ಯಾವುದೇ ಕಾರಣಕ್ಕೂ ಬೆಂಗಳೂರನ್ನು ಕಸದ ತೊಟ್ಟಿಯಾಗಲು ಬಿಡುವುದಿಲ್ಲ: ಸಿಎಂ ಬೊಮ್ಮಾಯಿ
ಬೆಂಗಳೂರು, ಫೆ.23: ಯಾವುದೇ ಕಾರಣಕ್ಕೂ ಉದ್ಯಾನನಗರಿ ಬೆಂಗಳೂರು ನಗರವನ್ನು ಕಸದ ತೊಟ್ಟಿಯಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗುರುವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಕೇಳಿದ ಪ್ರಶ್ನೆಗೆ ಕಲಾಪದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೆಲವೆಡೆ ಕಸದ ಸಮಸ್ಯೆ ಇರುವುದು ಸತ್ಯ. ಆದರೆ, ಎಲ್ಲ ಕಡೆಗಳಲ್ಲಿ ಈ ಸಮಸ್ಯೆ ಇದೆ ಎನ್ನುವುದು ಸುಳ್ಳು. ಸಮಸ್ಯೆ ಇರುವ ಕಡೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇಡೀ ಬೆಂಗಳೂರನ್ನು ಕಸದ ತೊಟ್ಟಿಯಾಗಿದೆ ಎಂದು ಹೇಳಿ ಬೆಂಗಳೂರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಬೇಡಿ. ಬೆಂಗಳೂರನ್ನು ಕಸದ ತೊಟ್ಟಿಯಾಗಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ 7 ತ್ಯಾಜ್ಯ ಸಂಸ್ಕರಣ ಘಟಕಗಳಿವೆ. ಅದರಲ್ಲಿ ಸೀಗೆಹಳ್ಳಿ ಘಟಕ ಸ್ಥಳೀಯರ ವಿರೋಧದಿಂದ ಸ್ಥಗಿತಗೊಂಡಿದೆ. ಇನ್ನುಳಿದ ದೊಡ್ಡಬಿದರಕಲ್ಲು, ಚಿಕ್ಕನಾಗಮಂಗಲ, ಕೆಸಿಡಿಸಿ, ಲಿಂಗದೀರನಹಳ್ಳಿ, ಕನ್ನಹಳ್ಳಿ ಮತ್ತು ಸುಬ್ಬರಾಯನಪಾಳ್ಯ ಸಂಸ್ಕರಣಾ ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ನಿರ್ವಹಣೆ ಮಾಡುವ ಟೆಂಡರ್ ಪಡೆದಿರುವವರು ಕಡ್ಡಾಯವಾಗಿ ಟೆಂಡರ್ ಷರತ್‍ನ್ನು ಪಾಲಿಸಬೇಕು. ಇಲ್ಲದಿದ್ದರೆ ಅವರಿಗೆ ಹಣ ಪಾವತಿ ಮಾಡುವುದಿಲ್ಲ. ಈ ಸಂಬಂಧವಾಗಿ ಅವ್ಯವಹಾರ ನಡೆಸಿದ್ದರೆ ಅದನ್ನು ಪರಿಶೀಲಿಸಿ ತಕ್ಷಣ ಹಣ ಪಾವತಿ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಅವರು ತಿಳಿಸಿದರು.