varthabharthi


ವಿಶೇಷ-ವರದಿಗಳು

ಭಾಗ-2

ಒಕ್ಕೂಟ ಸರಕಾರವೂ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯೂ

ವಾರ್ತಾ ಭಾರತಿ : 8 Mar, 2023
ಕೆ.ಎನ್.ಲಿಂಗಪ್ಪ (ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ)

ಅಖಿಲ ಭಾರತ ಹಿಂದುಳಿದ ವರ್ಗಗಳ ಒಕ್ಕೂಟದ ಹೋರಾಟದ ಫಲವೋ ಏನೋ, ಒಕ್ಕೂಟ ಸರಕಾರವು ಕಾಕಾ ಕಾಲೆಲ್ಕರ್ ಅವರ ಅಧ್ಯಕ್ಷತೆಯಲ್ಲಿ ಮೊದಲನೇ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರಚಿಸಿತು (29.1.1953). ಆಯೋಗದ ಹತ್ತು ಮಂದಿ ಸದಸ್ಯರಲ್ಲಿ ಕರ್ನಾಟಕದ ಟಿ.ಮರಿಯಪ್ಪಅವರು ಒಬ್ಬರಾಗಿದ್ದರು. ಆಯೋಗ ವರದಿಯನ್ನು ಮಾರ್ಚ್ 30, 1955ರಲ್ಲಿ ಸರಕಾರಕ್ಕೆ ಸಲ್ಲಿಸಿತು. 2,399 ಜಾತಿಗಳನ್ನು ಗುರುತಿಸಿ ಅವುಗಳಲ್ಲಿ 837 ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳು ಎಂದು ವರದಿಯಲ್ಲಿ ಹೇಳಿತ್ತು. ಕಾಕಾ ಕಾಲೆಲ್ಕರ್‌ರವರು, ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ವರ್ಗದವರು ಶತಶತಮಾನಗಳಿಂದ ಕೆಳ ವರ್ಗದವರನ್ನು ಶೋಷಣೆ ಮಾಡುತ್ತಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತಾರಾದರೂ, ಕೆಳ ವರ್ಗದ ಮುಖಂಡರು ಭಾವಿಸಿರುವಂತೆ ಶೋಷಣೆ ಒಂದೇ ಕಾರಣವಲ್ಲವೆಂದೂ, ಹಿಂದುಳಿದಿರುವಿಕೆಗೆ ಪ್ರಮುಖವಾಗಿ ಅವರಲ್ಲಿ ನಿರಾಸಕ್ತಿ, ಆಲಸ್ಯ ಮತ್ತು ಉದಾಸೀನತೆಯೇ ಕಾರಣಗಳೆಂದು ವರದಿಯಲ್ಲಿ ಹೇಳಿರುವುದು ಮಾತ್ರ ದುರ್ದೈವ.

ಇಂಥ ಪೂರ್ವಗ್ರಹ ಪೀಡಿತ ಮನಸ್ಥಿತಿಯ ವ್ಯಕ್ತಿಯೋರ್ವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದುದೇ ಐತಿಹಾಸಿಕ ಪ್ರಮಾದ. ಜಾತಿಗಳನ್ನು ಯಾವ ವೈಜ್ಞಾನಿಕ ಮಾನದಂಡ ಅಳವಡಿಸದ ಮತ್ತು ವಾಸ್ತವಿಕತಾ ಪ್ರವೃತ್ತಿಯ(objectivity) ಅಭಾವದಿಂದ ಕೂಡಿದ ವರದಿಯ ಶಿಫಾರಸುಗಳನ್ನು ಸರಕಾರ ಒಪ್ಪಲಿಲ್ಲ. ಆದರೆ ಒಕ್ಕೂಟ ಸರಕಾರ ಮಾತ್ರ ಹಿಂದುಳಿದ ವರ್ಗಗಳ ಪಟ್ಟಿಯನ್ನು ತಯಾರಿಸಲು ರಾಜ್ಯಗಳಿಗೆ ಬಿಟ್ಟು ಕೊಟ್ಟಿತು. ವರದಿಯಲ್ಲಿ ಅನೇಕ ವೈರುಧ್ಯಗಳಿದ್ದರೂ, ಅನಿಯತವಾಗಿ ಸರಕಾರ ಸೆಪ್ಟಂಬರ್ 3, 1956ರಲ್ಲಿ ಸಂಸತ್ ಮುಂದೆ ಪಂಡಿತ್ ಗೋವಿಂದ್ ವಲ್ಲಭ ಪಂತ್ ಅವರ ಸುದೀರ್ಘ ಜ್ಞಾಪಕ ಪತ್ರದ ಕ್ರಮದೊಡನೆ ಮಂಡಿಸಿತು. ಸಂಸತ್ತಿನಲ್ಲಿ ವರದಿ ಬಗ್ಗೆ ಕಾಲೋಚಿತ ಚರ್ಚೆ ನಡೆಯಲೇ ಇಲ್ಲ. ಸ್ವಾಭಾವಿಕವಾಗಿ ವರದಿ ಅವಸಾನ ಹೊಂದಿತು ಎಂಬುದನ್ನು ಹೇಳಬೇಕಿಲ್ಲ.

ವರದಿ ನಿರರ್ಥಕವೆನಿಸಿದ್ದರೂ ಈ ವರದಿಯ ಬಹು ದೊಡ್ಡ ಕೊಡುಗೆ ಮತ್ತು ಸಾಧನೆ ಹಿಂದುಳಿದ ವರ್ಗದ ಒಳಿತಿನತ್ತ ಸಂಘಟಿತ ಪ್ರಯತ್ನದ ಬಾಗಿಲುಗಳನ್ನು ತೆರೆದದ್ದು. 1956ರಲ್ಲಿ ವರದಿ ತಿರಸ್ಕೃತವಾಯಿತು. ಆ ಬಗ್ಗೆ ರಾಮ ಮನೋಹರ ಲೋಹಿಯಾ ಮುಂತಾದವರು ಸಂದರ್ಭೋಚಿತವಾಗಿ ಹಿಂದುಳಿದ ವರ್ಗಗಳ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದರೂ, ಎರಡನೇ ಆಯೋಗದ ರಚನೆ ಬಗ್ಗೆ ಕಾಂಗ್ರೆಸ್ ಸರಕಾರ ಮಾತ್ರ ನಿಗೂಢ ಮೌನ ವಹಿಸುತ್ತದೆ. ಇತ್ತ ಅಖಿಲ ಭಾರತ ಹಿಂದುಳಿದ ವರ್ಗಗಳ ಒಕ್ಕೂಟ 1957ರಲ್ಲಿ ಇಬ್ಭಾಗವಾಗಿ ಹೋಗುತ್ತದೆ. ಬಹುಶಃ ಸರಕಾರದ ಮುಂದೆ ಯಾವುದೇ ಒತ್ತಡವೂ ಇರಲಿಲ್ಲ. ಅಧಿಕಾರದಲ್ಲಿದ್ದ ಕಾಂಗ್ರೆಸ್ ಯಾವ ರುಗ್ಣಾವಸ್ಥೆಯಲ್ಲಿತ್ತೋ ಗೊತ್ತಿಲ್ಲ. ಅದು ಎರಡನೇ ಹಿಂದುಳಿದ ವರ್ಗಗಳ ಆಯೋಗ ರಚನೆಗೆ ಮುಂದೆ ಬರಲೇ ಇಲ್ಲ. ಯಾವ ಸನಾತನಿಗಳ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿತ್ತೋ ಏನೋ? ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಕಾ ಬ್ರಾಹ್ಮಣಶಾಹಿಯ ಕುಟಿಲ ತಂತ್ರಕ್ಕೆ ಕಿವಿ ಆನಿಸಿ ಕಾಲದೂಡುವುದೇ ಸರಕಾರದ ನೀತಿ ಎಂದು ಪರಿಗಣಿಸಿ ಹಿಂದುಳಿದ ವರ್ಗಗಳಿಗೆ ವಿಶ್ವಾಸ ಘಾತಕ ಎಸಗಿತು.

ಜವಾಹರಲಾಲ್ ನೆಹರೂ ಸುಮಾರು 8ರಿಂದ 9 ವರ್ಷಗಳ ಈ ಅವಧಿಯಲ್ಲಿದ್ದರೂ ಎರಡನೇ ಹಿಂದುಳಿದ ವರ್ಗಗಳ ಆಯೋಗ ರಚನೆಗೆ ಮನಸ್ಸು ಮಾಡಲಿಲ್ಲ. ಅವರ ನಂತರ ಎರಡು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಅತ್ತ ಗಮನ ಹರಿಸಲಿಲ್ಲ. ಆನಂತರ ಅಧಿಕಾರಕ್ಕೆ ಬಂದವರೇ ಇಂದಿರಾ ಗಾಂಧಿಯವರು. ರಾಜಧನ ರದ್ದು ಮತ್ತು ಬ್ಯಾಂಕುಗಳನ್ನೂ ರಾಷ್ಟ್ರೀಕರಿಸಿ ಬಡಜನರ ಹಿತಾಸಕ್ತಿ ಕಾಪಾಡಿದ ಧೀಮಂತೆ ಅವರು. ಅವರ ಸ್ವಯಂಕೃತ ಅಪರಾಧದಿಂದ ಅಧಿಕಾರ ಕಳೆದುಕೊಳ್ಳುತ್ತಾರೆ. ಆನಂತರ ಅಧಿಕಾರಕ್ಕೆ ಜಯಪ್ರಕಾಶ್ ನಾರಾಯಣ್ ಅವರ ಒತ್ತಾಸೆಯಿಂದ ಬಂದದ್ದು ಜನತಾ ಪಕ್ಷದ ಸರಕಾರ. ಸಂವಿಧಾನ ಜಾರಿಗೆ ಬಂದ ನಂತರ ಕಾಂಗ್ರೆಸ್ ಪಕ್ಷವು, 27 ವರ್ಷಗಳಿಗೂ ಹೆಚ್ಚು ಕಾಲ ದೇಶವನ್ನು ಆಳಿದೆ. ಈ ಸಂದರ್ಭದಲ್ಲಿ ಹೆಚ್ಚು ಅಧಿಕಾರದಲ್ಲಿದ್ದವರು ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ. ಇವರು ಪ್ರಶ್ನಾತೀತ ನಾಯಕರಾಗಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇವರ ಅವಧಿಯಲ್ಲಿ ಒಕ್ಕೂಟ ಸರಕಾರ ಸಂಸತ್ತಿನ ಉಭಯ ಸದನಗಳಲ್ಲಿ ಸಂಪೂರ್ಣ ಬಹುಮತವಿದ್ದರೂ ಮೊದಲನೇ ಹಿಂದುಳಿದ ವರ್ಗಗಳ ಆಯೋಗವನ್ನು ಒಪ್ಪಿಕೊಳ್ಳಲಿಲ್ಲ ಹಾಗೂ ವರದಿಯ ಶಿಫಾರಸುಗಳನ್ನು ಜನರ ನಾಡಿಮಿಡಿತ ಮತ್ತು ಬಿಸುಪುನ್ನು ಅರ್ಥೈಸಿಕೊಂಡು ಶೈತ್ಯಾಗಾರದಲ್ಲಿ ಇಟ್ಟುಬಿಟ್ಟರು.

ಜನತಾ ಪಕ್ಷ ಅಧಿಕಾರಕ್ಕೆ ಬಂದು ಮೊರಾರ್ಜಿ ದೇಸಾಯಿ ಅವರು ಪ್ರಧಾನಮಂತ್ರಿಯಾಗುತ್ತಾರೆ. ಇದೇ ಸಂದರ್ಭವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡ ದ್ರಾವಿಡ ಪಕ್ಷಗಳು ಎರಡನೇ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲು ಒತ್ತಾಯ ತಂದವು. ಒತ್ತಾಯ ಫಲ ನೀಡಿತಲ್ಲದೆ, ಡಿಸೆಂಬರ್ 20, 1980ರಲ್ಲಿ ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯಲ್ಲಿ ಎರಡನೇ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ಸಂಸತ್ತಿನಲ್ಲಿ ಮೊರಾರ್ಜಿ ದೇಸಾಯಿ ಘೋಷಿಸಿದರು(ಅನುಚ್ಛೇದ-340).

ಮಂಡಲ್ ಆಯೋಗವು, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಗುರುತಿಸುವುದಕ್ಕಾಗಿ ಗುಣ ವಿಮರ್ಶೆ ಮಾಡಲು ಕೆಲವು ಮಾನದಂಡಗಳನ್ನು ಅಳವಡಿಸಿಕೊಳ್ಳುತ್ತದೆ. ಸಾಮಾಜಿಕ -4, ಶೈಕ್ಷಣಿಕ -3 ಮತ್ತು ಆರ್ಥಿಕ ವಿಭಾಗಕ್ಕೆ-4 ಒಟ್ಟು ಹೀಗೆ 11 ಮಾನದಂಡಗಳನ್ನು ಅನುಸರಿಸಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಕಾರ್ಯವನ್ನು ಆಯೋಗ ಮಾಡುತ್ತದೆ. ಒಟ್ಟು 3,743 ಜಾತಿಗಳನ್ನು ಗುರುತಿಸುತ್ತದೆ. ಆಯೋಗ ಬ್ರಿಟಿಷ್ ಭಾರತದಲ್ಲಿ 1931ರಲ್ಲಿ ನಡೆಸಿದ್ದ ಜಾತಿಗೆ ಸಂಬಂಧಿಸಿದ ಜನಗಣತಿಯ ದತ್ತಾಂಶಗಳನ್ನು ಬಳಸಿಕೊಳ್ಳುತ್ತದೆ. ಆಯೋಗ ಹಿಂದುಳಿದ ವರ್ಗ ಶೇ.52ರಷ್ಟಿದೆ ಎಂದು ಸ್ಪಷ್ಟಪಡಿಸಿ, ಶೇ.27ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ಮೀಸಲಿರಿಸುತ್ತದೆ. ಆಯೋಗವು ವರದಿಯನ್ನು 1980ರಲ್ಲಿ ಸರಕಾರಕ್ಕೆ ಸಲ್ಲಿಸುತ್ತದೆ. ಅಷ್ಟರಲ್ಲಿ ಜನತಾ ಸರಕಾರ ಅಧಿಕಾರ ಕಳೆದುಕೊಂಡಿರುತ್ತದೆ. ಮತ್ತೆ ಇಂದಿರಾ ಗಾಂಧಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿರುತ್ತದೆ. ಸರಕಾರ ಸಂಸತ್ತಿನ ಉಭಯ ಸದನಗಳಲ್ಲಿ ವರದಿಯನ್ನು ಮಂಡಿಸುತ್ತದೆ. ಸಂಸತ್ತಿನ ಉಭಯ ಸದನಗಳಲ್ಲಿ ಗಾಢ ಪ್ರತಿಭಟನೆ ವ್ಯಕ್ತವಾಗುತ್ತದೆ. ಮೇಲ್ಜಾತಿ-ಮೇಲ್ವರ್ಗಗಳಿಗೆ ಸೇರಿದ ಸಂಸದರ ಅನಿಷ್ಟ ಮನಸ್ಸುಗಳು ಮೀಸಲಾತಿಯನ್ನು ವಿರೋಧಿಸಿಕೊಂಡೇ ಬಂದಿವೆ. ಕಾಂಗ್ರೆಸಿಗೆ ಸಂಸತ್ತಿನಲ್ಲಿ 2/3ರಷ್ಟು ಬಹುಮತವಿದ್ದರೂ ಪ್ರಯತ್ನವನ್ನು ಕೈ ಬಿಟ್ಟು ವರದಿಯನ್ನು ಶೈತ್ಯಾಗಾರದಲ್ಲಿ ಕೊಳೆಯಲು ಬಿಟ್ಟಿತು.

ಆನಂತರ ವಿ.ಪಿ.ಸಿಂಗ್ ನೇತೃತ್ವದ ಎರಡನೇ ಕಾಂಗ್ರೆಸೇತರ ನ್ಯಾಶನಲ್ ಫ್ರಂಟ್ ಸರಕಾರ 1989ರಲ್ಲಿ ಅಧಿಕಾರಕ್ಕೆ ಬರುತ್ತದೆ. ನ್ಯಾಶನಲ್ ಫ್ರಂಟ್ ಸರಕಾರವು ತನ್ನ ಪ್ರಣಾಳಿಕೆಯಲ್ಲಿಯೇ ಮಂಡಲ್ ಆಯೋಗದ ಶಿಫಾರಸನ್ನು ಜಾರಿಗೆ ತರುವುದಾಗಿ ಹೇಳಿತ್ತು. ಆ ಪ್ರಕಾರವಾಗಿ ವಿ.ಪಿ. ಸಿಂಗ್ ಅವರು ಸಂಸತ್ತಿನಲ್ಲಿಯೇ ಹಿಂದುಳಿದ ವರ್ಗಗಳಿಗೆ 1990ರಲ್ಲಿ ಶೇ.27ರಷ್ಟು ಮೀಸಲಾತಿ ಘೋಷಿಸಿದರು. ಈ ಘೋಷಣೆಯ ಹಿಂದೆ ಕಾನ್ಶಿರಾಮ್ ಅವರ ಪ್ರಬಲ ಒತ್ತಡವಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ (ಐ) ಮತ್ತು ಸಿಪಿಐ (ಎಂ) ಪಕ್ಷಗಳು ನ್ಯಾಷನಲ್ ಫ್ರಂಟ್ ಸರಕಾರದ ರಾಜಕೀಯ ಜರೂರತ್ತನ್ನು ವಿವೇಕ ಶೂನ್ಯತೆಯಿಂದ ಪ್ರಶ್ನಿಸಿದವು. ಇಷ್ಟವಿಲ್ಲದ ಸಂಸದರು ಉಭಯ ಸದನಗಳಲ್ಲಿ ತೀವ್ರ ಹೋರಾಟಕ್ಕಿಳಿದರು. ಹಾಗೆಯೇ ದೇಶಾದ್ಯಂತ ವ್ಯಾಪಕ ಚಳವಳಿ ಪ್ರಾರಂಭಗೊಂಡವು. ಬೆಂಕಿ ಹಚ್ಚುವ ಪ್ರಕರಣ ಮತ್ತು ಆತ್ಮಬಲಿಯಂತಹ ಪ್ರಕರಣಗಳು ದೇಶದ ಹಲವೆಡೆಗಳಲ್ಲಿ ಕಂಡುಬಂದವು. ಅನೇಕ ಅಮಾಯಕರು ಈ ಅವಘಡದಿಂದ ಪ್ರಾಣತೆತ್ತರು ಕೂಡಾ. ಅದು ವಿ.ಪಿ. ಸಿಂಗ್ ಸರಕಾರದ ಪತನಕ್ಕೂ ದಾರಿಯಾಯಿತು.

ಅಸಹನೆಯಿಂದ ಕುದಿಯುತ್ತಿದ್ದ ಮೇಲ್ಜಾತಿ, ವರ್ಗಗಳು ಅಕಾರಣವಾಗಿ ಕೂರುವವರಲ್ಲ. ಅಂತೂ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದರು. ಮೊದಲಿಗೆ ಮುಖ್ಯ ನ್ಯಾಯಾಧೀಶರಾದ ರಂಗನಾಥ ಮಿಶ್ರಾ, ಜಸ್ಟಿಸ್ ಕೆ.ಎನ್. ಸಿಂಗ್ ಮತ್ತು ಜಸ್ಟಿಸ್ ಎಂ.ಎಚ್. ಕನಿಯ ಮೂರು ಮಂದಿ ಪೀಠದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿ ನಂತರದಲ್ಲಿ 9 ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಯಿತು. ಸಂವಿಧಾನ ಪೀಠವು, (16.11.1992&indra sahaani v/s union of India) ಸರಕಾರದ ಆದೇಶವನ್ನು ಎತ್ತಿ ಹಿಡಿದು, ಕೆಲವು ಅತಿ ಮುಖ್ಯವಾದ ಸಲಹೆಗಳನ್ನೂ ನೀಡಿತು. ಅವೆಂದರೆ-ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸುವುದು, ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50ರಷ್ಟಕ್ಕಿಂತ ಹೆಚ್ಚಿರಬಾರದು, ಕೇವಲ ಆರ್ಥಿಕ ಮಾನದಂಡ ಒಂದನ್ನೇ ಆಧರಿಸಿ ಮೀಸಲಾತಿ ಕಲ್ಪಿಸುವ ಹಾಗಿಲ್ಲ. ಹಿಂದುಳಿದ ವರ್ಗಗಳನ್ನು ಅತಿ ಹೆಚ್ಚು ಹಿಂದುಳಿದ ಮತ್ತು ಅತಿ ಹಿಂದುಳಿದ ಎಂಬುದಾಗಿ ವರ್ಗೀಕರಣ ಮಾಡಲೂಬಹುದು. ಕೆನೆಪದರವನ್ನು ಹೊರಗಿಡುವುದು ಎಂಬಿತ್ಯಾದಿಗಳನ್ನು ತೀರ್ಪಿನಲ್ಲಿ ಆದೇಶವಿತ್ತಿತು. ಅಂದು ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಆಂಧ್ರದ ಒಬ್ಬ ವಿಶ್ವಕರ್ಮ ಫಲಾನುಭವಿಗೆ ಹಿಂದುಳಿದ ವರ್ಗಗಳ ಮೀಸಲಾತಿಯ ಉದ್ಯೋಗದ ಸರ್ಟಿಫಿಕೇಟ್ ನೀಡುತ್ತಾರೆ. ಸುಮಾರು 43 ವರ್ಷಗಳ ನಂತರ ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ ದೊರಕಿದಂತಾಯಿತು. ಹಾಗೊಂದು ವೇಳೆ, ಸಂವಿಧಾನ ಜಾರಿಯಾದಾಗಿನಿಂದಲೇ, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ದೊರಕಿಸಿಕೊಟ್ಟಿದ್ದರೆ, ಆ ವರ್ಗಗಳ ಲಕ್ಷ-ಲಕ್ಷ ಉದ್ಯೋಗಿಗಳ ಕುಟುಂಬಗಳು ಸಮೃದ್ಧ ಬದುಕು ಕಟ್ಟಿಕೊಳ್ಳುತ್ತಿದ್ದವು.

ಇಷ್ಟಾದರೂ, ಶಿಕ್ಷಣಕ್ಕೆ ಅನ್ವಯಿಸುವ ಹಾಗೆ ಮೀಸಲಾತಿ ಎಂಬುದು ಇರಲಿಲ್ಲ. ಸಂವಿಧಾನಕ್ಕೆ ಅನುಚ್ಛೇದ15(5)ಅನ್ನು(93 ನೆಯ ತಿದ್ದುಪಡಿ)ಸೇರಿಸುವುದರ ಮೂಲಕ ಶಿಕ್ಷಣದಲ್ಲಿ ಮೀಸಲಾತಿಯನ್ನು ನೀಡಲಾಯಿತು. ಅರ್ಜುನ್ ಸಿಂಗ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದಾಗ ಸಂವಿಧಾನಕ್ಕೆ ತಿದ್ದುಪಡಿತರಲಾಯಿತು.

ಆ ತಿದ್ದುಪಡಿ ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತಾದರೂ ಮನವಿದಾರರು ಸಫಲರಾಗಲಿಲ್ಲ. ಕರ್ನಾಟಕ ಮತ್ತು ಕೇಂದ್ರ ಸರಕಾರಗಳಲ್ಲಿ ಮೀಸಲಾತಿ ಜಾರಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಈ ಸಂದರ್ಭದಲ್ಲಿ ನೆನೆಯುವುದು ಅವಶ್ಯಕ. ಕರ್ನಾಟಕದಲ್ಲಿ ಡಿ. ದೇವರಾಜ ಅರಸು, ಒಕ್ಕೂಟ ಸರಕಾರದಲ್ಲಿ ವಿ.ಪಿ. ಸಿಂಗ್ ಹಾಗೆಯೇ ಮತ್ತೊಬ್ಬ ಅರ್ಜುನ್ ಸಿಂಗ್. ಈ ಮೂವರೂ ರಾಜವಂಶಸ್ಥರು. ಈ ಘಟನಾವಳಿಗಳು ಖಂಡಿತ ಕಾಕತಾಳಿಯವಲ್ಲ!

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕಾಯ್ದೆ ಮೂಲಕ ಶಾಶ್ವತ ಆಯೋಗಗಳು ರಚನೆಯಾಗಿವೆ. ಆದರೆ ಕಾಯ್ದೆ ಅಂಶಗಳನ್ನು ಆಯೋಗಗಳು ಪಾಲಿಸುತ್ತಿಲ್ಲ. ಒಟ್ಟಾರೆ ಮೀಸಲಾತಿ ಶೇ. 50ರಷ್ಟು ಎಂಬುದೂ ಹಗ್ಗ ಜಗ್ಗಾಟಕ್ಕೆ ಸಿಲುಕಿದೆ. ಹಿಂದುಳಿದ ವರ್ಗಗಳ ಉಪ ವರ್ಗೀಕರಣವಂತೂ ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ(ಜಿ.ರೋಹಿಣಿ ಆಯೋಗ).

ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ವ್ಯತಿರಿಕ್ತವಾಗಿ ಪ್ರಸಕ್ತ ಒಕ್ಕೂಟ ಸರಕಾರ ತೆಗೆದುಕೊಂಡ ಮಹತ್ವದ ಹಾಗೂ ಸರ್ವೋಚ್ಚ ನ್ಯಾಯಾಲಯ 9 ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ, ಆರ್ಥಿಕ ಮಾನದಂಡ ಒಂದನ್ನೇ ಅನುಸರಿಸಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದು ಅಸಾಂವಿಧಾನಿಕ ಎಂದು ಹೇಳಲಾಗಿದ್ದ ಅಂಶವನ್ನು ಕೇವಲ ಎರಡೇ ದಿನದಲ್ಲಿ ಅಂಥವರಿಗೆ ಮೀಸಲಾತಿ ಕಲ್ಪಿಸಲು ಸಂಸತ್ತಿನ ಉಭಯ ಸದನಗಳಲ್ಲಿ ಪಾಸು ಮಾಡಿಸಿಕೊಂಡು ಐತಿಹಾಸಿಕ ದಾಖಲೆಯನ್ನೇ ಸೃಷ್ಟಿಸಿಬಿಟ್ಟಿತು. ದ್ರಾವಿಡ ಪಕ್ಷ ಒಂದನ್ನು ಹೊರತುಪಡಿಸಿ ಉಳಿದೆಲ್ಲ ರಾಜಕೀಯ ಪಕ್ಷಗಳು ತುದಿಗಾಲಲ್ಲಿ ನಿಂತು ಬೆಂಬಲಿಸಿದವು. 128 ವರ್ಷಗಳ ಸುದೀರ್ಘ ಆಯಸ್ಸು ತುಂಬಿರುವ ಕಾಂಗ್ರೆಸ್ ಪಕ್ಷವಂತೂ ನಗೆಪಾಟಲಿಗೆ ಗುರಿಯಾಗಿಹೋಗಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ಆರ್ಥಿಕ ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಮೀಸಲಾತಿಯನ್ನು ಎತ್ತಿಹಿಡಿಯಲಾಗಿದೆ. ಆದರೂ ಪುನರ್ ವಿಮರ್ಶೆಗೆ ಅರ್ಜಿಗಳು ದಾಖಲಾಗಿವೆ. ಕಾದು ನೋಡುವ ಕಾಲ ಭಾರತಿಯರೆಲ್ಲರಿಗೂ ಬಂದಿದೆ.

ಸಾವಿರಾರು ವರ್ಷಗಳ ಕಾಲ ವರ್ಣ- ಜಾತಿ ಕಾರಣದಿಂದ ಅಸಮಾನತೆಯಿಂದ ಬಳಲುತ್ತಿರುವ ಕೆಲವು ಜಾತಿ- ವರ್ಗಗಳಿಗೆ ತಾರತಮ್ಯ ಪರಿಹಾರ ರೂಪದಲ್ಲಿ ನೀಡುವ ತಾತ್ಕಾಲಿಕ ಸ್ವರೂಪದ ಮೀಸಲಾತಿಯನ್ನು ಈರ್ಷ್ಯೆಯಿಂದ ವಿರೋಧಿಸುತ್ತಿದ್ದ ಮೇಲ್ಜಾತಿ ಬ್ರಾಹ್ಮಣ - ಬನಿಯಾಗಳು ಸಾಮಾನ್ಯ ವರ್ಗದ ಕೋಟಾ ಶೇ.40 ಮತ್ತು ಶೇ.10ರ ದ್ವಿ- ಕೋಟಾದಡಿ ಪ್ರಯೋಜನ ಪಡೆಯುತ್ತ ಜೋಡಿ ಕುದುರೆ ಸವಾರಿ ಮಾಡುತ್ತಿರುವ ಪುಣ್ಯ ವರ್ಣದವರು!! ಇದೇ ಅಲ್ಲವೇ ಸಾಮಾಜಿಕ ನ್ಯಾಯ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)