ಪಶ್ಚಿಮ ಆಫ್ರಿಕ: ರೆಡ್ಕ್ರಾಸ್ ಸಿಬ್ಬಂದಿಗಳ ಅಪಹರಣ
ಸೆನೆಗಲ್, ಮಾ.5: ಪಶ್ಚಿಮ ಆಫ್ರಿಕಾದ ಉತ್ತರ ಮಾಲಿಯಲ್ಲಿ ಶನಿವಾರ ರೆಡ್ಕ್ರಾಸ್ನ ಇಬ್ಬರು ಸಿಬಂದಿಗಳನ್ನು ಅಪಹರಣ ಮಾಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ತಿಳಿಸಿದೆ.
ಶನಿವಾರ ಬೆಳಿಗ್ಗೆ ನಮ್ಮ ಇಬ್ಬರು ಸಹೋದ್ಯೋಗಿಗಳನ್ನು ಅಪಹರಿಸಲಾಗಿದೆ. ಕಳೆದ 32 ವರ್ಷಗಳಿಂದ ಈ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ರೆಡ್ಕ್ರಾಸ್ ತಟಸ್ಥ, ನಿಷ್ಪಕ್ಷಪಾತ ಮತ್ತು ಸ್ವತಂತ್ರ ಸಂಸ್ಥೆಯಾಗಿದ್ದು ಅಗತ್ಯವಿರುವವರಿಗೆ ನೆರವು ಒದಗಿಸುತ್ತಿದೆ ಎಂದು ರೆಡ್ಕ್ರಾಸ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಅಮಿನತಾ ಅಲಾಸಾನೆ ಹೇಳಿದ್ದು, ಅಪಹೃತರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ.
2012ರಲ್ಲಿ ಪ್ರತ್ಯೇಕತಾವಾದಿಗಳ ಚಟುವಟಿಕೆ ತೀವ್ರಗೊಂಡ ಬಳಿಕ ಮಾಲಿಯಲ್ಲಿ ರಾಜಕೀಯ ಅಸ್ಥಿರತೆಯಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಅಪಹರಣದಂತಹ ಕೃತ್ಯಗಳು ಸಾಮಾನ್ಯವಾಗಿವೆ. ಅಲ್ಖೈದಾ ಮತ್ತು ಐಸಿಸ್ ಸಂಘಟನೆ ಮಾಲಿ, ನಿಗೆರ್ ಹಾಗೂ ಬುರ್ಕಿನಾ ಫಾಸೊ ನಗರಗಳಲ್ಲಿ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದ್ದು ಸಾವಿರಾರು ನಾಗರಿಕರು, ಪೊಲೀಸರು ಹಾಗೂ ಯೋಧರು ಮೃತರಾಗಿದ್ದಾರೆ. 2 ದಶಲಕ್ಷಕ್ಕೂ ಅಧಿಕ ಜನರು ಇಲ್ಲಿಂದ ಪಲಾಯನ ಮಾಡಿರುವುದಾಗಿ ವರದಿಯಾಗಿದೆ.