ಭೂಮಿ ಬದಲಾದ ಕತೆ ಹೇಳುವ ಫೋಟೊ
ನಾಸಾ ಡಿಸೆಂಬರ್ 2022ರಲ್ಲಿ ತೆಗೆದ ಬ್ಲೂ ಮಾರ್ಬಲ್‌ನ ಛಾಯಾಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 1972ರ ಭೂಮಿಯ ಚಿತ್ರದೊಂದಿಗೆ ಈ ಚಿತ್ರವನ್ನು ಹೋಲಿಸಿ ನೋಡಲಾಗುತ್ತಿದೆ. ಈ ಎರಡೂ ಚಿತ್ರಗಳ ಸೂಕ್ಷ್ಮ ಅಧ್ಯಯನ ಮತ್ತು ಅವಲೋಕನಗಳಿಂದ ವೈವಿಧ್ಯಮಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಭೂಮಿಯು ನೀಲಿ ಅಮೃತ ಶಿಲೆಯ ಗೋಳ ಎಂಬುದನ್ನು ಅಂತರಿಕ್ಷದಿಂದ ತೆಗೆದ ಚಿತ್ರಗಳು ಹೇಳುತ್ತಿವೆ. ಹೌದು ಗಗನನೌಕೆಗಳು ಅಂತರಿಕ್ಷದಿಂದ ತೆಗೆದ ಭೂಮಿಯ ಚಿತ್ರಗಳು ನೋಡಲು ಸುಂದರವಾಗಿದ್ದು, ಗ್ರಹದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅಂತೆಯೇ ಅಧ್ಯಯನಕ್ಕೆ ಸೂಕ್ತ ಸಾಮಗ್ರಿಯೂ ಆಗಿವೆ. ಕಳೆದ ಐವತ್ತು ವರ್ಷಗಳಲ್ಲಿ ಭೂಮಿಯ ಮೇಲೆ ಆಗಿರುವ ಹವಾಮಾನ ವೈಪರೀತ್ಯದ ಬದಲಾವಣೆಗಳನ್ನು ಚಿತ್ರಗಳು ಸ್ಪಷ್ಟಪಡಿಸುತ್ತಿವೆ.
ಬಾಹ್ಯಾಕಾಶದಿಂದ ತೆಗೆದ ಭೂಮಿಯ ಮೊದಲ ಫೋಟೊಗಳು ಮಹತ್ವದ ಐತಿಹಾಸಿಕ ಘಟನೆಗಳಾಗಿವೆ. 1966ರಲ್ಲಿ ರೋಬೋಟಿಕ್ ಲೂನಾರ್ ಆರ್ಬಿಟರ್-1 (ಯುನೈಟೆಡ್ ಸ್ಟೇಟ್ಸ್ ಚಂದ್ರನ ಕಕ್ಷೆಗೆ ಕಳಿಸಿದ ಮೊದಲ ಬಾಹ್ಯಾಕಾಶ ನೌಕೆ) ಭಾಗಶಃ ನೆರಳಿನ ಭೂಮಿಯ ಕಪ್ಪುಬಿಳುಪು ಚಿತ್ರ ಸೇರಿದಂತೆ ಕೆಲವು ಆರಂಭಿಕ ಚಿತ್ರಗಳನ್ನು ಕಳುಹಿಸಿತ್ತು. ಅಂತರಿಕ್ಷದಲ್ಲಿ ಚೆಂಡು ತೇಲುತ್ತಿರುವಂತೆ ಕಂಡ ಭೂಮಿಯ ಮೊದಲ ಚಿತ್ರಗಳು ಎಲ್ಲರಲ್ಲೂ ಕೌತುಕವನ್ನುಂಟು ಮಾಡಿದ್ದವು. ನಂತರ ಮುಂದಿನ ವರ್ಷ, ಎಟಿಎಸ್-3 ಎಂಬ ಉಪಗ್ರಹವು ಭೂಮಿಯ ಮೊದಲ ಬಣ್ಣದ ಚಿತ್ರವನ್ನು ತೆಗೆದುಕೊಂಡಿತ್ತು. ನಂತರ 1968ರಲ್ಲಿ, ಅಪೊಲೊ-8ರ ಸಿಬ್ಬಂದಿ ಬಾಹ್ಯಾಕಾಶದಿಂದ ಭೂಮಿಯನ್ನು ನೋಡಿದ ಮತ್ತು ಛಾಯಾಚಿತ್ರ ತೆಗೆದ ಮೊದಲ ಮಾನವರಾದರು. ಅವರು ಬಾಹ್ಯಾಕಾಶ ನೌಕೆಯ ಕಿಟಕಿಗಳ ಮೂಲಕ ‘ಅರ್ಥರೈಸ್’ ಎಂದು ಕರೆಯಲ್ಪಡುವ ಪ್ರಸಿದ್ಧ ಫೋಟೊ ಸೇರಿದಂತೆ ಭೂಮಿಯ ವಿವಿಧ ಫೋಟೊಗಳನ್ನು ತೆಗೆದರು. ಡಿಸೆಂಬರ್ 1972ರಲ್ಲಿ, ನಾಸಾದ ಅಪೊಲೊ-17 ನೌಕೆಯು ಇಡೀ ಭೂಮಿಯ ಸಾಂಪ್ರದಾಯಿಕ ಫೋಟೊವನ್ನು ತೆಗೆದುಕೊಂಡಿತು.
‘ಬ್ಲೂ ಮಾರ್ಬಲ್’ ಹೆಸರಿನ ಆ ಫೋಟೊ ಇಡೀ ವಿಶ್ವದಾದ್ಯಂತ ಸಂಚಲನವನ್ನುಂಟು ಮಾಡಿತ್ತು. ವೈಜ್ಞಾನಿಕ ಕಾದಂಬರಿ ಬರಹಗಾರ ಆರ್ಥರ್ ಸಿ. ಕ್ಲಾರ್ಕ್ ಸೇರಿದಂತೆ ಹಲವರು ಫೋಟೊ ಕುರಿತು ತಮ್ಮದೇ ಆದ ಹೇಳಿಕೆಗಳನ್ನು ನೀಡಿದ್ದರು. ಅಂತರಿಕ್ಷದಲ್ಲಿ ದೂರದಿಂದ ಕಾಣುವ ಭೂಮಿಯ ನೋಟವು ಮಾನವಕುಲದ ಭವಿಷ್ಯವು ಬಾಹ್ಯಾಕಾಶದಲ್ಲಿದೆ ಎಂಬ ನಂಬಿಕೆಯನ್ನು ಹುಟ್ಟುಹಾಕುತ್ತದೆ ಎಂದು ನಿರೀಕ್ಷಿಸಿದ್ದರು. ಅಂದಿನಿಂದ ಆ ಫೋಟೊ ಜಾಗತಿಕ ಪರಿಸರ ಚಳವಳಿಯ ಐಕಾನ್ ಆಗಿ ಮಾರ್ಪಟ್ಟಿತ್ತು. ಜೊತೆಗೆ ಇದು ಭೂಮಿಯನ್ನು ಹೆಚ್ಚು ವಿಶಿಷ್ಟವಾಗಿ ಕಾಣುವಂತೆ ಮಾಡಿತು. ಐವತ್ತು ವರ್ಷಗಳ ಹಿಂದೆ ತೆಗೆದ ಆ ಚಿತ್ರ ಈಗ ಐತಿಹಾಸಿಕ ಕಲಾಕೃತಿಯಾಗಿದೆ. ಐವತ್ತು ವರ್ಷಗಳ ನಂತರ ಅಂದರೆ ಡಿಸೆಂಬರ್ 8, 2022ರಂದು, ನಾಸಾ ಸುಮಾರು 1.5 ಮಿಲಿಯನ್ (15 ಲಕ್ಷ) ಕಿ.ಮೀ. ದೂರದಲ್ಲಿರುವ ಬಾಹ್ಯಾಕಾಶ ಹವಾಮಾನ ವೀಕ್ಷಣಾಲಯದಿಂದ ಭೂಮಿಯ ಹೊಸ ಚಿತ್ರವನ್ನು ತೆಗೆದುಕೊಂಡಿತು. ಹೊಸ ಫೋಟೋ ಭೂಮಿಯ ಮೇಲಿನ ಭೌತಿಕ ಬದಲಾವಣೆಗಳನ್ನು ಸ್ಪಷ್ಟವಾಗಿ ಬಹಿರಂಗಪಡಿಸಿದೆ.
50 ವರ್ಷಗಳ ಹವಾಮಾನ ಬದಲಾವಣೆಯನ್ನು ಸೂಚಿಸುತ್ತವೆ. ಇವೆರಡೂ ಚಿತ್ರಗಳನ್ನು ಮುಂದಿಟ್ಟುಕೊಂಡು ಹವಾಮಾನ ತಜ್ಞರು ಮತ್ತು ವಿಜ್ಞಾನಿಗಳು ಸಾಕಷ್ಟು ಅಂಶಗಳನ್ನು ಚರ್ಚಿಸುತ್ತಿದ್ದಾರೆ. 1972ರಲ್ಲಿ ನಾಸಾ ತೆಗೆದ ಭೂಮಿಯ ಚಿತ್ರಗಳು ಸಾರ್ವಜನಿಕ ಮೌಲ್ಯದ ಅರಿವನ್ನುಂಟು ಮಾಡಿತು. ಸೂರ್ಯನ ಬೆಳಕಿನಿಂದ ಪ್ರಕಾಶಮಾನವಾದ ಭೂಮಿಯ ಚಿತ್ರವನ್ನು ಅಪೋಲೋ-17 ನೌಕೆಯು 33,000 ಕಿ.ಮೀ. ದೂರದಿಂದ ತೆಗೆದಿತ್ತು. ಆ ಫೋಟೊವು ಬಾಹ್ಯಾಕಾಶದಿಂದ ಅಂಟಾರ್ಕ್ಟಿಕಾದ ಮೊದಲ ನೋಟವನ್ನು ಒಳಗೊಂಡಿತ್ತು. ಚಿತ್ರವು ಯುರೋಪ್ ಅಥವಾ ಅಮೆರಿಕಕ್ಕಿಂತ ಹೆಚ್ಚಾಗಿ ಆಫ್ರಿಕಾದ ಮೇಲೆ ಕೇಂದ್ರೀಕೃತವಾಗಿತ್ತು. ಭೂಮಿಯು ಬಾಹ್ಯಾಕಾಶದಲ್ಲಿ ಗೋಚರಿಸುವ ಏಕೈಕ ಬಣ್ಣವನ್ನು ಸಹ ಒದಗಿಸಿದೆ. ನೀಲಿ ಬೆಳಕು, ನೀರು ಮತ್ತು ಮೋಡಗಳಿಂದ ಪ್ರಾಬಲ್ಯ ಹೊಂದಿದ್ದು, ಇದು ಮಾನವ ಚಟುವಟಿಕೆಯ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸದ ವಿಶಿಷ್ಟ ಪರಿಸರದಲ್ಲಿ ಕಾಣಿಸಿಕೊಂಡಿತು.
1973ರಲ್ಲಿ ಜೀವಶಾಸ್ತ್ರಜ್ಞ ಲೂಯಿಸ್ ಥಾಮಸ್ ಅವರು ಈ ಚಿತ್ರವನ್ನು ನೋಡಿ ನಾವು ನೀಲಿ ಕೋಣೆಯೊಳಗೆ ವಾಸಿಸುತ್ತೇವೆ ಎಂದು ಚಿತ್ರವನ್ನು ಬಣ್ಣಿಸಿದ್ದರು. ನಾಸಾ ಡಿಸೆಂಬರ್ 2022ರಲ್ಲಿ ತೆಗೆದ ಬ್ಲೂ ಮಾರ್ಬಲ್ ನ ಛಾಯಾಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 1972ರ ಭೂಮಿಯ ಚಿತ್ರದೊಂದಿಗೆ ಈ ಚಿತ್ರವನ್ನು ಹೋಲಿಸಿ ನೋಡಲಾಗುತ್ತಿದೆ. ಈ ಎರಡೂ ಚಿತ್ರಗಳ ಸೂಕ್ಷ್ಮ ಅಧ್ಯಯನ ಮತ್ತು ಅವಲೋಕನಗಳಿಂದ ವೈವಿಧ್ಯಮಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಂಟಾರ್ಕ್ಟಿಕಾದ ಪೆನಿನ್ಸುಲಾದಲ್ಲಿ ಲಾರ್ಸೆನ್ ಹಿಮ ಖಜಾನೆಯಲ್ಲಿನ ಪ್ರಮುಖ ನಷ್ಟಗಳು ಈ ಚಿತ್ರದಲ್ಲಿ ನಿರ್ದಿಷ್ಟವಾಗಿ ಗೋಚರಿಸದಿದ್ದರೂ, ಅಂಟಾರ್ಕ್ಟಿಕ್ ಐಸ್ ಶೀಟ್ ಗಾತ್ರದಲ್ಲಿ ಗಣನೀಯವಾಗಿ ಕಡಿಮೆಯಾಗಿರುವುದನ್ನು ತೋರಿಸುತ್ತದೆ.
ಶಾಶ್ವತ ಐಸ್ ಶೀಟ್ ಮತ್ತು ಕಾಲೋಚಿತ ಸಮುದ್ರದ ಮಂಜುಗಡ್ಡೆಯ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಸಹ ಕಷ್ಟವಾಗಿದೆ. 1972ರ ಉಪಗ್ರಹ ಚಿತ್ರಗಳಲ್ಲಿ ಹಿಮ ಮತ್ತು ಮೋಡದ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟವಾಗಿದ್ದರೂ, ಮೂಲ ಫೋಟೊದಲ್ಲಿ ಕೆಲವು ಕಡೆಗಳಲ್ಲಿ ಹಿಮವು ಇರಾನ್‌ನ (ಅರೇಬಿಯನ್ ಕೊಲ್ಲಿಯ ಉತ್ತರ) ಜಾಗ್ರೋಸ್ ಮತ್ತು ಮಧ್ಯ ಪರ್ವತ ಶ್ರೇಣಿಗಳಲ್ಲಿ ಗೋಚರಿಸುತ್ತದೆ. ಈ ಹಿಮವು 2022ರ ಹೊಸ ಚಿತ್ರದಲ್ಲಿ ಸಂಪೂರ್ಣವಾಗಿ ಮಾಯವಾಗಿದೆ. ಆದಾಗ್ಯೂ ಇದು ಮತ್ತೆ ಕಾಲೋಚಿತ ಬದಲಾವಣೆಯ ವ್ಯಾಪ್ತಿಯಲ್ಲಿದೆ ಮತ್ತು 1987 ಮತ್ತು 2007ರ ನಡುವೆ ಇರಾನ್‌ನಲ್ಲಿ ಋತುಮಾನದ ಹಿಮದ ಹೊದಿಕೆಯಲ್ಲಿ ಯಾವುದೇ ಮಹತ್ವದ ದೀರ್ಘಕಾಲೀನ ಪ್ರವೃತ್ತಿಯನ್ನು ಗುರುತಿಸಲು ಸಂಶೋಧನೆಯು ವಿಫಲವಾಗಿದೆ.
ಆಫ್ರಿಕನ್ ಉಷ್ಣವಲಯದಲ್ಲಿ, ವಿಶೇಷವಾಗಿ ಉತ್ತರದ ಭಾಗದಲ್ಲಿ ಕಡು ಹಸಿರು ಸಸ್ಯವರ್ಗದಲ್ಲಿನ ಕಡಿತವು ಅತ್ಯಂತ ಗಮನಾರ್ಹವಾಗಿದೆ. ಉತ್ತರ ಸಹಾರಾದಲ್ಲಿರುವ ಚಾಡ್ ಸರೋವರದ ಕರಾಳ ನೆರಳು ಕುಗ್ಗಿದೆ ಮತ್ತು ಅರಣ್ಯ ಸಸ್ಯವರ್ಗವು ಈಗ ನೂರಾರು ಮೈಲುಗಳಷ್ಟು ದಕ್ಷಿಣಕ್ಕೆ ಪ್ರಾರಂಭವಾಗುತ್ತದೆ. ಇದು ಉತ್ತರ ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ಮರುಭೂಮಿಯ ಪುರಾವೆಗಳೊಂದಿಗೆ ಸ್ಥಿರವಾಗಿದೆ. 1954 ಮತ್ತು 2002ರ ನಡುವೆ ಪಶ್ಚಿಮ ಸಹೇಲ್‌ನಲ್ಲಿ ಮರಗಳ ಸಾಂದ್ರತೆಯು ಶೇ. 18ರಷ್ಟು ಕಡಿಮೆಯಾಗಿದೆ ಎಂದು ಸಂಶೋಧನೆ ತಿಳಿಸುತ್ತದೆ. ಆಫ್ರಿಕಾವು 1990 ಮತ್ತು 2010ರ ನಡುವೆ ವರ್ಷಕ್ಕೆ 3-4 ಮಿಲಿಯನ್ ಹೆಕ್ಟೇರ್ ಅರಣ್ಯವನ್ನು ಕಳೆದುಕೊಂಡಿದೆ ಎಂದು ಯುನೈಟೆಡ್ ನೇಷನ್ಸ್ ಆಹಾರ ಮತ್ತು ಕೃಷಿ ಸಂಸ್ಥೆಯು ಅಂದಾಜಿಸಿದೆ.
ಇದು ಸಹೇಲ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಒಂದು ಕಾಲದಲ್ಲಿ ಮಡಗಾಸ್ಕರ್‌ನಲ್ಲಿದ್ದ ಹಸಿರು ಭೂದೃಶ್ಯವು ಈಗ ಮುಖ್ಯವಾಗಿ ಕಂದು ಬಣ್ಣಕ್ಕೆ ತಿರುಗಿದೆ. ಅದರ ಪರಿಸರ ಶ್ರೀಮಂತಿಕೆ ದೀರ್ಘಕಾಲದವರೆಗೂ ಹೆಸರುವಾಸಿಯಾಗಿತ್ತು. ಆದರೆ ಈಗ ಆ ಪ್ರದೇಶವನ್ನು ‘ಜೀವವೈವಿಧ್ಯದ ಹಾಟ್‌ಸ್ಪಾಟ್’ ಎಂದು ವರ್ಗೀಕರಿಸಲಾಗಿದೆ. ಇದು ಕ್ಷಿಪ್ರ ಆವಾಸಸ್ಥಾನದ ನಷ್ಟದಿಂದ ಜೀವವೈವಿಧ್ಯತಾ ನಾಶದ ಕಳವಳಕ್ಕೆ ಒಳಗಾಗಿದೆ. ಮಲಗಾಸಿ ದೈತ್ಯ ಜಂಪಿಂಗ್ ಇಲಿ ಸೇರಿದಂತೆ ಮಡಗಾಸ್ಕರ್‌ನಲ್ಲಿ ಪ್ರತ್ಯೇಕವಾಗಿ ಕಂಡುಬರುವ ಅನೇಕ ಪ್ರಭೇದಗಳು ಈಗ ಅಳಿವಿನ ಅಪಾಯದಲ್ಲಿದೆ. 2007 ಮತ್ತು 2019ರ ನಡುವೆ ಈ ಜೀವಿಗಳ ಸಂಖ್ಯೆಯು ಶೇ.88ರಷ್ಟು ಕಡಿಮೆಯಾಗಿದೆ. ಇವು ಕೆಲವು ಸ್ಯಾಂಪಲ್‌ಗಳು ಮಾತ್ರ. ಕಳೆದ ಐವತ್ತು ವರ್ಷಗಳಲ್ಲಿ ಇಂತಹ ಅದೆಷ್ಟೋ ಜೀವಿಗಳು ಭೂಮಿಯಿಂದ ಮರೆಯಾಗಿವೆ ಮತ್ತು ಮರೆಯಾಗುತ್ತಲಿವೆ. ಐವತ್ತು ವರ್ಷಗಳ ಪರಿಸರ ನಾಶದ ಸಾಕ್ಷಿ ನಮ್ಮ ಕಣ್ಣ ಮುಂದಿದೆ. ಈಗ ನಿಜವಾಗಿಯೂ ಭೂಮಿಯನ್ನು ಉಳಿಸುವ ಕಾರ್ಯ ಭರದಿಂದ ಸಾಗಬೇಕಾಗಿದೆ. ಇಲ್ಲದೇ ಹೋದರೆ ಇಂದು ಅನ್ಯ ಜೀವಿಗಳು, ನಾಳೆ ಮಾನವರಾದ ನಾವು!?