ಮಕ್ಕಳಿಗೂ ಬೇಕಾದೀತೇ ಮತದಾನದ ಹಕ್ಕು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸರಕಾರ ಯುವಕರಿಗಾಗಿ, ವೃದ್ಧರಿಗಾಗಿ, ಮಹಿಳೆಯರಿಗಾಗಿ ರೂಪಿಸುವ ಕಾರ್ಯಕ್ರಮಗಳಿಗೆ ದೊಡ್ಡ ಧ್ವನಿಯಲ್ಲಿ ಪ್ರಚಾರವನ್ನು ನೀಡುತ್ತದೆ. ಆದರೆ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತಂತೆ ಅಷ್ಟೊಂದು ಆಸಕ್ತಿಯನ್ನು ವಹಿಸುವುದಿಲ್ಲ. ಮಕ್ಕಳಿಗಾಗಿ ರೂಪಿಸುವ ಯೋಜನೆಗಳಿಗೆ ವರ್ಷದಿಂದ ವರ್ಷಕ್ಕೆ ಅನುದಾನಗಳನ್ನು ಕಡಿತಗೊಳಿಸಿದರೂ ಅದರ ಬಗ್ಗೆ ಮಾತನಾಡುವವರೂ ಇಲ್ಲ. ಯಾಕೆಂದರೆ, ಮಕ್ಕಳಿಗೆ ಮತದಾನದ ಹಕ್ಕು ಇಲ್ಲ. ಮಕ್ಕಳ ಯೋಜನೆಗಳನ್ನು ಕಡಿತಗೊಳಿಸಿದರೆ ಅವುಗಳು ಬೀದಿಗಿಳಿದು ರಾಜಕಾರಣಿಗಳ ವಿರುದ್ಧ ಘೋಷಣೆ ಕೂಗುವುದಿಲ್ಲ. ಅವುಗಳಿಗೆ ‘ಧರ್ಮ, ಕೋಮು’ ಇತ್ಯಾದಿ ಹೆಸರಿನಲ್ಲಿ ಬೀದಿಗಿಳಿದು ಜಗಳ ಮಾಡಲು ಬರುವುದಿಲ್ಲವಾದುದರಿಂದ ರಾಜಕಾರಣಿಗಳಿಗೆ ಮಕ್ಕಳಿಂದ ವಿಶೇಷ ಪ್ರಯೋಜನವಿಲ್ಲ. ಈ ಕಾರಣದಿಂದಲೇ ಸರಕಾರದ ಬಜೆಟ್‌ನಲ್ಲಿ ಮಕ್ಕಳ ಪಾಲು ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿದೆ. ಈ ಬಗ್ಗೆ ಧ್ವನಿಯೆತ್ತುವುದು ತಮ್ಮ ಕರ್ತವ್ಯ ಎನ್ನುವುದನ್ನು ಮಕ್ಕಳ ಪೋಷಕರೂ ಅರಿತುಕೊಂಡಂತಿಲ್ಲ.
ಮಕ್ಕಳ ಅಭಿವೃದ್ಧಿಯನ್ನು ಒಂದು ದೇಶದ ಅಭಿವೃದ್ಧಿ ಪಥದ ಅತ್ಯಂತ ಮಹತ್ವದ ಭಾಗ ಎಂಬುದಾಗಿ ಪರಿಗಣಿಸಲಾಗುತ್ತ್ತದೆ. ಅದರಲ್ಲೂ ಭಾರತದಂಥ ದೇಶಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಭಾರತದಲ್ಲಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಪೈಕಿ ಸುಮಾರು ಮೂರನೇ ಒಂದರಷ್ಟು ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ ಅಥವಾ ಕಡಿಮೆ ತೂಕ ಹೊಂದಿದೆ (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ). ಇಲ್ಲಿ ಸುಮಾರು ೩.೨ ಕೋಟಿ ಮಕ್ಕಳಿಗೆ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವುದೂ ಅಸಾಧ್ಯವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ಮತ್ತು ಅದರ ಕಾರಣದಿಂದಾಗಿ ಹೇರಲಾದ ಲಾಕ್‌ಡೌನ್‌ಗಳು ಅಗಾಧ ಪ್ರತಿಕೂಲ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ಮಕ್ಕಳು ಹೇಳತೀರದಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಕ್ಕಳ ಸಾಮಾನ್ಯ ಶಿಕ್ಷಣ ಮೂಲೆಗುಂಪಾಗಿತ್ತು ಹಾಗೂ ಮಕ್ಕಳು ಆರೋಗ್ಯ ಸಂಬಂಧಿ ಅವಶ್ಯಕತೆಗಳಿಂದಲೂ ವಂಚಿತರಾದರು. ಬಡತನದ ಹಿನ್ನೆಲೆಯಿಂದಾಗಿ ಕಲಿಕೆಯಲ್ಲಿ ಮೊದಲೇ ಹಿಂದಿದ್ದ ಮಕ್ಕಳು, ಕೊರೋನಾ ಕಾಲದಲ್ಲಿ ಶಿಕ್ಷಣದಿಂದ ಸಂಪೂರ್ಣವಾಗಿ ಹೊರ ತಳ್ಳಲ್ಪಟ್ಟರು. ಪರಿಸ್ಥಿತಿ ಹೀಗಿರುವಾಗ ಮಕ್ಕಳ ಬೆಳವಣಿಗೆಗೆ ಸರಕಾರವೇ ನಿಗದಿಪಡಿಸಿರುವ ಕನಿಷ್ಠ ಮಾನದಂಡಗಳಿಗೆ ಅನುಸಾರವಾಗಿ ಸಿಗಬೇಕಾದಷ್ಟು ಆದ್ಯತೆಯೂ ಸಿಗುತ್ತಿಲ್ಲ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ. ೨೦೧೬ರ ರಾಷ್ಟ್ರೀಯ ಮಕ್ಕಳ ಕ್ರಿಯಾ ಯೋಜನೆಯ ಪ್ರಕಾರ, ಬಜೆಟ್‌ನ ಕನಿಷ್ಠ ಶೇ.೫ ಪಾಲನ್ನು ಮಕ್ಕಳಿಗಾಗಿ ಮೀಸಲಿಡಬೇಕು. ಆದರೆ, ೨೦೨೩-೨೪ರ ಕೇಂದ್ರ ಬಜೆಟ್‌ನಲ್ಲಿ ಇದರ ಅರ್ಧಕ್ಕಿಂತಲೂ ಕಡಿಮೆ, ಅಂದರೆ ಕೇವಲ ಶೇ.೨.೩ ಭಾಗವನ್ನು ಮಕ್ಕಳಿಗಾಗಿ ಮೀಸಲಿಡಲಾಗಿದೆ.
ಕಡಿಮೆ ಬಜೆಟ್ ಅನುದಾನದಿಂದಾಗಿ ಹಲವಾರು ಮಕ್ಕಳ ಕಾರ್ಯಕ್ರಮಗಳು ನಲುಗಿವೆ. ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ಕಾರ್ಯಕ್ರಮ ‘ಸಮಗ್ರ ಶಿಕ್ಷಾ ಅಭಿಯಾನ’. ೨೦೨೨-೨೩ರ ಸಾಲಿನ ಬಜೆಟ್‌ನಲ್ಲಿ ಪರಿಷ್ಕೃತ ಅಂದಾಜುಗಳನ್ನು ತಯಾರಿಸಿದ ಬಳಿಕ ಈ ಯೋಜನೆಗೆ ನೀಡಲಾಗಿರುವ ಅನುದಾನದಲ್ಲಿ ಸುಮಾರು ೫,೨೦೦ ಕೋಟಿ ರೂ. ಕಡಿತಗೊಳಿಸಲಾಯಿತು. ‘ಮಧ್ಯಾಹ್ನದ ಬಿಸಿಯೂಟ’ ಕಾರ್ಯಕ್ರಮದ ಹೆಸರನ್ನು ಈಗ ‘ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್’ ಎಂಬುದಾಗಿ ಬದಲಿಸಲಾಗಿದೆ. ಹೆಸರಿನಲ್ಲೇನೋ ಶಕ್ತಿ ಇದೆ. ಆದರೆ ಈ ಕಾರ್ಯಕ್ರಮಕ್ಕೆ ಕಳೆದ ವರ್ಷ ಪರಿಷ್ಕೃತ ಅಂದಾಜಿನ ಬಳಿಕ ನೀಡಿದ್ದು ಅದರ ಹಿಂದಿನ ವರ್ಷದ ಪರಿಷ್ಕೃತ ಅಂದಾಜಿಗಿಂತಲೂ ಕಡಿಮೆ ಅನುದಾನ. ಕೋವಿಡ್ ಮತ್ತು ಅದಕ್ಕೆ ಸಂಬಂಧಿಸಿದ ಲಾಕ್‌ಡೌನ್‌ಗಳಿಂದಾಗಿ ಮಕ್ಕಳು ಅತಿ ಹೆಚ್ಚಿನ ಸಂಕಷ್ಟಕ್ಕೆ ಒಳಗಾದರು. ಮಕ್ಕಳ ಸಾಗಣೆ ಮತ್ತು ಬಾಲ ಕಾರ್ಮಿಕ ಪ್ರಕರಣಗಳ ಸಂಖ್ಯೆಗಳು ಹೆಚ್ಚಾದವು. ಹಾಗಾಗಿ, ಮಕ್ಕಳ ರಕ್ಷಣೆಗೆ ಹೆಚ್ಚಿನ ನಿಧಿಗಳನ್ನು ಒದಗಿಸಬೇಕಾದ ಅಗತ್ಯವಿತ್ತು. ಆದರೆ, ಇವೆಲ್ಲವುಗಳ ಹೊರತಾಗಿಯೂ, ಮಕ್ಕಳ ರಕ್ಷಣೆಗಾಗಿ ಇರುವ ಕಾರ್ಯಕ್ರಮಗಳಿಗೆ ಒದಗಿಸಲಾಗಿರುವ ಅನುದಾನಗಳು ನಿರಂತರವಾಗಿ ಕಡಿತಗೊಳ್ಳುತ್ತಿವೆ.
ಮಕ್ಕಳ ರಕ್ಷಣೆ ಮತ್ತು ಕಲ್ಯಾಣ ಮುಂತಾದ ಹಲವಾರು ಸೇವೆಗಳ ಸಂಗಮವೇ ‘ಮಿಶನ್ ವಾತ್ಸಲ್ಯ’ ಎಂಬ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ೨೦೨೩-೨೪ರ ಬಜೆಟ್‌ನಲ್ಲಿ ನೀಡಲಾಗಿರುವ ಅನುದಾನವು ಹಿಂದಿನ ವರ್ಷ ಒದಗಿಸಲಾಗಿರುವ ಅನುದಾನದಷ್ಟೇ ಇದೆ. ಅಂದರೆ, ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ, ವಾಸ್ತವಿಕವಾಗಿ ಈ ಬಾರಿ ನೀಡಲಾಗಿರುವುದು ಕಳೆದ ವರ್ಷಕ್ಕಿಂತ ಕಡಿಮೆಯೇ ಆಗಿದೆ. ಗಮನಿಸಬೇಕಾದ ಅಂಶವೆಂದರೆ, ಹಾಲಿ ಹಣಕಾಸು ವರ್ಷ (೨೦೨೨-೨೩)ದಲ್ಲಿ ಈ ಕಾರ್ಯಕ್ರಮಕ್ಕೆ ಆರಂಭದಲ್ಲಿ ೧,೪೭೨ ಕೋಟಿ ರೂ. ಅನುದಾನ ಒದಗಿಸಲಾಗಿತ್ತಾದರೂ, ಬಳಿಕ ಅದರಿಂದ ೩೭೨ ಕೋಟಿ ರೂ.ಕಡಿತಗೊಳಿಸಿ ಮೊತ್ತವನ್ನು ೧,೧೦೦ ಕೋಟಿ ರೂ.ಗೆ ಇಳಿಸಲಾಯಿತು.ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಗೆ ಹಾಲಿ ವರ್ಷದಲ್ಲಿ ನೀಡಲಾಗಿರುವ ಅನುದಾನವು ೩೦ ಕೋಟಿ ರೂ. ಆಗಿದೆ. ಇದು ಮೊದಲೇ ಕಡಿಮೆ. ೨೦೨೩-೨೪ ಬಜೆಟ್‌ನಲ್ಲಿ ಅದನ್ನು ೨೦ ಕೋಟಿ ರೂ.ಗೆ ಇಳಿಸಲಾಗಿದೆ. ೨೦೧೯-೨೦ರಲ್ಲಿ ಈ ಯೋಜನೆಗಾಗಿ ೭೭ ಕೋಟಿ ರೂ. ಖರ್ಚು ಮಾಡಲಾಗಿತ್ತು. ಈಗ ಸರಕಾರವು ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ (ಅಪಾಯಕಾರಿ ಕೆಲಸದ ಸ್ಥಳಗಳನ್ನು ಗುರುತಿಸುವುದು ಹಾಗೂ ಬಾಲ ಕಾರ್ಮಿಕರನ್ನು ಅಲ್ಲಿಂದ ತೆರವುಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶ) ಮತ್ತು ಸಮಗ್ರ ಶಿಕ್ಷಾ ಅಭಿಯಾನ (ಶಾಲೆ ಬಿಟ್ಟಿರುವ ಮಕ್ಕಳು ಮತ್ತೆ ಶಾಲೆ ಸೇರುವಂತೆ ನೋಡಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶ)ವನ್ನು ವಿಲೀನಗೊಳಿಸಲು ಹೊರಟಿದೆ. ಈ ಕ್ರಮವು ಬಾಲ ಕಾರ್ಮಿಕತೆ ನಿರ್ಮೂಲನೆಗೆ ಸಂಬಂಧಿಸಿದ ಕೆಲಸವನ್ನು ಮತ್ತಷ್ಟು ದುರ್ಬಲಗೊಳಿಸುವ ಸಾಧ್ಯತೆಯಿದೆ.
ಅತ್ಯಂತ ಶ್ರೀಮಂತ ವರ್ಗಗಳಿಗೆ ಸೂಕ್ತ ಪ್ರಮಾಣದಲ್ಲಿ ತೆರಿಗೆ ವಿಧಿಸುವಲ್ಲಿ ಕೇಂದ್ರ ಬಜೆಟ್ ವಿಫಲವಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದರ ಹೊರತಾಗಿಯೂ, ಬಜೆಟ್‌ನ ಪ್ರಸಕ್ತ ಸೀಮಿತ ಗಾತ್ರದಲ್ಲೂ, ರಾಷ್ಟ್ರೀಯ ಶಿಶು ಕ್ರಿಯಾ ಯೋಜನೆಯ ಶಿಫಾರಸಿನಂತೆ ಒಟ್ಟು ಬಜೆಟ್‌ನ ಕನಿಷ್ಠ ಶೇ.೫ವನ್ನು ಶಿಶು ಸಂಬಂಧಿ ಯೋಜನೆಗಳಿಗೆ ಒದಗಿಸಿದರೆ, ಮಕ್ಕಳ ಉತ್ತಮ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ, ಕ್ಷೇಮ ಮತ್ತು ರಕ್ಷಣೆಗೆ ಸುಮಾರು ೧,೧೦,೦೦೦ ಕೋಟಿ ರೂ.ಹೆಚ್ಚುವರಿ ಮೊತ್ತ ಲಭಿಸುವಂತೆ ಮಾಡಬಹುದಾಗಿದೆ. ಸರಕಾರಕ್ಕೆ ತನ್ನದೇ ನಿಯಮಗಳಿಗೆ ಅನುಸಾರವಾಗಿಯಾದರೂ, ಮಕ್ಕಳ ತುರ್ತು ಅಗತ್ಯಗಳ ಈಡೇರಿಕೆಗಾಗಿ ಈಗಿನದಕ್ಕಿಂತ ತುಂಬಾ ಹೆಚ್ಚು ಹಣವನ್ನು ಒದಗಿಸುವ ಸಾಮರ್ಥ್ಯವಿದೆ. ಆದರೆ, ಸರಕಾರ ಹಾಗೆ ಮಾಡುತ್ತಿಲ್ಲ ಎನ್ನುವುದು ವಿಷಾದನೀಯ ಮತ್ತು ಭಾರತದ ಭವಿಷ್ಯದ ದೃಷ್ಟಿಯಿಂದ ಆತಂಕಕಾರಿಯಾಗಿದೆ. ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವ ಗಾದೆ ದೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಆ ಮುಂದಿನ ಜನಾಂಗದ ಕುರಿತಂತೆ ಸರಕಾರ ಎಷ್ಟರ ಮಟ್ಟಿಗೆ ಕಾಳಜಿಯನ್ನು ಹೊಂದಿದೆ ಎನ್ನುವುದನ್ನು , ಸರಕಾರ ಮಕ್ಕಳಿಗಾಗಿ ಮೀಸಲಿಟ್ಟ ನಿಧಿಯಿಂದ ನಾವು ಅರ್ಥೈಸಬಹುದಾಗಿದೆ. ಮಕ್ಕಳ ಬಗ್ಗೆ ಸರಕಾರ ಕಾಳಜಿ ವಹಿಸಬೇಕಾದರೆ ಅವರು ಮತದಾನದ ಹಕ್ಕು ಹೊಂದುವುದು ಅನಿವಾರ್ಯವೆ? ಎನ್ನುವ ಪ್ರಶ್ನೆಯೊಂದು ಈಗ ಎದ್ದಿದೆ.