ಗುಜರಾತಿನಲ್ಲಿ ಭಾರತದ ಕಾನೂನು ಜಾರಿಯಲ್ಲಿಲ್ಲವೇ?
ಕಳೆದ ಅಕ್ಟೋಬರ್‌ನಲ್ಲಿ ಗುಜರಾತಿನ ಖೇಡಾ ಜಿಲ್ಲೆಯ ಗ್ರಾಮವೊಂದರಲ್ಲಿ ಹಿಂದೂಗಳ ಹಬ್ಬದಾಚರಣೆಗೆ ಕಲ್ಲು ತೂರಿ ಅಡಚಣೆ ಉಂಟು ಮಾಡಿದ ದೂರಿನ ಮೇರೆಗೆ ಪೊಲೀಸರು ಕೆಲವು ಮುಸ್ಲಿಮ್ ತರುಣರನ್ನು ಬಂಧಿಸಿದರು. ದೂರು ಬಂದಾಗ ಅದಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ನಡೆಸುವುದು ಮತ್ತು ಪ್ರಕರಣದ ತನಿಖೆಗೆ ಅಗತ್ಯ ಬಿದ್ದಲ್ಲಿ ಅವರನ್ನು ಬಂಧಿಸಿ ಕೋರ್ಟಿನ ಮುಂದೆ ಹಾಜರು ಪಡಿಸಿ ವಶಕ್ಕೆ ತೆಗೆದುಕೊಳ್ಳುವುದು ಮುಂದಿನ ಕಾನೂನು ಬದ್ಧ ಕ್ರಮಗಳು. ಹಾಗೂ ಮುಂದಿನ ಎರಡು ಮೂರು ತಿಂಗಳಲ್ಲಿ ಆರೋಪಿಗಳ ಅಪರಾಧವನ್ನು ಸಾಬೀತುಪಡಿಸುವ ಸಾಕ್ಷಿ-ಪುರಾವೆಗಳನ್ನು ಸಂಗ್ರಹಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವುದಷ್ಟೇ ಪೊಲೀಸರ ಕರ್ತವ್ಯ. ಅದನ್ನು ಆಧರಿಸಿ ಆರೋಪಿಯು ಅಪರಾಧ ಮಾಡಿದ್ದಾರೆಯೇ ಇಲ್ಲವೇ ಎಂದು ವಿಚಾರಣೆ ನಡೆಸಿ ಅಪರಾಧ ಸಾಬೀತಾದರೆ ಶಿಕ್ಷೆ ವಿಧಿಸುವುದು, ಸಾಬೀತಾಗದಿದ್ದರೆ ಬಿಡುಗಡೆ ಮಾಡುವುದು ನ್ಯಾಯಾಲಯ. ಅಷ್ಟು ಮಾತ್ರವಲ್ಲದೆ, ಅಪರಾಧವು ಸಾಬೀತಾಗುವ ತನಕ ಆರೋಪಿಯನ್ನು ನಿರಪರಾಧಿಯೆಂದೇ ಪರಿಗಣಿಸುವುದು ಹಾಗೂ ಸಾಕ್ಷಿ ನಾಶ ಮಾಡುವ ಸಂಭವವಿದ್ದರೆ ಮತ್ತು ಪರಾರಿಯಾಗುವ ಸಂಭವವಿದ್ದರೆ ಮಾತ್ರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವ ತನಕ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವುದು ಮತ್ತು ಚಾರ್ಜ್ ಶೀಟ್ ಹಾಕಿದ ಮೇಲೆ ಆರೋಪಿಯನ್ನು ಸಾಮಾನ್ಯವಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ನಮ್ಮ ನ್ಯಾಯಸಂಹಿತೆಯ ಮುಖ್ಯ ಲಕ್ಷಣವಾಗಿ ನಡೆದುಕೊಂಡು ಬಂದಿದೆ.
ಈ ಎಲ್ಲಾ ಸಂದರ್ಭಗಳಲ್ಲೂ ಪೊಲೀಸರು ತಮ್ಮ ಪೂರ್ವಾಗ್ರಹಗಳಿಂದಾಗಿ ನಿರಪರಾಧಿ ನಾಗರಿಕರಿಗೆ ಕಿರುಕುಳ ಕೊಡದಂತೆ ನಾಗರಿಕ ಹಕ್ಕುಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಡಿ.ಕೆ. ಬಸು ಪ್ರಕರಣದಲ್ಲಿ ಪೊಲೀಸರಿಗೆ ವಿಸ್ತೃತವಾದ ಸೂಚನೆಗಳನ್ನು ನೀಡಿದೆ ಮತ್ತು ಪೊಲೀಸರು ಯಾವ ಕಾರಣಕ್ಕೂ ಆರೋಪಿಯನ್ನು ಅಪರಾಧಿಯಂತೆ ಪರಿಗಣಿಸದೆ ಅಥವಾ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪೊಲೀಸರೇ ಆರೋಪಿಗಳಿಗೆ ಚಿತ್ರಹಿಂಸೆ ಇತ್ಯಾದಿ ಶಿಕ್ಷೆಗಳನ್ನು ಕೊಡುವುದು ಅಪರಾಧ ಎಂದೂ ಕೂಡ ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿದೆ. ಆದರೆ ಖೇಡಾ ಪ್ರಕರಣದಲ್ಲಿ ಗುಜರಾತ್ ಪೊಲೀಸರು ಈ ಎಲ್ಲಾ ನೀತಿ-ನಿಯಮಗಳನ್ನು ದಾಟಿ ತಾವೇ ದೂರುದಾರರು, ವಕೀಲರು ಮತ್ತು ನ್ಯಾಯಾಲಯವೂ ಆಗಿ ವರ್ತಿಸಿದರು. ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿ, ಸಾಕ್ಷಿ-ಪುರಾವೆಗಳನ್ನು ಸಂಗ್ರಹಿಸಿ ನ್ಯಾಯಾಲಯದ ಶಿಕ್ಷೆ ನೀಡುವಂತೆ ಕಾನೂನು ಬದ್ಧವಾಗಿ ನಡೆದುಕೊಳ್ಳುವ ಬದಲು, ಇಡೀ ಗ್ರಾಮಸ್ಥರನ್ನು ಒಂದೆಡೆ ಸಭೆ ಸೇರಿಸಿ, ಆರೋಪಿಗಳನ್ನು ಲೈಟುಕಂಬಕ್ಕೆ ಕಟ್ಟಿ ಹಾಡಹಗಲಿನಲ್ಲೇ ಅವರಿಗೆ ಬಾಸುಂಡೆ ಬರುವಂತೆ ಹೊಡೆದರು. ವರದಿಗಳ ಪ್ರಕಾರ ಆಗ ಇಡೀ ಗ್ರಾಮ ಪೊಲೀಸರ ಈ ಕಾನೂನುಬಾಹಿರ ಕೃತ್ಯವನ್ನು ಬೆಂಬಲಿಸುತ್ತಾ ಘೋಷಣೆ ಹಾಕುತ್ತಿತ್ತು. ಇಂತಹ ಒಂದು ಪ್ರಕರಣ ಪ್ರಜಾತಂತ್ರ ಭಾರತದಲ್ಲಿ, 21ನೇ ಶತಮಾನದಲ್ಲಿ ಹಾಗೂ ನಾಗರಿಕ ಸಮಾಜದಲ್ಲಿ ನಡೆದದ್ದು ಇಡೀ ದೇಶವೇ ತಲೆತಗ್ಗಿಸುವಂತಾಗಿತ್ತು.
ಕೆಳಹಂತದ ಪೊಲೀಸರು ನಡೆಸಿದ ಈ ಅಪರಾಧವನ್ನು ಮೇಲ್ ಹಂತದ ಅಧಿಕಾರಿಗಳು ಮತ್ತು ಸರಕಾರ ಖಂಡಿಸಿ ಮತ್ತೆ ಸಮಾಜದಲ್ಲಿ ನಿಷ್ಪಕ್ಷ ಕಾನೂನು ಆಡಳಿತದ ಬಗ್ಗೆ ಭರವಸೆ ಹುಟ್ಟುವಂತೆ ಮಾಡಬೇಕಿತ್ತು. ಆದರೆ ಗುಜರಾತಿನಲ್ಲಿ ನಡೆಯುತ್ತಿರುವುದೇ ಬೇರೆ. ಈ ಪೊಲೀಸ್ ಅಪರಾಧದ ಬಗ್ಗೆ ಹೈಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಮೊನ್ನೆ ಖೇಡಾ ಜಿಲ್ಲೆಯ ಜಿಲ್ಲಾ ಪೊಲೀಸ್ ಅಧಿಕಾರಿಯು ಹೈಕೋರ್ಟಿಗೆ ಅಫಿಡವಿಟ್ ಒಂದನ್ನು ಸಲ್ಲಿಸಿ ಪೊಲೀಸರು ಮಾಡಿದ ಕಾನೂನು ಬಾಹಿರ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಸಲುವಾಗಿಯೇ ಆ ಆರೋಪಿಗಳಿಗೆ ಬಹಿರಂಗವಾಗಿ ಹೊಡೆಯಲಾಯಿತೆಂದು ಸಮರ್ಥಿಸಿಕೊಂಡಿದ್ದಾರೆ. ಇದು ಗುಜರಾತಿನಲ್ಲಿ ಕಾನೂನು, ಸಮಾಜ ಮತ್ತು ಸರಕಾರ ಎಷ್ಟರಮಟ್ಟಿಗೆ ಕೋಮುವಾದೀಕರಣಗೊಂಡಿದೆ ಎಂಬುದರ ಸಂಕೇತವಾಗಿದೆ. ಈವರೆಗೆ ಪೊಲೀಸರು ಇಂತಹ ಕೋಮುವಾದಿ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರಲಿಲ್ಲ ಎಂದೇನಲ್ಲ. ಗುಜರಾತ್ ಹತ್ಯಾಕಾಂಡದಲ್ಲಿ ಪೊಲೀಸರ ಪಾತ್ರವೇನಿತ್ತು ಎಂಬುದು ಈಗ ಜಗಜ್ಜಾಹೀರಾಗಿರುವ ಸಂಗತಿ. ಆದರೆ ಈವರೆಗೆ ಪೊಲೀಸರು ಇಂತಹ ಆರೋಪಗಳು ಬಂದಾಗ ಅದನ್ನು ನಿರಾಕರಿಸುತ್ತಿದ್ದರು ಅಥವಾ ಸಾಕ್ಷಿಗಳನ್ನು ಹೆದರಿಸಿ ದೂರುಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಮಾಡುತ್ತಿದ್ದರು. ಬಚಾವಾಗುತ್ತಿದ್ದರು. ಏಕೆಂದರೆ ತೋರಿಕೆಗಾದರೂ ಕಾನೂನಿನಲ್ಲಿ ಇಂತಹ ಪೊಲೀಸ್ ಅಪರಾಧಗಳಿಗೆ ರಕ್ಷಣೆ ಇರುತ್ತಿರಲಿಲ್ಲ. ಆದರೆ ಈಗ ಜಿಲ್ಲಾ ರಕ್ಷಣಾಧಿಕಾರಿಗಳೇ ಹೈಕೋರ್ಟಿಗೆ ನೀಡಿರುವ ಅಫಿಡವಿಟ್‌ನಲ್ಲಿ ಆರೋಪಿಗಳ ಮೇಲೆ ಅಪರಾಧವು ಸಾಬೀತಾಗುವ ಮುನ್ನವೇ, ಬಹಿರಂಗವಾಗಿ ಎಲ್ಲರ ಸಮ್ಮುಖದಲ್ಲಿ ತಾವೇ ಶಿಕ್ಷೆ ನೀಡಿರುವುದನ್ನು ಕಾನೂನು-ಸುವ್ಯವಸ್ಥೆಗೆ ಅಗತ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿರುವುದು ಮತ್ತು ಹೈಕೋರ್ಟ್ ಅಂತಹ ಒಂದು ಅಫಿಡವಿಟ್‌ನ್ನು ದಾಖಲೆಯಾಗಿ ಪರಿಗಣಿಸಿರುವುದು ದೇಶದ ಪ್ರಜಾತಂತ್ರವು ಹಿಡಿದಿರುವ ಅಧಃಪತನದ ಒಂದು ಅಂದಾಜನ್ನು ನೀಡುತ್ತದೆ. ಅಪರಾಧವು ಸಾಬೀತಾಗುವ ಮುನ್ನವೇ ಕೇವಲ ಆರೋಪ ಮತ್ತು ದೂರುಗಳನ್ನೇ ಆಧರಿಸಿ ಪೊಲೀಸರೇ ಶಿಕ್ಷೆ ನೀಡುವುದು ಮಾನ್ಯಗೊಳ್ಳುವ ಕ್ರಮವಾಗಿಬಿಟ್ಟರೆ ಈ ದೇಶದಲ್ಲಿ ಸ್ವತಂತ್ರ ನ್ಯಾಯಾಲಯದ ಅಗತ್ಯವೇನಿದೆ? ಹಾಗೂ ಈ ಬಗೆಯ ಪೊಲೀಸ್ ನ್ಯಾಯ ಕೇವಲ ಅಲ್ಪಸಂಖ್ಯಾತರ ವಿರುದ್ಧ ಮಾತ್ರ ಪ್ರಯೋಗವಾಗುತ್ತಿರುವುದನ್ನೂ ಪರೋಕ್ಷವಾಗಿ ನ್ಯಾಯಾಲಯ ಒಪ್ಪಿಕೊಂಡಂತಾಗುತ್ತದೆ. ಏಕೆಂದರೆ ದೇಶಾದ್ಯಂತ ಮುಸ್ಲಿಮರ ಮೇಲೆ ನಡೆಯುತ್ತಿರುವ ಲಿಂಚಿಂಗ್ ಹತ್ಯೆಗಳ ಪ್ರಕರಣದಲ್ಲಿ ದೇಶದಲ್ಲೆಲ್ಲೂ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಉಳಿಸಿಕೊಳ್ಳುವ ಸಲುವಾಗಿ ಆರೋಪಿಗಳಿಗೆ ತಾವೇ ಶಿಕ್ಷೆ ನೀಡಿದ ನಿದರ್ಶನಗಳಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಪೊಲೀಸರು ಮತ್ತು ಸ್ಥಳೀಯ ರಾಜಕೀಯ ನಾಯಕರು ಅಂತಹ ಆರೋಪಿಗಳನ್ನು ಸನ್ಮಾನಿಸಿದ ಉದಾಹರಣೆಗಳೇ ಹೆಚ್ಚು. ಅಪರಾಧ ಆಧಾರಿತ ನ್ಯಾಯಕ್ಕಿಂತ ಆರೋಪಿಯ ಧರ್ಮಾಧಾರಿತ ನ್ಯಾಯ ಮೋದಿ ಸರಕಾರದಲ್ಲಿ ಮೇಲಿನಿಂದ ಕೆಳಗಿನವರೆಗೂ ವ್ಯಾಪಿಸಿರುವುದು ಮೊನ್ನೆ ಸುಪ್ರೀಂ ಕೋರ್ಟಿನಲ್ಲಿ ಮೋದಿ ಸರಕಾರ ನೀಡಿರುವ ಮತ್ತೊಂದು ಅಫಿಡವಿಟ್‌ನಲ್ಲೂ ಬಹಿರಂಗಗೊಂಡಿದೆ. 2002ರಲ್ಲಿ ಗೋಧ್ರಾದಲ್ಲಿ ಸಬರಮತಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಅಪರಾಧಿಗಳಿಗೆ ಕೆಳಹಂತದ ಕೋರ್ಟುಗಳು ಮರಣದಂಡನೆ ವಿಧಿಸಿದ್ದರೂ, ಸುಪ್ರೀಂ ಕೋರ್ಟು ಅದನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು. ಈಗಾಗಲೇ ಅವರು 14 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಆದ್ದರಿಂದ ಜೈಲಿನಲ್ಲಿ ತಮ್ಮ ಸನ್ನಡತೆಯನ್ನು ಆಧರಿಸಿ ಹಾಗೂ ತಾವು ಈಗಾಗಲೇ ಅನುಭವಿಸಿರುವ ಶಿಕ್ಷಾವಧಿಯನ್ನು ಪರಿಗಣಿಸಿ ಬಿಡುಗಡೆ ಮಾಡಲು ಕೋರಿದ್ದಾರೆ. ಆದರೆ ಮೋದಿ ಸರಕಾರವು ಅಪರಾಧಿಗಳು ಮಾಡಿರುವ ಅಪರಾಧ ಅತ್ಯಂತ ಗಂಭೀರವಾಗಿರುವುದರಿಂದ ಅವರನ್ನು ಬಿಡುಗಡೆ ಮಾಡುವ ಬದಲು ಅವರಿಗೆ ಮರಣದಂಡನೆಯನ್ನು ವಿಧಿಸುವಂತೆ ಮನವಿ ಮಾಡಿದೆ. ಆದರೆ ಇದೇ ಮೋದಿ ಸರಕಾರವೇ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಆರು ಜನರ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರದಂಥ ಹೀನಾತಿಹೀನ ಅಪರಾಧದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳನ್ನು ಜೈಲಿನಲ್ಲಿ ಸನ್ನಡತೆಯನ್ನು ತೋರದಿದ್ದರೂ ಅವಧಿಪೂರ್ವ ಬಿಡುಗಡೆ ಮಾಡಿದೆ. ಈ ಬಹಿರಂಗ ಧರ್ಮಾಧಾರಿತ ತಾರತಮ್ಯಗಳು ಈ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಎಂಬ ಭರವಸೆಯ ಮೇಲೆ ವಿಶ್ವಾಸ ಮೂಡಿಸುವುದೇ? ಅಂತಹ ವಿಶ್ವಾಸ ಮೂಡದೆ ಈ ದೇಶಕ್ಕೆ ಭವಿಷ್ಯವಿದೆಯೇ? ಉನ್ನತ ನ್ಯಾಯಾಂಗ ಅಂತಹ ಭರವಸೆಯನ್ನು ಖಾತರಿಪಡಿಸಲು ಯಾವುದೇ ಭಯವಿಲ್ಲದೇ ಮುಂದಾಗುವುದೇ?