ಸಾಮಾನ್ಯ ಸಿಹಿಕಾರಕಕ್ಕೂ ಹೆಚ್ಚಿನ ಹೃದಯಾಘಾತ, ಪಾರ್ಶ್ವವಾಯು ಅಪಾಯಕ್ಕೂ ನಂಟು: ಅಧ್ಯಯನ
ವಾಷಿಂಗ್ಟನ್: ಜನಪ್ರಿಯ ಕೃತಕ ಸ್ವೀಟ್ನರ್ ಅಥವಾ ಸಿಹಿಕಾರಕ ಎರಿಥ್ರಿಟಾಲ್ ಸೇವನೆಯು ಹೆಚ್ಚಿನ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯದೊಂದಿಗೆ ಗುರುತಿಸಿಕೊಂಡಿದೆ ಎಂದು ತಿಳಿಸಿರುವ ಅಧ್ಯಯನ ವರದಿಯೊಂದು, ಇಂತಹ ಉತ್ಪನ್ನಗಳ ದೀರ್ಘಾವಧಿ ಪರಿಣಾಮಗಳನ್ನು ಪರೀಕ್ಷಿಸಲು ಹೆಚ್ಚಿನ ಸುರಕ್ಷತಾ ಸಂಶೋಧನೆಗೆ ಕರೆ ನೀಡಿದೆ.
ಅಮೆರಿಕದಲ್ಲಿ 4,000ಕ್ಕೂ ಅಧಿಕ ಜನರನ್ನು ಅಧ್ಯಯನಕ್ಕೊಳಪಡಿಸಿದ್ದ ಕ್ಲೀವ್ಲ್ಯಾಂಡ್ ಕ್ಲಿನಿಕ್ ನ ಸಂಶೋಧಕರು, ರಕ್ತದಲ್ಲಿ ಹೆಚ್ಚಿನ ಎರಿಥ್ರಿಟಾಲ್ ಮಟ್ಟವನ್ನು ಹೊಂದಿದವರು ಹೃದಯಘಾತ, ಪಾರ್ಶ್ವವಾಯು ಅಥವಾ ಸಾವಿನ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಕಂಡುಕೊಂಡಿದೆ.
ಸಂಶೋಧಕರು ಸಂಪೂರ್ಣ ರಕ್ತ ಅಥವಾ ಪ್ರತ್ಯೇಕಿಸಲಾದ ಪ್ಲೇಟ್ಲೆಟ್ಗಳಿಗೆ ಎರಿಥ್ರಿಟಾಲ್ ಸೇರಿಸುವ ಮೂಲಕ ಪರಿಣಾಮಗಳನ್ನೂ ಪರೀಶೀಲಿಸಿದ್ದಾರೆ. ಪ್ಲೇಟ್ಲೆಟ್ ಗಳು ಜೀವಕೋಶಗಳ ತುಣುಕುಗಳಾಗಿದ್ದು ಅವು ಒಂದಾಗಿ ರಕ್ತಸ್ರಾವವನ್ನು ನಿಲ್ಲಿಸುತ್ತವೆ ಮತ್ತು ರಕ್ತ ಹೆಪ್ಪುಗಟ್ಟಲು ನೆರವಾಗುತ್ತವೆ.
ನೇಚರ್ ಮೆಡಿಸಿನ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ಎರಿಥ್ರಿಟಾಲ್ ಪ್ಲೇಟ್ಲೆಟ್ಗಳು ಕ್ರಿಯಾಶೀಲಗೊಳ್ಳುವುದನ್ನು ಮತ್ತು ರಕ್ತ ಹೆಪ್ಪುಗಟ್ಟಿಸುವುದನ್ನು ಸುಲಭಗೊಳಿಸುತ್ತದೆ ಎಂದು ಹೇಳಿದೆ.
ವಿಶ್ವಾದ್ಯಂತ ಸಾವಿರಾರು ಆಹಾರ ಮತ್ತು ಪಾನೀಯ ಬ್ರಾಂಡ್ಗಳಲ್ಲಿ ಕೃತಕ ಸಿಹಿಕಾರಕಗಳು ಇರುತ್ತವೆ. ಆದರೂ ಅವು ವಿವಾದಾಸ್ಪದ ವಿಷಯವಾಗಿಯೇ ಉಳಿದುಕೊಂಡಿವೆ ಮತ್ತು ಪ್ರಸ್ತುತ ಐರೋಪ್ಯ ಆಹಾರ ಸುರಕ್ಷತಾ ಪ್ರಾಧಿಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಆರೋಗ್ಯ ಸಂಸ್ಥೆಗಳು ಅವುಗಳ ಮರುಮೌಲ್ಯಮಾಪನ ನಡೆಸುತ್ತಿವೆ.
ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟಗೊಂಡಿದ್ದ ಬೃಹತ್ ಅಧ್ಯಯನವೊಂದು ಕೃತಕ ಸಿಹಿಕಾರಕಗಳ, ವಿಶೇಷವಾಗಿ ಅಸ್ಪರ್ಟೇಮ್, ಅಸೆಸಲ್ಪೇಮ್ ಪೊಟ್ಯಾಷಿಯಂ ಮತ್ತು ಸುಕ್ರಲೋಸ್ ನ ಹೆಚ್ಚಿನ ಸೇವನೆ ಹಾಗೂ ಹೃದಯ ರಕ್ತನಾಳ ಕಾಯಿಲೆಗಳ ಹೆಚ್ಚಿನ ಅಪಾಯದ ನಡುವೆ ಸಂಭಾವ್ಯ ನೇರ ಸಂಬಂಧವನ್ನು ಕಂಡುಕೊಂಡಿದೆ. ಕಡಿಮೆ ಕ್ಯಾಲರಿಗಳ, ಕಡಿಮೆ ಕಾರ್ಬೊಹೈಡ್ರೇಟ್ಗಳ ಮತ್ತು ‘ಕೀಟೊ’ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಮಾಮೂಲು ಸಕ್ಕರೆಯ ಬದಲು ಎರಿಥ್ರಿಟಾಲ್ನಂತಹ ಕೃತಕ ಸಿಹಿಕಾರಕಗಳನ್ನು ಬಳಸಲಾಗುತ್ತದೆ. ಬೊಜ್ಜು,ಮಧುಮೇಹ ಅಥವಾ ಮೆಟಾಬಾಲಿಕ್ ಸಿಂಡ್ರೋಮ್ ಹೊಂದಿರುವ ಜನರಿಗೆ ಮತ್ತು ತಮ್ಮ ಸಕ್ಕರೆ ಅಥವಾ ಕ್ಯಾಲರಿ ಸೇವನೆಯನ್ನು ನಿಭಾಯಿಸಲು ನೆರವಾಗುವ ಪರ್ಯಾಯಗಳನ್ನು ಬಯಸುವವರಿಗೆ ಎರಿಥ್ರಿಟಾಲ್ ಅನ್ನು ಒಳಗೊಂಡಿರುವ ಸಕ್ಕರೆ ಮುಕ್ತ ಉತ್ಪನ್ನಗಳನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ.
ಈ ಸ್ಥಿತಿಯಲ್ಲಿರುವ ಜನರೂ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಪ್ರತಿಕೂಲ ಹೃದಯನಾಳ ಪರಿಣಾಮಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಸಕ್ಕರೆಗೆ ಹೋಲಿಸಿದರೆ ಎರಿಥ್ರಿಟಾಲ್ ಸುಮಾರು ಶೇ.70ರಷ್ಟು ಸಿಹಿಯನ್ನು ಒಳಗೊಂಡಿರುತ್ತದೆ ಮತ್ತು ಮೆಕ್ಕೆ ಜೋಳಕ್ಕೆ ಹುದುಗು ಬರಿಸುವ ಮೂಲಕ ಅದನ್ನು ಉತ್ಪಾದಿಸಲಾಗುತ್ತದೆ. ಸೇವನೆಯ ಬಳಿಕ ಎರಿಥ್ರಿಟಾಲ್ ಶರೀರದಿಂದ ಸಮರ್ಪಕವಾಗಿ ಚಯಾಪಚಯಗೊಳ್ಳುವುದಿಲ್ಲ,ಬದಲಿಗೆ ಅದು ರಕ್ತಪ್ರವಾಹವನ್ನು ಸೇರಿಕೊಳ್ಳುತ್ತದೆ ಮತ್ತು ಮುಖ್ಯವಾಗಿ ಮೂತ್ರದ ಮೂಲಕ ಶರೀರದಿಂದ ಹೊರಕ್ಕೆ ಹೋಗುತ್ತದೆ. ಮಾನವ ಶರೀರವು ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಎರಿಥ್ರಿಟಾಲ್ನ್ನು ಉತ್ಪಾದಿಸುತ್ತದೆ ಮತ್ತು ಯಾವುದೇ ಹೆಚ್ಚುವರಿ ಸೇವನೆಯು ಶರೀರದಲ್ಲಿ ಸಂಗ್ರಹಗೊಳ್ಳುತ್ತದೆ ಎಂದು ಅಧ್ಯಯನ ವರದಿಯು ತಿಳಿಸಿದೆ.
ಕೃತಕ ಸಿಹಿಕಾರಕಗಳನ್ನು ಮಾಪನ ಮಾಡುವುದು ಕಷ್ಟ ಮತ್ತು ಲೇಬಲಿಂಗ್ ಅಗತ್ಯಗಳು ಕನಿಷ್ಠವಾಗಿವೆ ಹಾಗೂ ಹೆಚ್ಚಿನ ವೇಳೆ ಪ್ರತ್ಯೇಕ ಸಂಯುಕ್ತಗಳನ್ನು ಪಟ್ಟಿ ಮಾಡುವುದಿಲ್ಲ.
ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತ (ಯುಎಸ್ ಎಫ್ಡಿಎ)ವು ಎರಿಥ್ರಿಟಾಲ್ನ್ನು ‘ಸಾಮಾನ್ಯವಾಗಿ ಸುರಕ್ಷಿತ’ ಎಂದು ಗುರುತಿಸಿದೆ,ಅಂದರೆ ದೀರ್ಘಾವಧಿಯ ಸುರಕ್ಷತಾ ಅಧ್ಯಯನಗಳ ಅಗತ್ಯವಿಲ್ಲ. ಇತ್ತೀಚಿನ ವರದಿಯ ಲೇಖಕರು ಸಾಮಾನ್ಯ ಜನಸಂಖ್ಯೆಯಲ್ಲಿ ತಾವು ಕಂಡುಕೊಂಡಿರುವ ಅಂಶಗಳನ್ನು ದೃಢೀಕರಿಸಲು ಅನುಸರಣಾ ಸಂಶೋಧನೆಯ ಪ್ರಾಮುಖ್ಯವನ್ನು ಒತ್ತಿ ಹೇಳಿದ್ದಾರೆ.