ಉಪ್ಪಿನಂಗಡಿ | ದಿಕ್ಕು ತಪ್ಪಿ ಅರಣ್ಯ ಸೇರಿದ 80ರ ಹರೆಯದ ವೃದ್ಧೆ 3 ದಿನಗಳ ಬಳಿಕ ಪತ್ತೆ
ಎಲೆಗಳನ್ನು ತಿಂದು ಬದುಕಿದ ಕೌಕ್ರಾಡಿಯ ಐಸಮ್ಮ
ನೆಲ್ಯಾಡಿ, ಮಾ.8: ನೆರೆಮನೆಗೆ ಹೋಗಿ ಹಿಂದಿರುಗುತ್ತಿದ್ದ ವೇಳೆ ದಾರಿತಪ್ಪಿ ಅರಣ್ಯ ಸೇರಿದ್ದ ವೃದ್ಧೆಯೊಬ್ಬರು ಮೂರು ದಿನಗಳ ಅಲೆದಾಟದ ಬಳಿಕ ಸುರಕ್ಷಿತವಾಗಿ ಮನೆ ಸೇರಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ನಿವಾಸಿ ಐಸಮ್ಮ(80) ಈ ರೀತಿ ದಿಕ್ಕು ತಪ್ಪಿ ಅರಣ್ಯ ಸೇರಿದ್ದ ಮಹಿಳೆ. ಇವರು ಫೆ.28ರಂದು ಸಂಜೆ ದೋಂತಿಲದಿಂದ ನಾಪತ್ತೆಯಾದವರು ಮಾ.3ರಂದು ಬೆಳಗ್ಗೆ ಮನೆಯಿಂದ ಸುಮಾರು 4 ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. ಅರಣ್ಯದಲ್ಲೇ ಮೂರು ರಾತ್ರಿ ಹಾಗೂ ಎರಡು ಹಗಲು ಕಳೆದಿರುವ ಐಸಮ್ಮ ಜೀವಂತವಾಗಿ ಮನೆ ಸೇರಿರುವುದರಿಂದ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.
ಐಸಮ್ಮ ತುಸು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರಲ್ಲದೆ ವಯೋ ಸಹಜವಾಗಿ ಮಾತು ವಿರಳವಾಗಿತ್ತು. ಆದರೆ ತಮ್ಮ ನೆರೆಯ ಮನೆಗಳಿಗೆ ದಿನಾಲೂ ಭೇಟಿ ನೀಡಿ ಅವರೊಂದಿಗೆ ಬೆರೆತು ರಾತ್ರಿಯಾಗುತ್ತಲೇ ತಮ್ಮ ಮನೆ ಸೇರುತ್ತಿದ್ದರು. ಅದೇರೀತಿ ಫೆ.28ರಂದು ಸಂಜೆ ಮನೆಯಿಂದ ಹೊರಟ ಐಸಮ್ಮ ನಾಪತ್ತೆಯಾಗಿದ್ದರು. ಅವರ ಪುತ್ರ ಮುಹಮ್ಮದ್ ಹಾಗೂ ಸ್ಥಳೀಯ ಯುವಕರು ನೆರೆಮನೆಗಳಲ್ಲಿ, ಹೊಸಮಜಲು ಪೇಟೆಯಲ್ಲೆಲ್ಲ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮರುದಿನ ಮನೆ ಸಮೀಪದ ಕಾಡಿನಲ್ಲೂ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾ.1ರಂದು ಅವರು ಪೊಲೀಸರಿಗೆ ದೂರು ನೀಡಿದ್ದರಲ್ಲದೆ, ಹುಡುಕಾಟ ಮುಂದುವರಿಸಿದ್ದರು.
ಏರ್ತಿಲ ಅರಣ್ಯದಲ್ಲಿ ಪತ್ತೆ: ಈ ನಡುವೆ ಮಾ.3ರಂದು ಬೆಳಗ್ಗೆ ಹೊಸಮಜಲು ಹಾಲಿನ ಸೊಸೈಟಿಗೆ ಹಾಲು ತರುತ್ತಿದ್ದ ಶಿಜು ಎಂಬವರು ಮಣ್ಣಗುಂಡಿ ಸಮೀಪದ ಏರ್ತಿಲ ಎಂಬಲ್ಲಿ ರಕ್ಷಿತಾರಣ್ಯದಲ್ಲಿ ವೃದ್ಧೆಯೋರ್ವರನ್ನು ಕಂಡಿದ್ದಾರೆ. ಈ ಬಗ್ಗೆ ಅವರು ಹಾಲಿನ ಸೊಸೈಟಿಗೆ ಮಾಹಿತಿ ನೀಡಿದ್ದರು. ಮಾಹಿತಿ ಅರಿತ ಸ್ಥಳೀಯ ಯುವಕರು ಏರ್ತಿಲಕ್ಕೆ ತೆರಳಿ ಅರಣ್ಯದಲ್ಲಿದ್ದ ಐಸಮ್ಮರನ್ನು ಪತ್ತೆ ಹಚ್ಚಿ ಮನೆಗೆ ಕರೆದುಕೊಂಡು ಬಂದರು. ಐಸಮ್ಮ ಆರೋಗ್ಯವಾಗಿದ್ದಾರೆ.
ಫೆ.28ರಂದು ಸಂಜೆ ಮನೆಯಿಂದ ಹೊರಬಂದ ಐಸಮ್ಮ ದಾರಿತಪ್ಪಿ ತನಗೇ ಅರಿವಿಲ್ಲದಂತೆ ಮನೆಯಿಂದ ಸುಮಾರು 4 ಕಿ.ಮೀ. ದೂರದ ರಕ್ಷಿತಾರಣ್ಯ ಪ್ರದೇಶ ಸೇರಿದ್ದಾರೆ. ಮನೆಗೆ ಬರಲು ದಾರಿ ಕಾಣದೆ ಅರಣ್ಯದಲ್ಲಿ 3 ರಾತ್ರಿ ಹಾಗೂ 2 ಹಗಲು ಅಲೆದಾಡಿದ್ದಾರೆ. ಹಸಿವು ಆದಾಗ ಅರಣ್ಯದಲ್ಲಿನ ಎಲೆಗಳನ್ನೇ ತಿಂದಿರುವುದಕ್ಕೆ ಐಸಮ್ಮರವರ ಬಾಯಿ, ನಾಲಗೆ ಹಸಿರು ಬಣ್ಣ ತಿರುಗಿರುವುದೇ ಸಾಕ್ಷಿಯಾಗಿದೆ. ಅವರು ಪತ್ತೆಯಾಗಿರುವ ಏರ್ತಿಲದಲ್ಲಿ ಸಣ್ಣ ತೋಡೊಂದು ಇದ್ದು ಅದರಲ್ಲಿ ಹರಿಯುವ ನೀರೇ ಐಸಮ್ಮರವರ ಬಾಯಾರಿಕೆ ನೀಗಿಸಿದೆ ಎನ್ನುತ್ತಾರೆ ಅವರ ಪುತ್ರ ಮುಹಮ್ಮದ್.