ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದರೆ ಸಿ.ಟಿ.ರವಿ?
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್, ಚರ್ಚೆ
ಭಟ್ಕಳ, ಫೆ.22: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮೂರು ದಿನಗಳ ಹಿಂದೆ ಭಟ್ಕಳದಲ್ಲಿ ಮಾಂಸಾಹಾರ ಸೇವಿಸಿ ನಾಗಬನ ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.
ಫೆ.19ರಂದು ಛತ್ರಪತಿ ಶಿವಾಜಿ ಜಯಂತಿಯ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರವಾರಕ್ಕೆ ಭೇಟಿ ನೀಡಿದ್ದ ಸಿ.ಟಿ.ರವಿ ಮಧ್ಯಾಹ್ನ ಕಾರ್ಯಕ್ರಮ ಮುಗಿಸಿ ಭಟ್ಕಳಕ್ಕೆ ತೆರಳಿದ್ದರು. ಅಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕರ ಶಿರಾಲಿಯ ಮನೆಯಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರ ಜೊತೆ ಮಾಂಸಾಹಾರ ಸೇವಿಸುತ್ತಿರುವುದೆನ್ನಲಾದ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿರಾಲಿಯಲ್ಲಿ ಊಟ ಸೇವಿಸಿದ ಬಳಿಕ ಸಿ.ಟಿ.ರವಿ ನಗರ ಭಾಗದಲ್ಲಿರುವ ಇತ್ತೀಚಿಗೆ ಪುನರ್ ಸ್ಥಾಪಿಸಲಾದ ರಾಜಾಂಗಣ ನಾಗಬನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೆ ಸಮೀಪದ ಕರಿಬಂಟ ದೇವಸ್ಥಾನಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸದೂಟ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಸಿ.ಟಿ.ರವಿ ಸೇರಿದಂತೆ ಬಿಜೆಪಿಯ ನಾಯಕರು ತೀವ್ರ ಟೀಕೆ ಮಾಡಿದ್ದರು. ಇದೀಗ ಸಿ.ಟಿ. ರವಿ ಮಾಂಸಾಹಾರ ಸೇವಿಸಿ ನಾಗಬನ, ಕರಿಬಂಟ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಎಷ್ಟು ಸರಿ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.