿದ್ದ ಮರದ ಕಾರನ್ನು ಕೊಡಲು ಹೋದ. ಮಗು ತನಗೆ ಹೊಸ ಕಾರು ಬೇಕೆಂದು ಕೇಳಿತು. ತಂದೆ ತನ್ನ ಮರದ ಕಾರನ್ನು ಚೆನ್ನಾಗಿ ಉಜ್ಜಿ, ಹೊಸ ಬಣ್ಣವನ್ನು ಬಳಿದು, ಅದನ್ನು ಎಳೆದೊಯ್ಯಲು ಹೊಸದಾದ ಮತ್ತು ಗಟ್ಟಿಯಾದ ದಾರವನ್ನು ಕಟ್ಟಿ ಮಗನಿಗೆ ಒಪ್ಪಿಸಲು ಯತ್ನಿಸಿದ. ಮಗು ಅದನ್ನು ಎಸೆದು ಹೇಳಿತು: ''ನೀನು ಹಳೆಯದಕ್ಕೇ ಬಣ್ಣ ಬಳಿದು ಕೊಡುತ್ತಿದ್ದೀಯ. ನನಗೆ ಹೊಸದು ಬೇಕು.''

ಮಗು ಬಯಸಿದ್ದು ಆಧುನಿಕವಾದದ್ದು. ತಂದೆ ಕೊಟ್ಟಿದ್ದು ನವೀಕರಿಸಿದ್ದು. ತಾನು ಬಳಸಿದ್ದ ಆಟಿಕೆ ಎಂಬ ಭಾವನಾತ್ಮಕ ಕಾರಣಕ್ಕೋ, ಹೊಸದನ್ನು ಕೊಡಿಸಲಾಗದ ಆರ್ಥಿಕ ಸಮಸ್ಯೆಗೋ, ಇಷ್ಟೇ ಸಾಕು ಎಂಬ ಜಿಗುಟುತನಕ್ಕೋ; ಒಟ್ಟಾರೆ ತಂದೆಗೇನೋ ಒಂದು ಕಾರಣ. ಆದರೆ ಮಗು ಸುತ್ತಮುತ್ತ ನೋಡುತ್ತಿರುವ ವಸ್ತುಗಳನ್ನು, ಸಂಗತಿಗಳನ್ನು ತನ್ನದಾಗಿಸಿಕೊಂಡು ಇತರರಂತೆಯೇ ತಾನೂ ಹೊಸತನವನ್ನು ಆನಂದಿಸಬೇಕೆಂದು ಬಯಸುತ್ತಿತ್ತು. ಮಕ್ಕಳು ಹೊಸತನ್ನು ಬಯಸುವುದು, ಹೊಸತೇ ಬೇಕೆಂದು ಹಟ ಹಿಡಿಯುವುದು ಏನೂ ಆಶ್ಚರ್ಯವಲ್ಲ. ಅವರು ಸಾಮಾಜೀಕರಣದ ಪ್ರಕ್ರಿಯೆಯ ಆರಂಭಿಕ ಹಂತದಲ್ಲಿರುತ್ತಾರೆ. ಯಾವುದೇ ಸಾಂಪ್ರದಾಯಿಕ ಮುಷ್ಟಿಗೆ ಸಿಕ್ಕಿರದ ಅಥವಾ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿರುವಂತಹ ಮನಸ್ಸು ಸದಾ ಹೊಸ ಅನುಭವವನ್ನು ಬಯಸುತ್ತಿರುತ್ತದೆ. ಹೊಸಹೊಸ ಪದರಗಳನ್ನು ಪಡೆಯುತ್ತಿರುವುದು, ಬೆಳೆಯುತ್ತಿರುವುದು, ವಿಕಾಸವಾಗುತ್ತಿರುವುದು ಜೀವಂತಿಕೆಯ ಲಕ್ಷಣ.

ಬಟ್ಟೆಯಾಗಲಿ, ವಾಹನವಾಗಲಿ, ಅನುಭವವಾಗಲಿ; ಹೊಸತು ಎಂದ ಕೂಡಲೇ ಉತ್ಸಾಹಗೊಳ್ಳುವುದು ಸಹಜ ಮನಸ್ಸು ಜೀವಂತಿಕೆಯಿಂದಿರುವ ಕುರುಹು. ಆದರೆ, ಹಳತನ್ನೇ ಆಧರಿಸುವುದು ಎಂದರೆ ಹೊಸತನ್ನು ಹೊಂದದೇ ಇರುವಂತಹ ಆರ್ಥಿಕತೆಯ ಅನಿವಾರ್ಯತೆಯಾಗಿರಬಹುದು, ಅದರೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧವಾಗಿರಬಹುದು, ಅಥವಾ ಬೇರೆ ಯಾವುದೋ ಒಂದು ಹೊರಗಿನ ಒತ್ತಡವಾಗಿರಬಹುದು. ಸಂಸ್ಕೃತಿ ಮತ್ತು ಸಂಪ್ರದಾಯಗಳೆಂಬ ವಿಚಾರಕ್ಕೆ ಬರೋಣ. ಇವೆರಡೂ ಆಧುನೀಕರಣಗೊಳ್ಳುವುದಿಲ್ಲ. ಆದರೆ ಆಧುನೀಕರಣಕ್ಕಾಗಿ ಹಾತೊರೆಯುವ ಮನಸ್ಸುಗಳನ್ನು ತೃಪ್ತಿಪಡಿಸಲು ಆಗಿಂದಾಗ ನವೀಕರಣಗೊಳ್ಳುತ್ತಿರುತ್ತವೆ. ಹೊಸ ಬಾಟಲಿಯಲ್ಲಿ ಹಳೆಯ ಹೆಂಡ. ಯಾವುದೇ ಒಂದು ಸಂಸ್ಕೃತಿ ಅಥವಾ ಸಂಪ್ರದಾಯ ರೂಪುಗೊಳ್ಳುವಾಗ ಅದರದ್ದೊಂದು ಕಾಲವಿರುತ್ತದೆ. ಆ ಕಾಲಘಟ್ಟದ ಒತ್ತಡಗಳು, ಬೇಡಿಕೆಗಳು, ಆ ಕಾಲಘಟ್ಟದಲ್ಲಿ ಬದುಕುತ್ತಿದ್ದವರ ತಿಳುವಳಿಕೆ, ಅವರ ರಾಜಕೀಯ ಮತ್ತು ರಾಜಕೀಯ ಪರಿಸ್ಥಿತಿಗಳು, ಯಾವುದನ್ನೋ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ, ಯಾವುದನ್ನೋ ತಿರಸ್ಕರಿಸಬೇಕಾದ ಒತ್ತಡಗಳು; ಹೀಗೆ ಹಲವು ಅಂಶಗಳು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ರೂಢಿಗಳನ್ನು ರೂಪಿಸುತ್ತದೆ. ಸಂಪ್ರದಾಯ ಮತ್ತು ರೂಢಿ ಸಮಾನಾರ್ಥಕ ಪದಗಳೇ.

ಆಯಾ ಭಾಗದ ಜನ ತಮ್ಮ ಪ್ರಾದೇಶಿಕತೆಯನ್ನು ಅನುಸರಿಸಿ, ನಕಾರಾತ್ಮಕವಾಗಿರುವುದೋ ಅಥವಾ ಸಕಾರಾತ್ಮಕವಾಗಿರುವುದೋ; ಅಲ್ಲಿನ ಜನರ ಗುಂಪುಗಳ ಸಂಕಲಿತ ಮನಸ್ಥಿತಿಗಳನ್ನು ಅನುಸರಿಸಿ, ಅವರಿಗಿರುವ ಅಳಿಯುವ ಭಯ ಮತ್ತು ಉಳಿಯುವ ಬಯಕೆಗಳನ್ನು ಅನುಸರಿಸಿಕೊಂಡು; ಹುಟ್ಟು, ಬೆಳವಣಿಗೆೆ, ಮದುವೆ, ಅಪರಾಧ, ಶಿಕ್ಷೆ, ಸಾವು, ಕುಟುಂಬ, ಪರಕೀಯ, ಒಪ್ಪುವ, ತಿರಸ್ಕರಿಸುವ; ಹೀಗೆ ಹಲವು ಜೀವನದ ಅವಿಭಾಜ್ಯ ಭಾಗಗಳಿಗೆ ಸ್ಪಂದಿಸುವ ಕ್ರಮವೇ ಸಂಪ್ರದಾಯವಾಗುತ್ತಾ ಹೋಗುತ್ತದೆ. ಅದೇ ಅವರ ಜೀವನ ಪದ್ಧತಿ ಅಥವಾ ಕ್ರಮಗಳಾಗಿರುತ್ತದೆ. ಗೊಂದಲಗಳಿಲ್ಲದೆ ಒಂದು ಕ್ರಮದಲ್ಲಿ ಸರಾಗವಾಗಿ ಸರಿದು ಹೋಗಲು ಅವರವರು ಕಂಡುಕೊಂಡಂತಹ ಕ್ರಮಗಳಷ್ಟೇ ಪದ್ಧತಿಗಳು ಅಥವಾ ಸಂಪ್ರದಾಯಗಳು. ಅದಕ್ಕಿಂತ ಮಿಗಿಲಾಗಿ ಇನ್ನೇನೂ ಇಲ್ಲ. ಅದನ್ನು ಉನ್ನತೀಕರಿಸಲು ಅಥವಾ ಅದರ ಮೌಲ್ಯವನ್ನು ಹೆಚ್ಚಿಸಲು ಅದಕ್ಕೆ ಕಲಾತ್ಮಕವಾಗಿ ಹಾಡು ಹಸೆ ಕತೆಗಳು ಸೇರುತ್ತವೆ. ಐತಿಹ್ಯಗಳಾಗಿ ರೂಪಕಗಳು ಬೆರೆಯುತ್ತವೆ. ತಮ್ಮ ಪದ್ಧತಿಯನ್ನು ತಾವೇ ಕಾಪಾಡಬೇಕೆಂಬ ಹೊಣೆಗಾರಿಕೆಯನ್ನು ಭಾವನಾತ್ಮಕವಾಗಿ ಹೊತ್ತುಕೊಳ್ಳುತ್ತಾ ಹೋಗುತ್ತಾರೆ. ಯಾವುದ್ಯಾವುದು ಖುಷಿ ಕೊಡುತ್ತದೋ ಅದನ್ನು ಸಂಭ್ರಮಿಸುತ್ತಾರೆ. ಯಾವುದ್ಯಾವುದು ಕಷ್ಟ ಕೊಡುತ್ತದೆಯೋ ಅದರ ಬಗ್ಗೆ ಗೊಣಗಿಕೊಂಡು ಸಮುದಾಯ ಒಪ್ಪಿತವಾದ ವಿಷಯವೆಂದು ಅಥವಾ ಸಂಕಲಿತ ನಿರ್ಣಯವೆಂದು ಅದಕ್ಕೆ ಬದ್ಧರಾಗಿರುತ್ತಾರೆ. ಕಾಲ ಸರಿದಂತೆ ಈ ಮೇಲೆ ಹೇಳಿದ ಅಂಶಗಳು ಬದಲಾಗುತ್ತಾ ಜನರ ಜೀವನ ಪದ್ಧತಿಯೇ ಬದಲಾಗಿರುತ್ತದೆ. ಹೊಸ ಹೊಸ ಭೌಗೋಳಿಕ ಅನ್ವೇಷಣೆಗಳು ಅಲ್ಲಿನ ಜನರ ಬದುಕಿನ ಕ್ರಮದ ಬಗ್ಗೆ ತಿಳಿಸಿದರೆ, ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳು ತಮ್ಮ ಪದ್ಧತಿಗಿಂತ ಮಿಗಿಲಾದ ಮತ್ತು ಆಧುನೀಕರಿಸಿದ ಅಂಶಗಳನ್ನು ಒದಗಿಸುತ್ತದೆ.

ತಿಳುವಳಿಕೆ, ಭೌಗೋಳಿಕ ಸಂಪರ್ಕಗಳು, ವ್ಯಾಪಾರ, ವ್ಯವಹಾರಗಳು, ಶಿಕ್ಷಣ, ಹೊಸ ಹೊಸ ತಂತ್ರಜ್ಞಾನಗಳು, ವೈದ್ಯಕೀಯ ಸಂಶೋಧನೆಗಳು; ಹೀಗೆ ಹತ್ತು ಹಲವು ವಿಷಯಗಳು ವಿಸ್ತಾರವಾಗುತ್ತಾ, ತಾವೂ ಅದರ ಭಾಗವಾಗುತ್ತಾ, ಎಲ್ಲಾ ವಿಷಯಗಳನ್ನು ಸಾಕ್ಷೀಕರಿಸುತ್ತಾ, ಬಹುಪಾಲು ವಸ್ತುಗಳನ್ನು ಬಳಸುತ್ತಾ ಇರುವಾಗ ತಮ್ಮ ಸಂಪ್ರದಾಯ ಅಥವಾ ಪದ್ಧತಿಗಳು ಹಳತಾಗಿರುವುದನ್ನೂ, ಪ್ರಾಯೋಗಿಕವಾಗಿ ಚಾಲ್ತಿಯಲ್ಲಿ ಇಟ್ಟುಕೊಳ್ಳಲಾಗದು ಎಂದು ತಿಳಿದರೂ ಸಂಪ್ರದಾಯದ ಜೊತೆಗೆ ಗುರುತಿಸಿಕೊಂಡು, ಅದನ್ನು ಉನ್ನತೀಕರಿಸಿರುವ ಕಾರಣಕ್ಕೆ ಅದನ್ನು ಬಿಟ್ಟುಕೊಡಲಾರದ ಮನೋಹಿಡಿತದಿಂದಾಗಿ, ಭಾವನಾತ್ಮಕವಾಗಿ ಒಪ್ಪಿಕೊಂಡಿರುವ ಸೆಳೆತದಿಂದಾಗಿ ಅದರಿಂದ ಹೊರಗೆ ಬರಲಾರರು. ಹಾಗೆಯೇ ಆಧುನೀಕರಣಗೊಂಡಿರುವ ಜೀವನ ಪದ್ಧತಿಯನ್ನು ನೇರವಾಗಿ ಸಾಕ್ಷೀಕರಿಸುವಾಗ ಮತ್ತು ಅದರಲ್ಲಿಯೇ ಬದುಕುತ್ತಿರುವಾಗ ಅದನ್ನು ನಿರಾಕರಿಸಲೂ ಸಾಧ್ಯವಾಗದು. ಈ ದ್ವಂದ್ವದ ಮಾನಸಿಕ ಒತ್ತಡ ಬಹುಪಾಲು ಜನರಲ್ಲಿ. ವೈಜ್ಞಾನಿಕವಾಗಿ ರಕ್ತದ ಗುಂಪುಗಳನ್ನು ನೋಡಿ, ಅದನ್ನು ಪಡೆಯುತ್ತಾ, ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾ, ಔಷಧಿಗಳನ್ನು ಪಡೆಯುತ್ತಾ ಇರುವ ಸಾಂಪ್ರದಾಯಿಕ ಮನಸ್ಥಿತಿಯವರು ಆನಂತರ ಸತ್ತ ಮೇಲೆ ಅವರವರ ಜಾತಿ, ಜನಾಂಗಗಳ ಸ್ಮಶಾನಗಳಿಗೆ ಹೋಗುವುದು, ಅಲ್ಲಿ ಅಂತ್ಯಸಂಸ್ಕಾರಗಳನ್ನು ಮಾಡುವುದು, ಅಪರಕರ್ಮಗಳನ್ನು ಮಾಡುವುದು, ನರಕಾಗ್ನಿ ಅಥವಾ ಸ್ವರ್ಗದಲ್ಲಿ ನಿರ್ಣಾಯಕ ದಿನಗಳನ್ನು ಪರಿಗಣಿಸುವುದು; ಇವೆಲ್ಲಾ ಗಮನಿಸಲಾಗದಷ್ಟು ಮುಗ್ಧರೇನಲ್ಲ. ಯಾವುದೇ ಮನುಷ್ಯ ಯಾವುದನ್ನೇ ಸಾಕ್ಷೀಕರಿಸಿದಾಗ ಅದರ ಅರ್ಥವಂತಿಕೆಯನ್ನು ಗ್ರಹಿಸುತ್ತಾನೆ. ಆದರೆ ಸಮಸ್ಯೆ ಏನೆಂದರೆ ಸಂಪ್ರದಾಯದ ಮನೋಹಿಡಿತವನ್ನು ಹೊಂದಿರುವುದರಿಂದ ಅವನ ವ್ಯಕ್ತಿಗತ ಆಲೋಚನೆಯ ಸ್ವಾತಂತ್ರ್ಯಹರಣವಾಗಿರುತ್ತದೆ. ವಾಸ್ತವ ಮತ್ತು ಐತಿಹ್ಯಗಳ ಅಂಶಗಳಿಗೆ ಪದೇ ಪದೇ ಮನಸ್ಸನ್ನು ಬದಲಿಸಿಕೊಳ್ಳಬೇಕಾದ ಈ ತಿಕ್ಕಾಟದಲ್ಲಿ, ಜಗ್ಗಾಟದಲ್ಲಿ ಪಾಪದ ವ್ಯಕ್ತಿಯ ಮನಸ್ಸುಗಳು ಹೈರಾಣಾಗುವುದರಲ್ಲಿ ಸಂದೇಹವಿಲ್ಲ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)