ಡಾ. ರೊನಾಲ್ಡ್ ಕೊಲಾಸೊ ಅವರಿಗೆ ಫೆ.24ರಂದು ನಗರದಲ್ಲಿ ನಾಗರಿಕ ಸನ್ಮಾನ
ಲಂಡನ್ ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಿಂದ ಶ್ರೇಷ್ಠತಾ ಪ್ರಮಾಣಪತ್ರ ಪಡೆದ ಕೊಡುಗೈ ದಾನಿ
ಮಂಗಳೂರು, ಫೆ. 21: ಸಮಾಜ ಸೇವಾಸಕ್ತ ಡಾ. ರೊನಾಲ್ಡ್ ಕೊಲಾಸೊ ಅವರು ಕನ್ನಡ ನಾಡಿನ ಸುಪುತ್ರ, ಡಾ. ರೊನಾಲ್ಡ್ ಕೊಲಾಸೊ ಅವರು ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರೆಂಬುದು ನಮಗೆಲ್ಲಾ ಇನ್ನಷ್ಟು ಅಭಿಮಾನದ ಸಂಗತಿ. ತಮ್ಮ ಜನಪರ ಸೇವೆಗಳಿಗಾಗಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ಹಲವಾರು ಪುರಸ್ಕಾರಗಳು ಅವರನ್ನು ಅಲಂಕರಿಸಿವೆ. ಇತ್ತೀಚೆಗೆ ತಮ್ಮ ಸೇವಾ ಹಾಗೂ ದತ್ತಿ ಕಾರ್ಯಗಳಿಗಾಗಿ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಿಂದ "ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್' (ಶ್ರೇಷ್ಠತಾ ಪ್ರಮಾಣಪತ್ರ) ಗೌರವಕ್ಕೆ ಪಾತ್ರರಾಗಿದ್ದಾರೆ. ಉದಾತ್ತ ವ್ಯಕ್ತಿತ್ವದ ಡಾ. ರೊನಾಲ್ಡ್ ಕೊಲಾಸೊ ಅವರಿಗೆ ಫೆ.24ರಂದು ಮಂಗಳೂರಿನಲ್ಲಿ "ನಾಗರಿಕ ಸನ್ಮಾನ" ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರಿನಲ್ಲಿ ಇಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್ ಲೋಬೊ ಅವರು ತಿಳಿಸಿದ್ದಾರೆ.
ಜೆ.ಆರ್ ಲೋಬೊ ಅವರ ನೇತೃತ್ವದಲ್ಲಿ ಸನ್ಮಾನ ಸಮಿತಿ ಏರ್ಪಡಿಸಿರುವ ಈ ಕಾರ್ಯಕ್ರಮವು ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಅತಿ ವಂದನೀಯ ಡಾ. ಪೀಟರ್ ಮಚಾದೋ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದು ಜೆ.ಆರ್ ಲೋಬೊ ತಿಳಿಸಿದ್ದಾರೆ.
ನಗರದ ಪಂಪ್‌ವೆಲ್‌ನಲ್ಲಿರುವ ಫಾದರ್ ಮುಲ್ಲರ್ ಕನ್ವೆನ್ಶನ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ, ರಾಮಕೃಷ್ಣ ಮಠ ಮಂಗಳೂರು ಇದರ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ಯೆನಪೋಯ ವಿವಿ ಚಾನ್ಸಲರ್ ಡಾ. ಅಬ್ದುಲ್ಲ ಕುಂಞಿ, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ, ಸಿಎಸ್‌ಐ ಕರ್ನಾಟಕ ಧರ್ಮಪ್ರಾಂತ್ಯದ ಬಿಷಪ್ ರೈಟ್. ರೆ. ಹೇಮಚಂದ್ರ ಕುಮಾರ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಡಾ. ಲಾರೆನ್ಸ್ ಮುಕ್ಕುಝಿ, ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರ್ರಾವೋ, ಶಾಸಕ ಯು.ಟಿ. ಖಾದರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ, ನಿಟ್ಟೆ ಡೀಮ್ಡ್ ಟು ಬಿ ವಿವಿ ಚಾನ್ಸಲರ್ ಡಾ. ಎನ್. ವಿನಯ್ ಹೆಗ್ಡೆ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ನಾಗರಿಕ ಸನ್ಮಾನ ಸಮಿತಿಯ ಸದಸ್ಯರಾದ ಸುರೇಶ್ ಬಲ್ಲಾಳ್, ಯು.ಟಿ. ಇಫ್ತಿಕಾರ್ ಅಲಿ, ಲೂಯಿ ಪಿಂಟೊ, ಡೆನ್ನಿಸ್ ಡಿಸಿಲ್ವಾ, ಸಂತೋಷ್ ಡಿಕೋಸ್ತಾ ಮೊದಲಾದವರು ಉಪಸ್ಥಿತರಿದ್ದರು.
ಡಾ. ರೊನಾಲ್ಡ್ ಕೊಲಾಸೊ ಅವರು ವಿವಿಧ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮುಖ್ಯವಾಗಿ...
*ಸರಕಾರಿ ವಲಯ:-
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 2 ಪೊಲೀಸ್ ಸ್ಟೇಷನ್ ಕಟ್ಟಡ ನಿರ್ಮಾಣ ಹಾಗೂ ಅನೇಕ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುಸಜ್ಜಿತ ವಕೀಲರ ಭವನ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಅದೇ ರೀತಿ ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಅಗತ್ಯ ಸೌಕರ್ಯಗಳನ್ನು ಮಾಡಿಕೊಟ್ಟಿದ್ದಾರೆ. ರಾಜ್ಯದ ಪಂಚಾಯತ್ ರಾಜ್ ಕಟ್ಟಡಗಳಿಗೆ ಪಿಡಬ್ಲ್ಯೂಡಿ ಜಿಲ್ಲಾ ಪಂಚಾಯತ್/ಕಾರ್ಪೊರೇಶನ್ ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡ ನಿರ್ಮಾಣ, ಮೂಲಭೂತ ವ್ಯವಸ್ಥೆ, ರಸ್ತೆ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ.
*ಶಿಕ್ಷಣ ಕ್ಷೇತ್ರ:-
ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆಗಳ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ವಿಶೇಷವಾಗಿ ನವರತ್ನ ಅಗ್ರಹಾರ ಬೆಂಗಳೂರು ಇಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗೆ 12 ಸಾವಿರ ಚದರ ಅಡಿಗಳ ಕಟ್ಟಡ ನಿರ್ಮಾಣ ಮಾಡಿದ್ದಲ್ಲದೆ, ರಾಜ್ಯದ ವಿವಿಧೆಡೆ ಸರಿಸುಮಾರು 30 ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದಾರೆ.
ಆರೋಗ್ಯ ಕ್ಷೇತ್ರ:-
ಆರೋಗ್ಯ ಕ್ಷೇತ್ರದಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳ ಜೊತೆಗೂಡಿ ವಿವಿಧ ಆರೋಗ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಸಂಸ್ಥೆಗಳಿಗೆ ಮೂಲಭೂತ ದೇಣಿಗೆ ನೀಡಿದ್ದಾರೆ.
*ಧಾರ್ಮಿಕ ಕ್ಷೇತ್ರ:-
ಓರ್ವ ನಿಷ್ಠಾವಂತ ಕ್ರೈಸ್ತ ಅನುಯಾಯಿ ಆಗಿದ್ದುಕೊಂಡು ಸರ್ವಧರ್ಮ ಸಮಭಾವ ನೀತಿಯಂತೆ ಬೆಂಗಳೂರಿನ ಬೋವಿಪಾಳ್ಯ- ಅಗ್ರಹಾರದಲ್ಲಿ ಮುನೀಶ್ವರ ದೇವಸ್ಥಾನವನ್ನು ನಿರ್ಮಿಸಲು ಪ್ರಮುಖ ಆರ್ಥಿಕ ದಾನಿಯಾಗಿದ್ದಾರೆ. 700 ವರ್ಷಗಳ ಹಿಂದಿನ ಸಿಂಗಾರಹಳ್ಳಿ-ಬೆಂಗಳೂರಿನಲ್ಲಿನ ಮದ್ದೂರಮ್ಮ ದೇವಸ್ಥಾನ ಕಟ್ಟಲು ಕೊಡುಗೆ ನೀಡಿದ್ದಾರೆ ಹಾಗೂ ಮಂಗಳೂರಿನ ಶ್ರೀ ಸೂರ್ಯನಾರಾಯಣ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಅತ್ಯಂತ ಹೆಚ್ಚು ಕೊಡುಗೆ ನೀಡಿದ್ದಾರೆ. ರಾಜ್ಯದ ಬೇರೆ ಬೇರೆ 35 ದೇವಸ್ಥಾನಗಳಿಗೆ, ಮಸೀದಿ ನಿರ್ಮಾಣಕ್ಕೆ ವಿವಿಧ ರೀತಿಯ ಆರ್ಥಿಕ ನೆರವು, ಚರ್ಚ್ ಕಟ್ಟಡ ನಿರ್ಮಾಣಕ್ಕೆ ಮತ್ತು ಮೂಲಭೂತ ಸೌಕರ್ಯಕ್ಕೆ ದೇಣಿಗೆ ನೀಡಿದ್ದಾರೆ.
ಕರ್ನಾಟಕದಾದ್ಯಂತ ಹಲವು ಮಂದಿಗೆ ಸಂಪೂರ್ಣ ಮನೆ ನಿರ್ಮಾಣ ಮಾಡಿಕೊಟ್ಟಿದಾರೆ ಹಾಗೂ ರೈತರಿಗೆ ಮತ್ತು ಗ್ರಾಮಸ್ಥರಿಗೆ ಕೂಡಾ ಮನೆ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ.
ಮಂಗಳೂರಿನ ಕೊಂಕಣಿ ಕಲಾ ಕೇಂದ್ರ ಕಟ್ಟಡ, ಮಾಂಡ್ ಸೊಬಾಣ್ ಕೊಂಕಣಿ, ವಿಶ್ವ ಕೊಂಕಣಿ ಕೇಂದ್ರಗಳಿಗೆ ಮತ್ತು ಕೊಂಕಣಿ ಕಲಾವಿದರಿಗೆ, ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಾಯ ಮಾಡಿದ್ದಾರೆ.
*ಸಂತ್ರಸ್ತರಿಗೆ ಸಹಾಯ, ವ್ಯಕ್ತಿಗತ ಸಹಾಯ
ಕಲೆ ಮತ್ತು ಸಂಸ್ಕೃತಿ, ವಿವಿಧ ಪ್ರಾಕೃತಿಕ ವಿಕೋಪ ನಡೆದಾಗ ಕರ್ನಾಟಕ ಸರಕಾರಕ್ಕೆ ಪರಿಹಾರ ನಿಧಿ ನೀಡಿದ್ದಲ್ಲದೆ ಕೊರೋನ ಸಂದರ್ಭದಲ್ಲಿ 18 ಸಾವಿರ ಕುಟುಂಬಗಳಿಗೆ ಅಗತ್ಯ 20 ದಿನಸಿ ವಸ್ತುಗಳ ಬ್ಯಾಗುಗಳನ್ನು ವಿತರಿಸಿದ್ದಾರೆ.
ಇದೇ ರೀತಿ ಕ್ರೀಡಾ ಕ್ಷೇತ್ರ, ಸಮುದಾಯ ಭವನಗಳ ನಿರ್ಮಾಣ ಸಾಮೂಹಿಕ ವಿವಾಹ ವಿವಿಧ ಸಂಘಟನೆಗಳ ಸೇವಾ ಕಾರ್ಯಕ್ರಮ, ಮಹಿಳಾ ಸುರಕ್ಷತಾ ಯೋಜನೆಗಳು ಸಾರ್ವಜನಿಕ ಬಸ್ ನಿಲ್ದಾಣ ಮತ್ತು ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಯುವ ಜನರಿಗಾಗಿ ಕೌಶಲ್ಯಾಭಿವೃದ್ಧಿ ಯೋಜನೆಗಳು ವಿದ್ಯುತ್ ಸರಬರಾಜು ಇಲಾಖೆಗೆ ಅಗತ್ಯ ಕೊಡುಗೆ, ಸ್ಮಶಾನಗಳ ಅಭಿವೃದ್ಧಿ ಹೀಗೆ ಸಮಾಜದ ಎಲ್ಲಾ ವರ್ಗ ಜಾತಿ ಸಮುದಾಯ ಮತ್ತು ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡಿದ್ದಾರೆ.
ಅವರ ಸೇವಾ ಕಾರ್ಯದಲ್ಲಿ ಯಾವುದೇ ಸಂದರ್ಭದಲ್ಲಿಯೂ ಜಾತಿ-ಮತ-ಭೇದವನ್ನು ಮಾಡದಿರುವುದು ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಅವರ ಈ ಕಾರ್ಯಕ್ಕೆ ಅನೇಕ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಗೌರವ ದೊರಕಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದ ಡಾ. ರೊನಾಲ್ಡ್ ಕೊಲಾಸೊ ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದ ನಂತರ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋದರು. ವಿವಿಧ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅವರು ನಂತರದ ದಿನಗಳಲ್ಲಿ ಸ್ವತಃ ಉದ್ಯಮ ಆರಂಭಿಸಿದರು.
ತಮ್ಮ ದುಡಿಮೆಯಲ್ಲಿ ಒಂದು ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವುದಾಗಿ ಸಣ್ಣ ವಯಸ್ಸಿನಲ್ಲೇ ಸಂಕಲ್ಪ ಮಾಡಿ ಅದರಂತೆ ನಡೆದು ಬರುತ್ತಿದ್ದಾರೆ. ಅವರು ಶಿಕ್ಷಣ, ಆರೋಗ್ಯ, ಕ್ರೀಡೆ, ಧಾರ್ಮಿಕ, ಮೂಲಭೂತ ಸೌಕರ್ಯ ಸೇರಿದಂತೆ 23ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಲವಾರು ಸೇವಾ ಹಾಗೂ ದತ್ತಿ ಕಾರ್ಯಗಳನ್ನು ನಡೆಸಿದ್ದಾರೆ.
ಎಲೆಮರೆಯ ಕಾಯಿಯಂತಿದ್ದು, "ಕೆರೆಯ ನೀರನ್ನು ಕೆರೆಗೆ ಚೆಲ್ಲು" ಎಂಬಂತೆ ಸಮಾಜಸೇವಾ ಕಾರ್ಯಗಳಿಗೆ ಸಹಾಯಹಸ್ತ ಚಾಚುತ್ತಾ ಬಂದಿದ್ದಾರೆ. ಬಹರೈನ್‌ನಲ್ಲಿ ನಿರ್ಮಾಣವಾಗಿರುವ 'ಕನ್ನಡ ಭವನ'ವು ವಿದೇಶದಲ್ಲಿರುವ ಮೊತ್ತಮೊದಲ ಕನ್ನಡ ಭವನವಾಗಿದ್ದು, ಇದಕ್ಕಾಗಿ ದೊಡ್ಡಮೊತ್ತದ ದೇಣಿಗೆ ನೀಡಿ ಇದರ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾಗಿದ್ದಾರೆ.
ಡಾ. ರೊನಾಲ್ಡ್ ಕೊಲಾಸೊ ಅವರ ಸಮಾಜಸೇವಾ ಚಟುವಟಿಕೆಗಳು, ದತ್ತಿ ಕಾರ್ಯಗಳು ಹಾಗೂ ವೃತ್ತಿಪರತೆಯನ್ನು ಗೌರವಿಸಿ ರಾಜ್ಯ, ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಅವರನ್ನು ತಾವಾಗಿಯೇ ಅರಸಿ ಬಂದಿವೆ.
ಯೂರೋಪಿಯನ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿಯ ಪ್ರೊಫೆಷನಲ್ ಡಾಕ್ಟರೇಟ್, "ಕೆನರಾ ವರ್ಲ್ಡ್ ವಿಷನರಿ" ಪ್ರಶಸ್ತಿಗೆ ಪಾತ್ರವಾಗಿದ್ದಕ್ಕಾಗಿ ಕೆನಡಾ ಸರ್ಕಾರದ ಗೌರವ ಹಾಗೂ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನ "ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್" ಇವು ಅವರಿಗೆ ಸಂದಿರುವ ಗೌರವಗಳ ಒಂದೆರಡು ಉದಾಹರಣೆಗಳು ಮಾತ್ರವಾಗಿವೆ.
ಪತ್ನಿ ಜೀನ್ ಕೊಲಾಸೊ ಹಾಗೂ ಕುಟುಂಬದ ಇತರ ಸದಸ್ಯರ ಬೆಂಬಲದೊಂದಿಗೆ ಡಾ. ರೊನಾಲ್ಡ್ ಕೊಲಾಸೊ ಜನಸೇವಾ ಕಾರ್ಯಗಳಲ್ಲಿ ಅವಿರತವಾಗಿ ಇಂದಿಗೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಸಮಾಜ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ, ಗೌರವಿಸಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ ಕೊಲಾಸೊ ಅವರ ಮಾನವೀಯ, ಸಂವೇದನಾಶೀಲ 'ವ್ಯಕ್ತಿತ್ವವನ್ನು ಸಮಾಜಕ್ಕೆ ಪರಿಚಯಿಸಿ ನಾವೆಲ್ಲರೂ ಒಟ್ಟಿಗೆ ಸೇರಿ ಅವರನ್ನು ಅಭಿನಂದಿಸೋಣ ಎಂದು ಮಾಜಿ ಶಾಸಕ ಜೆ.ಆರ್.ಲೊಬೊ ತಿಳಿಸಿದ್ದಾರೆ.