ಸೈತಾನನ ಸೋಂಕು ಮತ್ತು ಹೆಣಭಾರ
ಆ ವ್ಯಕ್ತಿ ಅಳುತ್ತಾ ಹೇಳಿದ್ದು, ''ನಾನು ಜೀವಂತ ಶವದಂತೆ ಉಳಿದುಕೊಂಡಿದ್ದೇನೆ. ನನ್ನ ದೇಹ ಜೀವಂತವಾಗಿದೆ ಅಂತ ಗೊತ್ತಿದೆ. ಆದರೆ ನಾನು ಜೀವಂತವಾಗಿಲ್ಲ.''
ಹೌದು, ಆ ವ್ಯಕ್ತಿಯಲ್ಲಿ ಹಳೆಯ ಕೋಪ, ನೋವು, ನಿರಾಸೆ, ಅವಮಾನ, ಸಂಘರ್ಷ, ಅಸೂಯೆ, ದ್ವೇಷ, ದುರಾಸೆ, ವಿಷಾದಗಳೆಲ್ಲವೂ ಜೀವಂತವಾಗಿದೆ. ಈ ಸೈತಾನಗಳು ಒಳಗೆ ಇದ್ದಷ್ಟೂ ವ್ಯಕ್ತಿಯಲ್ಲಿ ಒತ್ತಡ ಮತ್ತು ಉದ್ವೇಗ; ಎರಡೂ ತಪ್ಪದು. ಅವಿತಿಟ್ಟುಕೊಂಡಿರುವ ಈ ಸೈತಾನ್‌ಗಳ ಸಂತಾನವೇ ಬೇಸರ, ಜಡತ್ವ, ಹತಾಶೆ, ಉದ್ವಿಗ್ನತೆ, ಆಕ್ರೋಶ, ಅಸಹನೆ, ಹೊಂದಿಕೊಳ್ಳಲಾಗದೆ ಇರುವುದು, ಜಿಗುಪ್ಸೆ, ಹಟಮಾರಿತನ, ಜಿದ್ದು, ಸೇಡಿನ ಭಾವನೆ ಇತ್ಯಾದಿ. ಈ ಸಂತಾನವು ತಾವು ಉಳಿದು ಬೆಳೆದುಕೊಂಡಿರಲು ಸೈತಾನ್‌ಗಳನ್ನು ಅವಲಂಬಿಸಿರುತ್ತವೆ. ತಮ್ಮ ಪೋಷಣೆಯನ್ನು ಅದರಿಂದಲೇ ಮಾಡಿಕೊಳ್ಳುವುದು. ಅವುಗಳು ತಮ್ಮ ಶಕ್ತಿ ಪ್ರದರ್ಶನ ಮಾಡಲು, ಅದರ ವಿರುದ್ಧದ ಸಕಾರಾತ್ಮಕ ಧೋರಣೆಗಳನ್ನು ಬೆಳೆಯಲು ಬಿಡುವುದಿಲ್ಲ. ಅವುಗಳು ಪ್ರವೇಶಿಸಿದರೆ, ಉಳಿದರೆ ತಾವು ಅಳಿದು ಹೋಗುತ್ತೇವೆಂಬ ಭಯದಲ್ಲಿ ಅವುಗಳನ್ನು ತಳ್ಳುತ್ತಲೇ ಇರುತ್ತವೆ.
ರಚನಾತ್ಮಕವಾದ ಕೆಲಸಗಳು, ಕ್ಷಮೆ, ಕರುಣೆ, ಔದಾರ್ಯದ ದೃಷ್ಟಿಕೋನಗಳು, ಹೊಂದಿಕೊಳ್ಳುವ ಗುಣ, ಸಹಾನುಭೂತಿಯಿಂದ (ಎಂಪತಿ) ಕಾಣುವುದು. ಇವೆಲ್ಲಾ ಬಂದುಬಿಟ್ಟರೆ ವ್ಯಕ್ತಿಯಲ್ಲಿ ಸೈತಾನ ಮತ್ತದರ ಸಂತಾನಕ್ಕೆ ಉಳಿಗಾಲವಿಲ್ಲ. ಆದರೆ ಈ ರಚನಾತ್ಮಕ ಧೋರಣೆ, ಮನೋಭಾವ, ಚಟುವಟಿಕೆಗಳೇ ಜೀವಂತಿಕೆಯಿಂದ ಇರುವ ಲಕ್ಷಣಗಳು. ಜಗತ್ತಿನ ಎಲ್ಲಾ ಧರ್ಮಗಳು ಸೈತಾನ ಎಂದು ಬೊಟ್ಟು ಮಾಡಿದ್ದು ನಕಾರಾತ್ಮಕವಾದ ಮನಸ್ಥಿತಿಯನ್ನೇ, ಅದರ ಮೂಲವನ್ನೇ. ವ್ಯಕ್ತಿಯು ತಾನು ಜೀವಂತವಾಗಿದ್ದೇನೆಂಬುದನ್ನು ಅನುಭವಿಸಬೇಕಾದರೆ ಸೃಜನಶೀಲವಾಗಿ, ರಚನಾತ್ಮಕವಾಗಿ, ಅನಸೂಯವಾಗಿ, ಉದಾರವಾಗಿ, ಸೌಹಾರ್ದದಲ್ಲಿ ಬಾಳಲು ಬೇಕಾದ ಧೋರಣೆಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ ಮತ್ತು ಅಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ತಮ್ಮದೇ ಅಹಂಕಾರವನ್ನು ಮಣಿಸಿಕೊಳ್ಳಬೇಕಾಗುತ್ತದೆ. ಆಗ ಹಳೆಯ ಭೂತ ಬಾಧೆಯಿಂದ ಬಿಡುಗಡೆ ಹೊಂದಿ ಜೀವಂತಿಕೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಈ ಸೈತಾನ ಮತ್ತದರ ಸಂತಾನ ಪರಾವಲಂಬಿ ಜೀವಿಗಳಂತೆ ನಮ್ಮಲ್ಲಿ ಇದೆ ಎಂದು ತಿಳಿಯುವುದಾದರೂ ಹೇಗೆ?
ದೇಹದ ಯಾವುದಾದರೊಂದು ಭಾಗದ ಮೇಲೆ ಗಾಯವಾದರೆ ಆಗ ನೋಯುತ್ತದೆ. ಗಾಯವು ಕೆಲವು ಬಗೆಯ ಉಪಚಾರಕ್ಕೆ ಒಳಗಾಗಿ ನಂತರ ಅದು ಮಾಯುತ್ತದೆ, ಒಣಗುತ್ತದೆ, ಗುಣವಾಗುತ್ತದೆ. ಆದರೆ, ಅದೆಷ್ಟು ಕಾಲವೇ ಆದರೂ ಅದು ಮಾಯುತ್ತಿಲ್ಲ, ಒಣಗುತ್ತಿಲ್ಲ, ಗುಣವಾಗುತ್ತಿಲ್ಲ, ನೋವು ಇನ್ನೂ ಇದೆ, ಕಡಿಮೆಯಾಗುವ ಬದಲು ಹೆಚ್ಚುತ್ತಾ ಇದೆ ಎಂದರೆ ಅರ್ಥ, ಅದು ವ್ರಣವಾಗಿದೆ. ಸೋಂಕು ತಗಲಿದೆ. ಅದು ಕೊಳೆಯುತ್ತಿದೆ. ಅದರಲ್ಲಿ ಆರೋಗ್ಯವನ್ನು ವೃದ್ಧಿಸುವ ಜೀವಕೋಶಗಳ ಬದಲಾಗಿ ಸೋಂಕು ಹರಡುವ, ಕೊಳೆಸುವಂತಹ ಜೀವಕೋಶಗಳು ತಮ್ಮ ಪ್ರಾಬಲ್ಯವನ್ನು ತೋರುತ್ತಿವೆ ಎಂದಾಯಿತು. ಅದೇ ರೀತಿಯಲ್ಲಿ ವ್ಯಕ್ತಿಯ ಮನಸ್ಸಿನಲ್ಲಿ ಅದೆಷ್ಟು ಕಾಲವಾದರೂ ಯಾವುದೇ ವ್ಯಕ್ತಿ ಅಥವಾ ಸಂಗತಿಯ ವಿಷಯದಲ್ಲಿ ನೋವಿದೆ, ಅಸಹನೆ ಇದೆ, ಕೋಪವಿದೆ, ಸೇಡಿನ ಭಾವನೆ ಇದೆ ಹಾಗೂ ಅದು ಹೆಚ್ಚುತ್ತಾ ಇದೆ, ಕಡಿಮೆಯಾಗುತ್ತಿಲ್ಲ ಎಂದರೆ ಆ ವ್ಯಕ್ತಿಯ ಮನಸ್ಸಿಗೆ ಸೈತಾನನ ಸೋಂಕು ತಗಲಿದೆ ಎಂದೇ ಅರ್ಥ.
ದೇಹದಲ್ಲಿ ಬೇಡದ ಅಥವಾ ಬೇಕಾದ ಜೀವಕೋಶಗಳು ಇರುವಂತೆ ಮನಸ್ಸಿನಲ್ಲಿ ಅಗತ್ಯದ ಮತ್ತು ಅನಗತ್ಯದ ಆಲೋಚನೆಗಳು ಇರುತ್ತವೆ. ದೇಹವನ್ನು ಅಸ್ತಿತ್ವದಲ್ಲಿ ಇಡುವುದು ಜೀವಕೋಶಗಳು. ಮನಸ್ಸನ್ನು ಅಸ್ತಿತ್ವದಲ್ಲಿ ಇಡುವುದು ಆಲೋಚನೆಗಳು. ಆಲೋಚನೆಗಳು ರೂಢಿಗತವಾಗಿದ್ದರೂ, ಒಮ್ಮೆ ಎಚ್ಚೆತ್ತುಕೊಂಡು, ಹೊಟ್ಟು ಕಾಳು ಬೇರ್ಪಡಿಸುವಂತೆ ಅಗತ್ಯದ ಮತ್ತು ಅನಗತ್ಯದ ಆಲೋಚನೆಗಳನ್ನು ಕೇರಿ ಹಾಕುವ ಕೆಲಸ ಮಾಡಲೇ ಬೇಕು. ರೋಗದ ಆಲೋಚನೆಗಳ ಬದಲಾಗಿ ಆರೋಗ್ಯದ ಆಲೋಚನೆಗಳು ತನಗೆ ಅಗತ್ಯ ಎಂಬುದನ್ನು ಅರ್ಥೈಸಿಕೊಂಡರೆ, ಹೊಸ ರೂಢಿ ಮಾಡಿಕೊಳ್ಳಲು ಸಾಹಸ ಮಾಡಬಹುದು. ತನ್ನ ಬದುಕನ್ನು ಜೀವಂತವಾಗಿಡಲು, ಪ್ರಫುಲ್ಲವಾಗಿರಲು, ಮನೋಭಾರದಿಂದ ಮುಕ್ತವಾಗಿ ಎದೆಯ ಮೇಲೆ ಭಾರವಿಲ್ಲದೆ ಹಗುರತೆಯನ್ನು ಅನುಭವಿಸಲು, ಸಂತೋಷದ ಗಾಳಿ ಗಂಧದೊಡನೆ ತೇಲಿ ಹೋಗಲು ಯಾವುದು ಅಗತ್ಯ ಎಂಬುದನ್ನು ಕಂಡುಕೊಳ್ಳಲೇ ಬೇಕು. ಆಗ ಹಳೆಯ ಹೆಣಗಳನ್ನು ಹೊತ್ತುಕೊಂಡು ಓಡಾಡಿಕೊಂಡಿರುವ ವ್ಯಕ್ತಿ ತನ್ನ ಹೆಣಭಾರವನ್ನು ಬಿಸಾಡಬಲ್ಲ. ಹಗುರನಾಗಬಲ್ಲ. ಕುಟುಂಬಗಳೂ ಸೈತಾನನ ಸೋಂಕಿನಿಂದ ಮುಕ್ತವಾಗಿ ತಮ್ಮ ಹೆಣಭಾರವನ್ನು ಬಿಸಾಡಿದರೆ, ಸಮಾಜ ಮತ್ತು ದೇಶಗಳೂ ಹಳೆಯ ಹೆಣಗಳನ್ನು ಬಿಸಾಡಿ ಭೂತ ಬಾಧೆಯಿಂದ ಮುಕ್ತವಾದರೆ, ಜೀವಂತವಾಗಿರುತ್ತವೆ. ಜೀವಂತವಾಗಿರುವುದರ ಲಕ್ಷಣವೇ ಬೆಳೆಯುವುದು, ಅರಳುವುದು, ಹೊಚ್ಚ ಹೊಸತಿನ ಪ್ರಫುಲ್ಲತೆಯಿಂದ ನಳನಳಿಸುವುದು. ಹಳೆಯ ಹೆಣಭಾರದ ಹೊರೆಯಿಂದ ಜಗ್ಗುತ್ತಾ, ಕುಗ್ಗುತ್ತಾ, ಕುಸಿಯುತ್ತಾ ಹೋಗುವ ವ್ಯಕ್ತಿ, ಕುಟುಂಬ, ಸಮಾಜ ಮತ್ತು ದೇಶವೆಲ್ಲವೂ ಜೀವಂತ ಶವಗಳೇ ಆಗುತ್ತವೆ.