ದಲಿತ ನಾಯಕನನ್ನು ಬಿಜೆಪಿ ಮುಖ್ಯಮಂತ್ರಿಯಾಗಿಸಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘‘ಪ್ರಧಾನಿ ಮೋದಿಯವರ ಮಂತ್ರಿಮಂಡಲದಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ನಾನು ರಾಜ್ಯ ರಾಜಕಾರಣದತ್ತ ಬರುವುದಿಲ್ಲ. ಹೀಗಿರುವಾಗ ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಗದ್ದಲ ಎಬ್ಬಿಸಿರುವ ‘ಬ್ರಾಹ್ಮಣ ಪರ-ವಿರೋಧಿ’ ರಾಜಕೀಯ ಚರ್ಚೆಯನ್ನು ತಣ್ಣಗಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ. ಜೆಡಿಎಸ್ ಮುಖಂಡ ಕುಮಾರ ಸ್ವಾಮಿಯವರು ಬಿಜೆಪಿಯೊಳಗಿನ ‘ಪೇಶ್ವೆ ಅಥವಾ ಚಿತ್ಪಾವನ ಬ್ರಾಹ್ಮಣರ ರಾಜಕಾರಣ’ದ ಕುರಿತು ಸಿಡಿಸಿದ ಸ್ಫೋಟಕ ಹೇಳಿಕೆ ಬಿಜೆಪಿಗೆ ತೀವ್ರ ಇರಿಸು ಮುರಿಸುಂಟು ಮಾಡಿತ್ತು. ಆರೆಸ್ಸೆಸ್ ಮತ್ತು ಬಿಜೆಪಿ ಜೊತೆ ಸೇರಿಕೊಂಡು ಭವಿಷ್ಯದಲ್ಲಿ ‘ಬ್ರಾಹ್ಮಣ ಮುಖ್ಯಮಂತ್ರಿ’ಯನ್ನು ಆಯ್ಕೆ ಮಾಡಲು ಸಿದ್ಧತೆ ನಡೆಸಿದೆ ಎಂದು ಅವರು ಮಾಧ್ಯಮಗಳ ಮುಂದೆ ಹೇಳಿದ್ದರು. ಅಷ್ಟೇ ಅಲ್ಲ, ಮಹಾತ್ಮಾ ಗಾಂಧೀಜಿಯನ್ನು ಕೊಂದಿರುವ, ಶಿವಾಜಿಗೆ ವಂಚಿಸಿರುವ ಪೇಶ್ವೆ ಬ್ರಾಹ್ಮಣರ ಕುರಿತಂತೆಯೂ ಅವರು ಖಾರವಾಗಿ ಮಾತನಾಡಿದ್ದರು. ಕುಮಾರ ಸ್ವಾಮಿಯವರ ಹೇಳಿಕೆಗೆ ಪರ, ವಿರುದ್ಧ ಅಭಿಪ್ರಾಯಗಳು ಬಂದಿದ್ದವು. ಪೇಜಾವರ ಶ್ರೀಗಳು ‘‘ಯಾಕೆ, ಬ್ರಾಹ್ಮಣರು ಮುಖ್ಯಮಂತ್ರಿಯಾಗಬಾರದೆ’’ ಎಂದು ಪ್ರಶ್ನಿಸಿದ್ದರು. ಬ್ರಾಹ್ಮಣ ಸಂಘಟನೆಗಳು ಕುಮಾರಸ್ವಾಮಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದವು. ಆದರೆ ಕುಮಾರ ಸ್ವಾಮಿಯವರ ತನ್ನ ಹೇಳಿಕೆಯ ಮೂಲಕ ಉದ್ದೇಶವನ್ನು ಸಾಧಿಸಿಕೊಂಡಿದ್ದಂತೂ ನಿಜ.
ಬಿಜೆಪಿಯೊಳಗೆ ಲಿಂಗಾಯತ ಮತ್ತು ಬ್ರಾಹ್ಮಣ್ಯ ಲಾಬಿಯ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ
. ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿ ಆ ಸ್ಥಾನಕ್ಕೆ ಬ್ರಾಹ್ಮಣ ಸಮುದಾಯದ ನಾಯಕನೊಬ್ಬನನ್ನು ತಂದು ಕೂರಿಸಬೇಕು ಎನ್ನುವ ತಂತ್ರವನ್ನು ಆರೆಸ್ಸೆಸ್ ಬಹಳ ಹಿಂದಿನಿಂದಲೂ ಹೆಣೆಯುತ್ತಾ ಬಂದಿದೆ. ಪಕ್ಷದೊಳಗೆ ಯಡಿಯೂರಪ್ಪ ಅವರ ವರ್ಚಸ್ಸು ಮತ್ತು ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿರುವ ಲಿಂಗಾಯತ ಲಾಬಿಗೆ ಹೆದರಿ ಆರೆಸ್ಸೆಸ್ ತನ್ನ ಯೋಜನೆಯನ್ನು ಮುಂದೆ ಹಾಗಿತ್ತು. ಇಷ್ಟಾದರೂ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗದಂತೆ ತಡೆಯಲು ದಿವಂಗತ ಅನಂತಕುಮಾರ್ ಅವರು ದಿಲ್ಲಿಯಲ್ಲಿ ಕುಳಿತು ಬಹಳಷ್ಟು ಕೆಲಸ ಮಾಡಿದ್ದರು. ಬಿಜೆಪಿಯೊಳಗಿರುವ ಶೂದ್ರ ನಾಯಕರ ಮೂಲಕ ಯಡಿಯೂರಪ್ಪ ಅವರಿಗೆ ಆರೆಸ್ಸೆಸ್ ದೊಡ್ಡ ಮಟ್ಟದಲ್ಲಿ ಕಿರುಕುಳವನ್ನು ನೀಡಿತ್ತು. ಆರೆಸ್ಸೆಸ್ ಮುಖಂಡರಾಗಿರುವ ಸಂತೋಷ್ ಅವರ ಹಸ್ತಕ್ಷೇಪದ ಬಗ್ಗೆ ಯಡಿಯೂರಪ್ಪ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುವ ಅವಕಾಶವನ್ನು ಆರೆಸ್ಸೆಸ್ ಮುಖಂಡರು ನೀಡಲೇಯಿಲ್ಲ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಬಹುತೇಕ ಯಶಸ್ವಿಯಾಗಿರುವ ಆರೆಸ್ಸೆಸ್, ಇದೀಗ ಬೊಮ್ಮಾಯಿಯವರನ್ನು ಕೈಗೊಂಬೆಯಂತೆ ಬಳಸಿಕೊಳ್ಳುತ್ತಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಎಲ್ಲ ಹಿರಿ ತಲೆಗಳನ್ನು ಬದಿಗೆ ಸರಿಸಿ ಆ ಜಾಗದಲ್ಲಿ ತೇಜಸ್ವಿಯಂತಹ ಯುವ ಬ್ರಾಹ್ಮಣ ಮುಖಗಳನ್ನು ಪರಿಚಯಿಸುವ ಯೋಜನೆಯೊಂದನ್ನು ರಾಜ್ಯ ಆರೆಸ್ಸೆಸ್ ಈಗಾಗಲೇ ರೂಪಿಸಿದೆ ಮತ್ತು ಆರೆಸ್ಸೆಸ್‌ನಿಂದಲೇ ಬಂದ ನಾಯಕನನ್ನು ಮುಖ್ಯಮಂತ್ರಿಯಾಗಿಸುವ ಉದ್ದೇಶವನ್ನು ಅದು ಹೊಂದಿದೆ. ಜೆಡಿಎಸ್ ಮುಖಂಡರಾಗಿರುವ ಕುಮಾರಸ್ವಾಮಿಯವರು ಆರೆಸ್ಸೆಸ್‌ನ ‘ಬ್ರಾಹ್ಮಣ್ಯ ರಾಜಕೀಯ’ವನ್ನು ಸ್ಪಷ್ಟವಾಗಿ ಆರ್ಥ ಮಾಡಿಕೊಂಡಿರುವುದರಿಂದಲೇ ಅವರು ಅದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.
ಈ ಮೂಲಕ ಕುಮಾರ ಸ್ವಾಮಿಯವರು ಬಿಜೆಪಿಯೊಳಗಿರುವ ಲಿಂಗಾಯತ, ಶೂದ್ರ ಮುಖಂಡರಿಗೆ ಸಂದೇಶವನ್ನು ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಬೆಳೆಸುವುದಕ್ಕಾಗಿ ಸಾಕಷ್ಟು ಶ್ರಮ ವಹಿಸಿರುವ ಶೂದ್ರ, ಲಿಂಗಾಯತ ಹಿರಿ ತಲೆಗಳನ್ನು ಬದಿಗೆ ಸರಿಸಿ ಆ ಜಾಗಕ್ಕೆ ಬ್ರಾಹ್ಮಣರನ್ನು ತಂದು ಕೂರಿಸುವ ಸಂಚೊಂದು ಆರೆಸ್ಸೆಸ್ ಮನೆಯೊಳಗೆ ನಡೆಯುತ್ತಿದೆ ಎಂದು ಅವರು ಬಿಜೆಪಿಯೊಳಗಿರುವ ಹಿರಿಯ ಲಿಂಗಾಯತ, ಶೂದ್ರ ನಾಯಕರನ್ನು ಎಚ್ಚರಿಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವ ಹಲವು ಲಿಂಗಾಯತ, ಶೂದ್ರ ನಾಯಕರು ಬಿಜೆಪಿಯೊಳಗಿದ್ದಾರೆ. ಆರೆಸ್ಸೆಸ್‌ನೊಳಗೆ ನಡೆಯುತ್ತಿರುವ ‘ಬ್ರಾಹ್ಮಣ್ಯ ರಾಜಕೀಯ’ ಅವರ ಅರಿವಿಗೂ ಬಂದಿದೆ. ಮುಂದಿನ ದಿನಗಳಲ್ಲಿ ಈ ಬ್ರಾಹ್ಮಣ್ಯ ರಾಜಕೀಯದ ವಿರುದ್ಧ ಬಿಜೆಪಿಯೊಳಗಿರುವ ಶೂದ್ರ, ಲಿಂಗಾಯತ ರಾಜಕೀಯ ಶಕ್ತಿಗಳು ಒಂದಾಗುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ‘ನಾನು ಮುಖ್ಯಮಂತ್ರಿಯಾಗುವುದಿಲ್ಲ’ ಎಂಬ ಹೇಳಿಕೆಯನ್ನು ಪ್ರಹ್ಲಾದ್ ಜೋಶಿ ನೀಡಿದಾಕ್ಷಣ ಬಿಜೆಪಿಯೊಳಗಿನ ಸಮಸ್ಯೆ ಬಗೆ ಹರಿಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕರಾಗಿರುವ ಶೆಟ್ಟರ್, ಈಶ್ವರಪ್ಪ, ಬೊಮ್ಮಾಯಿ, ಯಡಿಯೂರಪ್ಪ ಮೊದಲಾದ ನಾಯಕರ ಸ್ಥಾನವೇನೂ ಎನ್ನುವುದನ್ನು ಬಿಜೆಪಿ ನಿರ್ಧರಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಸಿ. ಟಿ. ರವಿ, ಅಶೋಕ್‌ರಂತಹ ಶೂದ್ರ ಮುಖಂಡರ ಎದುರಿಗೆ ತೇಜಸ್ವಿಯಂತಹ ಎಳೆ ನಿಂಬೆಕಾಯಿಗಳನ್ನು ತಂದುನಿಲ್ಲಿಸಿದರೆ ಅದು ಬಿಜೆಪಿಯೊಳಗಿನ ಸಮಸ್ಯೆಗಳನ್ನು, ಬ್ರಾಹ್ಮಣ್ಯ ರಾಜಕಾರಣದ ವಿರುದ್ಧದ ಆಕ್ರೋಶವನ್ನು ಉಲ್ಬಣಿಸುವಂತೆ ಮಾಡುತ್ತದೆ. ರಾಜ್ಯ ರಾಜಕೀಯದಲ್ಲಿ ಮುನ್ನೆಲೆಗೆ ಬರಲು ಹಲವು ದಶಕಗಳಿಂದ ಹೊಂಚು ಹಾಕಿ ಕೂತಿರುವ ಆರೆಸ್ಸೆಸ್ ನಾಯಕ ಸಂತೋಷ್ ಅವರ ನಡೆ ಕೂಡ ಬಿಜೆಪಿಯ ಪಾಲಿಗೆ ನಿರ್ಣಾಯಕವಾಗಿದೆ.
ಇಂತಹ ಸಂದರ್ಭದಲ್ಲಿ ತನ್ನ ಮೇಲಿನ ಬ್ರಾಹ್ಮಣ್ಯ ರಾಜಕೀಯ ಕಳಂಕವನ್ನು ತೆಗೆದು ಹಾಕಲು ಬಿಜೆಪಿಯ ಮುಂದಿರುವ ಏಕೈಕ ದಾರಿ ತೀರಾ ಶೋಷಿತ ಸಮುದಾಯದಿಂದ ಬಂದಿರುವ ನಾಯಕನನ್ನು ಮುಖ್ಯಮಂತ್ರಿಯಾಗಿಸುವ ಭರವಸೆಯನ್ನು ನೀಡುವುದು. ಬಿಜೆಪಿಯ ನಾಯಕರು ಹಲವು ಬಾರಿ ‘‘ಸಾಧ್ಯವಿದ್ದರೆ ದಲಿತ ಮುಖ್ಯಮಂತ್ರಿಯನ್ನು ಮಾಡಿ’’ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದ್ದರು. ಇದೀಗ ಆ ಸವಾಲನ್ನು ಸ್ವತಃ ಬಿಜೆಪಿ ಸ್ವೀಕರಿಸಿ ಕಾಂಗ್ರೆಸ್‌ಗೆ ಮಾದರಿಯಾಗಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಗೆದ್ದರೆ ‘ದಲಿತ ಮುಖಂಡರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿಸುತ್ತೇವೆ’’ ಎನ್ನುವ ಹೇಳಿಕೆಯನ್ನು ನೀಡಬೇಕು. ಆ ಮೂಲಕ ಕುಮಾರಸ್ವಾಮಿಯವರ ‘ಬ್ರಾಹ್ಮಣ ಮುಖ್ಯಮಂತ್ರಿ’ ಆರೋಪದಿಂದ ಮುಕ್ತವಾದಂತೆ ಆಗುತ್ತದೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೂ ಆ ಘೋಷಣೆ ನುಂಗಲಾರದ ತುತ್ತಾಗಬಹುದು. ದಲಿತರ ಮನೆಯಲ್ಲಿ ವಾಸ್ತವ್ಯದ ಮೂಲಕ ಸುದ್ದಿಯಲ್ಲಿರಲು ಯತ್ನಿಸುತ್ತಿರುವ ಬಿಜೆಪಿ ನಾಯಕರು ‘ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿಸಿ’ ತನ್ನ ದು ದಲಿತರ ಪರವಾಗಿರುವ ಪಕ್ಷವೆಂದು ಸಾಬೀತು ಮಾಡಲು ಇರುವ ಅವಕಾಶವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು.