ಹಿಜಾಬ್ ವಿವಾದದ ನಂತರ 10 ಸಾವಿರ ಅಲ್ಪಸಂಖ್ಯಾತ ಹೆಣ್ಣುಮಕ್ಕಳು ಓದು ನಿಲ್ಲಿಸಿದ್ದಾರೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು, ಫೆ. 20: ‘ಹಿಜಾಬ್ ವಿವಾದದ ನಂತರ 10 ಸಾವಿರ ಅಲ್ಪಸಂಖ್ಯಾತ ಹೆಣ್ಣುಮಕ್ಕಳು ಓದು ನಿಲ್ಲಿಸಿದ್ದಾರೆ' ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರಕಾರ 15 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾಗಿದ್ದು, ಕೋರ್ಟ್ ಆದೇಶಕ್ಕೆ ಒಳಪಟ್ಟು ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಲಾಗುವುದು. ಇದರಿಂದ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ-ಕಾಲೇಜುಗಳಿಗೆ ಬರುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರ ಮಕ್ಕಳು ಹೆಚ್ಚು ಓದುತ್ತಿರುವುದು ಕಂಡು ಬರುತ್ತಿದೆ’ ಎಂದು ಉಲ್ಲೇಖಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ‘ಹಿಜಾಬ್ ವಿವಾದದ ನಂತರ 10 ಸಾವಿರ ಅಲ್ಪಸಂಖ್ಯಾತ ಹೆಣ್ಣುಮಕ್ಕಳು ಓದು ನಿಲ್ಲಿಸಿದ್ದಾರೆ. ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲೆಡೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪಿಯುಸಿಗೆ ಮೊದಲೇ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ' ಎಂದು ಗಮನ ಸೆಳೆದರು.
‘ಇದು ಬಹಳ ವರ್ಷಗಳಿಂದಲೂ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಇದಕ್ಕೆ ಶೈಕ್ಷಣಿಕ ಕಾರಣಗಳ ಜೊತೆಗೆ ಸಾಮಾಜಿಕ, ಆರ್ಥಿಕ ಕಾರಣಗಳಿವೆ. ಹೀಗಾಗಿಯೇ ಸರಕಾರ ಶಾಲಾ-ಕಾಲೇಜು ಸೇರಿದಂತೆ ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡುವ ಭರವಸೆ ನೀಡಿದ್ದು, ಶಿಕ್ಷಣ ಕ್ಷೇತ್ರದ ಮೂಲಸೌಕರ್ಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಸಮರ್ಥಿಸಿದರು.
ಶೈಕ್ಷಣಿಕ ಸಾಲಮನ್ನಾ ಮಾಡಿ: ಯು.ಟಿ.ಖಾದರ್
‘ಈ ಹಿಂದೆ ಸರಳ ರೂಪದಲ್ಲಿ ಶೈಕ್ಷಣಿಕ ಸಾಲ ಸಿಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸಾಲಕ್ಕೆ ಆಸ್ತಿ ಅಡಮಾನ ಕೇಳುತ್ತಿದ್ದು, ಬಡ್ಡಿಯೂ ಹೆಚ್ಚಾಗಿದೆ. ಬ್ಯಾಂಕಿನವರ ಕಿರುಕುಳವೂ ಹೇಳತೀರದು. ಹೀಗಾಗಿ ವಿದೇಶದಲ್ಲಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಪೋಷಕರು ಬ್ಯಾಂಕ್ ಸಾಲ ಪಡೆಯಲು ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಒಂದು ಅವಧಿಗೆ ಶೈಕ್ಷಣಿಕ ಸಾಲಮನ್ನಾ ಮಾಡಬೇಕು’
-ಯು.ಟಿ.ಖಾದರ್ ವಿಪಕ್ಷ ಉಪ ನಾಯಕ