ಆಳುವವರಿಂದ ಜಾತಿ, ಧರ್ಮದ ಆಧಾರದಲ್ಲಿ ರಾಜಕೀಯ: ಕೆ.ಸಿ.ರಾಜು ಆರೋಪ
ಬೈಂದೂರು: ನಮ್ಮನ್ನಾಳುವ ರಾಜಕೀಯ ವ್ಯವಸ್ಥೆ ಸಂವಿಧಾನದ ಆಶಯದಂತೆ ಅಧಿಕಾರ ನಡೆಸುತ್ತಿಲ್ಲ. ಬದಲಾಗಿ ಜಾತಿ ಹಾಗೂ ಧರ್ಮದ ಆಧಾರದಲ್ಲಿ ರಾಜಕೀಯ ಮಾಡಿ ಶೋಷಿತರ ಸ್ವಾಭಿಮಾನಿ ಬದುಕನ್ನು ಕಸಿದು ಕೊಂಡು ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದೆ. ಇಂತಹ ವ್ಯವಸ್ಥೆಯನ್ನು ಹಿಮ್ಮೆಟ್ಟಿಸಲು ಬಲಿಷ್ಟವಾಗಿ, ಸಂಘಟಿತರಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದು ದಸಂಸ ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಹೇಳಿದ್ದಾರೆ.
ದರ್ಕಾಸ್ತ ಕಾಲೋನಿಯ ಅಂಬೇಡ್ಕರ್ ಭವನದಲ್ಲಿ ರವಿವಾರ ಜರಗಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಬೈಂದೂರು ತಾಲೂಕು ಸಮಿತಿ ವತಿಯಿಂದ ಗ್ರಾಮ ಶಾಖೆಯ ಪುನಶ್ಚೇತನ ಮತ್ತು ಬೈಂದೂರು ನಗರ ಶಾಖೆಯ ರಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರಸ್ತುತ ಸಮುದಾಯದ ಯುವಕ-ಯುವತಿಯರು ವಿದ್ಯೆಗೆ ಪ್ರಾದಾನ್ಯತೆ ನೀಡಿ ಶಿಕ್ಷಣ ಪಡೆದರೂ ಕೂಡ ವಿದ್ಯಾರ್ಹತೆಗೆ ತಕ್ಕಂತೆ ನೌಕರಿ ದೊರೆಯುತ್ತಿಲ್ಲ. ಭೂಮಿ ಹಕ್ಕನ್ನು ಸರಿಯಾಗಿ ನೀಡುತ್ತಿಲ್ಲ. ಪರಿಶಿಷ್ಟ ಜಾತಿ ಪಂಗಡಗಳ ಶೇಕಡಾ ವಾರು ನಿಧಿಯನ್ನು ಕುಂದಾಪುರ ಬೈಂದೂರು ತಾಲೂಗಳಲ್ಲಿ ಹೆಚ್ಚಿನ ಗ್ರಾಪಂ ಹಾಗೂ ಪುರಸಭೆ, ಪಟ್ಟಣ ಪಂಚಾಯತ್‌ಗಳಲ್ಲಿ ಬಲಿಷ್ಠ ವರ್ಗ ಎಲ್ಲೆಂದರಲ್ಲಿ ವಿನಿಯೋಗಿಸಿ ದುರುಪಯೋಗ ಮಾಡುತಿದೆ ಎಂದು ಅವರು ಆರೋಪಿಸಿದರು.
ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತಾಡಿದ ದ.ಸಂ.ಸ ಹಿರಿಯ ಹೋರಾಟಗಾರ ಶೀನ ಹಳಗೇರಿ, ಬೈಂದೂರು ಭಾಗದಲ್ಲಿ ದಲಿತ ಚಳುವಳಿಗೆ ಅದರದ್ದೇ ಆತ ಇತಿಹಾಸವಿದೆ. ಇಂತಹ ಚಳವಳಿಯನ್ನು ಇಂದಿನ ಯುವ ಸಮುದಾಯ ಅತೀ ಎಚ್ಚರಿಕೆಯಿಂದ ಮುನ್ನೆಡೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಬೈಂದೂರು ತಾಲೂಕು ಸಂಚಾಲಕ ನಾಗರಾಜ್ ಉಪ್ಪುಂದ ವಹಿಸಿದ್ದರು. ದಸಂಸ ಪ್ರಮುಖರಾದ ಶಿವರಾಮ ಹಳಗೇರಿ, ಲಕ್ಷ್ಮಣ ಬೈಂದೂರು, ಶಿವರಾಜ್ ಬೈಂದೂರು, ಸತೀಶ್ ಯಡ್ತರೆ, ಉಮೇಶ್ ಹಳಗೇರಿ, ಕರುಣಾಕರ ಕಿರಿಮಂಜೇಶ್ವರ, ಗೋವಿಂದ ಹಳಗೇರಿ, ಸುರೇಶ್ ಬೈಂದೂರು, ಎಲ್ಲಾ ಗ್ರಾಮ ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಂಜುನಾಥ ನಾಗೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.