ಸರಕಾರದ ವಿಳಂಬ ಧೋರಣೆ ಖಂಡಿಸಿ ಪಂಚಮಸಾಲಿಗರಿಂದ ‘ಅರೆಬೆತ್ತಲೆ ಚಳುವಳಿ’
ಬೆಂಗಳೂರು, ಫೆ.27: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ' ಮೀಸಲಾತಿ ನೀಡುವಂತೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ 46 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಸೋಮವಾರ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಜನರಿಂದ ಅರೆಬೆತ್ತಲೆ ಚಳುವಳಿ ನಡೆಯಿತು.
ಈ ವೇಳೆ ಸರಕಾರದ ವಿಳಂಬ ನೀತಿ ಖಂಡಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ದಿನದ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಭಾವಚಿತ್ರ ಮುಂದೆ ಬಾಯಿ ಬಡಿದುಕೊಂಡ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿ ನಿತ್ಯ ಮುಷ್ಕರದಲ್ಲಿ ವಿನೂತನ ಪ್ರತಿಭಟನೆ ನಡೆಯುತ್ತಿದ್ದು, ಮಂಗಳವಾರ(ಫೆ.28) ಬಾರುಕೊಲು ಚಳುವಳಿ ನಡೆಯಲಿದೆ.
ಮೀಸಲಾತಿ ನೀಡುವ ವಿಚಾರದಲ್ಲಿ ಸಿಎಂ ಅವರು, ಆರು ಬಾರಿ ತಮ್ಮ ತಾಯಿ ಮೇಲೆ ಆಣೆ ಮಾಡಿ ಮಾತು ತಪ್ಪಿದ್ದರು. ಇದನ್ನು ಖಂಡಿಸಿ ಸಮುದಾಯದ ರಾಷ್ಟ್ರೀಯ, ರಾಜ್ಯ ಜಿಲ್ಲಾ, ತಾಲೂಕು ಘಟಕಗಳು, ಪದಾಧಿಕಾರಿಗಳು, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ, ಗೌಡ, ಮಲೆಗೌಡ, ದೀಕ್ಷಾ ಲಿಂಗಾಯತ ಪಂಚಮಸಾಲಿ ಮೀಸಲಾತಿ ಚಳುವಳಿ ಸಮಿತಿ ಹಾಗೂ ಬೆಂಗಳೂರು, ಬೆಂ. ಗ್ರಾಮಾಂತರ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಹೆಚ್ಚಿನ ಜನರು ಆಗಮಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಮಾ.15ರೊಳಗೆ ಮೀಸಲಾತಿ ಕಲ್ಪಿಸದಿದ್ದರೆ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಹೋರಾಟವನ್ನು ಜನತಾ ನ್ಯಾಯಾಲಯ ಮುಂದೆ ಕೊಂಡೊಯ್ಯುವುದಾಗಿ ಈಗಾಗಲೇ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
‘ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧ ಎರಡು ವರ್ಷಗಳಿಂದ ನಡೆಯುತ್ತಿರುವ ಪ್ರತಿಭಟನೆ ವಿಚಾರವೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೂ ಬಂದಿದೆ. ಆದರೂ ಮೀಸಲಾತಿ ಜಾರಿಯಾಗುತ್ತಿಲ್ಲ. ಕೇಂದ್ರ ಸರಕಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿಯ ಸತ್ಯಾಸತ್ಯತೆ ಬಗ್ಗೆ ಗಮನಕ್ಕೆ ತಂದಿಲ್ಲ. ಕೆಲವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ’
-ಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪೀಠ