ಬಹುತ್ವ ಮತ್ತು ಸಾಮಾಜಿಕ ನ್ಯಾಯ
ಇಂದು ಸಾಮಾಜಿಕ ನ್ಯಾಯ ದಿನ
ಸಾಮಾಜಿಕ ನ್ಯಾಯವು, ತನ್ನ ಸಮಾಜದಲ್ಲಿನ ಎಲ್ಲಾ ಪ್ರಯೋಜನಗಳು ಮತ್ತು ಸವಲತ್ತುಗಳನ್ನು ಅದರ ಎಲ್ಲಾ ಸದಸ್ಯರು ಹಂಚಿಕೊಳ್ಳಬೇಕು ಎಂದು ಆಶಿಸುತ್ತದೆ. ಹಾಗಾಗಿ ಯಾವುದೇ ನಿರ್ದಿಷ್ಟ ವರ್ಗವು ಅಸಮಾನತೆಯನ್ನು ಅನುಭವಿಸುತ್ತಿದ್ದರೆ, ಅಂತಹ ಅಸಮಾನತೆಗಳನ್ನು ತೆಗೆದು ಹಾಕುವಲ್ಲಿ ಸರಕಾರವು ದೃಢವಾದ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಿರೀಕ್ಷಿಸುತ್ತದೆ.
ವಿಶ್ವದೆಲ್ಲೆಡೆ ಸಾಮಾಜಿಕ ನ್ಯಾಯದ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ವಿಶ್ವ ಸಂಸ್ಥೆಯು ಫೆಬ್ರವರಿ ೨೦ನ್ನು ವಿಶ್ವ ಸಾಮಾಜಿಕ ನ್ಯಾಯ ದಿನವೆಂದು ಆಚರಿಸುತ್ತದೆ. ಈ ವರ್ಷದ ಘೋಷಣೆಯು ‘‘ಸಾಮಾಜಿಕ ನ್ಯಾಯಕ್ಕಿರುವ ಅಡೆತಡೆಗಳನ್ನು ನಿವಾರಿಸು
ವುದು ಮತ್ತು ಅವಕಾಶಗಳನ್ನು ತೆರೆಯುವುದು’’ ಎನ್ನುವುದಾಗಿದೆ. ಹಾಗಾಗಿ ಇದು ಜಗತ್ತಿನೆಲ್ಲೆಡೆ ಹೆಚ್ಚುತ್ತಿರುವ ಅಸಮಾನತೆಗಳನ್ನು ಹೋಗಲಾಡಿಸುವ, ನಿರಂತರ ಘರ್ಷಣೆಗಳಿಂದ ಮುರಿದುಹೋಗಿರುವ ಸಾಮಾಜಿಕ ಸಂಬಂಧಗಳನ್ನು ಬಲಪಡಿಸುವ ಮತ್ತು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಕುರಿತು ತನ್ನೆಲ್ಲಾ ಸದಸ್ಯ ರಾಷ್ಟ್ರಗಳ, ಯುವ ಜನತೆಯ, ವಿವಿಧ ಸಾಮಾಜಿಕ ಪಾಲುದಾರರುಗಳ, ವಿವಿಧ ಸಂಸ್ಥೆಗಳ ಇತರ ಮಧ್ಯಸ್ಥಗಾರರೊಂದಿಗೆ ಸಂವಾದವನ್ನು ಬೆಳೆಸಲು ಉದ್ದೇಶಿಸಿದೆ.
ವಾಸ್ತವದಲ್ಲಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವವರು ಜಗತ್ತಿನ ಪ್ರತಿಯೊಬ್ಬನೂ ಆರೋಗ್ಯ, ನ್ಯಾಯ, ಶಿಕ್ಷಣ, ಆಹಾರ, ವಸತಿ, ಉದ್ಯೋಗ ಮತ್ತು ಆರ್ಥಿಕ ಅವಕಾಶಗಳಿಗೆ ಸಮಾನ ಅವಕಾಶವನ್ನು ಪಡೆಯಬೇಕೆಂದೂ ಮತ್ತು ಇದಕ್ಕೆ ಪೂರಕವಾಗಿ ಅಧಿಕಾರದ, ಸಂಪತ್ತಿನ ಪುನರ್ವಿತರಣೆ ಆಗಬೇಕೆಂದೂ ಬಯಸುತ್ತಾರೆ. ಆದರೆ ಪ್ರತಿಯೊಂದು ಸಮಾಜವು ತನ್ನ ಉಳಿಯುವಿಕೆಯ ತಂತ್ರವಾಗಿ ವಿಭಿನ್ನ ನೆಲೆಯ ಅಸಮಾನತೆ ಗಳನ್ನು ಪೋಷಿಸಿಕೊಂಡು ಬಂದಿರುವುದರಿಂದ, ಸಾಮಾಜಿಕ ಸಮಾನತೆಯ ವ್ಯಾಖ್ಯೆ ಮತ್ತು ಉದ್ದೇಶಗಳನ್ನು ಆಯಾ ಪ್ರದೇಶದ ಅಗತ್ಯಗಳಿಗನುಗುಣವಾಗಿ ಬದಲಿಸಿ ನೋಡಬೇಕಾಗುತ್ತದೆ.
ಕೃತಕ ಬುದ್ಧಿಮತ್ತೆಯ ಆಧುನಿಕ ಕಾಲದಲ್ಲಿಯೂ ಸಹ ಮನುಷ್ಯ ರೆಲ್ಲರೂ ನೆಮ್ಮದಿಯಾಗಿರುವಂಥ ಆರೋಗ್ಯಕರ ಸಮಾಜ ರೂಪಿಸಲು
ಕೇವಲ ಆರ್ಥಿಕತೆ ಮತ್ತು ತಂತ್ರಜ್ಞಾನ ಸಾಲುವುದಿಲ್ಲ, ಇದಕ್ಕಾಗಿ ಸಾಮಾಜಿಕ ನ್ಯಾಯವನ್ನು ಪಾಲಿಸುವುದು ಅತ್ಯಗತ್ಯ. ಇದನ್ನು ಸಾಧಿಸಲು ಪ್ರತಿಯೊಂದು ದೇಶವು ತನ್ನ ಜನರ ಧರ್ಮ, ಜನಾಂಗ, ಜಾತಿ,ಕುಲ, ಲಿಂಗ, ಲೈಂಗಿಕತೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಅಥವಾ ಇತರ ಯಾವುದೇ ವೈಯಕ್ತಿಕ ಗುಣಲಕ್ಷಣ ಗಳನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನ ಅವಕಾಶಗಳ ಮತ್ತು ಸಂಪನ್ಮೂಲಗಳ ಸಾಧ್ಯತೆ ಗಳನ್ನು ಒದಗಿಸುವ ಉದ್ದೇಶ ಮತ್ತು ಗುರಿಗಳನ್ನು ಹೊಂದಿರಬೇಕಾಗುತ್ತದೆ.
ಸಾಮಾಜಿಕ ನ್ಯಾಯವು, ತನ್ನ ಸಮಾಜದಲ್ಲಿನ ಎಲ್ಲಾ ಪ್ರಯೋಜನಗಳು ಮತ್ತು ಸವಲತ್ತುಗಳನ್ನು ಅದರ ಎಲ್ಲಾ ಸದಸ್ಯರು ಹಂಚಿಕೊಳ್ಳಬೇಕು ಎಂದು ಆಶಿಸುತ್ತದೆ. ಹಾಗಾಗಿ ಯಾವುದೇ ನಿರ್ದಿಷ್ಟ ವರ್ಗವು ಅಸಮಾನತೆಯನ್ನು ಅನುಭವಿಸುತ್ತಿದ್ದರೆ, ಅಂತಹ ಅಸಮಾನತೆಗಳನ್ನು ತೆಗೆದುಹಾಕುವಲ್ಲಿ ಸರಕಾರವು ದೃಢವಾದ ಕ್ರಮವನ್ನು ತೆಗೆದು ಕೊಳ್ಳಬೇಕು ಎಂದು ನಿರೀಕ್ಷಿಸುತ್ತದೆ. ಸರಳವಾಗಿ ಹೇಳುವುದಾದರೆ ಇದು ಸಕಾರಾತ್ಮಕ ಉದಾರವಾದದ ಕಲ್ಪನೆಗೆ ಮತ್ತು ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ಸಂಬಂಧಿಸಿದೆ. ಸರಕಾರದ ಕಾರ್ಯಗಳು ಕೇವಲ ಕಾನೂನು ಮತ್ತು ಸುವ್ಯವಸ್ಥೆಗೆ ಸೀಮಿತವಾಗದೆ ಅದು ತಮ್ಮನ್ನು ತಾವು ಕಾಪಾಡಿಕೊಳ್ಳುವ ಸ್ಥಿತಿಯಲ್ಲಿಲ್ಲದ ಜನರನ್ನು ರಕ್ಷಿಸಲು ಸಹ ಕಾರ್ಯೋನ್ಮುಖವಾಗಬೇಕಾಗುತ್ತದೆ. ಅಂಬೇಡ್ಕರ್ ಅವರ ಪ್ರಕಾರ, ಸಾಮಾಜಿಕ ನ್ಯಾಯವು ನೈತಿಕ ಮೌಲ್ಯಗಳು ಮತ್ತು ಸ್ವಾಭಿಮಾನದ ಮೇಲೆ ಆಧಾರಿತವಾಗಿದೆ.
ಅಂಬೇಡ್ಕರರ ಸಾಮಾಜಿಕ ನ್ಯಾಯವು ಸಾಮಾಜಿಕ ಪ್ರಜಾಪ್ರಭುತ್ವವನ್ನು ಆಧರಿಸಿದ್ದು, ಇದು ನ್ಯಾಯದ ಮೂರು ಪರಿಕಲ್ಪನೆಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಒಳಗೊಂಡಿದೆ. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ತೃಪ್ತರಾಗಬಾರದು. ನಾವು ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು. ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿ ಇರದ ಹೊರತು ರಾಜಕೀಯ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವವು ಒಂದು ಜೀವನವಿಧಾನವಾಗಿದ್ದು, ಇದು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಜೀವನದ ತತ್ವಗಳಾಗಿ ಗುರುತಿಸುತ್ತದೆ’’ ಎನ್ನುತ್ತಾರೆ.
ಆದರೆ ಭಾರತದಂತಹ ವೈವಿಧ್ಯಮಯ ಮತ್ತು ಜಾತಿಗಳಿಂದ ವಿಭಜಿತವಾದ ದೇಶದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸುವಲ್ಲಿ ಇರುವ ದೊಡ್ಡ ಸವಾಲು ಎಂದರೆ ಸಾವಿರಾರು ವರ್ಷಗಳಿಂದ ವ್ಯವಸ್ಥಿತವಾಗಿ ರೂಢಿಯಲ್ಲಿರುವ, ದಾಟಲಾಗದಂತೆ ರೂಪಿಸಿರುವ ಅಸಮಾನತೆಗಳು ಮತ್ತು ಏಣಿಶ್ರೇಣಿಗಳು. ಈ ಅಸಮಾನತೆಗಳು ನಮ್ಮ ಸಮಾಜದ ಮನೋಭೂಮಿಕೆಯಲ್ಲಿ ಆಳವಾಗಿ ಬೇರೂರಿವೆ. ಅವು ನಿಸರ್ಗ ಸಹಜವೆಂಬಂತೆ ಸ್ವೀಕರಿಸಲು, ಪಾಲಿಸಲು ಧಾರ್ಮಿಕ ನಂಬಿಕೆಗಳನ್ನು ಬಳಸಿಕೊಳ್ಳುವುದರಿಂದ ಅವು ಜನರ ಜೀವನದ ಎಲ್ಲಾ ಹಂತಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ರಾಜಕೀಯ ಹಿತಾಸಕ್ತಿಗಳು ತರತಮವನ್ನು ತಮ್ಮ ಅಧಿಕಾರದ ಕಾರಣಕ್ಕಾಗಿ ಪೋಷಿಸುತ್ತಿವೆ.
ಹಾಗಾಗಿಯೇ ಇಂದಿಗೂ ಕೆಲ ಜಾತಿ, ಬುಡಕಟ್ಟುಗಳ ಮತ್ತು ಧರ್ಮದ ಜನರು ಉದ್ಯೋಗ, ಶಿಕ್ಷಣ ಅಥವಾ ವಸತಿಯ ಅವಕಾಶಗಳನ್ನರಿಸಿದಾಗ ತಾರತಮ್ಯವನ್ನು ಎದುರಿಸುವುದು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತದೆ. ಅಂತೆಯೇ ಮಹಿಳೆಯರು ಸಹ ಪುರುಷರೆದುರು ತಾರತಮ್ಯ ಅನುಭವಿಸುತ್ತಾರೆ. ಈ ಅಸಮಾನತೆಗಳನ್ನು ಪರಿಹರಿಸಲು, ನೀತಿ ಬದಲಾವಣೆಗಳಷ್ಟೇ ಅಲ್ಲದೆ ಮತ್ತು ವೈಯಕ್ತಿಕವಾಗಿ ವ್ಯಕ್ತಿಗಳ ಚಿಂತೆನೆ ಮತ್ತು ವರ್ತನೆಗಳನ್ನು ಬದಲಿಸಬಲ್ಲ ಸಮಗ್ರ ವಿಧಾನವನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ.
ಸಾಮಾಜಿಕ ನ್ಯಾಯವನ್ನು ಸಾಧಿಸುವಲ್ಲಿ ವೈಯಕ್ತಿಕ ಚಿಂತನಾ ಕ್ರಮದಲ್ಲಿ ಬದಲಾವಣೆ ತರುವುದೂ ಸಹ ಮುಖ್ಯವಾಗಿದೆ. ನಮ್ಮ ಸ್ವಂತ ಪಕ್ಷಪಾತ ಮತ್ತು ಪೂರ್ವಾಗ್ರಹಗಳನ್ನು ಪ್ರಶ್ನಿಸುವ ಮತ್ತು ನಮ್ಮ ನಮ್ಮ ಸಮುದಾಯಗಳಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಶಿಕ್ಷಣ ನೀಡುವುದು, ಅನ್ಯಾಯಗಳ ವಿರುದ್ಧ ಮಾತನಾಡುವುದು ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವ ಸಂಸ್ಥೆಗಳು ಮತ್ತು ಉದ್ದೇಶಗಳನ್ನು ಬೆಂಬಲಿಸುವುದನ್ನು ಕೂಡ ಒಳಗೊಂಡಿರುತ್ತದೆ.
ಇಂದಿನ ಆಧುನಿಕ ಸಂವಹನದ ಕಾಲದಲ್ಲಿ ತಂತ್ರಜ್ಞಾನ ಕೂಡ ಪ್ರಮುಖ ಪಾತ್ರ ವಹಿಸಿದ್ದು ಯಾವುದೇ ಅನ್ಯಾಯ ನಡೆದಾಗ, ಮನುಷ್ಯನ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಜಗತ್ತಿನಾದ್ಯಂತ ಜನ ಒಟ್ಟಾಗಲು ಸುಲಭವಾಗಿದೆ. ಡಿಜಿಟಲ್ ಮತ್ತು ಸೋಶಿಯಲ್ ಮೀಡಿಯಾಗಳ ಸಾಧ್ಯತೆಗಳಿಂದಾಗಿಯೇ ಮೀ-ಟೂ, ಬ್ಲಾಕ್ ಲೈವ್ಸ್ ಮ್ಯಾಟರ್ಸ್ ಅಂತಹ ಚಳವಳಿಗಳನ್ನು ನೋಡಲು ಸಾಧ್ಯವಾಗಿದೆ. ಆದರೂ ಅಮೆರಿಕದಲ್ಲಿಯೂ ಜನಾಂಗೀಯ ತಾರತಮ್ಯ, ಧಾರ್ಮಿಕ ನಂಬಿಕೆಗಳ ಸ್ಟೀರಿಯೋಟೈಪ್ ಮಾಡುವಿಕೆ, ಲಿಂಗಭೇದ ಮೊದಲಾದವು ಕಾಣಬರುತ್ತದೆ. ಭಾರತದಲ್ಲಿ ಆಹಾರವು ಗೋದಾಮುಗಳಲ್ಲಿ ಕೊಳೆವಷ್ಟು ಉತ್ಪಾದನೆಯಾದರೂ, ಕೆಳಜಾತಿ/ಬುಡಕಟ್ಟುಗಳ ಮಕ್ಕಳು ಹಸಿವೆಯಿಂದ ಸಾಯುವ ವರದಿಗಳನ್ನೂ, ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ಹೊಡೆದು ಕೊಲ್ಲುವುದನ್ನೂ ಕಾಣಬೇಕಾಗಿದೆ.
ನ್ಯಾಯದ ಮೂರು ಪ್ರಮುಖ ಅಂಶಗಳಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಂಶಗಳಲ್ಲಿ ಸಾಮಾಜಿಕ ನ್ಯಾಯವೇ ಅತ್ಯಂತ ಪ್ರಮುಖವಾಗಿದೆ. ಏಕೆಂದರೆ ಅದು ಇತರ ಎರಡೂ ನ್ಯಾಯಗಳನ್ನು ತನ್ನಲ್ಲಿಯೇ ಒಳಗೊಂಡಿದೆ. ಸಾಮಾಜಿಕ ನ್ಯಾಯವು ಆರ್ಥಿಕ ನ್ಯಾಯವನ್ನು ಮತ್ತು ಆ ಮೂಲಕ ಸಿಗುವ ರಾಜಕೀಯ ನ್ಯಾಯವನ್ನು ನಂಬುತ್ತದೆ. ನ್ಯಾಯದ ಈ ಮೂರು ಅಂಶಗಳ ನಡುವಿನ ಸಂಬಂಧವು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ನಡುವಿನ ಸಂಬಂಧವನ್ನು ಹೋಲುತ್ತದೆ. ಸಮಾನತೆ ಇಲ್ಲದೆ ನ್ಯಾಯಕ್ಕೆ ಅರ್ಥವಿಲ್ಲ ಮತ್ತು ಸಮಾನತೆ ಇಲ್ಲದೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಅದೇ ರೀತಿ, ಸಾಮಾಜಿಕ ನ್ಯಾಯವನ್ನು ಸ್ಥಾಪಿಸಲು ನಾವು ಮೊದಲು ಆರ್ಥಿಕ ನ್ಯಾಯವನ್ನು ಸ್ಥಾಪಿಸಬೇಕು ಮತ್ತು ಸಾಮಾಜಿಕ ಮತ್ತು ಆರ್ಥಿಕ ನ್ಯಾಯವಿಲ್ಲದೆ ರಾಜಕೀಯ ನ್ಯಾಯಕ್ಕೆ ಅರ್ಥವಿರುವುದಿಲ್ಲ.
ಪ್ಲೇಟೋ, ಸಾಕ್ರಟೀಸರ ಚಿಂತನೆಗಳಿಂದ ಪ್ರಾರಂಭವಾಗಿ ಜಾನ್ ರಾಲ್ಸ್, ಅಂಬೇಡ್ಕರ್, ಫುಕೋ ಮತ್ತು ಚಾಮ್ಸ್ಕಿಯಂತಹ ಚಿಂತಕರ ಮೂಲಕ ವಿವಿಧ ಘಟ್ಟಗಳನ್ನು ಹಾದುಬಂದಿರುವ ಸಾಮಾಜಿಕ ಸಮಾನತಾ ಚಿಂತನೆಯು ಕೇವಲ ಯುಟೋಪಿಯಾ ಆಗುವ ಅಗತ್ಯವಿಲ್ಲ. ಮನುಷ್ಯ ಸಮಾಜವು ತನ್ನ ವಿಕಾಸದ ಸಾವಿರಾರು ವರ್ಷಗಳಲ್ಲಿ ಪ್ರಾಣಿ ಸಮಾನ ಜೀವನ ಕ್ರಮದಿಂದ ಶುರುವಾಗಿ ಆಹಾರ ಹುಡುಕುವ, ಬೇಟೆಯಾಡುವ,
ಕೃಷಿ ಮಾಡುವ, ಸಮಾಜವಾಗಿ ನೆಲೆ ನಿಲ್ಲುವ ವಿವಿಧ ಹಂತಗಳನ್ನು ದಾಟಿ ಬಂದಿದ್ದು, ಈ ಮಧ್ಯೆ ಹಿಂಸೆ, ಶೋಷಣೆ, ಕ್ರೌರ್ಯ, ಕೊಲೆ, ನರಮೇಧ, ಯುದ್ಧ ಎಲ್ಲವನ್ನೂ ನಡೆಸಿ ತನ್ನ ಸಹಜೀವಿಗಳನ್ನು ಹಿಂಸಿಸುವ, ನಾಶಮಾಡುವ, ಸೇವೆಗಾಗಿ ಗುಲಾಮರನ್ನಾ ಗಿಸುವ ವಿವಿಧ ಬಗೆಯ ಹಿಂಸಾ ಕ್ರಮಗಳನ್ನು ಕಂಡು ಇದೀಗ ವೈಜ್ಞಾನಿಕ ಚಿಂತನೆಯ ಮೂಲಕ ಪ್ರಬುದ್ಧತೆಯ ಕಡೆಗೆ ಸಾಗುತ್ತಿರುವಾಗ ಇಡೀ ಜಗತ್ತೇ ಒಂದೆಂದೂ, ತಾನು ಪ್ರಕೃತಿಯ ಶಿಶುವೆಂದೂ, ತಾನು ಉಳಿಯಲು ಜಗತ್ತಿನ ಸಕಲ ಜೀವರಾಶಿಗಳು ಉಳಿಯ ಬೇಕೆಂಬುದನ್ನೂ ಅರಿತಿದ್ದಾನೆ.
ಮುಂದೆ ಒದಗಬಹುದಾದ ಜಾಗತಿಕ ತಾಪಮಾನದಂತಹ ಪ್ರಾಕೃತಿಕ ಸನ್ನಿವೇಶಗಳನ್ನು ಎದುರಿಸಲು, ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ನಿಯಂತ್ರಿಸಲು, ತಂತ್ರಜ್ಞಾನದ ಹಂಚಿಕೆಯ ಮೂಲಕ ಜೀವನವನ್ನು ಸುಧಾರಿಸಬಹು ದಾದ ವಾಸ್ತವ ಮತ್ತು ವೈಜ್ಞಾನಿಕ ವಿಷಯಗಳು ಇಡೀ ಜಗತ್ತನ್ನು ಒಗ್ಗೂಡಿಸಲಿದೆ. ಇಂತಹ ಸಂದರ್ಭದಲ್ಲಿ ಸಾವಿರಾರು ವರ್ಷಗಳ ಹಿಂದೆ ರೂಪಿಸಿದ ಧಾರ್ಮಿಕ ಮತ್ತು ಸಾಮಾಜಿಕ ನಂಬಿಕೆಗಳು ಮನುಷ್ಯ ಮನುಷ್ಯರನ್ನು ವಿಭಜಿಸದ ಹಾಗೆ ಕಾಪಾಡಿಕೊಳ್ಳುವ ಎಚ್ಚರಿಕೆಯನ್ನು ಸಹ ಪ್ರಜ್ಞಾಪೂರ್ವಕವಾಗಿ ಬೆಳೆಸಬೇಕಾಗಿದೆ.
ಜಗತ್ತು ಸೈದ್ಧಾಂತಿಕವಾಗಿ ಬಹು ಬಗೆಯಲ್ಲಿ ವಿಭಜಿತವಾಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುವುದು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದು ಕಷ್ಟಕರವಾಗಿರುತ್ತದೆ. ಆದಾಗ್ಯೂ, ಮಾನವೀಯತೆಯನ್ನು ಗುರುತಿಸುವ ಮೂಲಕ ಮತ್ತು ಹೆಚ್ಚು ನ್ಯಾಯಯುತ ಮತ್ತು ಸಮಾನ ಸಮಾಜಕ್ಕಾಗಿ ಕೆಲಸ ಮಾಡಲು ಬದ್ಧರಾಗುವ ಮೂಲಕ, ಮನುಷ್ಯನು ಈ ಸವಾಲುಗಳನ್ನು ಜಯಿಸಬಹುದು ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ರೂಪಿಸಬಹುದು. ಯಾವುದೇ ಸಮಾಜದ ವ್ಯಕ್ತಿಗಳು ತಮಗೆ ದೊರಕಬೇಕಾದ ಮೂಲಭೂತ ಅಗತ್ಯಗಳನ್ನು, ಹಕ್ಕುಗಳನ್ನು ಪಡೆದು ಶಾಂತಿ, ಸಮಾಧಾನ ಮತ್ತು ಆರೋಗ್ಯಗಳಿಂದಿದ್ದರೆ ಆಗ ಅವರು ಸಹ ದೇಶ ಕಟ್ಟುವಲ್ಲಿನ ತಮ್ಮ ಮೂಲಭೂತ ಕರ್ತವ್ಯಗಳನ್ನು ಪೂರೈಸುತ್ತಾರೆ.