varthabharthi


ವಿಶೇಷ-ವರದಿಗಳು

ಭಾರತ ಕಳೆದ 10 ವರ್ಷಗಳಲ್ಲಿ ಅತ್ಯಂತ ಕೆಟ್ಟ ನಿರಂಕುಶ ಪ್ರಭುತ್ವಗಳಲ್ಲಿ ಒಂದಾಗಿದೆ: ವಿ-ಡೆಮ್ ವರದಿ

ವಾರ್ತಾ ಭಾರತಿ : 7 Mar, 2023
ವಸುಂಧರಾ ಸಿರ್ನಾತೆ - thewire.in

ಸಾಂದರ್ಭಿಕ ಚಿತ್ರ (PTI)

ಕಳೆದೊಂದು ದಶಕದಲ್ಲಿ ಭಾರತವು ವಿಶ್ವದ ಅತ್ಯಂತ ಕೆಟ್ಟ ನಿರಂಕುಶ ಪ್ರಭುತ್ವಗಳಲ್ಲಿ ಒಂದಾಗಿದೆ ಎಂದು ನೂತನ ವರದಿಯೊಂದು ತಿಳಿಸಿದೆ.

2022ರ ಅಂತ್ಯದ ವೇಳೆಗೆ ಶೇ.72ರಷ್ಟು ವಿಶ್ವದ ಜನಸಂಖ್ಯೆ (570 ಕೋಟಿ ಜನರು) ನಿರಂಕುಶ ಪ್ರಭುತ್ವಗಳಡಿ (autocracies) ಬದುಕಿದ್ದರು ಮತ್ತು ಈ ಪೈಕಿ ಶೇ.22ರಷ್ಟು (222 ಕೋಟಿ) ಜನರು 'ಮುಚ್ಚಿದ' ನಿರಂಕುಶಾಧಿಕಾರಕ್ಕೆ ಒಳಪಟ್ಟಿದ್ದರು ಎಂಬ ಎಚ್ಚರಿಕೆಯ ಸಂದೇಶವನ್ನು ಸ್ವೀಡನ್ ನ ಗೊಥೆನ್ಬರ್ಗ್ ವಿವಿಯ ವಿ-ಡೆಮ್ (Varieties of Democracy) ಇನ್ಸ್ಟಿಟ್ಯೂಟ್ ನ ನೂತನ ವರದಿಯು ನೀಡಿದೆ.

'ಡಿಫೆನ್ಸ್ ಇನ್ ದಿ ಫೇಸ್ ಆಫ್ ಆಟೊಕ್ರಟೈಜೇಷನ್' ಶೀರ್ಷಿಕೆಯ ವರದಿಯು 'ಕಳೆದ 35 ವರ್ಷಗಳಲ್ಲಿ ಪ್ರಜಾಪ್ರಭುತ್ವದ ಜಾಗತಿಕ ಮಟ್ಟಗಳಲ್ಲಿ ಸಾಧಿಸಲಾಗಿದ್ದ ಪ್ರಗತಿಯನ್ನು ಅಳಿಸಿ ಹಾಕಲಾಗಿದೆ' ಎಂದು ಪ್ರತಿಪಾದಿಸಿದೆ.

ವರದಿಯು ಬಹಿರಂಗಗೊಳಿಸಿರುವ ಅಂಶಗಳು ರಾಜಕಾರಣಿಗಳು ಮತ್ತು ನೀತಿ ನಿರೂಪಕರಿಗೆ ಜಾಗತಿಕ ಕಳವಳದ ವಿಷಯವಾಗಬೇಕು.

ಇಂದು ಉದಾರವಾದಿ ಪ್ರಜಾಪ್ರಭುತ್ವಗಳಿಗಿಂತ ಹೆಚ್ಚಿನ ಮುಚ್ಚಿದ ನಿರಂಕುಶ ಪ್ರಭುತ್ವಗಳಿವೆ, ವಿಶ್ವದ ಜನಸಂಖ್ಯೆಯ ಕೇವಲ ಶೇ.13ರಷ್ಟು (ಸುಮಾರು 100 ಕೋಟಿ) ಜನರು ಉದಾರವಾದಿ ಪ್ರಜಾಪ್ರಭುತ್ವಗಳಲ್ಲಿ ವಾಸವಾಗಿದ್ದಾರೆ ಎಂದು ವರದಿಯು ಸೂಚಿಸಿದೆ.

ವಿಶ್ವದ ವಿವಿಧ ದೇಶಗಳಲ್ಲಿ ಪ್ರಜಾಪ್ರಭುತ್ವದ ಸ್ಥಿತಿಯನ್ನು ನಿರ್ಧರಿಸಲು ವರದಿಯು ಬಳಸಿರುವ ಸೂಚಕಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮಗಳ ಮೇಲೆ ಹೆಚ್ಚಿದ ಸರಕಾರಿ ಸೆನ್ಸಾರ್ಶಿಪ್, ನಾಗರಿಕ ಸಮಾಜದ ಮೇಲೆ ಸರಕಾರದ ದಬ್ಬಾಳಿಕೆ ಮತ್ತು ಚುನಾವಣೆಗಳ ಗುಣಮಟ್ಟ ಇವುಗಳಿಗೆ ನಿರ್ದಿಷ್ಟ ಗಮನವನ್ನು ನೀಡಿದೆ. ಅದು ಆರ್ಮೆನಿಯಾ, ಗ್ರೀಸ್ ಮತ್ತು ಮಾರಿಷಿಯಸ್ಗಳನ್ನು 'ತೀವ್ರ ಅವನತಿಯಲ್ಲಿರುವ ಪ್ರಜಾಪ್ರಭುತ್ವಗಳು' ಎಂದು ಪಟ್ಟಿ ಮಾಡಿದೆ.

ನಿಸ್ಸಂಶಯವಾಗಿ ಕಳೆದ ದಶಕವು ವಿಶ್ವಾದ್ಯಂತ ಸರ್ವಾಧಿಕಾರಿ ರಾಜಕೀಯ ಆಡಳಿತಗಳ ಹೆಚ್ಚುತ್ತಿರುವ ಶಕ್ತಿಗೆ ಸಾಕ್ಷಿಯಾಗಿದೆ. ಅಲ್ಲದೆ, 2020ರಲ್ಲಿ ಕೋವಿಡ್ ಸಾಂಕ್ರಾಮಿಕವು ಸ್ಫೋಟಗೊಂಡಾಗ ಹಲವಾರು ದೇಶಗಳು ಸಾಂಕ್ರಾಮಿಕವನ್ನು ಎದುರಿಸುವ ಪ್ರಯತ್ನದಲ್ಲಿ ಅಧಿಕಾರದ ಕೇಂದ್ರೀಕರಣ ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ಸಂಸದೀಯ ಅಧಿಕಾರದ ಅಮಾನತಿಗೆ ಮುಂದಾಗಿದ್ದವು. ಇಂತಹ ದೇಶಗಳು ತಮ್ಮ ಪ್ರಜೆಗಳ ಹಕ್ಕುಗಳು ಮತ್ತು ಸ್ವಾತಂತ್ರಕ್ಕೆ ಅಡ್ಡಿಯನ್ನುಂಟು ಮಾಡುವ ಶಾಸನಗಳನ್ನು ಹೊರಡಿಸಲು ಸಾಂಕ್ರಾಮಿಕವನ್ನು ಬಳಸಿಕೊಂಡಿದ್ದವು ಎಂದು ವರದಿಯು ಹೇಳಿದೆ.

ಕೆಲವು ದೇಶಗಳು ತಮ್ಮ ಕಾರ್ಯಾಂಗಗಳಿಗೆ ಅಸಮಾನ ಅಧಿಕಾರವನ್ನು ನೀಡಲು ಸಾಂಕ್ರಾಮಿಕವನ್ನು ನೆಪವನ್ನಾಗಿ ಬಳಸಿಕೊಂಡಿದ್ದವು ಎಂದಿರುವ ವರದಿಯು, ಉದಾಹರಣೆಗೆ ಹಂಗೇರಿಯ ಅಧ್ಯಕ್ಷ ವಿಕ್ಟರ್ ಆರ್ಬನ್ ಅವರು 2020ರಲ್ಲಿ ಶಾಸನವೊಂದರ ಮೂಲಕ ಆಡಳಿತದ ಅಧಿಕಾರವನ್ನು ಪಡೆದುಕೊಂಡಿದ್ದರು. ಇದಕ್ಕಾಗಿ ಟೀಕೆಗಳು ವ್ಯಕ್ತವಾದಾಗ ಅವರು 'ವೈದ್ಯಕೀಯ ಬಿಕ್ಕಟ್ಟಿನ ಸ್ಥಿತಿ'ಯನ್ನು ಘೋಷಿಸಿದ್ದರು ಮತ್ತು ಇದು ಶಾಸನಗಳನ್ನು ಹೊರಡಿಸುತ್ತಿರಲು ಅವರ ಸರಕಾರಕ್ಕೆ ಅವಕಾಶವನ್ನು ನೀಡಿತ್ತು. 2022ರಲ್ಲಿ ಅವರು ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಅಮೆರಿಕದಲ್ಲಿ ಕೆಂಟುಕಿ ರಾಜ್ಯವು ಪಳೆಯುಳಿಕೆ ಇಂಧನ ಪ್ರತಿಭಟನೆಗಳನ್ನು ನಿಷೇಧಿಸಿತ್ತು ಮತ್ತು ಟೆಕ್ಸಾಸ್ನ ಫೆಡರಲ್ ಮೇಲ್ಮನವಿ ನ್ಯಾಯಾಲಯವು ಗರ್ಭಪಾತದ ಮೇಲಿನ ನಿಷೇಧವನ್ನು ಎತ್ತಿ ಹಿಡಿದಿತ್ತು. ಇದು ಈ ಹಿಂದೆ ಗರ್ಭಪಾತಕ್ಕೆ ಸಂಬಂಧಿಸಿದ ಮಹತ್ವದ ಪ್ರಕರಣವೊಂದರಲ್ಲಿ ನೀಡಲಾಗಿದ್ದ ತೀರ್ಪು ರದ್ದುಗೊಳ್ಳುವ ಮುನ್ಸೂಚನೆಯನ್ನು ನೀಡಿದೆ. ಇಸ್ರೇಲ್ ನಲ್ಲಿ ಬೆಂಜಮಿನ್ ನೆತನ್ಯಾಹು ಅವರು ಸಂಸತ್ತನ್ನು ಅಮಾನತಿನಲ್ಲಿರಿಸಿದ್ದರು ಹಾಗೂ ನ್ಯಾಯಾಲಯಗಳ ಅಮಾನತು ಮತ್ತು ಹೆಚ್ಚಿನ ಕಣ್ಗಾವಲು ಮೂಲಕ ತನ್ನ ವಿರುದ್ಧದ ವಿಚಾರಣೆಯನ್ನು ಮುಂದೂಡಿದ್ದರು ಎಂದು ಹೇಳಿದೆ.

ಭಾರತದಲ್ಲಿ ಸರಕಾರವು 2020 ಎಪ್ರಿಲ್ ನಲ್ಲಿ ಜಮ್ಮು-ಕಾಶ್ಮೀರದಲ್ಲಿ ಹೊಸ ವಾಸಸ್ಥಳ ಕಾನೂನನ್ನು ಪ್ರಕಟಿಸುವಲ್ಲಿ ಸಮಯವನ್ನು ವ್ಯರ್ಥಗೊಳಿಸಲಿಲ್ಲ. ಈ ಕಾನೂನು ಜಮ್ಮು-ಕಾಶ್ಮೀರದಲ್ಲಿ 15 ವರ್ಷಗಳಿಂದ ವಾಸವಿರುವವರಿಗೆ, ಏಳು ವರ್ಷಗಳ ಕಾಲ ಅಲ್ಲಿ ಶಿಕ್ಷಣ ಪಡೆದವರಿಗೆ ಮತ್ತು 10 ಮತ್ತು 12ನೇ ತರಗತಿಗಳ ಪರೀಕ್ಷೆಗಳಿಗೆ ಹಾಜರಾದವರಿಗೆ ಕಾಯಂ ನಿವಾಸಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.

ಸ್ಪಷ್ಟವಾಗಿ, 2020ರಲ್ಲಿ ವಿಶ್ವದ ಹಲವು ಭಾಗಗಳಲ್ಲಿ ಸರ್ವಾಧಿಕಾರಿ ಪ್ರವೃತ್ತಿಯು ತೀವ್ರಗೊಳ್ಳತೊಡಗಿತ್ತು ಎಂದು ಹೇಳಿರುವ ವಿ-ಡೆಮ್ ವರದಿಯು, 2022ರ ಅಂತ್ಯದ ವೇಳೆಗೆ ನಿರಂಕುಶಾಧಿಕರವಾಗಿ ಪರಿವರ್ತನೆಗೊಳ್ಳುತ್ತಿದ್ದ 42 ದೇಶಗಳನ್ನು ಪಟ್ಟಿ ಮಾಡಿದೆ. ಇದು ದಾಖಲೆಯ ಸಂಖ್ಯೆಯಾಗಿದೆ ಎಂದು ವರದಿಯು ತಿಳಿಸಿದೆ.

ಭಾರತವು ಈ ಪ್ರವೃತ್ತಿಗೆ ಹೊರತಾಗಿಲ್ಲ. 2020ರಲ್ಲಿ ದಿಢೀರ್ ಹೇರಲಾಗಿದ್ದ ಲಾಕ್ಡೌನ್ ಭಾರತೀಯ ಸಮಾಜದ ಅಂಚಿನಲ್ಲಿರುವ ಜನರ ಬದುಕುಗಳನ್ನು ಹೇಗೆ ಸುಲಭವಾಗಿ ಅಸ್ತವ್ಯಸ್ತಗೊಳಿಸಬಹುದು ಎನ್ನವುದನ್ನು ತೋರಿಸಿದೆ. 2021ರಲ್ಲಿ ವಿ-ಡೆಮ್ ಇನ್ಸ್ಟಿಟ್ಯೂಟ್ ಭಾರತವನ್ನು 'ಚುನಾವಣಾ ನಿರಂಕುಶಾಧಿಕಾರ' ಎಂದು ವರ್ಗೀಕರಿಸಿದ್ದರೆ ಅದೇ ವರ್ಷ ಫ್ರೀಡಂ ಹೌಸ್ ಭಾರತವನ್ನು 'ಭಾಗಶಃ ಸ್ವತಂತ್ರ 'ಎಂದು ಪಟ್ಟಿ ಮಾಡಿತ್ತು. 2021ರಲ್ಲಿ ಇನ್ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಆ್ಯಂಡ್ ಎಲೆಕ್ಟೋರಲ್ ಅಸಿಸ್ಟನ್ಸ್ ಸಹ ತನ್ನ ಪ್ರಜಾಪ್ರಭುತ್ವದ ಜಾಗತಿಕ ಸ್ಥಿತಿ ಕುರಿತು ವರದಿಯಲ್ಲಿ ಭಾರತವನ್ನು ಹಿಮ್ಮುಖವಾಗಿ ಜಾರುತ್ತಿರುವ ಪ್ರಜಾಪ್ರಭುತ್ವ ಎಂದು ಪಟ್ಟಿ ಮಾಡಿತ್ತು. ವರದಿಯು ಭಾರತವನ್ನು ಉದಾರವಾದಿ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 97ನೇ ಸ್ಥಾನದಲ್ಲಿರಿಸಿದೆ. ಭಾರತವು ಚುನಾವಣಾ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 108ನೇ ಮತ್ತು ಸಮಾನತೆಯ ಘಟಕ ಸೂಚ್ಯಂಕದಲ್ಲಿ 123ನೇ ಸ್ಥಾನದಲ್ಲಿದೆ.

ಆದರೂ ಭಾರತ ಸೇರಿದಂತೆ ಕೆಲವು ದೇಶಗಳು ನಿರಂಕುಶಾಧಿಕಾರಕ್ಕೆ ಬದಲಾದ ಬಳಿಕ ಅಲ್ಲಿ ಸರ್ವಾಧಿಕರಣದ ಪ್ರಕ್ರಿಯೆಯು ಗಣನೀಯವಾಗಿ ನಿಧಾನಗೊಂಡಿದೆ ಅಥವಾ ಸ್ಥಗಿತಗೊಂಡಿದೆ ಎಂದು ವರದಿಯು ಹೇಳಿದೆ.

ಇದನ್ನೂ ಓದಿ: ದೇಶದಲ್ಲಿ ಮಾಸ್ಕ್ ಹಾಕದೇ ತಿರುಗಾಡುವಂತಾಗಲು ಮೋದಿಯವರ ಶ್ರಮವೇ ಕಾರಣ: ಸಿಎಂ ಬೊಮ್ಮಾಯಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)