ಕಾರವಾರ: ಊಟದ ತಟ್ಟೆಯೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳು
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಕಳಪೆ ಊಟ: ಆರೋಪ
ಕಾರವಾರ, ಫೆ.22: ನಗರದ ಬಾಡದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಊಟ ಸರಿಯಿಲ್ಲ ಎಂದು ಆರೋಪಿಸಿ ಮಂಗಳವಾರ ರಾತ್ರಿ ಕೆಲ ವಿದ್ಯಾರ್ಥಿಗಳು ಊಟದ ತಟ್ಟೆಯೊಂದಿಗೆ ರಸ್ತೆಗಿಳಿದು ಪತಿಭಟನೆ ನಡೆಸಿದರು.
ಇದು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಇರುವ ವಸತಿ ನಿಲಯವಾಗಿದ್ದು, ಮೀನನ್ನು ಸರಿಯಾಗಿ ಸ್ವಚ್ಛ ಮಾಡುವುದಿಲ್ಲ. ಸಾಂಬಾರ ಮಾಡಿದರೆ ಮಸಾಲೆಯನ್ನು ಸರಿಯಾಗಿ ಹಾಕುವುದಿಲ್ಲ. ಶೌಚಾಲಯವನ್ನು ಸ್ವಚ್ಛ ಮಾಡುವುದಿಲ್ಲ ಎಂದು ಆರೋಪಿಸಿ ಮೆಟ್ರಿಕ್, ಪದವಿ ಪೂರ್ವ ವಿದ್ಯಾರ್ಥಿಗಳು ಊಟದ ತಟ್ಟೆ ಹಿಡಿದುಕೊಂಡು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.
ಬಳಿಕ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಲಗದ್, ಅರ್ಧಗಂಟೆಗೂ ಅಧಿಕ ಕಾಲ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಬಳಿಕ ವಸತಿ ನಿಲಯ ಪರಿಶೀಲನೆ ನಡೆಸಿದರು.
ಗುಣಮಟ್ಟದ ಆಹಾರ ನೀಡುವಂತೆ, ಸ್ವಚ್ಛತೆಯನ್ನ ಮಾಡುವಂತೆ ವಾರ್ಡನ್‌ಗೆ ಸೂಚಿಸಿದರು. ಅಡುಗೆ ಸಹಾಯಕ ಹಾಗೂ ಸೆಕ್ಯುರಿಟಿ ಗಾರ್ಡ್ ಅವರ ಬೇಜವಾಬ್ದಾರಿ ಬಗ್ಗೆ ಮಕ್ಕಳು ದೂರಿದರು. ಈ ವೇಳೆ ಅಡುಗೆ ಸಹಾಯಕರನ್ನು ಅಜ್ಜಪ್ಪ ಸೊಲಗದ್ ತರಾಟೆಗೈದರು. ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಲಗದ್, ಮುಂದೆ ತಾವು ಧಿಡೀರ್ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ತಪ್ಪು ಮಾಡಿರುವುದು ಗಮನಕ್ಕೆ ಬಂದರೆ ಕೆಲಸದಿಂದ ವಜಾ ಮಾಡುವುದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದರು.