ಸಾಹಿತ್ಯವೆಂಬ ಸರಕು
ಈಗ ಯಾವನೇ ವ್ಯಕ್ತಿಯನ್ನು ಯಾವುದೇ ಪದವಿಗೆ ಆರಿಸುವಾಗಲೂ ಆತನ ರಾಜಕೀಯ ನಿಲುವನ್ನು ಅಳೆಯಲಾಗುತ್ತದೆ. ಅಂತಹ ನಿರ್ಣಯಗಳನ್ನು ನೀಡುವವರನ್ನು ತಿರಸ್ಕರಿಸಿದರೆ ಸಹಿಸಬಹುದು. ಆದರೆ ಎಲ್ಲಕಡೆಯೂ ಒಂದೇ ಬೌದ್ಧಿಕ ತಳಹದಿಯ ವ್ಯಕ್ತಿಗಳನ್ನು ಆರಿಸಿದರೆ ಅದರಲ್ಲಿ ವೈವಿಧ್ಯವೆಲ್ಲಿ? ವೈಶಿಷ್ಟ್ಯವೆಲ್ಲಿ? ಸಾಹಿತ್ಯ ಸಮ್ಮೇಳನಗಳನ್ನು, ಅಕಾಡಮಿಗಳನ್ನು, ಪ್ರಾಧಿಕಾರಗಳನ್ನು, ರಂಗಸಂಸ್ಥೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕಾದಲ್ಲಿ ಜಾತಿ, ಮತ, ಧರ್ಮ ಪ್ರಭಾವ ಬೀರಿದರೆ ಅದರ ಪರಿಣಾಮ ಭೀಕರವಾದೀತು. ಅದು ಅಪರಿಹಾರ್ಯ ತೊಂದರೆಯನ್ನು ನೀಡೀತು.
ಸಾಹಿತ್ಯವು ಸಿದ್ಧಾಂತದ ಪ್ರತಿಪಾದನೆಗಾಗಿ ಸೃಷ್ಟಿಯಾಗುವುದಿಲ್ಲ; ಸೃಷ್ಟಿಯಾಗಬಾರದು. ಒಂದು ವೇಳೆ ಸಿದ್ಧಾಂತದ ಪ್ರತಿಪಾದನೆಗಾಗಿ ಸೃಷ್ಟಿಯಾದ ಬರಹ ಸಾಹಿತ್ಯವಾಗಲು ಸಾಧ್ಯವಿಲ್ಲ. ರೂಢಿಯಲ್ಲಿ ಬಳಕೆಗೆ ಬೇಕಾದ ಎಲ್ಲಾ ವಸ್ತು-ಸರಕು-ಸಾಧನಗಳನ್ನು ‘ಸಾಹಿತ್ಯ’ವೆಂದು ಕರೆಯಲಾಗುತ್ತದೆ. ಪೂಜಾ ಸಲಕರಣೆಗಳನ್ನು ಪೂಜಾಸಾಹಿತ್ಯ, ಅಡುಗೆಯ ಪರಿಕರಗಳನ್ನು ಪಾಕಸಾಹಿತ್ಯ, ಹೀಗೆ ಉಲ್ಲೇಖಿಸುವುದುಂಟು. ಆದರೆ ಜನಪ್ರಿಯವಾದ ಅರ್ಥದಲ್ಲಿ ಸಾಹಿತ್ಯವೆಂದರೆ ಲೋಕಹಿತಕ್ಕಾಗಿ, ಜೀವಹಿತಕ್ಕಾಗಿ ಸೃಷ್ಟಿಸಲ್ಪಟ್ಟ ಬರಹವೆಂದು ಕರೆಯಲಾಗುತ್ತದೆ. ಲೋಕಹಿತ, ಜೀವಹಿತಗಳು ಸಿದ್ಧಾಂತಗಳಲ್ಲ, ಅವು ಸಂವೇದನೆಗೆ ಸಂಬಂಧಿಸಿದವುಗಳು. ಆದ್ದರಿಂದ ನೈಜಸಾಹಿತ್ಯವು ತತ್ವ-ಸಿದ್ಧಾಂತಗಳನ್ನು ಮೀರಿ ಜೀವಪರವಾಗಿರಬೇಕಾಗುತ್ತದೆ. ಅದು ಅಂತಿಮ ಗುರಿ, ಉದ್ದೇಶಗಳ ಅರಿವಿಲ್ಲದೆ ತಯಾರಾಗುವ ವೈಜ್ಞಾನಿಕ ಪ್ರಯೋಗವಲ್ಲ. ಅಣುಬಾಂಬಿನ ಪ್ರಯೋಗದ ಅರಿವಿಲ್ಲದೆಯೇ ಅಣುವಿಜ್ಞಾನ ನಡೆಯುತ್ತದೆ. ಶಕ್ತಿಶಾಲಿ ತಾಮಸಿಯೊಬ್ಬ ಅದನ್ನು ಮಾರಕಾಸ್ತ್ರವಾಗಿ ಪರಿವರ್ತಿಸುತ್ತಾನೆ. ಅಸಂಖ್ಯ ಜೀವಿಗಳು ಅದಕ್ಕೆ ಬಲಿಯಾಗುತ್ತಾರೆ. ಕೀಟನಾಶಕವೂ ಹೀಗೆಯೇ. ಸದುದ್ದೇಶದಿಂದ ತಯಾರಾದರೂ ವ್ಯಾಪಾರ-ವ್ಯವಹಾರಗಳ ಸಂಚಿನಲ್ಲಿ ಅದು ಜೀವನಾಶಕವಾಗುತ್ತದೆ.
ಒಬ್ಬ ವ್ಯಕ್ತಿಯನ್ನು, ವಿಶೇಷವಾಗಿ ಲೇಖಕರನ್ನು ನೀವು ಯಾಕೆ ಗೌರವಿಸುತ್ತೀರಿ? ಅವರ ಬರಹಗಳಿಗಾಗಿ. ಆದರೆ ಅವರ ಬರಹಗಳು ಎಷ್ಟೇ ಚೆನ್ನಾಗಿರಲಿ, ಅವರ ನಡವಳಿಕೆ ಚೆನ್ನಾಗಿಲ್ಲದಿದ್ದರೆ ಅವರ ಬರಹವನ್ನು ಮೆಚ್ಚುವಾಗಲೂ ಅವರ ವ್ಯಕ್ತಿತ್ವವನ್ನು ನೀವು ಅಪಹಾಸ್ಯಮಾಡುತ್ತಿರಿ; ಖಂಡಿಸುತ್ತೀರಿ. ಎಷ್ಟೇ ಒಳ್ಳೆಯವನಾದರೂ ಆತನ ಬರಹಗಳು ಚೆನ್ನಾಗಿಲ್ಲದಿದ್ದರೆ ಎಷ್ಟೇ ಜನಪ್ರಿಯನಾಗಿದ್ದರೂ ಆತನನ್ನು ನೀವು ಸಜ್ಜನ ಎನ್ನುತ್ತೀರೇ ಹೊರತು ಸಾಹಿತಿಯೆಂದಲ್ಲ. ಜನಪ್ರಿಯತೆಯನ್ನು ಮಾನದಂಡವಾಗಿಟ್ಟುಕೊಂಡ ಒಂದಷ್ಟು ಮಂದಿ ಹಿಂಬಾಲಕರು ಮಾತ್ರ ಆತನ ಸಾಹಿತ್ಯವನ್ನು ಟಾಂಟಾಂ ಮಾಡುತ್ತಿರುತ್ತಾರೆ. ಎಷ್ಟೋ ಹಗುರು ಬರಹಗಾರರು ತಮ್ಮ ಆಯಕಟ್ಟಿನ ಸ್ಥಾನಮಾನದಿಂದಾಗಿ, ಉನ್ನತ ಪದವಿಯಿಂದಾಗಿ ತಮ್ಮದಲ್ಲದ ಅಥವಾ ತಮಗೆ ಸಲ್ಲದ ಖ್ಯಾತಿಯನ್ನು ಪಡೆಯುವುದೂ ಉಂಟು. ಇದಕ್ಕೆ ಪರ್ಯಾಯವಾಗಿ ಅನೇಕ ಒಳ್ಳೆಯ ಬರಹಗಾರರೂ ತಮ್ಮ ತತ್ವ ಸಿದ್ಧಾಂತಗಳ ಪರಿಣಾಮವಾಗಿ ಜನಪ್ರಿಯತೆಯಿಂದ ವಂಚಿತರಾಗುತ್ತಾರೆ. ಆದರೆ ಅದೇ ಕಾರಣಕ್ಕಾಗಿ ಅವರನ್ನು ಓದುವ ಒಂದು ವರ್ಗವೂ ಸೃಷ್ಟಿಯಾಗುತ್ತದೆ. ಒಂದುವೇಳೆ ಅವರು ತಮ್ಮ ಸೈದ್ಧಾಂತಿಕ ನಿಲುವುಗಳನ್ನು ಬದಲಾಯಿಸಿಕೊಂಡರೆಂದರೆ ಈ ಹಿಂಬಾಲಕ ವರ್ಗವು ಅವರನ್ನು ತೊರೆಯುತ್ತದೆ ಮಾತ್ರವಲ್ಲ ತಿರಸ್ಕರಿಸುತ್ತದೆ. ಸುಮಾರಾಗಿ ಈ ಎರಡೂ ಪಂಕ್ತಿಯ ಬರಹಗಾರರು ಪಕ್ಷ ಕಾರಣವಾಗಿಯೇ ಗೆದ್ದ ರಾಜಕೀಯ ನಾಯಕರಂತಿರುತ್ತಾರೆ.
ಯಾವೊಬ್ಬ ಸಾಹಿತಿಯನ್ನು ಅವನ ಸಿದ್ಧಾಂತಕ್ಕಾಗಿ ಗೌರವಿಸುವವರಿಗೆ ಸಾಹಿತ್ಯದ ಸೂಕ್ಷ್ಮಗಳ ಪರಿವೆಯಿರುವುದಿಲ್ಲ, ಅರಿವಿರುವುದೂ ಇಲ್ಲ. ಅದು ಅಂತಹ ಸಾಹಿತಿ ಎಷ್ಟೇ ಚೆನ್ನಾಗಿ ಬರೆದರೂ ಆತನನ್ನು ಸಾಹಿತ್ಯೇತರ ಅಥವಾ ಸೈದ್ಧಾಂತಿಕ ಕಾರಣಕ್ಕಾಗಿ ಕೆಲವರ ಮಿತ್ರನನ್ನಾಗಿಯೂ ಕೆಲವರ ವೈರಿಯಾಗಿಯೂ ಬೆಳೆಸುತ್ತದೆ; ಉಳಿಸುತ್ತದೆ. ಬ್ರೆಕ್ಟ್ ಅತ್ಯುತ್ತಮ ನಾಟಕಗಳನ್ನು ಬರೆದ. ಆದರೆ ಆತನ ಅತಿಎಡಪಂಥದ ಸಿದ್ಧಾಂತದ ಒಲವಿನಿಂದಾಗಿ, ನಿಲುವಿನಿಂದಾಗಿ ಪ್ರತ್ಯೇಕವಾಗಿಸಿತು. ಆತನ ಸಾಹಿತ್ಯವನ್ನು ಮೆಚ್ಚಿಕೊಂಡವರು ಆತನನ್ನು ಎಡಪಂಥೀಯನೆಂದು ದೂರಮಾಡಿದರು. ಎಡಪಂಥದ ಅಭಿಮಾನಿಗಳು ಆತನ ಸಾಹಿತ್ಯದ ಶ್ರೇಷ್ಠತೆಯನ್ನು, ಜನಪ್ರಿಯತೆಯನ್ನು ತಮ್ಮ ಕಾರ್ಯಸೂಚಿಯ ಅನುಕೂಲಕ್ಕಾಗಿ, ಬೆಳವಣಿಗೆಗಾಗಿ, ಪ್ರಚಾರಕ್ಕಾಗಿ ಬಳಸಿಕೊಂಡರು. ಭಾರತೀಯ ಮತ್ತು ಸದ್ಯ ಇಲ್ಲಿ ಚರ್ಚಿಸಿರುವ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಯೂ ಈ ನಡವಳಿಕೆ ಕಂಡುಬರುತ್ತದೆ. ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ಅನೇಕ ಒಳ್ಳೆಯ ಕಾದಂಬರಿಗಳನ್ನು ಬರೆದರು. ಆದರೆ ಅವರ ತಾತ್ವಿಕ ನಿಲುವು ಬಲಪಂಥೀಯರನ್ನು ಆಕರ್ಷಿಸಿತು ಅನ್ನುವುದಕ್ಕಿಂತಲೂ ಬಲಪಂಥೀಯರಿಗೆ ಅನುಕೂಲಕರವಾಗಿ ಪರಿಣಮಿಸಿತು. ಅವರು ಈ ಸಾಹಿತ್ಯವನ್ನು ತಮಗೆ ಬೇಕಾದಂತೆ ಬಳಸಲು ಆರಂಭಿಸಿದರು. ಚರಿತ್ರೆ ಯಾವುದು, ಸಾಹಿತ್ಯ ಯಾವುದು ಎಂದು ತಿಳಿಯದವರು ಅವರ ಆವರಣ ಕೃತಿಯನ್ನು ಅನನ್ಯವೆಂದು ಹೊಗಳಿದರು. ಅನನ್ಯ ಹೌದು; ಏಕೆಂದರೆ ಅದು ಅತ್ತ ಚರಿತ್ರೆಯೂ ಆಗಲಿಲ್ಲ; ಇತ್ತ ಕಾದಂಬರಿಯೂ ಆಗಲಿಲ್ಲ. ವೈಚಾರಿಕನೊಬ್ಬನ ಮತಾಂಧ ಪ್ರಣಾಳಿಕೆಯಂತಿತ್ತು. ಇದರಿಂದಾಗಿ ಅವರ ಸಾಹಿತ್ಯ ಮೌಲ್ಯವು ಒಂದು ಗೊತ್ತಾದ ಜನಸಮೂಹಕ್ಕೆ ತಾರಾಮೌಲ್ಯವಾಗಿ ಬದಲಾಯಿತು. ಅವರ ಆರಂಭದ ಶಕ್ತ ಕಾದಂಬರಿಗಳಾದ ‘ವಂಶವೃಕ್ಷ’ವನ್ನು ಯಾರನ್ನು ಆನಂತರ ಅರ್ಬನ್ ನಕಲ್ಸರೆಂದು ಹಳಿಯಲಾಯಿತೋ ಅಂತಹ ಗಿರೀಶ್ ಕಾರ್ನಾಡ್ ಮತ್ತಿತರ ಜಾತ್ಯತೀತ ಮತ್ತು ಪ್ರಗತಿಪಂಥದವರೇ ಚಲನಚಿತ್ರವಾಗಿಸಿದರು. ಅವರ ‘ತಬ್ಬಲಿಯು ನೀನಾದೆ ಮಗನೇ’ ಕೂಡಾ ಹೀಗೆಯೇ ಚಲನಚಿತ್ರವಾಯಿತು. ಕೃತಿಗೆ ಸಿದ್ಧಾಂತದ ಹಂಗಿರಲಿಲ್ಲ.
ಒಂದು ವೇಳೆ ಅವುಗಳಲ್ಲಿ ಸೂಕ್ಷ್ಮ ಸಂದೇಶಗಳಿದ್ದರೂ ಅವು ಕೃತಿಯ ಸಂವೇದನಾಶೀಲ ಸಾಹಿತ್ಯಕ ಗುಣಲಕ್ಷಣಗಳಿಂದಾಗಿ ಮುಚ್ಚಿಹೋದವು. ಆದರೆ ಅವರ ‘ಆವರಣ’, ‘ಕವಲು’, ‘ಯಾನ’, ‘ಉತ್ತರಕಾಂಡ’ದಂತಹ ಇತ್ತೀಚೆಗಿನ ಸಿದ್ಧಾಂತ-ಪ್ರತಿಪಾದಕ ಕಾದಂಬರಿಗಳ ಹೊತ್ತಿಗೆ ಅವರು ತಥಾಕಥಿತ ಬಲಪಂಥೀಯ ಅಥವಾ ಇನ್ನೂ ಸ್ಪಷ್ಟವಾಗಿ ಕೋಮುವಾದದ ಪರವಾಗಿ ನಿಂತ ಸಾಹಿತಿಯಾದರು. ಇದರಿಂದಾಗಿ ಅವರ ಎಲ್ಲಾ ಒಳ್ಳೆಯ ಕೃತಿಗಳನ್ನೂ ಸಂಶಯದಿಂದ ಕಾಣುವ, ಅಪಮೌಲ್ಯಗೊಳಿಸುವ ಒಂದು ಪ್ರವೃತ್ತಿ ಸಾಹಿತ್ಯಾಭಿಮಾನಿಗಳಲ್ಲಿ ಬೆಳೆಯಿತು. ಇನ್ನೊಂದೆಡೆ ಅವರನ್ನು ಎಂದೂ ಸಾಹಿತ್ಯದ ಕಾರಣಕ್ಕಾಗಿ ಓದಿರದ ಮಂದಿ ಅವರನ್ನು ತಮ್ಮ ನಾಯಕರಂತೆ ಮೆರವಣಿಗೆ ಮಾಡಲು ಸಿದ್ಧರಾದರು. ಅವರಿಗೆ ಜ್ಞಾನಪೀಠದಂತಹ ಪ್ರಶಸ್ತಿಯನ್ನು ಕೊಡಬಾರದೆಂದು ಒಂದು ವರ್ಗ ಒತ್ತಾಯಿಸಿದರೆ ಅವರಿಗೆ ಕೊಡಬೇಕೆಂದು ಇನ್ನೊಂದು ವರ್ಗ ಒತ್ತಾಯಿಸಲಾರಂಭಿಸಿತು. ಎರಡೂ ಸಾಹಿತ್ಯೇತರ ಕಾರಣಗಳೇ. ಆದರೆ ಒಂದರಲ್ಲಿ ಅವರ ವೈಚಾರಿಕ ವಿಕೃತಿಯು ಕಾರಣವಾದರೆ ಇನ್ನೊಂದರಲ್ಲಿ ಅವರಿಂದ ಬಲಪಂಥೀಯ ಮತ್ತು ಮತಾಂಧ ಧ್ರುವೀಕರಣಕ್ಕೆ ಎಷ್ಟು ಅನುಕೂಲವಾಗುತ್ತದೆಂಬ ತರ್ಕವು ಕಾರಣವಾಯಿತು. ಆಳುವವರು ಸಾಹಿತ್ಯ-ಸಂಗೀತ ಮುಂತಾದ ಕಲೆಗಳಲ್ಲಿ ತಮಗೆ ಅನುಕೂಲವಾಗಬಲ್ಲ ವೈಚಾರಿಕತೆಯಿರಬೇಕೆಂದು ಬಯಸಬಾರದು. ಹೀಗಾದರೆ ಅನ್ಯ ಮತೀಯರು ಹಿಂದೂ ಪುರಾಣವನ್ನಾಧರಿಸಿದ ಯಾವುದೇ ಕಲೆಯನ್ನು ಗೌರವಿಸಬಾರದು; ಹಾಗೆಯೇ ಹಿಂದೂಗಳು ಇತರ ಮತಗಳನ್ನಾಧರಿಸಿದ ಕಲೆಯನ್ನು ತಿರಸ್ಕರಿಸಬೇಕು. ಇದು ಸಂವೇದನಾರಹಿತ ಭಾವನೆ ಮತ್ತು ಸಿದ್ಧಾಂತ. ತಾಜ್ಮಹಲಿನಂತಹ ಶಿಲ್ಪವನ್ನು ಅದನ್ನು ಮುಸ್ಲಿಮ್ ಅರಸನೊಬ್ಬ ನಿರ್ಮಿಸಿದ್ದಾನೆಂಬ ಕಾರಣಕ್ಕೆ ಅಥವಾ ಅದು ಮುಸ್ಲಿಮ್ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತದೆಂಬ ಕಾರಣಕ್ಕೆ ನಾಶಮಾಡಬೇಕೆಂದು ಕರೆಕೊಟ್ಟರೆ ಅದು ಕಲೆಯ ದೃಷ್ಟಿಯಿಂದ ಒಂದು ಪೈಶಾಚಿಕ ಕೆಲಸವಾದೀತು. ಅಜಂತಾ ಎಲ್ಲೋರಾದ ಅಥವಾ ಖಜುರಾಹೋವಿನ ಶಿಲ್ಪಗಳು ಯಾವುದೇ ಜಾತಿ, ಮತ, ಧರ್ಮದ ಪ್ರತಿನಿಧಿಗಳಲ್ಲ; ಅವು ಕಲೆಯ, ಭಾರತೀಯ ಸಂಸ್ಕೃತಿಯೆಂದು ನಾವು ಸಾಮಾನ್ಯ ಅರ್ಥದಲ್ಲಿ ಕರೆಯುವ ಬದುಕಿನ ಸಂಕೇತಗಳು. ಶೀಲ-ಅಶ್ಲೀಲವನ್ನು ಮೀರದೆ ಯಾವುದೂ ಕಲೆಯಾಗಲು ಸಾಧ್ಯವಿಲ್ಲ.
ಆಳುವವರು ಕಲೆ, ಸಂಸ್ಕೃತಿಯ ಅಭಿವ್ಯಕ್ತಿಯಲ್ಲಿ ತಮ್ಮ ಅನುಕೂಲವನ್ನು ಸಾಧಿಸಹೊರಟರೆ ಏನಾಗುತ್ತದೆಂಬುದಕ್ಕೆ ಅಫ್ಘಾನಿಸ್ತಾನದ ಬಾಮಿಯಾನ್ ಬುದ್ಧ ಒಳ್ಳೆಯ ಉದಾಹರಣೆ. ಅದನ್ನು ಟೀಕಿಸಿದವರೇ ಈಗ ಭಾರತದಲ್ಲಿ ಅಂತಹ ಕ್ರಮಕ್ಕೆ ಮುಂದಾಗುತ್ತಿರುವುದು ಇತಿಹಾಸದ ವ್ಯಂಗ್ಯ. ದೇಶದೆಲ್ಲೆಡೆ ಈಗ ಮತೀಯ ಅಭಿವ್ಯಕ್ತಿಗೆ ಎಲ್ಲೆಡೆ ಮನ್ನಣೆ. ಪರಸ್ಪರ ಮತೀಯ ಕಲಹಗಳಿಗೆ ಕುಮ್ಮಕ್ಕು ಕೊಟ್ಟರೆ ಮತಗಳು ಸಿಕ್ಕಾವು. ಆದರೆ ಕಲೆ ಸತ್ತಾವು. ಎಲ್ಲಿ ಕಲಾವಿದರು ಈ ಮತೀಯತೆಯನ್ನು ಮೀರಿ ಕಲಾಸೃಷ್ಟಿಗೆ ತೊಡಗುವುದಿಲ್ಲವೋ ಆಗ ಕಲೆಯ ಸಂಧ್ಯೆ ಸಮೀಪಿಸುತ್ತದೆ. ರವೀಂದ್ರರನ್ನು, ಗಂಗೂಬಾಯಿಯವರನ್ನು ಯಾವ ಕಾರಣಕ್ಕೆ ಮೆಚ್ಚುತ್ತೇವೆಯೋ ಅದೇ ಕಾರಣಕ್ಕೆ ಮಾಂಟೋ, ಬಿಸ್ಮಿಲ್ಲಾಖಾನ್ರನ್ನು ಮೆಚ್ಚಿದರೆ ಮಾತ್ರ ನಮ್ಮ ಕಲಾಭಿಮಾನವು ಸಾರ್ಥಕ. ಅವರ್ಯಾರೂ ತಮ್ಮ ಕಲೆಯನ್ನು ತಮ್ಮ ತಮ್ಮ ಜಾತಿಯ, ಪಂಥದ ಉದ್ಧಾರಕ್ಕೆ ಬಳಸಿದವರಲ್ಲ. ಇತ್ತೀಚೆಗೆ ಕಲೆಯನ್ನು ಒಂದು ಮಾರುಕಟ್ಟೆಯ ಸರಕಿನಂತೆ ಬಳಸುವುದು ಪ್ರತ್ಯಕ್ಷವಾಗಿ ಗೋಚರಿಸುತ್ತದೆ. ಬರಹಗಾರರಂತೂ ತಮ್ಮ ಕೃತಿಗಳನ್ನು ಹೇಗೆ ವೈಭವೀಕರಿಸುತ್ತಿದ್ದಾರೆಂದರೆ ಅವರೆದುರು ನಮ್ಮ ಬೀಡಿ-ಸಿಗರೇಟಿನ ಜಾಹೀರಾತುಗಳೂ ಮಸುಕಾಗುತ್ತವೆ. ತಾನು ಶ್ರೇಷ್ಠ ಮಾತ್ರವಲ್ಲ, ತಾನು ಇತರರಿಗಿಂತ ಹೇಗೆ ಹೆಚ್ಚು ಶ್ರೇಷ್ಠ ಎಂಬುದನ್ನು ಸಾಬೀತುಪಡಿಸುವಂತಿರುತ್ತದೆ ಅನೇಕರ ಪ್ರಯತ್ನ.
ಇತರರಿಗೆ ಓದಿಸಲು ಪಡುವ ಯಾತನೆಯನ್ನು ಗಮನಿಸಿದರೆ ಹೃದಯವಿದ್ರಾವಕವಾಗಿರುತ್ತದೆ. ಕೆಲವು ಬಾರಿ ಒಳ್ಳೆಯ ಕೃತಿಗಳು ಓದಿನಿಂದ ವಂಚಿತವಾಗುತ್ತವೆ; ಏಕೆಂದರೆ ಅವರು ಯಾವ ಜಾಹೀರಾತಿನ ಪರಿಕರಗಳನ್ನೂ ಸಿದ್ಧಪಡಿಸಿಕೊಂಡಿರುವುದಿಲ್ಲ. ಇನ್ನು ಕೆಲವು ಸಾಮಾನ್ಯ ಕೃತಿಗಳು ಭಾರೀ ‘ವಿಮರ್ಶೆ’ಗಳನ್ನು ಪಡೆಯುತ್ತವೆ. ನಮ್ಮ ಕಮರ್ಶಿಯಲ್ ಸಿನೆಮಾಗಳನ್ನು ನಾಚಿಸುವಂತೆ ಕೃತಿಗಳನ್ನು ಬಿಡುಗಡೆಗೊಳಿಸುವ ಮೊದಲೇ ಅವುಗಳ ‘ಟ್ರೈಲರ್’ ಗಳನ್ನು ಬಿಡುಗಡೆಗೊಳಿಸುವುದು, ಅವುಗಳನ್ನು ಇತರರಿಂದ ಉಲ್ಲೇಖಿಸುವುದು, ಅವುಗಳ ಬಗ್ಗೆ ಮೆಚ್ಚುಗೆಯ ಬರಹಗಳನ್ನು ನಾಮಧೇಯರಿಂದ ಮತ್ತು ಅನಾಮಧೇಯರಿಂದ ಬಳಸಿ ಪ್ರಸರಿಸುವುದು, ಇಂತಹ ತಂತ್ರಗಳು ಈಗ ಸರ್ವೇ ಸಾಮಾನ್ಯ. ಈ ರೀತಿಯ ಧೋರಣೆಗೆ ಈಗಿರುವ ಮತೀಯ ಪ್ರವೃತ್ತಿ ಒಳ್ಳೆಯ ವೇದಿಕೆಯನ್ನೊದಗಿಸಿದೆ. ರಾಜಕಾರಣಿಗಳನ್ನು ಹೊಗಳುವುದು, ಮೆಚ್ಚಿಸುವುದು, ಅವರೇ ನಮ್ಮ ಕಲಾಸೃಷ್ಟಿಗೆ ಕಾರಣರು ಎಂಬಂತೆ ಆರಾಧಿಸುವುದು ಇಂತಹ ಚಟುವಟಿಕೆಗಳಿಂದಾಗಿ ಕಲೆಯು ವ್ಯಕ್ತಿತ್ವದ ಕಪ್ಪುಕಲೆಯಾಗತೊಡಗಿದೆ. ಈಚೆಗೆ ಎಸ್.ಎಲ್. ಭೈರಪ್ಪನವರು ತಮಗೆ ಪದ್ಮ ಪ್ರಶಸ್ತಿ ಬಂದಾಗ ಇದು ಪ್ರಧಾನಿ ಮೋದಿಯವರಿಂದಾಗಿಯೇ ತನಗೆ ಲಭಿಸಿತು ಎಂಬ (ಅಥವಾ ಎಂಬರ್ಥದಲ್ಲಿ) ಮಾತನಾಡಿದರು. ಇದು ಅವರು ತಮ್ಮ ವ್ಯಕ್ತಿತ್ವಕ್ಕೇ ಮಾಡಿಕೊಂಡ ಅಪಚಾರ. ಅವರಿಗೆ ಭಾಜಪದ ಬೆಂಬಲಿಗರು ಎಂಬ ಕಾರಣಕ್ಕೆ ಈ ಪ್ರಶಸ್ತಿಯನ್ನು ನೀಡಿದ್ದರೆ ಅದು ಸಾಹಿತ್ಯಕ್ಕೆ ಮಾಡಿದ ಅಪಚಾರ. ಇತರ ಸರಕಾರಗಳಿದ್ದಿದ್ದರೆ ಅವರ ಬಲಪಂಥೀಯ ಮತ್ತು ಮತಾಂಧ ಧೋರಣೆಗಳೇ ಕಾರಣವಾಗಿ ಅವರಿಗೆ ಈ ಪ್ರಶಸ್ತಿ ಸಿಕ್ಕುತ್ತಿರಲಿಲ್ಲವೆಂಬುದು ಬೇರೆ ಮಾತು.
ಅವರೇ ತಮ್ಮ ಅಂತಹ ನಿಲುವುಗಳನ್ನು ಸ್ಪಷ್ಟಪಡಿಸಿದಂತಾಗಿದೆ. ಸರಕಾರ ನೀಡುವ ಪ್ರಶಸ್ತಿಗೆ ಹಿಂದೆ ಪಕ್ಷ ರಾಜಕೀಯದ ಬಣ್ಣವಿರುತ್ತಿರಲಿಲ್ಲ. ಅನೇಕ ಬಲಪಂಥೀಯರ ಕೃತಿಗಳು ಕಾಂಗ್ರೆಸ್ ಸರಕಾರವಿದ್ದಾಗ ಬಹುಮಾನ, ಪುರಸ್ಕಾರ, ಪ್ರಶಸ್ತಿಗಳನ್ನು ಪಡೆದಿದ್ದವು. ಕೃತಿಗಳನ್ನಷ್ಟೇ ಗಮನಿಸುತ್ತಿದ್ದರೇ ವಿನಾ ಅದು ಬೆಂಬಲಿಸುವ, ಪ್ರಚೋದಿಸುವ, ಪ್ರೇರೇಪಿಸುವ ರಾಜಕೀಯ, ಸಾಮಾಜಿಕ ನಿಲುವುಗಳನ್ನು ಗಮನಿಸುತ್ತಿರಲಿಲ್ಲ. ಡಿವಿಜಿಯವರ ‘ಭಗವದ್ಗೀತಾ ತಾತ್ಪರ್ಯ’ ಸಾಹಿತ್ಯ ಅಕಾಡಮಿ ಬಹುಮಾನ ಗಳಿಸಿದಂತೆ ಎ.ಎನ್.ಮೂರ್ತಿರಾಯರ ‘ದೇವರು’ ಕೂಡಾ ಸಾಹಿತ್ಯ ಅಕಾಡಮಿ ಬಹುಮಾನವನ್ನು ಪಡೆದಿತ್ತು. ಇವೆರಡೂ ತಾತ್ವಿಕವಾಗಿ ವಿರುದ್ಧ ನಿಲುವುಗಳ ಕೃತಿಗಳು. ನನಗೆ ನೆನಪಿರುವಂತೆ ಆರೆಸ್ಸೆಸ್ನ ಶಿವರಾಮು ಅವರ ಕೃತಿಯೂ (ಪ್ರಾಯಃ ಬಾಬು ಕೃಷ್ಣಮೂರ್ತಿಯವರ ಕೃತಿಯೂ) ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದಿತ್ತು. ಪ್ರಶಸ್ತಿಗೆ ಮೊದಲು ‘‘ನೀವು ಯಾವ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತೀರಿ?’’ ಎಂಬ ನಮೂನೆಯ ಪ್ರಶ್ನೆಯು ಅರ್ಜಿಯಲ್ಲಿ ಇರುತ್ತಿರಲಿಲ್ಲ. ಆದರೆ ಈಗ ಯಾವನೇ ವ್ಯಕ್ತಿಯನ್ನು ಯಾವುದೇ ಪದವಿಗೆ ಆರಿಸುವಾಗಲೂ ಆತನ ರಾಜಕೀಯ ನಿಲುವನ್ನು ಅಳೆಯಲಾಗುತ್ತದೆ. ಅಂತಹ ನಿರ್ಣಯಗಳನ್ನು ನೀಡುವವರನ್ನು ತಿರಸ್ಕರಿಸಿದರೆ ಸಹಿಸಬಹುದು. ಆದರೆ ಎಲ್ಲಕಡೆಯೂ ಒಂದೇ ಬೌದ್ಧಿಕ ತಳಹದಿಯ ವ್ಯಕ್ತಿಗಳನ್ನು ಆರಿಸಿದರೆ ಅದರಲ್ಲಿ ವೈವಿಧ್ಯವೆಲ್ಲಿ? ವೈಶಿಷ್ಟ್ಯವೆಲ್ಲಿ? ಸಾಹಿತ್ಯ ಸಮ್ಮೇಳನಗಳನ್ನು, ಅಕಾಡಮಿಗಳನ್ನು, ಪ್ರಾಧಿಕಾರಗಳನ್ನು, ರಂಗಸಂಸ್ಥೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕಾದಲ್ಲಿ ಜಾತಿ, ಮತ, ಧರ್ಮ ಪ್ರಭಾವ ಬೀರಿದರೆ ಅದರ ಪರಿಣಾಮ ಭೀಕರವಾದೀತು.
ಅದು ಅಪರಿಹಾರ್ಯ ತೊಂದರೆಯನ್ನು ನೀಡೀತು. ಬರಹಗಾರರು ಅನಧಿಕೃತ ಮತ್ತು ಅನಭಿಷಿಕ್ತ ಜನಪ್ರತಿನಿಧಿಗಳೆಂದು ಹೇಳುತ್ತಾರೆ. ಅವರು ತಮ್ಮ ತಮ್ಮ ಕುಲಕೋಟಿಗಳನ್ನು ಉದ್ಧರಿಸುವ ಗೋಜಿಗೆ ಹೋಗಬಾರದು. ಈಗ ಬಹುಪಾಲು ಸಾಹಿತಿಗಳು (ಇತರ ಕಲಾಪ್ರಕಾರಗಳಲ್ಲಿ ಅದು ಇಷ್ಟು ರಾಚುವಂತೆ ಗೋಚರಿಸುವುದಿಲ್ಲ.) ಜಾತಿ, ಮತ, ಪಂಥ, ಧರ್ಮಗಳನ್ನು ಆಧರಿಸಿ ಗುಂಪುಗಳನ್ನು ತಯಾರಿಸುತ್ತಾರೆ. ಯಾವುದೇ ವೇದಿಕೆಯನ್ನು ನೋಡಿದರೆ ಅಲ್ಲಿ ಒಂದು ಗೊತ್ತಾದ ಧೋರಣೆಯವರೇ ಇರುವುದು ಕಾಣುತ್ತದೆ. ಅವರೆಲ್ಲರೂ ಒಕ್ಕೊರಲಿನಲ್ಲಿ ಒಂದೇ ಧಾಟಿಯ ಸ್ವರಾಷ್ಟ್ರಗೀತೆಯನ್ನು ಉಚ್ಚರಿಸುತ್ತಾರೆ. ಮೆಚ್ಚುವುದರಲ್ಲೂ ಒಗ್ಗಟ್ಟು; ಟೀಕಿಸುವುದರಲ್ಲೂ ಒಗ್ಗಟ್ಟು. ಭಿನ್ನತೆಯೇ ಇಲ್ಲ; ಆದ್ದರಿಂದ ವೈವಿಧ್ಯವೂ ಇಲ್ಲ; ವೈಶಿಷ್ಟ್ಯವೂ ಇಲ್ಲ. ಒಟ್ಟಾರೆ ತಮ್ಮ ಸಾಹಿತ್ಯ ಮಾರಾಟವಾಗಬೇಕು; ಮನ್ನಣೆ ಸಿಗಬೇಕು. ಶಾಶ್ವತದ ಪ್ರಶ್ನೆಯೇ ಇಲ್ಲ. ಆ ದಿನದ ಸರಕು ಆದಿನ ಮಾರಾಟವಾಗಬೇಕು. ಮರುದಿನಕ್ಕೆ ಹುಳಿಬಂದರೆ ಮದ್ಯವಾದೀತು; ಪರವಾಗಿಲ್ಲ. ಅಮಲು ಎಂದು ಸೇವಿಸಬಹುದಲ್ಲ!
ಇಂತಹ ಹತ್ತಾರು ಸಂಗತಿಗಳು ಸಿಗುತ್ತವೆ. ಇವೆಲ್ಲವುಗಳಲ್ಲೂ ಸಾಮಾನ್ಯ ಅಂಶವೆಂದರೆ ಪ್ರಚಾರಪ್ರಿಯತೆ. ದಿನಪತ್ರಿಕೆಯ ಹಾಗೆ ದಿನದ ಕಳವಳ. ಕೆಲವು ಮರುದಿನ ತೂಕಕ್ಕೂ ಬೇಡ. ಅಂತಹ ನಿರರ್ಥಕತೆ.