ಸಾಮಾಜಿಕ ನ್ಯಾಯ ಭಿಕ್ಷೆಯಲ್ಲ, ಪ್ರತಿಯೊಬ್ಬ ನಾಗರಿಕನ ಹಕ್ಕು
ಇಂದು ಸಾಮಾಜಿಕ ನ್ಯಾಯ ದಿನ
ಬಾಬಾ ಸಾಹೇಬ್ ಅಂಬೇಡ್ಕರ್ರವರು ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ ಅದೊಂದು ಹಕ್ಕು ಎಂದು ಪ್ರತಿಪಾದಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ರಾಷ್ಟ್ರಮಟ್ಟದ ಸಂಘಟಿತ ಹೋರಾಟವನ್ನು ರೂಪಿಸಿದರು. ಈ ಹೋರಾಟದ ಫಲವಾಗಿ ಸಾಮಾಜಿಕ ನ್ಯಾಯ ಕೇವಲ ಸಮಾಜದ ನೀತಿಯಾಗಿ ಉಳಿಯದೆ ಸರಕಾರದ ನೀತಿಯಾಗಿ ಸ್ಥಾನ ಗಳಿಸುವಂತಾಯಿತು.
ಹಿಂದುಳಿದವರ, ಬಡವರ, ದುರ್ಬಲರ, ತುಳಿತಕ್ಕೆ ಮತ್ತು ಶೋಷಣೆಗೆ ಒಳಪಟ್ಟ ಅಸಹಾಯಕರನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕ ವಾಗಿ ಮೇಲೆತ್ತಲು ಶಾಸನಗಳನ್ನು, ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸುವುದೇ ಸಾಮಾಜಿಕ ನ್ಯಾಯ. ಸಾಮಾಜಿಕ ನ್ಯಾಯದ ವ್ಯವಸ್ಥೆಯ ಮೂಲಕ ಉತ್ತಮ ಸಮಾಜ ಅಥವಾ ರಾಷ್ಟ್ರವನ್ನು ನಿರ್ಮಿಸಲು ಸಾಧ್ಯ. ಸಾಮಾಜಿಕ ಕಟ್ಟುಪಾಡುಗಳು ಮತ್ತು ಅನಿಷ್ಠಗಳು, ಹೆಚ್ಚುತ್ತಿರುವ ಜಾತಿ ಪದ್ಧತಿ, ಆರ್ಥಿಕ ಅಸಮಾನತೆಗಳು, ಶಿಕ್ಷಣದ ಕೊರತೆ, ನಗರ ಮತ್ತು ಗ್ರಾಮೀಣ ಪ್ರದೇಶದ ನಡುವೆ ಶಿಕ್ಷಣ ಕ್ಷೇತ್ರದಲ್ಲಿರುವ ಅಸಮಾನತೆಗಳು ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿವೆ. ಸಮಾಜದಲ್ಲಿ ಶೋಷಣೆ, ಅನ್ಯಾಯ, ಸಮಾನ ಹಕ್ಕುಗಳು ಮತ್ತು ಅವಕಾಶಗಳ ನಿರಾಕರಣೆ, ಆದಾಯದ ಅಸಮಾನ ಹಂಚಿಕೆಗಳು ಇರುವವರೆಗೂ ಸಾಮಾಜಿಕ ನ್ಯಾಯ ಮರೀಚಿಕೆಯಾಗಿಯೇ ಉಳಿಯುತ್ತದೆ. ಸಾಮಾಜಿಕ ನ್ಯಾಯದ ಕುರಿತು ಹಲವು ವ್ಯಾಖ್ಯಾನ ಗಳಿದ್ದರೂ ಅದರ ಗುರಿ ಒಂದೇ ಅದು ಸಮಾನತೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಒಂದೇ ನಾಣ್ಯದ ಎರಡು ಮುಖಗಳು, 19ನೇ ಶತಮಾನದ ಆರಂಭದ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಯೂರೋಪಿನಾದ್ಯಂತ ಉಂಟಾದ ನಾಗರಿಕ ಕ್ರಾಂತಿಗಳ ಸಮಯದಲ್ಲಿ ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆ ಉದಯಿಸಿತು.
ಇಂದು ವಿಶ್ವ ಸಾಮಾಜಿಕ ನ್ಯಾಯದ ದಿನ. ಪ್ರತೀ ವರ್ಷ ಫೆಬ್ರವರಿ 20ನ್ನು ವಿಶ್ವ ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸಲಾಗುತ್ತದೆ. ‘ಅಡೆ ತಡೆಗಳನ್ನು ನಿವಾರಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಅವಕಾಶಗಳನ್ನು ಕಲ್ಪಿಸುವುದು’ ಎಂಬ ವಾಕ್ಯವು ಈ ಬಾರಿಯ ವಿಶ್ವ ಸಾಮಾಜಿಕ ನ್ಯಾಯದ ದಿನದ ಘೋಷಣೆಯಾಗಿದೆ. ಔಪಚಾರಿಕ ಉದ್ಯೋಗದ ಮೂಲಕ ಸಾಮಾಜಿಕ ನ್ಯಾಯವನ್ನು ಸಾಧಿಸುವುದು 2022ರ ವಿಶ್ವ ಸಾಮಾಜಿಕ ನ್ಯಾಯದ ದಿನದ ಘೋಷಣೆಯಾಗಿತ್ತು. ಸಾಮಾಜಿಕ ಅಸಮಾನತೆಯ ಕುರಿತು ಜಾಗೃತಿ ಮೂಡಿಸುವುದು, ಬಡತನ, ಲೈಂಗಿಕ ಅಸಮಾನತೆ, ಶಿಕ್ಷಣದ ಕೊರತೆ, ಧಾರ್ಮಿಕ ಮತಾಂಧತೆಯನ್ನು ತೊಡೆದು ಹಾಕಲು ವಿಶ್ವದಾದ್ಯಂತ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಪರಿಚಯಿಸುವುದು ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಾತರಿಪಡಿಸಿ ಕೊಳ್ಳುವುದು ಈ ದಿನದ ಉದ್ದೇಶವಾಗಿದೆ. ವಿಶ್ವಸಂಸ್ಥೆಯು ನವೆಂಬರ್ 26, 2007ರಂದು ಪ್ರತೀ ವರ್ಷ ಫೆಬ್ರವರಿ 20ನ್ನು ವಿಶ್ವ ಸಾಮಾಜಿಕ ನ್ಯಾಯದ ದಿನವನ್ನಾಗಿ ಆಚರಿಸುವ ನಿರ್ಣಯವನ್ನು ತೆಗೆದುಕೊಂಡಿತು. ನ್ಯಾಯಯುತ ಜಾಗತೀಕರಣಕ್ಕಾಗಿ ಸಾಮಾಜಿಕ ನ್ಯಾಯದ ಕುರಿತು ಅಂತರ್ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಈ ನಿರ್ಣಯವನ್ನು ಜೂನ್ 10, 2008ರಂದು ಅನಮೋದಿಸಿತು.
ಭಾರತದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದವರು ಭಗವಾನ್ ಬುದ್ಧ. ಡಾ.ಅಂಬೇಡ್ಕರ್, ಅಯೋತಿದಾಸ್, ಟಿ.ಕೆ.ಮಾದವನ್, ಪೆರಿಯಾರ್, ಜ್ಯೋತಿಬಾಫುಲೆ, ನಾರಾಯಣಗುರುಗಳು ಸೇರಿದಂತೆ ಹಲವರು ಸಾಮಾಜಿಕ ನ್ಯಾಯಕ್ಕಾಗಿ ದೊಡ್ಡ ಹೋರಾಟಗಳನ್ನೇ ಮಾಡಿದರು. ಕರ್ನಾಟಕಕ್ಕೆ ಸಾಮಾಜಿಕ ನ್ಯಾಯದ ವಿಷಯಕ್ಕೆ ಒಂದು ಪರಂಪರೆಯೇ ಇದೆ. 10ನೇಯ ಶತಮಾನದಲ್ಲಿ ಕನ್ನಡದ ಆದಿಕವಿ ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳುವ ಮೂಲಕ ಸಾಮಾಜಿಕ
ನ್ಯಾಯದ ನಾಣ್ಯವನ್ನು ಉರುಳಿಸಿದನು.
12ನೆಯ ಶತಮಾನದಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆಗೆ ಕ್ರಾಂತಿಪುರುಷ ಬಸವಣ್ಣ ನೀರೆರೆದರು. ಬಸವಣ್ಣನವರು ಅಂದಿನ ಕಾಲದ ಜಾತಿ ಪದ್ಧತಿ, ಮೇಲೂ-ಕೀಳು ಮುಂತಾದ ಅನಿಷ್ಟಗಳ ವಿರುದ್ಧ ತಮ್ಮ ಚಿಂತನೆಯನ್ನು ಹರಿಬಿಟ್ಟರು. ಎಲ್ಲಾ ಜಾತಿಯ ಜನರು ಸಮಾನರು ಎಂದು ಸಾರುವ ಮೂಲಕ ಸಮಾನತೆಯ ತತ್ವವನ್ನು ಎತ್ತಿಹಿಡಿದರು. ಸಾಮಾಜಿಕವಾಗಿ ತಳ ಜಾತಿಗಳಿಗೆ ಸೇರಿದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಹರಳಯ್ಯ, ಅಂಬಿಗರ ಚೌಡಯ್ಯ ಸೇರಿದಂತೆ ಹಲವರಿಗೆ ಅನುಭವ ಮಂಟಪದಲ್ಲಿ ಬಸವಣ್ಣನವರು ಸಮಾನ ಸ್ಥಾನಗಳನ್ನು ನೀಡಿದರು. ಮೈಸೂರು ಒಡೆಯ ರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಸರಕಾರಿ ನೌಕರಿಯಲ್ಲಿ ಮೀಸಲಾತಿ ತರುವ ಮೂಲಕ ಸಾಮಾಜಿಕ ನ್ಯಾಯವನ್ನು ಜಾರಿಗೆ ತರುವ ಮೊದಲ ಪ್ರಯತ್ನ ಮಾಡಿದರು.
ಬಡತನ ಮತ್ತು ಸಾಮಾಜಿಕ ಅಸಮಾನತೆ ಯಾವುದೇ ದೇಶವಾದರೂ ಸರಿ ಅದು ಅಭಿವೃದ್ಧಿಗೆ ಮಾರಕ ಎಂಬುದರ ತಿಳುವಳಿಕೆಯೇ ಈ ದಿನದ ಆಚರಣೆಗೆ ಕಾರಣ. ಯಾವುದೇ ರಾಷ್ಟ್ರವಾಗಲಿ ಸಾಮಾಜಿಕ ನ್ಯಾಯ ಅತ್ಯವಶ್ಯಕ. ಸಾಮಾಜಿಕ ನ್ಯಾಯವಿಲ್ಲದಿ ದ್ದರೆ ರಾಷ್ಟ್ರದ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆ ಸಾಧ್ಯವಿಲ್ಲ. ಉದ್ಯೋಗ, ಶಿಕ್ಷಣ, ಆರ್ಥಿಕ ಮತ್ತು ರಾಜಕೀಯ ಅವಕಾಶಗಳು ಜಾತಿ ಅಥವಾ ಧರ್ಮ ಭೇದಗಳಿಲ್ಲದೆ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಅವಕಾಶ ವಂಚಿತ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಕೆಲಸ ಆದಾಗ ಮಾತ್ರ ಅಭಿವೃದ್ಧಿಗೆ ಅಗತ್ಯವಾದ ವಾತಾವರಣ ಉಂಟಾಗುತ್ತದೆ.
ಮೊದಲನೇ ಬಾರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ರವರು ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ ಅದೊಂದು ಹಕ್ಕು ಎಂದು ಪ್ರತಿಪಾದಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ರಾಷ್ಟ್ರಮಟ್ಟದ ಸಂಘಟಿತ ಹೋರಾಟವನ್ನು ರೂಪಿಸಿದರು. ಈ ಹೋರಾಟದ ಫಲವಾಗಿ ಸಾಮಾಜಿಕ ನ್ಯಾಯ ಕೇವಲ ಸಮಾಜದ ನೀತಿಯಾಗಿ ಉಳಿಯದೆ ಸರಕಾರದ ನೀತಿಯಾಗಿ ಸ್ಥಾನ ಗಳಿಸುವಂತಾಯಿತು. ಸ್ವಾತಂತ್ರ್ಯಪೂರ್ವದಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ಕೆಲವು ಕಾನೂನುಗಳು ಜಾರಿಗೆ ಬಂದವು. ಅವುಗಳೆಂದರೆ, ಹರಿಜನ ಸಾಮಾಜಿಕ ದೌರ್ಬಲ್ಯ ನಿವಾರಣಾ ಕಾಯ್ದೆ. ಹರಿಜನರು ದೇವಾಲಯಗಳಿಗೆ ಪ್ರವೇಶಿಸುವ ಕಾಯ್ದೆ. ಸತಿ ಸಹಗಮನ ಪದ್ಧತಿ ನಿಷೇಧದ ಕಾಯ್ದೆ. ವಿಧವೆಯರ ಮದುವೆ ಹಕ್ಕಿನ ಕಾಯ್ದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ. ವರದಕ್ಷಿಣೆ ನಿಷೇಧ ಕಾಯ್ದೆ. ದೇವದಾಸಿ ಪದ್ಧತಿ ನಿಷೇಧ ಕಾಯ್ದೆ.
ಸ್ವತಂತ್ರವಾದ ಭಾರತ ಜಗತ್ತಿನಲ್ಲಿ ಅತೀ ದೊಡ್ಡದಾದ ಲಿಖಿತ ಸಂವಿಧಾನವನ್ನು ಒಪ್ಪಿ ಕೊಳ್ಳುವ ಮೂಲಕ 1950ರಲ್ಲಿ ಗಣರಾಜ್ಯವಾಯಿತು. ಸಂವಿಧಾನದ ಪ್ರಸ್ತಾವನೆಯಲ್ಲಿ ಸಾಮಾಜಿಕ ನ್ಯಾಯವು ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದೆ. ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸರಿಸಮಾನರು. ಯಾವುದೇ ಜಾತಿ, ವರ್ಣ, ಲಿಂಗ, ಧರ್ಮದ ಹಿನ್ನೆಲೆಯಲ್ಲಿ ಭೇದಭಾವ ಮಾಡಲಾಗದು. ಸಮಸ್ತ ಜನತೆಯ ಕಲ್ಯಾಣವೇ ಸರಕಾರದ ಗುರಿಯಾಗಿರಬೇಕು. ಸಾಮಾಜಿಕ ನ್ಯಾಯವೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಮಾನವಾದ ಅವಕಾಶಗಳನ್ನು ಕಲ್ಪಿಸುವುದಾಗಿದೆ.
ಕಳೆದ 75 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸಲು ಹಲವು ಶಾಸನಗಳು, ಯೋಜನೆಗಳು ಮತ್ತು ಕಾರ್ಯ
ಕ್ರಮಗಳನ್ನು ಜಾರಿಗೆ ತಂದಿದ್ದರಿಂದ ಭಾರತದಲ್ಲಿ ಒಂದಷ್ಟು ಸುಧಾರಣೆಯಾಗಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆ
ಯರು, ವಿಕಲಚೇತನರು, ವೃದ್ಧರು, ಬಡವರ ಬದುಕು ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದೆ. ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇ ಕಾಗಿದೆ.
ಆದರೆ ಇಂದಿಗೂ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ, ಶೋಷಿತ ಸಮುದಾಯಗಳ ಹಲವರಿಗೆ ವಾಸಿಸಲು ಮನೆಯೇ ಇಲ್ಲ. ಸರಕಾರದ ಅಥವಾ ಖಾಸಗಿ ಜಾಗದಲ್ಲಿ ಜೋಪಡಿಗಳನ್ನು ಹಾಕಿ ಕೊಂಡು ವಾಸಿಸುತ್ತಿದ್ದಾರೆ. ಎರಡು ಹೊತ್ತಿನ ಕೂಳಿಗೂ ಇವರು ಕಷ್ಟಪಡುವುದು ತಪ್ಪಿಲ್ಲ. ಅನೇಕರು ಮೀಸಲಾತಿ ಯೊಂದೇ ಸಾಮಾಜಿಕ ನ್ಯಾಯ ಎಂದು ವಾದಿಸುತ್ತಾರೆ. ನಿಜವಾಗಿ ಹೇಳಬೇಕೆಂದರೆ ಜನಪ್ರತಿನಿಧಿ ಗಳ ಆಯ್ಕೆಯಲ್ಲಿ, ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಸಾಮಾಜಿಕ ನ್ಯಾಯದ ಒಂದು ಭಾಗವಷ್ಟೇ. ಮೀಸಲಾತಿ ಮತ್ತು ಭೂಸುಧಾರಣೆಗಳು ಸಾಮಾಜಿಕ ನ್ಯಾಯದ ಎರಡು ಪ್ರಮುಖ ಸಾಧನೆಗಳು ಎನ್ನಬಹುದು. ಆದರೆ ಇವೆರಡರಿಂದಲೇ ಸಾಮಾಜಿಕ ನ್ಯಾಯವನ್ನು ಒದಗಿಸಲು ಸಾಧ್ಯವಿಲ್ಲ. ಅಸಮಾನತೆಯನ್ನು ಸಂಪೂರ್ಣವಾಗಿ ಹೋಗಲಾಡಿಸಿ ಎಲ್ಲಾ ಕ್ಷೇತ್ರಗಳಲ್ಲಿ, ಎಲ್ಲಾ ಸಮುದಾಯಗಳಲ್ಲಿ ಸಮಾನತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಾಗ ಮಾತ್ರ ಸಾಮಾಜಿಕ ನ್ಯಾಯ ಎಂಬ ಪದಕ್ಕೆ ಅರ್ಥ ಬರುತ್ತದೆ. ಲಿಂಗ ಸಮಾನತೆ, ಶೋಷಣೆ ರಹಿತ ಸಮಾಜಗಳ ನಿರ್ಮಾಣ, ಕೆಲಸಕ್ಕೆ ತಕ್ಕ ಕೂಲಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾನತೆಯನ್ನು ಸಾಧಿಸಿದಾಗ ಮಾತ್ರ ಸಾಮಾಜಿಕ ನ್ಯಾಯ ನೇರವೇರುತ್ತದೆ.
ಭಾರತದ ಸಂವಿಧಾನ ಸಾಮಾಜಿಕ ನ್ಯಾಯಕ್ಕೆ ಆಧ್ಯತೆಯನ್ನು ನೀಡಿದೆ. ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ ಎಂಬ ಪದದ ನಿರೂಪಣೆ ಇಲ್ಲದಿದ್ದರೂ, ಸಾಮಾಜಿಕ ನ್ಯಾಯದ ತತ್ವವನ್ನು ಸಂವಿಧಾನದ ಪೀಠಿಕೆ, ಅನುಚ್ಛೇದ 14, 15, 16, 38, 39, 46, 330 ರಿಂದ 342ರಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಸಮ್ಮತ ಸಮಾಜವನ್ನು ಸ್ಥಾಪಿಸಲು, ಎಲ್ಲ ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯನ್ನು ಒಳಗೊಳ್ಳುವಂತೆ ಭಾರತದ ಸಂವಿಧಾನದಲ್ಲಿ ಹಲವಾರು ಶರತ್ತುಗಳನ್ನು ವಿಧಿಸಲಾಗಿದೆ. ಸಂವಿಧಾನದ ಈ ಶರತ್ತುಗಳನ್ನು ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಕಾರ್ಯಗತಗೊಳಿಸಿ, ನಿರೀಕ್ಷಿತ ಫಲಿತಾಂಶವನ್ನು ಹೊರತರುವುದು ಅತ್ಯಗತ್ಯವಾಗಿದೆ.
ರಾಜನೀತಿಯ ನಿರ್ದೇಶಕ ತತ್ವಗಳ ಗುರಿಯೇ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ರಾಜ್ಯದ ಸ್ಥಾಪನೆ. ಅಸಮಾನತೆಯನ್ನು ಪ್ರತಿಬಿಂಬಿಸುವ ಯಾವುದೇ ಕೃತ್ಯವನ್ನು ಭಾರತದ ಸಂವಿಧಾನ ಸಹಿಸುವುದಿಲ್ಲ. ನಮ್ಮ ಸಂವಿಧಾನದ ನಿರ್ದೇಶನಗಳು ಸಾಮಾಜಿಕ ನ್ಯಾಯದ ಬದ್ಧತೆಯನ್ನು ಹೊಂದಿದ್ದರೂ, ಆ ಗುರಿ ಯನ್ನು ಮುಟ್ಟಲು ಇದುವರೆಗೂ ಸಾಧ್ಯವಾಗಿಲ್ಲ. ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ನಿರುದ್ಯೋಗ, ಸಾಮಾಜಿಕ ಭದ್ರತೆ, ಲಿಂಗ ಸಮಾನತೆಗಳನ್ನು ಸಾಧಿಸುವುದು ಇಂದಿಗೂ ಸವಾಲಾಗಿಯೇ ಉಳಿದಿದೆ.