ರಾಹುಲ್ ಗಾಂಧಿ ಕುರಿತು ಕಟೀಲ್ ಹೇಳಿಕೆಗೆ ಆಕ್ರೋಶ, BJP ಕಚೇರಿಗೆ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ
ಬೆಂಗಳೂರು, ಮಾ.6: ಎಐಸಿಸಿ ನಾಯಕ ರಾಹುಲ್ ಗಾಂಧಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅತ್ಯಂತ ಕೀಳುಮಟ್ಟದಿಂದ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ಸೋಮವಾರ ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂಭಾಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ನಳಿನ್ ಕುಮಾರ್ ಕಟೀಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಅಲ್ಲದೆ, ಒಂದು ರಾಜಕೀಯ ಪಕ್ಷದ ಅಧ್ಯಕ್ಷನಾಗಿ ಕಟೀಲ್ ನೀಡುತ್ತಿರುವ ಹೇಳಿಕೆ ಅತ್ಯಂತ ಕೀಳುಮಟ್ಟದಿಂದ ಕೂಡಿದೆ. ರಾಹುಲ್ ಗಾಂಧಿ ಹಾಗೂ ಗಾಂಧಿ ಕುಟುಂಬದ ಬಗ್ಗೆ ಕಟೀಲ್ ಬಳಸಿರುವ ಪದವನ್ನು ಗಮನಿಸಿದರೆ ಬಿಜೆಪಿ ಯಾವ ರೀತಿ ಹೀನಾಯ ಸ್ಥಿತಿ ತಲುಪಿದೆ ಎಂಬುದಕ್ಕೆ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಮನೋಹರ್, ‘ನಳಿನ್ ಕುಮಾರ್ ಕಟೀಲ್ ಅರೆ ಹುಚ್ಚನಾಗಿರುವುದರಿಂದ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಬಿಜೆಪಿ ಕಚೇರಿಗೆ ತೆರಳಿದಾಗ ಪೊಲೀಸರು ನಮ್ಮನ್ನ ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.ಆದರೆ, ಬಿಜೆಪಿಯ ಅನೇಕ ಭ್ರಷ್ಟಾಚಾರವನ್ನು ಮರೆಮಾಚಲು ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ಹಾಗೂ ಸಮಾಜವನ್ನು ದಾರಿ ತಪ್ಪಿಸುವ ಕುತಂತ್ರಕ್ಕೆ ಜನರು ತಕ್ಕ ಉತ್ತರ ನೀಡುವ ಕಾಲ ಸನಿಹವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಎ.ಆನಂದ್, ಈ.ಶೇಖರ್, ಬಿ.ಮಂಜುನಾಥ್ ಪುಟ್ಟರಾಜು. ಪ್ರಶಾಂತ, ಪ್ರಕಾಶ್, ಉಮೇಶ್ ಸೇರಿದಂತೆ ಪ್ರಮುಖರಿದ್ದರು.