varthabharthi


ಅನುಗಾಲ

ಮರಳಿ ಮರಳಿನ ಮನೆಗೆ

ವಾರ್ತಾ ಭಾರತಿ : 2 Mar, 2023
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಯಾವ ಭಾರತವು ಸರ್ವಾಧಿಕಾರದಿಂದ ಮತ್ತೆ ಪ್ರಜಾಸತ್ತೆಗೆ ಮರಳಿತೋ ಅದು ಈಗ ಸದ್ದಿಲ್ಲದೆ ಮತ್ತೆ ತುರ್ತುಪರಿಸ್ಥಿತಿಯ ಅಧಿಕೃತ ಘೋಷಣೆಯಿಲ್ಲದೆ ಸರ್ವಾಧಿಕಾರದೆಡೆಗೆ ದಾಪುಗಾಲು ಹಾಕುತ್ತಿದೆ. ಮಾಧ್ಯಮಗಳು ತಲೆತಗ್ಗಿಸಿ ಶರಣಾಗತಿಯಾಗಿವೆ. ತಲೆಯೆತ್ತಿದ ಯಾರನ್ನೇ ಆಗಲಿ ಸದೆಬಡಿಯಲು ಎಲ್ಲ ಸರಕಾರಿ ಯಂತ್ರಗಳು ಸನ್ನದ್ಧವಾಗಿವೆ. ಎಲ್ಲೇ ಭಿನ್ನಮತ ವ್ಯಕ್ತವಾದರೆ ಅಲ್ಲಿ ಅಂತರ್ಜಾಲವನ್ನು ತುಂಡುಮಾಡುವುದರೊಂದಿಗೆ ದೇಶದ ಸಂಪರ್ಕಜಾಲವನ್ನೇ ಕತ್ತಲಲ್ಲಿಡುವ ಹೊಸತಂತ್ರವು ಬೆಳೆದಿದೆ. ಅಂತರ್‌ರಾಷ್ಟ್ರೀಯವಾಗಿ ಭಾರತದ ವರ್ಚಸ್ಸು ಬೆಳೆದಿದೆಯೆಂಬ ಚಿತ್ರವನ್ನು ಸರಕಾರವು ನೀಡುತ್ತಿದೆಯೇ ಹೊರತು ಸತ್ಯದ ಮುಖ ಸಾರ್ವಜನಿಕವಾಗಿ ಬೆಳಕಿಗೆ ಬರುತ್ತಿಲ್ಲ.ವಾತಾಪಿ-ಇಲ್ವಲರ ಕಥೆಯಂತೆ, ಸಮ್ಮೋಹನಾಸ್ತ್ರಕ್ಕೆ ಗುರಿಯಾದ ಅತಿರಥ ಮಹಾರಥರಂತೆ, ಪುರಾಣಗಳ, ಚರಿತ್ರೆಯ ಪ್ರತಿಮೆಗಳು, ರೂಪಕಗಳು, ಅಲಂಕಾರಗಳು ಮತ್ತೆ ಮತ್ತೆ ಉಲ್ಲೇಖಿಸಲ್ಪಡುವುದು ಅವುಗಳ ಸಾರ್ವಕಾಲಿಕತೆ ಮತ್ತು ಸಾರ್ವತ್ರಿಕತೆಗಳಿಂದಾಗಿ. ತಮ್ಮ ಕಾಲದ ಒಂದು ಸಂದರ್ಭದಲ್ಲಿ ಅಗತ್ಯವಾದ ಅವು ಎಲ್ಲ ಕಾಲಕ್ಕೂ ಸಲ್ಲುತ್ತವೆಯೆಂಬುದೇ ಬೆರಗು ತರಿಸುವ ವಿಚಾರ. ನಾವು ಸಾಹಿತ್ಯವೆಂದು ಹೇಳುವ ಎಲ್ಲ ದಾಖಲೆಗಳೂ ನಡೆದವು ಅಥವಾ ನಡೆದವೆಂದು ಯಾರೋ ಹೇಳಿದರು; ಬರೆದರು. ಐದು ದಶಕಗಳ ಹಿಂದೆ (1975ರಲ್ಲಿ) ಇಂದಿರಾಗಾಂಧಿಯ ಗದ್ದುಗೆ ಅಲ್ಲಾಡತೊಡಗಿದಾಗ ಭಾರತದಲ್ಲಿ ತುರ್ತು ಪರಿಸ್ಥಿತಿ ಬಂತು. ಭಾರತ ಮುಳುಗಿಯೇಹೋಯಿತೆಂದು ಬಹಳಷ್ಟು ಜನರು ಭಾವಿಸಿದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ನಲುಗಿಹೋಗುವ ಸ್ಥಿತಿ ಬರುತ್ತದೆಂದು ಯಾರು ತಿಳಿದಿರಲಿಲ್ಲವಾದರೂ ಆಡಳಿತದ ಅತೀ ಅಧಿಕಾರ ಮೋಹವು ಸರ್ವಾಧಿಕಾರದ ರೂಪವನ್ನು ತಳೆದು ಜನರ ಬಾಯಿಕಟ್ಟಿಹೋಗುವಂತಾಯಿತು. ಈ ಸಂದರ್ಭದಲ್ಲಿ ಆಡಳಿತಕ್ಕೆ ವಿರುದ್ಧವಾಗಿದ್ದ ಎಲ್ಲರೂ ಪ್ರಜಾಪ್ರಭುತ್ವವಾದಿಗಳೆಂದೂ ನಂಬಲಾಯಿತು. ಜಯಪ್ರಕಾಶ ನಾರಾಯಣರೆಂಬ ರಾಜಕೀಯ ಸಂತರ ನಾಯಕತ್ವದಲ್ಲಿ ಆಡಳಿತಕ್ಕೆ ವಿರೋಧವಾದ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಪರಸ್ಪರ ಭಿನ್ನತೆಯನ್ನು ಮರೆತು ಒಂದಾದವು. ಅವರವರ ಗುಪ್ತ ಕಾರ್ಯಸೂಚಿ ಮೂಲೆ ಸೇರಿತು. ಇದರರ್ಥ ಅವರೆಲ್ಲ ತಮ್ಮ ತಮ್ಮ ಕಾರ್ಯಸೂಚಿಯನ್ನು ಮರೆತರೆಂದಲ್ಲ. ಅವನ್ನು ಮಡಿಲೊಳಗಿಟ್ಟುಕೊಂಡೇ ಅವರು ನಡೆದರು. ಈ ಹೋರಾಟದಲ್ಲಿ ಸಾವಿರಾರು ಜನರು ಜೈಲು ಸೇರಿದರು. ಸಾಕಷ್ಟು ಜನರು ಸಾವು-ನೋವನ್ನು ಅನುಭವಿಸಿದರು. ಕಾರಣವೆಂದರೆ ಅವರಿಗೆ ತಮ್ಮ ಅಳಿವು-ಉಳಿವಿನ ಪ್ರಶ್ನೆಯಿತ್ತು. ಮಾಧ್ಯಮಗಳು ಅಭಿವ್ಯಕ್ತಿಯ ಬಾಯಿತೆರೆಯದೆ ಪ್ರಕಟವಾಗಬೇಕಾಯಿತು.

ಇರಲಿ; ಭಾರತವು 1977ರಲ್ಲಿ ತುರ್ತುಪರಿಸ್ಥಿತಿಯಿಂದ ಪಾರಾಗಿ ಚುನಾವಣಾ ರಾಜಕೀಯಕ್ಕೆ ಮರಳಿದಾಗ ವಿಶ್ವಾದ್ಯಂತ ಭಾರತದ್ದೇ ಸುದ್ದಿ. ಭಾರತದ ಸಂಸ್ಕೃತಿ ಎಷ್ಟು ಗಟ್ಟಿಯಿದೆಯೆಂದರೆ ಅದರ ಮೂಲ ಲಕ್ಷಣಗಳಾದ ಪ್ರಜಾಪ್ರಭುತ್ವ, ಬಹುಮುಖಿತ್ವ, ಜಾತ್ಯತೀತತೆ ಮುಂತಾದ ವೈವಿಧ್ಯಗಳು, ವೈಶಿಷ್ಟ್ಯಗಳು ಇವು ಅದನ್ನೆಂದಿಗೂ ಸರ್ವಾಧಿಕಾರವು ಆಳಲಾರದು ಎಂದು ಸಾಕಷ್ಟು ಮಂದಿ ಮಾತನಾಡಿಕೊಂಡರು. ರಾಬರ್ಟ್ ಡಿ.ಕಿಂಗ್ ಎಂಬ ರಾಜಕೀಯ ವಿಶ್ಲೇಷಕನು ಭಾರತ ತನ್ನ ಮೂಲಸ್ಥಿತಿಗೆ ಮರಳಿದ್ದರ ಸಂತಸ ಹಂಚಿಕೊಂಡು ಇತರ ಅನೇಕ ರಾಷ್ಟ್ರಗಳೊಂದಿಗೆ ಭಾರತವನ್ನು ಹೋಲಿಸಿ ಇತರ ದೇಶಗಳಲ್ಲಿ ಸರ್ವಾಧಿಕಾರಕ್ಕೆ ತಳ್ಳಿಕೊಂಡ ದೇಶವು ಮತ್ತೆಂದೂ ಪ್ರಜಾತಂತ್ರಕ್ಕೆ ಮರಳಲಿಲ್ಲವೆಂದೂ ಭಾರತ ಇದಕ್ಕೆ ಸದಾ ಅಪವಾದವಾಗಲಿದೆಯೆಂದೂ ವಿವರಿಸಿದ್ದ. ಉತ್ತರ ಕೊರಿಯಾ, ಚೀನಾ ಮತ್ತು ಕೆಲವು ಆಫ್ರಿಕನ್ ಹಾಗೂ ಇಸ್ಲಾಮಿಕ್ ರಾಷ್ಟ್ರಗಳನ್ನು ಆತ ಉದಾಹರಿಸಿದ್ದ. ಭಾರತೀಯರು ಯುರೋಪಿಯನರ ಆಡಳಿತಕ್ಕೆ ಸಿಲುಕಿದಾಗಲೂ ಹೇಗೆ ಭಾರತೀಯತೆಯ ಸಲ್ಲಕ್ಷಣಗಳಾದ ತ್ಯಾಗ-ಬಲಿದಾನಗಳ ಮೂಲಕ ವಸಾಹತುಶಾಹಿ ಆಡಳಿತದಿಂದ ಮುಕ್ತವಾಯಿತೆಂಬುದನ್ನೂ ಉದಾಹರಿಸಿದ್ದ. ಇದಕ್ಕೆ ಸರಿಯಾಗಿ ಭಾರತವು ಅಲ್ಪಸಂಖ್ಯಾತ ತುಷ್ಟೀಕರಣವೆಂದು ಜನ ಆಡಿಕೊಳ್ಳುತ್ತಿದ್ದ ವಿಭಜಕ ರಾಜಕೀಯದಿಂದಲೂ ಹೊರಬರಲು ಶಕ್ತವಾಯಿತು. ಕಾಂಗ್ರೆಸ್‌ನಂತಹ ಐತಿಹಾಸಿಕ ಪಕ್ಷವು ಕ್ಷೀಣವಾದದ್ದು ಪ್ರಾಯಶಃ ಇದರಿಂದಲೇ. ಇನ್ನೂ ಒಂದು ಕಾರಣವನ್ನು ಹೇಳಬಹುದಾದರೆ ಗ್ರಾಮೀಣ ಮತ್ತು ಬಡ ಜನರನ್ನು ಅದು ತನ್ನ ಸ್ವತ್ತುಗಳಂತೆ ಕಂಡು ಅವರು ಕಾಂಗ್ರೆಸಿನಿಂದಾಚೆಗೆ ನೋಡಲಾರರೆಂಬ ಅತೀವ ಆತ್ಮವಿಶ್ವಾಸ. ಹೀಗಾಗಿ ತುರ್ತುಪರಿಸ್ಥಿತಿಯಿಂದ ಮಾತ್ರ ಜನತೆ ಹೊರಬಂದದ್ದಲ್ಲ; ಕಾಂಗ್ರೆಸಿನ ಬೆಂಬಲದ ಮನಸ್ಥಿತಿಯಿಂದಲೂ ಹೊರಬಂತು.

ಈ ಸಂದರ್ಭದಲ್ಲಿ ನಡೆದ ಮುಖ್ಯ ಬೆಳವಣಿಗೆಯೆಂದರೆ ಆರೆಸ್ಸೆಸ್ ಪ್ರಾಯೋಜಕತ್ವದ ಜನಸಂಘವು ಭಾರತೀಯ ಜನತಾಪಕ್ಷವಾಗಿ ಉದಯವಾದದ್ದು. ಇಂದು ಸ್ಥಳ ನಾಮಕರಣಗಳು ನಡೆಯುತ್ತಿರುವುದಾದರೂ 1977ರಲ್ಲಿ ಭಾರತೀಯ ಜನಸಂಘವು ಸಮುಷ್ಟಿಯ ಜನತಾ ಪಕ್ಷದಲ್ಲಿ ಲೀನವಾದಂತಿತ್ತು. ವೈವಿಧ್ಯದಲ್ಲಿ ಐಕ್ಯವನ್ನು ನಿರ್ಧರಿಸಿತು. ಇತರ ವಿರೋಧ ಪಕ್ಷಗಳಿಗೆ ಹೆತ್ತ ತಾಯಿ-ಸಾಕುತಾಯಿ ಎಂಬ ಎರಡು ಮಾತೃತ್ವವಿರಲಿಲ್ಲ. ಆದರೆ ಜನಸಂಘದ ಹುರಿಯಾಳುಗಳಿಗೆ ತಮ್ಮ ತಾಯಿಬೇರಾದ ಆರೆಸ್ಸೆಸ್‌ನ್ನು ತೊರೆದು ಹೊಸ ಜೋಡಣೆಯೊಂದಿಗೆ ಸೇರುವುದು ಸುಲಭಸಾಧ್ಯವಾಗಿರಲಿಲ್ಲ. ಆದರೂ ಇಬ್ಬಗೆಯ ಸಖ್ಯವನ್ನು, ನಿಷ್ಠೆಯನ್ನು ತೊರೆಯುವ ಸಂಕಲ್ಪವನ್ನು ಮಾಡಿ ಇತರ ಎಲ್ಲ ವಿರೋಧ ಪಕ್ಷಗಳೊಂದಿಗೆ ಈ ವಿಲೀನವು ನಡೆದಿತ್ತು. ಆರಂಭವಾದ್ದಕ್ಕೆಲ್ಲ ಅಂತ್ಯವಿದ್ದೇ ಇದೆ. ಕೇವಲ ಹದಿನೆಂಟು ತಿಂಗಳುಗಳ ಬಳಿಕ ಅದೇ ಸರ್ವಾಧಿಕಾರವು ಚುನಾವಣೆಯನ್ನು ಘೋಷಿಸಿತು; ಪರಿಣಾಮವಾಗಿ ಸರ್ವಾಧಿಕಾರವು ಸೋತು ಚುನಾಯಿತ ಸರಕಾರವು ಅಧಿಕಾರವನ್ನು ಹಿಡಿಯಿತು. ನಮ್ಮ ಪ್ರಜಾಪ್ರಭುತ್ವವು ಹೇಗಿದೆಯೆಂದರೆ ಒಮ್ಮೆ ಚುನಾಯಿಸಿದೆವೆಂದರೆ ಮುಂದಿನ ನಡೆ ನಮ್ಮ ಪ್ರತಿನಿಧಿಗಳದ್ದೇ; ನಮಗೆ ಅದರಲ್ಲಿ ಯಾವ ಅಧಿಕಾರವಾಗಲೀ ಪ್ರಾತಿನಿಧ್ಯವಾಗಲೀ ಇಲ್ಲ. 1980ರಲ್ಲಿ ನಡೆದದ್ದೂ ಇದೇ.

ಸರ್ವಾಧಿಕಾರದ ವಿರುದ್ಧ ನಿಂತವರು ಅಧಿಕಾರದ ರುಚಿ ಕಂಡದ್ದೇ ತಡ, ತಾವೂ ಪರಮಾಧಿಕಾರಪಡೆದವರಂತೆ ಮಾತ್ರವಲ್ಲ, ತಮ್ಮಾಳಗೇ ಇತರರಿಗಿಂತ ತಾವು ಹೆಚ್ಚು ಪ್ರಜಾಪ್ರಭುತ್ವವಾದಿಗಳು, ಶ್ರೇಷ್ಠರು ಎಂಬಂತೆ ವರ್ತಿಸಿದರು. ನಾಣ್ಣುಡಿಯ ಏಡಿಗಳಂತೆ ಒಬ್ಬರ ಕಾಲನ್ನು ಇನ್ನೊಬ್ಬರು ಹೀಗೆ ಪರಸ್ಪರ ಕಾಲೆಳೆಯುತ್ತ ಜನರಿಗೆ ಕೊಟ್ಟ ಮಾತನ್ನು ಮರೆತರು. ಪರಿಣಾಮವಾಗಿ ಮತ್ತೆ ಹಿಂದಿನವರಿಗೇ ಅಧಿಕಾರ ನೀಡಿದರು. ಈ ಬಾರಿ ಆಕೆ ಜಾಗರೂಕರಾಗಿದ್ದರು. ಆದರೆ ರಾಜಕೀಯದ ಏರುಪೇರು ಇಂದಿರಾ ಹತ್ಯೆಯಲ್ಲಿ ಕೊನೆಗಂಡದ್ದು, ಆನಂತರ ಬಂದ ರಾಜೀವ್ ಗಾಂಧಿಯೂ ದುರಂತವನ್ನು ಕಂಡದ್ದು, ಇವೆಲ್ಲ ಕಾಂಗ್ರೆಸನ್ನು ಬಲವಾಗಿಯೇ ಅಲುಗಾಡಿಸಿದವು. ನಡುವೆ ಬಂದ ಇತರ ಸರಕಾರಗಳು ಖಚಿತ ಸ್ಥಿತಿಯನ್ನು ಕಂಡುಕೊಳ್ಳುವಲ್ಲಿ ವಿಫಲವಾದವು. ಈ ನಡುವೆ ಜನಸಂಘದ ಸದಸ್ಯರು ಜನತಾಪಕ್ಷದೊಂದಿಗೆ ಹೊಂದಿಕೊಳ್ಳಲಾಗದೆ ಹೊರಬಂದರೆಂದು ಪ್ರತೀತಿ. ಜಯಪ್ರಕಾಶ ನಾರಾಯಣರು ಕನಸುಕಂಡ ಜನತಾಪಕ್ಷವು ಅದರ ನಾಯಕರ ಅಧಿಕಾರದ ಆಸೆಯ ಬಿಸಿಗೆ ಕರಗಿಹೋಯಿತು. ಅದರಲ್ಲೂ ಭಾರತೀಯ ಜನಸಂಘದ ಪ್ರತಿನಿಧಿಗಳೆಲ್ಲ ಸೇರಿ ಭಾರತೀಯ ಜನತಾ ಪಕ್ಷವನ್ನು ಸ್ಥಾಪಿಸಿದರು.

ಮೊದಲಲ್ಲಿ ಭಾರೀ ನಿರೀಕ್ಷೆಯನ್ನು ಕಾಣದಿದ್ದರೂ ಆನಂತರದ ಮೂರು ದಶಕಗಳಲ್ಲಿ ಜನತಾಪಕ್ಷದ ಇತರ ಯಾವ ಅಂಗಪಕ್ಷವೂ ಕಾಣದ ಬೆಳವಣಿಗೆಯನ್ನು ಭಾರತೀಯ ಜನತಾಪಕ್ಷವು ಕಂಡಿತು. 1990ರ ದಶಕದ ಅಯೋಧ್ಯಾ ಚಳವಳಿಯಂತೂ ರಾಜಕೀಯ ಧ್ರುವೀಕರಣದ ರಾಕ್ಷಸ ಹೆಜ್ಜೆಯಾಯಿತು. 2013ರಲ್ಲಿ ಮಹತ್ತರವಾದ ಬದಲಾವಣೆಯಾಯಿತು. ಈಗಾಗಲೇ ಸತತ ಎರಡು ಬಾರಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಿದೆ. ಭಾಜಪವು ಅಧಿಕಾರಕ್ಕೆ ಬಂದಿದೆ ಎನ್ನುವುದಕ್ಕಿಂತಲೂ ಮೋದಿ ಅಧಿಕಾರಕ್ಕೆ ಬಂದಿದ್ದಾರೆ ಎಂಬ ರೀತಿಯ ಸ್ಥಿತಿ-ಗತಿಯುಂಟಾಗಿದೆ. ಒಬ್ಬರೇ ವ್ಯಕ್ತಿ ಎಲ್ಲ ಕಡೆ ಇರುವುದಕ್ಕಾಗುವುದಿಲ್ಲ ಮತ್ತು ಹಾಗಿರಲು ನಮ್ಮ ಸಂವಿಧಾನವು ಅವಕಾಶ ನಿಡುವುದಿಲ್ಲ ಎಂಬುದರಿಂದಾಗಿ ಅವರೊಂದಿಗೆ ಅಷ್ಟೂ ಮಂದಿ ಜನಪ್ರತಿನಿಧಿಗಳು ವಿವಿಧ ಸ್ಥಾನಗಳಲ್ಲಿ ಅಸೀನರಾಗಿದ್ದಾರೆ. ಇಲ್ಲವಾದರೆ ಕೇಂದ್ರದ ಎಲ್ಲ ಸಚಿವ ಸ್ಥಾನಗಳು ಮಾತ್ರವಲ್ಲ, ಸಂಸದರ ಸ್ಥಾನವನ್ನೂ ಹಾಗೆಯೇ ಅವರ ನಿಯಂತ್ರಣದಲ್ಲಿರುವ ಎಲ್ಲ ರಾಜ್ಯ ಸರಕಾರಗಳಲ್ಲೂ ಹದಿನಾರು ಸಾವಿರದ ನೂರೆಂಟು ಗೋಪಿಕಾಸ್ತ್ರೀಯರೊಂದಿಗೆ ರಂಜಿಸಿದ ಗೋಕುಲದ ರಾಧಾಕೃಷ್ಣನಂತೆ ಮೋದಿಯೇ ಇರುತ್ತಿದ್ದರೇನೋ?
 
ಈ ಹಂತದಲ್ಲಿ ಭಾರತೀಯ ಜನತಾಪಕ್ಷದ ಧೋರಣೆಗಳನ್ನು, ಬೆಳವಣಿಗೆಯನ್ನು ಸಿಂಹಾವಲೋಕಿಸಿದರೆ 1980ರಲ್ಲಿ ಜನತಾಪಕ್ಷವು ಒಡೆದದ್ದು ಆಕಸ್ಮಿಕವಲ್ಲವೆನ್ನಿಸುತ್ತದೆ. ಇದರ ಕಾರ್ಯಯೋಜನೆಯು ಆರೆಸ್ಸೆಸ್‌ನ ದೀರ್ಘಕಾಲೀನ ಯೋಜನೆಯ ಮೊದಲ ಹೆಜ್ಜೆಯಂತೆ ಕಾಣಿಸುತ್ತದೆ. ಇದು ರಾಜಕೀಯ ಮಾತ್ರವಲ್ಲದೆ, ಸಾಂಸ್ಕೃತಿಕವಾಗಿ ಜನರನ್ನು ಮತೀಯವಾಗಿ ಒಗ್ಗೂಡಿಸಲು ನಡೆದ ಸಂಚಿನಂತೆ ಕಾಣಿಸುತ್ತದೆ. ಮೊದಲು ಎಲ್ಲರೊಂದಿಗೆ ಸೇರಿಕೊಳ್ಳುವುದು; ಬಳಿಕ ಶಸ್ತ್ರಚಿಕಿತ್ಸೆಯಿಂದ ಪ್ರತ್ಯೇಕಿಸಿ ಹೊಸ ಸೃಷ್ಟಿಯನ್ನು ಪಡೆಯುವುದು. ಇಲ್ಲೇ ಆರಂಭದಲ್ಲಿ ಪ್ರಸ್ತಾವಿಸಿದ ಹಾಗೆ ವಾತಾಪಿ ಇಲ್ವಲರ ಪುರಾಣಕಥೆಯನ್ನು ಬಳಸಬಹುದು. ಕಥೆಯಲ್ಲಿ ಬರುವ ವಾತಾಪಿ ಇಲ್ವಲರೆಂಬ ದುರುಳ ರಕ್ಕಸರು ಇಂದ್ರನಂತಹ ಮಗನು ಬೇಕೆಂದು ಬ್ರಾಹ್ಮಣರನ್ನು ಅನುಗ್ರಹಕ್ಕಾಗಿ ಬೇಡಿ ಅವರು ಒಪ್ಪದಿದ್ದಾಗ, ಬ್ರಾಹ್ಮಣರನ್ನು ಪೀಡಿಸತೊಡಗಿದರು. ಅವರನ್ನು ಮನೆಗೆ ಆಹ್ವಾನಿಸುವುದು; ಬ್ರಾಹ್ಮಣರು ಮಾಂಸದಾಸೆಗೆ ಬರುವುದು; ಇಲ್ವಲನು ವಾತಾಪಿಯನ್ನು ಮೇಕೆಯಾಗಿಸಿ ಕೊಂದು ಆ ಮಾಂಸವನ್ನು ಬ್ರಾಹ್ಮಣರಿಗೆ ಅಡುಗೆ ಮಾಡಿ ಬಡಿಸುವುದು; ಅವರು ತಿಂದು ಹೊಟ್ಟೆಯ ಮೇಲೆ ಕೈಯಾಡಿಸುವ ಹೊತ್ತಿನಲ್ಲಿ ಇಲ್ವಲನು ‘‘ವಾತಾಪಿ ಹೊರಗೆ ಬಾ’’ ಎಂದು ಕರೆದ ಕೂಡಲೇ ವಾತಾಪಿಯು ಬ್ರಾಹ್ಮಣರ ಹೊಟ್ಟೆಯನ್ನು ಸೀಳಿ ಹೊರಗೆ ಬರುತ್ತಿದ್ದ. ಹೀಗೆ ಅನೇಕ ಬ್ರಾಹ್ಮಣರು ಸತ್ತರು.

ಹೊರಗಿರುವ ಸೋದರನು ಒಳಗಿರುವ ಸೋದರನನ್ನು ಕರೆಯುವುದು; ಅವನು ಈ ಅತಿಥಿಯ ಹೊಟ್ಟೆ ಸೀಳಿ ಹೊರಬರುವುದು. ಒಮ್ಮೆ ಅಗಸ್ತ್ಯನು ಧನಾಪೇಕ್ಷೆಯಿಂದ ಇಲ್ವಲನಲ್ಲಿಗೆ ಬಂದಿದ್ದಾಗ ಇಲ್ವಲನು ಹೀಗೆಯೇ ಮಾಡಿದ. ಇದರ ಗುಟ್ಟನ್ನರಿತ ಅಗಸ್ತ್ಯನು ‘‘ವಾತಾಪಿ ಜೀರ್ಣೋಭವ’’ ಎಂದ. ವಾತಾಪಿ ಜೀರ್ಣವಾಗಿ ಹೋದ. ಇದರಿಂದ ಹೆದರಿದ ಇಲ್ವಲನು ಪರಪೀಡನೆಯನ್ನು ಬಿಟ್ಟ. ಆದರೆ ಭಾರತೀಯ ಜನತಾಪಕ್ಷವು ಜನತಾಪಕ್ಷದ ಹೊಟ್ಟೆಯನ್ನು ಸೀಳಿಯೇ ಹೊರಬಂದ ಪಕ್ಷ. ಅದು ಜೀರ್ಣವಾಗಲಿಲ್ಲ. ಬದಲಾಗಿ ಇನ್ನಷ್ಟು ಶಕ್ತವಾಯಿತು. ದೇಶಾದ್ಯಂತ ತನ್ನ ಕಬಂಧಬಾಹುಗಳನ್ನೂ ಬಿಳಲುಗಳನ್ನೂ ಬೆಳೆಸಿ ಈಗ ಭಾರತದ ಇತಿಹಾಸವಾಗತೊಡಗಿದೆ. ಇಲ್ಲಿಯೂ ಕಥೆಯ ಇನ್ನೊಂದು ರೂಪ ಸ್ಪಷ್ಟವಾಗತೊಡಗಿದೆ. ವಾತಾಪಿಯ ಹಾಗೆ ಭಾರತೀಯ ಜನತಾಪಕ್ಷವು ಹೊರಬಂದರೂ ಅದು ಹೊರಬರಲು ಕಾರಣವಾದ ಆರೆಸ್ಸೆಸ್ ಒಂದರ್ಥದಲ್ಲಿ ಜೀರ್ಣವಾಗತೊಡಗಿದೆ. ಮೋಹನ ಭಾಗವತರು ತಾವಿನ್ನೂ ಪ್ರಸ್ತುತವಾಗಿದ್ದೇವೆಂದು ಸ್ಥಾಪಿಸುವಂತೆ ಆಗಾಗ ಭಾರತೀಯತೆ, ಹಿಂದುತ್ವ, ಜಾತ್ಯತೀತತೆ ಮುಂತಾದ ಮತ್ತು ಇನ್ನು ಕೆಲವೊಮ್ಮೆ ಪರಸ್ಪರ ತದ್ವಿರುದ್ಧವಾದ ಹೇಳಿಕೆಗಳೂ ಸೇರಿದಂತೆ ಸಾರ್ವಜನಿಕವಾಗುತ್ತಿದ್ದಾರೆ. ಆದರೆ ಅದನ್ನು ಲೆಕ್ಕಿಸುವ ಸ್ಥಿತಿಯಲ್ಲಿ ಭಾಜಪವೂ ಇಲ್ಲ. ಏಕೆಂದರೆ ಅದೀಗ ಮೋದಿಯೆಂಬ ರೈಲ್ವೇ ಇಂಜಿನಿಗೆ ತಾಗಿದ, ಇಂಜಿನನ್ನು ಅನುಸರಿಸುವ, ನಿರ್ಜೀವ ಬೋಗಿಗಳಂತಿವೆ. ಪಂಚಾಯತ್ ಚುನಾವಣೆಗಳಲ್ಲೂ ಮೋದಿ ಬಂದು ಪ್ರಚಾರ ಮಾಡಿದರೆ ಮಾತ್ರ ಮತ ಎಂಬ ಹಂತದ ಸ್ಥಿತಿ ಎದುರಾಗಿದೆ.

ಈಗ ಮೋದಿಯ ಸರ್ವಾಧಿಕಾರ ಎಷ್ಟು ಬೆಳೆದಿದೆಯೆಂದರೆ ತಾಯಿಬೇರನ್ನೇ ಕಡಿದು ಕಷಾಯಮಾಡಿ ಕುಡಿದು ಬೆಳೆದಂತಿದೆ. ಈಗ ಭಾರತದಲ್ಲಿ ಅಧಿಕೃತವಾಗಿ ತುರ್ತುಪರಿಸ್ಥಿತಿಯಿಲ್ಲ. ಆದರೆ ದೇಶವಿಡೀ ಬೂದಿ ಮುಚ್ಚಿದ ಕೆಂಡದಂತಿದೆ. ಬಹುಸಂಖ್ಯಾತ ಜಾತೀಯತೆ ಅಲ್ಪಸಂಖ್ಯಾತರ ಮೇಲೆ ಬೇಕಾಬಿಟ್ಟಿ ಸವಾರಿ ಮಾಡಲು ಎಲ್ಲ ಅನುಕೂಲಗಳನ್ನು ಮೋದಿ ಸರಕಾರವೇ ಒದಗಿಸುತ್ತಿದೆ. ಆದರೆ ಇದ್ಯಾವುದೂ ಮುಖ್ಯವಾಗದಿರುವ ಇನ್ನೊಂದು ಅಂಶವನ್ನು ಗಮನಿಸಬೇಕಾಗಿದೆ. ಯಾವ ಭಾರತವು ಸರ್ವಾಧಿಕಾರದಿಂದ ಮತ್ತೆ ಪ್ರಜಾಸತ್ತೆಗೆ ಮರಳಿತೋ ಅದು ಈಗ ಸದ್ದಿಲ್ಲದೆ ಮತ್ತೆ ತುರ್ತುಪರಿಸ್ಥಿತಿಯ ಅಧಿಕೃತ ಘೋಷಣೆಯಿಲ್ಲದೆ ಸರ್ವಾಧಿಕಾರದೆಡೆಗೆ ದಾಪುಗಾಲು ಹಾಕುತ್ತಿದೆ. ಮಾಧ್ಯಮಗಳು ತಲೆತಗ್ಗಿಸಿ ಶರಣಾಗತಿಯಾಗಿವೆ. ತಲೆಯೆತ್ತಿದ ಯಾರನ್ನೇ ಆಗಲಿ ಸದೆಬಡಿಯಲು ಎಲ್ಲ ಸರಕಾರಿ ಯಂತ್ರಗಳು ಸನ್ನದ್ಧವಾಗಿವೆ. ಎಲ್ಲೇ ಭಿನ್ನಮತ ವ್ಯಕ್ತವಾದರೆ ಅಲ್ಲಿ ಅಂತರ್ಜಾಲವನ್ನು ತುಂಡುಮಾಡುವುದರೊಂದಿಗೆ ದೇಶದ ಸಂಪರ್ಕಜಾಲವನ್ನೇ ಕತ್ತಲಲ್ಲಿಡುವ ಹೊಸತಂತ್ರವು ಬೆಳೆದಿದೆ. ಅಂತರ್‌ರಾಷ್ಟ್ರೀಯವಾಗಿ ಭಾರತದ ವರ್ಚಸ್ಸು ಬೆಳೆದಿದೆಯೆಂಬ ಚಿತ್ರವನ್ನು ಸರಕಾರವು ನೀಡುತ್ತಿದೆಯೇ ಹೊರತು ಸತ್ಯದ ಮುಖ ಸಾರ್ವಜನಿಕವಾಗಿ ಬೆಳಕಿಗೆ ಬರುತ್ತಿಲ್ಲ. ಪ್ರತಿಪಕ್ಷಗಳು ಜಯಪ್ರಕಾಶನಾರಾಯಣರಿಲ್ಲದೆ ಬಳಲುತ್ತಿವೆ. ಗೋಕುಲದಲ್ಲಿ ಬೆಳೆಯುವ ಕೃಷ್ಣನಂತೆ ಎಎಪಿಯಂತಹ ಪುಟ್ಟಪಕ್ಷಗಳು ಬೆಳೆಯುತ್ತಿವೆಯೆಂಬ ಭಯವು ಸರ್ವಾಧಿಕಾರವೆಂಬ ಕಂಸನನ್ನು ಕಾಡುತ್ತಿದೆ. ಮತ್ತೆ ಪ್ರಜಾಸತ್ತೆ ಅನಿವಾರ್ಯವೆಂಬ ಸ್ಥಿತಿಯು ದೇಶಕ್ಕೆ ಅನಿವಾರ್ಯವಾಗುವ ವರೆಗೂ ಇದೇ ಭೀತಸ್ಥಿತಿಯು ಮುಂದುವರಿಯಬಹುದು. ಬಂಧನಗಳು ಹೆಚ್ಚಾದಷ್ಟೂ ಜನರು ಜಾಗೃತರಾಗುತ್ತಾರೆ. ಆ ಜಾಗೃತಿಯು ಬೇಗಬರಬೇಕಾದರೆ ಈ ಸರ್ವಾಧಿಕಾರದ ಮರಳು ಇನ್ನಷ್ಟು ಬಿಸಿಯಾಗಬೇಕು; ಭ್ರಮೆಯಿಂದಿರುವ ಮನಸ್ಸುಗಳೂ ಕಾದು ಕೆಂಡವಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)