ಡಾ. ರೊನಾಲ್ಡ್ ಕೊಲಾಸೊಗೆ 2022-23ನೇ ಸಾಲಿನ 'ಏಶ್ಯಾಒನ್ ಗ್ಲೋಬಲ್ ಇಂಡಿಯನ್' ಪ್ರಶಸ್ತಿ
ಬ್ಯಾಂಕಾಕ್: ETNOW, ZEE TV ಹಾಗೂ CNBC ಸಹಯೋಗದಲ್ಲಿ 'ಏಶ್ಯಾಒನ್ ಮ್ಯಾಗಝಿನ್' ಸಂಸ್ಥೆಯು ಖ್ಯಾತ ಎನ್ನಾರೈ ಉದ್ಯಮಿ ಹಾಗೂ ದಾನಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ 2022-23ನೇ ಸಾಲಿನ 'ಏಶಿಯಾಒನ್ ಗ್ಲೋಬಲ್ ಇಂಡಿಯನ್' ಪ್ರಶಸ್ತಿಯನ್ನು ಮಂಗಳವಾರ ಬ್ಯಾಂಕಾಕ್‌ನಲ್ಲಿ ಪ್ರದಾನ ಮಾಡಿತು.
ಬ್ಯಾಂಕಾಕ್‌ನ ಹೋಟೆಲ್ ಮ್ಯಾರಿಯಟ್ ಮಾರ್ಕ್ವಿಸ್‌ನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಥಾಯ್ಲೆಂಡ್‌ನಲ್ಲಿರುವ ಸುಮಾರು 20ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ಭಾಗವಹಿಸಿದ್ದರು.
ಈ ಪ್ರಶಸ್ತಿಗೆ ಭಾಜನರಾಗಿರುವ ಭಾರತೀಯ ಮೂಲದ ಸಾಧಕರ ಪಟ್ಟಿಗೆ ಡಾ. ರೊನಾಲ್ಡ್ ಕೊಲಾಸೊ ಕೂಡಾ ಸೇರ್ಪಡೆಯಾದರು. ಇದಕ್ಕೂ ಮುನ್ನ ಪ್ರಸಿದ್ಧ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಡಾ. ಅಮರ್ತ್ಯ ಸೇನ್, ಮೈಕ್ರೊಸಾಫ್ಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯ ನಾದೆಲ್ಲ, ಪೆಪ್ಸಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಂದ್ರಾ ನೂಯಿ, ರಿಲಯನ್ಸ್ ಪ್ರತಿಷ್ಠಾನದ ಮುಖ್ಯಸ್ಥೆ ನೀತಾ ಅಂಬಾನಿ ಈ ಪ್ರಶಸ್ತಿಗೆ ಭಾಜನರಾಗಿದ್ದರು.
ತಮ್ಮ ಜನಪರ ಸೇವೆಗಳಿಗಾಗಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ಹಲವಾರು ಪುರಸ್ಕಾರಗಳಿಗೆ ಡಾ. ರೊನಾಲ್ಡ್ ಕೊಲಾಸೊ ಅವರು ಪಾತ್ರರಾಗಿದ್ದಾರೆ.
ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ್ ನಿಂದ ಶ್ರೇಷ್ಠತಾ ಪ್ರಮಾಣ ಪತ್ರ ಪಡೆದಿರುವ ಖ್ಯಾತ ಎನ್ನಾರೈ ಉದ್ಯಮಿ ಹಾಗೂ ದಾನಿ ಡಾ.ರೊನಾಲ್ಡ್ ಕೊಲಾಸೊ ಅವರನ್ನು ಫೆ.24, ಶುಕ್ರವಾರದಂದು ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಡಾ. ರೊನಾಲ್ಡ್ ಕೊಲಾಸೊ ಅವರಿಗೆ ಮಂಗಳೂರಿನಲ್ಲಿ "ನಾಗರಿಕ ಸನ್ಮಾನ" ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಜೆ.ಆರ್ ಲೋಬೊ ಅವರು ತಿಳಿಸಿದ್ದಾರೆ.
ಡಾ. ರೊನಾಲ್ಡ್ ಕೊಲಾಸೊ ಅವರು ವಿವಿಧ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮುಖ್ಯವಾಗಿ...
►ಸರಕಾರಿ ವಲಯ
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 2 ಪೊಲೀಸ್ ಸ್ಟೇಷನ್ ಕಟ್ಟಡ ನಿರ್ಮಾಣ ಹಾಗೂ ಅನೇಕ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುಸಜ್ಜಿತ ವಕೀಲರ ಭವನ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಅದೇ ರೀತಿ ಕಂದಾಯ ಇಲಾಖೆಯ ವಿವಿಧ ಕಚೇರಿಗಳಿಗೆ ಅಗತ್ಯ ಸೌಕರ್ಯಗಳನ್ನು ಮಾಡಿಕೊಟ್ಟಿದ್ದಾರೆ. ರಾಜ್ಯದ ಪಂಚಾಯತ್ ರಾಜ್ ಕಟ್ಟಡಗಳಿಗೆ ಪಿಡಬ್ಲ್ಯೂಡಿ ಜಿಲ್ಲಾ ಪಂಚಾಯತ್/ಕಾರ್ಪೊರೇಶನ್ ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡ ನಿರ್ಮಾಣ, ಮೂಲಭೂತ ವ್ಯವಸ್ಥೆ, ರಸ್ತೆ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ.
►ಶಿಕ್ಷಣ ಕ್ಷೇತ್ರ
ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆಗಳ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ವಿಶೇಷವಾಗಿ ನವರತ್ನ ಅಗ್ರಹಾರ ಬೆಂಗಳೂರು ಇಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗೆ 12 ಸಾವಿರ ಚದರ ಅಡಿಗಳ ಕಟ್ಟಡ ನಿರ್ಮಾಣ ಮಾಡಿದ್ದಲ್ಲದೆ, ರಾಜ್ಯದ ವಿವಿಧೆಡೆ ಸರಿಸುಮಾರು 30 ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿದ್ದಾರೆ.
►ಆರೋಗ್ಯ ಕ್ಷೇತ್ರ
ಆರೋಗ್ಯ ಕ್ಷೇತ್ರದಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳ ಜೊತೆಗೂಡಿ ವಿವಿಧ ಆರೋಗ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಸಂಸ್ಥೆಗಳಿಗೆ ಮೂಲಭೂತ ದೇಣಿಗೆ ನೀಡಿದ್ದಾರೆ.
►ಧಾರ್ಮಿಕ ಕ್ಷೇತ್ರ
ಓರ್ವ ನಿಷ್ಠಾವಂತ ಕ್ರೈಸ್ತ ಅನುಯಾಯಿ ಆಗಿದ್ದುಕೊಂಡು ಸರ್ವಧರ್ಮ ಸಮಭಾವ ನೀತಿಯಂತೆ ಬೆಂಗಳೂರಿನ ಬೋವಿಪಾಳ್ಯ- ಅಗ್ರಹಾರದಲ್ಲಿ ಮುನೀಶ್ವರ ದೇವಸ್ಥಾನವನ್ನು ನಿರ್ಮಿಸಲು ಪ್ರಮುಖ ಆರ್ಥಿಕ ದಾನಿಯಾಗಿದ್ದಾರೆ. 700 ವರ್ಷಗಳ ಹಿಂದಿನ ಸಿಂಗಾರಹಳ್ಳಿ-ಬೆಂಗಳೂರಿನಲ್ಲಿನ ಮದ್ದೂರಮ್ಮ ದೇವಸ್ಥಾನ ಕಟ್ಟಲು ಕೊಡುಗೆ ನೀಡಿದ್ದಾರೆ ಹಾಗೂ ಮಂಗಳೂರಿನ ಶ್ರೀ ಸೂರ್ಯನಾರಾಯಣ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಅತ್ಯಂತ ಹೆಚ್ಚು ಕೊಡುಗೆ ನೀಡಿದ್ದಾರೆ. ರಾಜ್ಯದ ಬೇರೆ ಬೇರೆ 35 ದೇವಸ್ಥಾನಗಳಿಗೆ, ಮಸೀದಿ ನಿರ್ಮಾಣಕ್ಕೆ ವಿವಿಧ ರೀತಿಯ ಆರ್ಥಿಕ ನೆರವು, ಚರ್ಚ್ ಕಟ್ಟಡ ನಿರ್ಮಾಣಕ್ಕೆ ಮತ್ತು ಮೂಲಭೂತ ಸೌಕರ್ಯಕ್ಕೆ ದೇಣಿಗೆ ನೀಡಿದ್ದಾರೆ.
ಕರ್ನಾಟಕದಾದ್ಯಂತ ಹಲವು ಮಂದಿಗೆ ಸಂಪೂರ್ಣ ಮನೆ ನಿರ್ಮಾಣ ಮಾಡಿಕೊಟ್ಟಿದಾರೆ ಹಾಗೂ ರೈತರಿಗೆ ಮತ್ತು ಗ್ರಾಮಸ್ಥರಿಗೆ ಕೂಡಾ ಮನೆ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ.
ಮಂಗಳೂರಿನ ಕೊಂಕಣಿ ಕಲಾ ಕೇಂದ್ರ ಕಟ್ಟಡ, ಮಾಂಡ್ ಸೊಬಾಣ್ ಕೊಂಕಣಿ, ವಿಶ್ವ ಕೊಂಕಣಿ ಕೇಂದ್ರಗಳಿಗೆ ಮತ್ತು ಕೊಂಕಣಿ ಕಲಾವಿದರಿಗೆ, ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಾಯ ಮಾಡಿದ್ದಾರೆ.
►ಸಂತ್ರಸ್ತರಿಗೆ ಸಹಾಯ, ವ್ಯಕ್ತಿಗತ ಸಹಾಯ
ಕಲೆ ಮತ್ತು ಸಂಸ್ಕೃತಿ, ವಿವಿಧ ಪ್ರಾಕೃತಿಕ ವಿಕೋಪ ನಡೆದಾಗ ಕರ್ನಾಟಕ ಸರಕಾರಕ್ಕೆ ಪರಿಹಾರ ನಿಧಿ ನೀಡಿದ್ದಲ್ಲದೆ ಕೊರೋನ ಸಂದರ್ಭದಲ್ಲಿ 18 ಸಾವಿರ ಕುಟುಂಬಗಳಿಗೆ ಅಗತ್ಯ 20 ದಿನಸಿ ವಸ್ತುಗಳ ಬ್ಯಾಗುಗಳನ್ನು ವಿತರಿಸಿದ್ದಾರೆ.
ಇದೇ ರೀತಿ ಕ್ರೀಡಾ ಕ್ಷೇತ್ರ, ಸಮುದಾಯ ಭವನಗಳ ನಿರ್ಮಾಣ ಸಾಮೂಹಿಕ ವಿವಾಹ ವಿವಿಧ ಸಂಘಟನೆಗಳ ಸೇವಾ ಕಾರ್ಯಕ್ರಮ, ಮಹಿಳಾ ಸುರಕ್ಷತಾ ಯೋಜನೆಗಳು ಸಾರ್ವಜನಿಕ ಬಸ್ ನಿಲ್ದಾಣ ಮತ್ತು ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಯುವ ಜನರಿಗಾಗಿ ಕೌಶಲ್ಯಾಭಿವೃದ್ಧಿ ಯೋಜನೆಗಳು ವಿದ್ಯುತ್ ಸರಬರಾಜು ಇಲಾಖೆಗೆ ಅಗತ್ಯ ಕೊಡುಗೆ, ಸ್ಮಶಾನಗಳ ಅಭಿವೃದ್ಧಿ ಹೀಗೆ ಸಮಾಜದ ಎಲ್ಲಾ ವರ್ಗ ಜಾತಿ ಸಮುದಾಯ ಮತ್ತು ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡಿದ್ದಾರೆ.
ಅವರ ಸೇವಾ ಕಾರ್ಯದಲ್ಲಿ ಯಾವುದೇ ಸಂದರ್ಭದಲ್ಲಿಯೂ ಜಾತಿ-ಮತ-ಭೇದವನ್ನು ಮಾಡದಿರುವುದು ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಅವರ ಈ ಕಾರ್ಯಕ್ಕೆ ಅನೇಕ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಗೌರವ ದೊರಕಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದ ಡಾ. ರೊನಾಲ್ಡ್ ಕೊಲಾಸೊ ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದ ನಂತರ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋದರು. ವಿವಿಧ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅವರು ನಂತರದ ದಿನಗಳಲ್ಲಿ ಸ್ವತಃ ಉದ್ಯಮ ಆರಂಭಿಸಿದರು.
ತಮ್ಮ ದುಡಿಮೆಯಲ್ಲಿ ಒಂದು ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವುದಾಗಿ ಸಣ್ಣ ವಯಸ್ಸಿನಲ್ಲೇ ಸಂಕಲ್ಪ ಮಾಡಿ ಅದರಂತೆ ನಡೆದು ಬರುತ್ತಿದ್ದಾರೆ. ಅವರು ಶಿಕ್ಷಣ, ಆರೋಗ್ಯ, ಕ್ರೀಡೆ, ಧಾರ್ಮಿಕ, ಮೂಲಭೂತ ಸೌಕರ್ಯ ಸೇರಿದಂತೆ 23ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಲವಾರು ಸೇವಾ ಹಾಗೂ ದತ್ತಿ ಕಾರ್ಯಗಳನ್ನು ನಡೆಸಿದ್ದಾರೆ.
ಎಲೆಮರೆಯ ಕಾಯಿಯಂತಿದ್ದು, "ಕೆರೆಯ ನೀರನ್ನು ಕೆರೆಗೆ ಚೆಲ್ಲು" ಎಂಬಂತೆ ಸಮಾಜಸೇವಾ ಕಾರ್ಯಗಳಿಗೆ ಸಹಾಯಹಸ್ತ ಚಾಚುತ್ತಾ ಬಂದಿದ್ದಾರೆ. ಬಹರೈನ್‌ನಲ್ಲಿ ನಿರ್ಮಾಣವಾಗಿರುವ 'ಕನ್ನಡ ಭವನ'ವು ವಿದೇಶದಲ್ಲಿರುವ ಮೊತ್ತಮೊದಲ ಕನ್ನಡ ಭವನವಾಗಿದ್ದು, ಇದಕ್ಕಾಗಿ ದೊಡ್ಡಮೊತ್ತದ ದೇಣಿಗೆ ನೀಡಿ ಇದರ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾಗಿದ್ದಾರೆ.
ಡಾ. ರೊನಾಲ್ಡ್ ಕೊಲಾಸೊ ಅವರ ಸಮಾಜಸೇವಾ ಚಟುವಟಿಕೆಗಳು, ದತ್ತಿ ಕಾರ್ಯಗಳು ಹಾಗೂ ವೃತ್ತಿಪರತೆಯನ್ನು ಗೌರವಿಸಿ ರಾಜ್ಯ, ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಅವರನ್ನು ತಾವಾಗಿಯೇ ಅರಸಿ ಬಂದಿವೆ.
ಯೂರೋಪಿಯನ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿಯ ಪ್ರೊಫೆಷನಲ್ ಡಾಕ್ಟರೇಟ್, "ಕೆನರಾ ವರ್ಲ್ಡ್ ವಿಷನರಿ" ಪ್ರಶಸ್ತಿಗೆ ಪಾತ್ರವಾಗಿದ್ದಕ್ಕಾಗಿ ಕೆನಡಾ ಸರ್ಕಾರದ ಗೌರವ ಹಾಗೂ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನ "ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್" ಇವು ಅವರಿಗೆ ಸಂದಿರುವ ಗೌರವಗಳ ಒಂದೆರಡು ಉದಾಹರಣೆಗಳು ಮಾತ್ರವಾಗಿವೆ.
ಪತ್ನಿ ಜೀನ್ ಕೊಲಾಸೊ ಹಾಗೂ ಕುಟುಂಬದ ಇತರ ಸದಸ್ಯರ ಬೆಂಬಲದೊಂದಿಗೆ ಡಾ. ರೊನಾಲ್ಡ್ ಕೊಲಾಸೊ ಜನಸೇವಾ ಕಾರ್ಯಗಳಲ್ಲಿ ಅವಿರತವಾಗಿ ಇಂದಿಗೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಸಮಾಜ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ, ಗೌರವಿಸಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ ಕೊಲಾಸೊ ಅವರ ಮಾನವೀಯ, ಸಂವೇದನಾಶೀಲ 'ವ್ಯಕ್ತಿತ್ವವನ್ನು ಸಮಾಜಕ್ಕೆ ಪರಿಚಯಿಸಿ ನಾವೆಲ್ಲರೂ ಒಟ್ಟಿಗೆ ಸೇರಿ ಅವರನ್ನು ಅಭಿನಂದಿಸೋಣ ಎಂದು ಮಾಜಿ ಶಾಸಕ ಜೆ.ಆರ್.ಲೊಬೊ ತಿಳಿಸಿದ್ದಾರೆ.