‘ಇವತ್ತು ಲಂಕೇಶ್ ಇದ್ದಿದ್ದರೆ...’ ಎಂಬುದರ ಅರ್ಥವೇನು?
ಇಂದು ಪಿ. ಲಂಕೇಶ್ ಜನ್ಮದಿನ
ಇವತ್ತು ಲಂಕೇಶ್ ಇದ್ದರೆ ಏನೆನ್ನುತ್ತಿದ್ದರು ಎಂಬ ಪ್ರಶ್ನೆಗೆ ನಮಗೆ ಸರಿಯಾದ ಉತ್ತರ ಸಿಗುವುದು ಅವರು ನಮಗಾಗಿ ಬಿಟ್ಟು ಹೋದ ಸಾವಿರಾರು ಪುಟಗಳ ಸಾವಧಾನದ ಮರು ಓದಿನಲ್ಲಿ. ರಾಜಕೀಯ ವಿಮರ್ಶೆ, ಸಾಂಸ್ಕೃತಿಕ ಲೋಕದ ವಿಮರ್ಶೆ, ಸಾಹಿತ್ಯ ವಿಮರ್ಶೆ ಎಲ್ಲವೂ ಒಂದೇ ಸಂವೇದನೆಯಿಂದ, ಒಂದು ಇಡಿಯಾದ ವ್ಯಕ್ತಿತ್ವದಿಂದ ಹೊರಟಾಗ ಅವೆಲ್ಲವುಗಳ ಮೇಲೆ ಖಚಿತ ಪ್ರಾಮಾಣಿಕತೆಯ ಸಹಿ ಇರುತ್ತದೆ ಎಂಬುದನ್ನು ಈ ಬರಹಗಳು ತೋರಿಸಿಕೊಡಬಲ್ಲವು. ನಾವು ಆಳದಲ್ಲಿ ನಿಜಕ್ಕೂ ಜಾತ್ಯತೀತರಾಗಿದ್ದರೆ ಎಲ್ಲ ಜಾತಿಗಳ ಸೂಕ್ಷ್ಮ ಜನರನ್ನೂ ತಲುಪುತ್ತಿರುತ್ತೇವೆ ಹಾಗೂ ಅದೇ ನಮ್ಮ ಮಾತು, ನಡವಳಿಕೆ, ಬರವಣಿಗೆಯ ನಿಜವಾದ ಶಕ್ತಿ ಎಂಬುದನ್ನು ಸರಿಯಾಗಿ ಹೇಳಿಕೊಡಬಲ್ಲವು.
‘‘ಇವತ್ತು ಲಂಕೇಶ್ ಇದ್ದಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು?’’ ಎಂದರು ಬಶೀರ್.
ಈ ಪ್ರಶ್ನೆ ಕಳೆದ ಇಪ್ಪತ್ತಮೂರು ವರ್ಷಗಳಲ್ಲಿ ನಾಡಿನುದ್ದಕ್ಕೂ ನೂರಾರು ಸಲ, ನೂರಾರು ದನಿಗಳಲ್ಲಿ ಕೇಳಿ ಬರುತ್ತಲೇ ಇರುತ್ತದೆ. ಇಪ್ಪತ್ತನೆಯ ಶತಮಾನದ ಅನನ್ಯ ಕನ್ನಡ ಜೀನಿಯಸ್ ಪಿ. ಲಂಕೇಶ್ 2000ನೆಯ ಇಸವಿಯ ಜನವರಿ 24ರ ರಾತ್ರಿ ಕೊನೆಯ ಬರಹ ಬರೆದು ಚಿರ ನಿದ್ರೆಗೆ ತೆರಳಿದ ರಾತ್ರಿ ಕೂಡ ನಿನ್ನೆ ಮೊನ್ನಿನ ರಾತ್ರಿಯಂತೆ ಕಾಣುತ್ತಿದೆ! ‘‘ನಾವಿರೋ ತನಕ ಬಿಜೆಪಿ ಅಧಿಕಾರಕ್ಕೆ ಬರೋಕೆ ಬಿಡಲ್ಲ’’ ಎಂದಿದ್ದ ಅವರ ಆತ್ಮವಿಶ್ವಾಸದ ಮಾತು ಆ ಕಾಲದಲ್ಲಿ ಕರ್ನಾಟಕದ ಪ್ರಜ್ಞಾವಂತ ಮತದಾರರ ಮನಸ್ಸಿನಲ್ಲೂ ಪ್ರತಿಧ್ವನಿಸುತ್ತಿದ್ದ ರೀತಿ ನೆನೆದು ಅಚ್ಚರಿಯಾಗುತ್ತದೆ. ಆ ಕೋಮುವಾದ ವಿರೋಧ ಕರ್ನಾಟಕದಲ್ಲಿ ಇನ್ನೂ ಗಟ್ಟಿಯಾಗೇ ಇರುವುದನ್ನು ಕಂಡು ನಾಳಿನ ಬಗ್ಗೆ ಭರವಸೆ ಮೂಡುತ್ತದೆ.
ಲಂಕೇಶರು ಹೀಗೆ ಆರೋಗ್ಯಕರ ಕರ್ನಾಟಕದ ನಿರ್ಮಾಣ ಮಾಡಬಯಸುವವರ ಅಂತಸ್ಸಾಕ್ಷಿಯಾಗಿದ್ದಕ್ಕೆ ಕಾರಣವಾದ ಅವರ ಒಟ್ಟು ಬರವಣಿಗೆ ಹಾಗೂ ಅವರ ವ್ಯಕ್ತಿತ್ವದ ಪ್ರಭಾವದ ಸಂಕೀರ್ಣ ಮುಖಗಳನ್ನು ಈಗ ಕೊಂಚ ವಿರಾಮವಾಗಿ ಹಿಂದಿರುಗಿ ನೋಡಬಹುದು; ಕಲಿಯುವ ವಿನಯ ಮತ್ತು ಕಾತರವುಳ್ಳವರು ಆ ಮಾರ್ಗದಿಂದ ಹತ್ತಾರು ಪಾಠಗಳನ್ನು ಇಂದು ಕೂಡ ಕಲಿಯಬಹುದು:
ಲಂಕೇಶ್ (1935-2000) ತಮ್ಮ ನಲವತ್ತೈದರ ಹರೆಯದಲ್ಲಿ ತಮ್ಮ ಆವರೆಗಿನ ಇಪ್ಪತ್ತೈದು ವರ್ಷಗಳ ಬರವಣಿಗೆಯಿಂದ ಕೊಂಚ ಹೊಸಬಗೆಯ ಬರವಣಿಗೆಗೆ ವಿಸ್ತರಿಸಿಕೊಂಡರು; ಎಲ್ಲ ಜಾತಿ, ವರ್ಗಗಳ, ಎಲ್ಲ ವಯೋಮಾನಗಳ ಸೂಕ್ಷ್ಮ ಮನಸ್ಸಿನ ಓದುಗ, ಓದುಗಿಯರನ್ನು ಉದ್ದೇಶಿಸಿ ಬರೆಯುವುದನ್ನು ರೂಢಿಸಿಕೊಳ್ಳ ತೊಡಗಿದರು. ಎಷ್ಟೋ ಸಲ ಅವರು ಕವಿ ಬಸವಣ್ಣನಂತೆ ತಮ್ಮೊಳಗೇ ಮಾತಾಡಿಕೊಳ್ಳುತ್ತಲೇ ಲೋಕಕ್ಕೂ ಮಾತಾಡುತ್ತಿದ್ದುದರಿಂದ ಅವರ ಭಾಷೆ ಅವರ ವಾರಗೆಯ ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಎಂ.ಡಿ. ನಂಜುಂಡಸ್ವಾಮಿ ಥರದವರ ಬರವಣಿಗೆಗಿಂತ ಹೆಚ್ಚು ಆತ್ಮೀಯವಾಗಿರುತ್ತಿತ್ತು; ಓದುಗರ ಒಳಗು ಮೆಚ್ಚಿ, ಒಪ್ಪಿಅಹುದಹುದೆನ್ನುವಂತಿತ್ತು.
ಅದಕ್ಕೆ ಲಂಕೇಶರು ಹದಿಹರೆಯದಿಂದ ಕತೆ, ಕಾದಂಬರಿ, ಕವಿತೆ, ನಾಟಕ, ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಭಾಷೆಯನ್ನು ಬಳಸುತ್ತಾ ಕಲಿತ ಗದ್ಯದ ಪಾಠಗಳು, ಅವರ ಗದ್ಯಕ್ಕೆ ಒಲಿದು ಬಂದ ವಿಶಿಷ್ಟ ಲಯಗಳು, ಪ್ರಾಮಾಣಿಕತೆ, ಆತ್ಮಪರೀಕ್ಷೆಗಳು ಕೂಡ ಕಾರಣವಾಗಿದ್ದವು. ಗದ್ಯದ ಈ ಹೊಸ ಲಯಗಳಿಂದ ಅವರ ನಾಟಕ, ಕತೆ, ಕಾವ್ಯ, ಕಾದಂಬರಿಗಳ ಧಾಟಿಯೂ ಬದಲಾಯಿತು. ಪತ್ರಕರ್ತ ಲಂಕೇಶರನ್ನೇ ಹೆಚ್ಚು ಗಮನಿಸುವವರು ಅವರ ಇನ್ನಿತರ ಬಗೆಯ ಬರವಣಿಗೆಗಳಿಗೂ, ಪತ್ರಿಕೆಯಲ್ಲಿ ಅವರು ಬರೆದ ಬರವಣಿಗೆಗೂ ಇರುವ ಸಂಬಂಧವನ್ನು ಅರಿತಂತಿಲ್ಲ. ಲಂಕೇಶರ ಎಲ್ಲ ಕೃತಿಗಳನ್ನು ಮತ್ತೆ ಒಟ್ಟಿಗೇ ಓದಿದರೆ ಲಂಕೇಶರ ಒಟ್ಟು ಬರವಣಿಗೆಯ ಮೂಲ ಒರತೆಗಳನ್ನು ಒಂದು ಮಟ್ಟದಲ್ಲಾದರೂ ಅರಿಯಬಹುದು; ಅವುಗಳಿಂದ ಕಲಿತು ಹೊಸ ಬಗೆಯ ಲೇಖಕ, ಲೇಖಕಿಯರಾಗಲೂಬಹುದು.
ಹಲವು ಬರವಣಿಗೆಯ ಪ್ರಕಾರಗಳ ಆತ್ಮೀಯ ಸಂಗ ಹಾಗೂ ಆಳವಾದ ತೊಡಗುವಿಕೆಯಲ್ಲಿ ವಿಕಾಸಗೊಂಡ ಎಲ್ಲ ಬಗೆಯ ಗದ್ಯದಲ್ಲಿ ಲಂಕೇಶ್ ನಿಷ್ಠುರ ನೈತಿಕ ಮಾನದಂಡಗಳನ್ನು ಬಳಸುತ್ತಿದ್ದರು; ರಾಜಕಾರಣಿ, ಸಾಹಿತಿ, ಸಾಂಸ್ಕೃತಿಕ ನಾಯಕ, ಅಧಿಕಾರಿ... ಹೀಗೆ ಯಾರನ್ನಾದರೂ ಟೀಕಿಸುತ್ತಿದ್ದ ಅವರು ತಮಗೆ ನಿಜಕ್ಕೂ ಸತ್ಯವೆನ್ನಿಸಿದ್ದನ್ನು ಮಂಡಿಸುತ್ತಿದ್ದರು. ಆದರೆ ಚುನಾವಣೆಯ ಸಂದರ್ಭದಲ್ಲಿ ಇಂಥ ‘ಆಬ್ಸಲ್ಯೂಟ್’ ಮಾನದಂಡಗಳನ್ನು ಕೊಂಚ ಬದಿಗಿರಿಸಿ, ಕೊಂಚ ಉತ್ತಮ ಎನ್ನಬಹುದಾದ ನಾಯಕರನ್ನು ಪ್ರಮೋಟ್ ಮಾಡುತ್ತಿದ್ದರು. ಅವರು ಆಗಾಗ ಒಂದು ಹೆಜ್ಜೆ ಮುಂದೆ ಹೋಗಿ, ಅಸಹಾಯಕರಾದ ಮುಸ್ಲಿಮರು, ದಲಿತರು ಹಾಗೂ ಮಹಿಳೆಯರ ಪರವಾಗಿ ಒಂದು ಕೈ ಹೆಚ್ಚೇ ಎನ್ನುವಂತೆ ನಿಲ್ಲುತ್ತಿದ್ದ ರೀತಿ ಕೂಡ ಕೃತಕವಲ್ಲದ ಐಡಿಯಲ್ ಮಾದರಿಯಂತಿತ್ತು; ಅದರಲ್ಲಿ ಈ ಕಾಲದ ಕೆಲ ಬಗೆಯ ಪ್ರಗತಿಪರರಂತೆ ‘ಸ್ಟ್ರಾಟಿಜಿ’, ಯೋಜಿತ ಮಾತು, ಯೋಜಿತ ಮೌನ ಇರುತ್ತಿರಲಿಲ್ಲ.
ಅಬ್ದುಲ್ ನಝೀರ್ ಸಾಬರನ್ನಾಗಲೀ, ಜಾಫರ್ ಶರೀಫರನ್ನಾಗಲೀ, ಬಿ. ಬಸವಲಿಂಗಪ್ಪನವರನ್ನಾಗಲೀ ಅವರು ಮೆಚ್ಚಿ ಪ್ರೀತಿಯಿಂದ ಬರೆದಂತೆ ಕಟುವಾಗಿ ಟೀಕಿಸಿದ್ದೂ ಉಂಟು. ಹಾಗೆಯೇ ಕವಿ ಸಿದ್ದಲಿಂಗಯ್ಯನವರನ್ನೂ, ಅವರ ಕೃತಿಗಳನ್ನೂ ಕೂಡ. ಆದ್ದರಿಂದಲೇ ‘ದಲಿತ ಪರ’, ‘ಮುಸ್ಲಿಮ್ ಪರ’, ‘ಮಹಿಳಾಪರ’, ‘ಪ್ರಗತಿಪರ’ ಎನ್ನುವ ಹುಸಿ ಮುಸುಕಿನಲ್ಲಿ ಅವರು ಕಳಪೆ ವ್ಯಕ್ತಿಗಳನ್ನಾಗಲೀ, ಸಾಹಿತ್ಯ ಕೃತಿಗಳನ್ನಾಗಲೀ ಒಣ ಉಪಚಾರಕ್ಕೆ ಮೆಚ್ಚಿದವರಲ್ಲ. ಆ ಬಗೆಯ ವಸ್ತುನಿಷ್ಠ ವಿಮರ್ಶೆಯ ಸತ್ಯಬದ್ಧತೆಯ ಆರೋಗ್ಯಕರ ಪರಿಣಾಮ ಒಳ್ಳೆಯ ಸಾಮಾಜಿಕ ಸಂಸ್ಕೃತಿ ಹಾಗೂ ಸಾಹಿತ್ಯ ಸಂಸ್ಕೃತಿಗಳನ್ನು ರೂಪಿಸಲೆತ್ನಿಸಿದ ರೀತಿಯನ್ನು ನಾವು ಇವತ್ತು ಸರಿಯಾಗಿ ಅರಿಯಬೇಕು.
ಈಗ ಈ ಮಾತು ಹೇಳಲು ಕಾರಣವಿದೆ: ಕನ್ನಡ ಸಾಹಿತ್ಯದ ದಿಕ್ಕನ್ನೇ ಬದಲಿಸಿದ ದಲಿತ ಸಾಹಿತ್ಯದ ಶಕ್ತಿ, ವ್ಯಾಪ್ತಿ, ಸಾಧ್ಯತೆಗಳನ್ನೇ ಮರೆತಂತೆ ಇವತ್ತು ಬಲಗೈ ದಲಿತರ ಕೃತಿ, ಎಡಗೈ ದಲಿತರ ಕೃತಿ ಎಂದು ಹೊಗಳುವ, ತೆಗಳುವ ಹೀನ ಮಟ್ಟಕ್ಕೆ ಕನ್ನಡ ವಿಮರ್ಶೆ ಇಳಿದಿರುವ ಕಾಲದಲ್ಲಿ ಲಂಕೇಶ್ ವಿಮರ್ಶೆಯ ಸತ್ಯದ ತಕ್ಕಡಿ ನಮಗೆ ನೆನಪಾಗಬೇಕು. ಅವರ ರೀತಿಯ ಸಾಹಿತ್ಯ ವಿಮರ್ಶೆಯ ನಿಷ್ಠುರತೆ ಒಟ್ಟಾರೆ ಸಾಹಿತ್ಯ ಸಂಸ್ಕೃತಿಗೆ ತರಬಲ್ಲ ಆರೋಗ್ಯದ ಅಗತ್ಯವನ್ನು ನಿರ್ವಿಕಾರವಾಗಿ ಅರಿಯಬೇಕು. ಯಾಕೆಂದರೆ, ನಾನು ಮೆಚ್ಚಿದ ಡಿ.ಆರ್. ನಾಗರಾಜರ ‘ಸಾಹಿತ್ಯ ಕಥನ’ ಸಂಸ್ಕೃತಿ ಚಿಂತನೆಯನ್ನಾಗಲೀ, ತೇಜಸ್ವಿಯವರ ‘ಜುಗಾರಿ ಕ್ರಾಸ್’ ಕಾದಂಬರಿಯನ್ನಾಗಲೀ ಲಂಕೇಶ್ ಕಟುವಾಗಿ ಟೀಕಿಸಿದಾಗ ಕೂಡ ಅವರು ಬರೆದದ್ದು ‘ಸುಳ್ಳು’ ಎಂದು ನನಗನ್ನಿಸಿಲ್ಲ. ಆದರೆ ಇವತ್ತು ನಾನು ಓದುವ ಅನೇಕ ಬಗೆಯ ಸಾಹಿತ್ಯ ವಿಮರ್ಶೆಗಳ ಮೇಲ್ಪದರದ ಮಾತುಗಳು, ಜಾರು ಹೇಳಿಕೆಗಳು, ಹುಸಿತನ ಅಥವಾ ಅರ್ಥಹೀನ ಹೊಗಳಿಕೆ-ತೆಗಳಿಕೆಗಳೆರಡೂ ಕಣ್ಣಿಗೆ ಹೊಡೆಯುವಂತಿರುತ್ತವೆ! ಪತ್ರಿಕೆಗಳಲ್ಲಿ ಬರುವ ಇನ್ನಿತರ ಹಲವು ಬಗೆಯ ರಾಜಕೀಯ, ಸಾಂಸ್ಕೃತಿಕ ಬರಹಗಳಲ್ಲಿ ಈ ಚಾಳಿ ಇನ್ನಷ್ಟು ಸ್ಪಷ್ಟವಾಗಿ ಕಾಣುತ್ತದೆ. ಗದ್ಯ ನಿಜಕ್ಕೂ ಪಾರದರ್ಶಕ; ಅದು ಬರೆಸಿಕೊಳ್ಳುವ ವಸ್ತುವಿಗಿಂತ ಬರೆಯುವವರನ್ನೇ ಹೆಚ್ಚು ಬಯಲು ಮಾಡುತ್ತದೆ ಎಂಬ ಸತ್ಯ ಇಂಥ ಸಂದರ್ಭಗಳಲ್ಲಿ ಮತ್ತೆ ಮತ್ತೆ ನಮ್ಮ ಅನುಭವಕ್ಕೆ ಬರುತ್ತಿರುತ್ತದೆ!
ಆದ್ದರಿಂದಲೇ ಇವತ್ತು ಲಂಕೇಶ್ ಇದ್ದರೆ ಏನೆನ್ನುತ್ತಿದ್ದರು ಎಂಬ ಪ್ರಶ್ನೆಗೆ ನಮಗೆ ಸರಿಯಾದ ಉತ್ತರ ಸಿಗುವುದು ಅವರು ನಮಗಾಗಿ ಬಿಟ್ಟು ಹೋದ ಸಾವಿರಾರು ಪುಟಗಳ ಸಾವಧಾನದ ಮರು ಓದಿನಲ್ಲಿ. ರಾಜಕೀಯ ವಿಮರ್ಶೆ, ಸಾಂಸ್ಕೃತಿಕ ಲೋಕದ ವಿಮರ್ಶೆ, ಸಾಹಿತ್ಯ ವಿಮರ್ಶೆ ಎಲ್ಲವೂ ಒಂದೇ ಸಂವೇದನೆಯಿಂದ, ಒಂದು ಇಡಿಯಾದ ವ್ಯಕ್ತಿತ್ವದಿಂದ ಹೊರಟಾಗ ಅವೆಲ್ಲವುಗಳ ಮೇಲೆ ಖಚಿತ ಪ್ರಾಮಾಣಿಕತೆಯ ಸಹಿ ಇರುತ್ತದೆ ಎಂಬುದನ್ನು ಈ ಬರಹಗಳು ತೋರಿಸಿಕೊಡಬಲ್ಲವು. ನಾವು ಆಳದಲ್ಲಿ ನಿಜಕ್ಕೂ ಜಾತ್ಯತೀತರಾಗಿದ್ದರೆ ಎಲ್ಲ ಜಾತಿಗಳ ಸೂಕ್ಷ್ಮ ಜನರನ್ನೂ ತಲುಪುತ್ತಿರುತ್ತೇವೆ ಹಾಗೂ ಅದೇ ನಮ್ಮ ಮಾತು, ನಡವಳಿಕೆ, ಬರವಣಿಗೆಯ ನಿಜವಾದ ಶಕ್ತಿ ಎಂಬುದನ್ನು ಸರಿಯಾಗಿ ಹೇಳಿಕೊಡಬಲ್ಲವು.
ಲಂಕೇಶರು ತಮ್ಮ ಕಾಲದ ಬೆಳವಣಿಗೆಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸುತ್ತಿದ್ದರು; ಅದೇ ರೀತಿ ಈ ಕಾಲದಲ್ಲೂ ಫೇಸ್ಬುಕ್ನಲ್ಲಿ ಲಂಕೇಶರಂತೆ ಅಥವಾ ಅವರಿಗಿಂದ ನೇರವಾಗಿ, ದಿಟ್ಟವಾಗಿ, ಆರೋಗ್ಯಕರವಾಗಿ ಪ್ರತಿಕ್ರಿಯಿಸುವ ತರುಣ, ತರುಣಿಯರಿದ್ದಾರೆ; ಹಿರಿಯರಿದ್ದಾರೆ. ಒಮ್ಮೆ ಈ ಫೇಸ್ಬುಕ್ ಗೆಳೆಯರ ಜೊತೆ ಮಾತಾಡುತ್ತಿದ್ದಾಗ ಲಂಕೇಶರ ‘ಈ ಸಂಚಿಕೆ’ ಮತ್ತು ‘ಮರೆಯುವ ಮುನ್ನ’ ಕಾಲಂಗಳು ನೆನಪಾದವು. ಇವೆರಡೂ ಲಂಕೇಶರೇ ರೂಪಿಸಿಕೊಂಡ ಫೇಸ್ಬುಕ್ಗಳಾಗಿದ್ದಲ್ಲವೆ ಎನ್ನಿಸಿ ಅಚ್ಚರಿಯಾಯಿತು. ಇವತ್ತು ಪ್ರಾತಿನಿಧಿಕವಾಗಿ ನೋಡುವುದಾದರೆ, ಫೇಸ್ಬುಕ್ನಲ್ಲಿ ಕ್ರಿಯಾಶೀಲರಾಗಿರುವ ನಟರಾಜ್ ಹೊನ್ನವಳ್ಳಿ, ಚಂದ್ರಶೇಖರ್ ಐಜೂರ್ ಥರದ ಎರಡು ತಲೆಮಾರಿನ ಗೆಳೆಯರು ಲಂಕೇಶರ ಧಾಟಿ, ಧೋರಣೆಗಳು ಆಗಾಗ ನೆನಪಾಗುವಂತೆ ಬರೆಯುತ್ತಿರುತ್ತಾರೆ ಎಂದು ಅವರ ಫೇಸ್ಬುಕ್ ಸಹಯಾತ್ರಿಕರು ಹೇಳುವುದನ್ನು ಕೇಳಿದ್ದೇನೆ. ‘ಲಂಕೇಶ್ ಪತ್ರಿಕೆ’ ಶುರುವಾದ ಕಾಲದಿಂದಲೂ ಅದನ್ನು ಓದಿರುವ ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿ ‘ಈ ಸಂಚಿಕೆ’, ‘ಮರೆಯುವ ಮುನ್ನ’ ಕಾಲಂಗಳನ್ನು ಬಲ್ಲವರು. ಐಜೂರ್ ಲಂಕೇಶರ ‘ಗುಣಮುಖ’ ನಾಟಕ ಓದಿ ಲಂಕೇಶರ ಬರವಣಿಗೆಯತ್ತ ಹೊರಳಿದವರು. ಲಂಕೇಶ್ ‘ಮರೆಯುವ ಮುನ್ನ’ ಅಂಕಣದಲ್ಲಿ ಒಮ್ಮೊಮ್ಮೆ ಆ ವಾರ ತಾವು ಓದಿದ ಪುಸ್ತಕಗಳನ್ನು ವಿಶ್ಲೇಷಿಸುತ್ತಾ ಅವುಗಳ ಜ್ಞಾನವನ್ನು ಓದುಗರೊಡನೆ ಹಂಚಿಕೊಳ್ಳುತ್ತಿದ್ದರು. ಈಚಿನ ವರ್ಷಗಳಲ್ಲಿ ತಾವು ಓದಿದ ಒಳ್ಳೆಯ ಪುಸ್ತಕಗಳ ಭಾಗವನ್ನು ಹಂಚಿಕೊಳ್ಳುವ ಶ್ರೀಧರ್ ಥರದ ಹೊಸ ಸಂಶೋಧಕರು ಲಂಕೇಶ್ ತೀರಿಕೊಂಡ ಎಷ್ಟೋ ವರ್ಷಗಳ ನಂತರ ಅವರ ಕೃತಿಗಳನ್ನು ಓದಿದವರು. ಹೀಗೆ ಈ ಪರಂಪರೆ ಮುಂದುವರಿಯುತ್ತದೆ.
ಇಷ್ಟಾಗಿಯೂ, ಫೇಸ್ಬುಕ್ ಅಥವಾ ಮೊಬೈಲ್ ಎರಡನ್ನೂ ಬಳಸದೆ ತೀರಿಕೊಂಡ ಲಂಕೇಶರ ಬರವಣಿಗೆಯ ನೈತಿಕತೆಯಿಂದ ಈ ಕಾಲದ ಕ್ಷಿಪ್ರ ಪ್ರತಿಕ್ರಿಯಾಕಾರರು ಕಲಿಯುವುದು ಬಹಳವಿದೆ. ಲಂಕೇಶರೂ ಪರ್ಸನಲ್ಲಾಗಿ ಬರೆಯುತ್ತಿದ್ದರು, ಎಲ್ಲರ ಕಾಲೆಳೆಯುತ್ತಿದ್ದರು; ಆದರೆ ಅದೇ ಬರಹದ ಮುಂದಿನ ಪ್ಯಾರಾದಲ್ಲಾಗಲೇ ಧ್ಯಾನಶೀಲ ಬರಹಕ್ಕೆ, ಆತ್ಮಪರೀಕ್ಷೆಗೆ ಹೊರಳಿ ಬಿಡುತ್ತಿದ್ದರು. ಬದುಕಿನ ಗಾಢ ಸತ್ಯಗಳು, ಸ್ವ-ಪರೀಕ್ಷೆ, ಒಳನೋಟಗಳು ಅವರ ಆ ಕ್ಷಣದ ಕ್ಷಿಪ್ರ ಬರಹಗಳನ್ನು ಸದ್ಯದ ತಾತ್ಕಾಲಿಕತೆಯಿಂದ ಮೇಲೆತ್ತಿಬಿಡುತ್ತಿದ್ದವು. ಅದಕ್ಕೆ ಅವರು ನಿತ್ಯವೂ ಲೋಕದ ದಶ ದಿಕ್ಕಿನ ಸಾಹಿತ್ಯಕ್ಕೆ ಕೈ ಚಾಚಿ ಪಡೆದ ಜ್ಞಾನ, ಆ ಮೂಲಕ ಪಡೆಯುತ್ತಿದ್ದ ಭಾಷೆಯ ನುಡಿಗಟ್ಟುಗಳು ಹಾಗೂ ಬರವಣಿಗೆಯಲ್ಲಿ ಆಳವಾಗಿ ತೊಡಗಿದ ಅವರ ಅಸಲಿ ವ್ಯಕ್ತಿತ್ವ ಇವೆಲ್ಲ ಕಾರಣವಾಗಿದ್ದವು. ಅವರ ಬರವಣಿಗೆಯಲ್ಲಿ ಆಗ ಆ ಗಳಿಗೆಯಲ್ಲಿ ಹೊರ ಬಂದಂತೆ ಕಾಣುತ್ತಿದ್ದ ಸತ್ಯಗಳು ಕೂಡ ಹಕ್ಕಿಯೊಂದು ಎಷ್ಟೋ ವರ್ಷಗಳಿಂದ ಮೊಟ್ಟೆಯ ಮೇಲೆ ಕಾವು ಕೂತು ಮಾಡಿದ ಪುಟ್ಟ ಹಕ್ಕಿಮರಿಗಳಂತೆ ಫ್ರೆಶ್ಶಾಗಿ, ಮುಗ್ಧವಾಗಿರುತ್ತಿದ್ದವು. ಇದೆಲ್ಲ ಆಗುವುದು ಜೀವನದ ಆನಂದ, ದುರಂತಗಳನ್ನು ನೋಡುವ ವಿಸ್ತಾರವಾದ ನೋಟಗಳಿಂದ; ಲೇಖಕನೊಬ್ಬ ತನ್ನ ಆಳಕ್ಕಿಳಿದಾಗ ಕಂಡ ಗಾಢ ಸತ್ಯಗಳಿಂದ; ಭಾಷೆಯ ಬಳಕೆಯ ಬಗೆಗಿನ ಸಹಜ ನೈತಿಕ ಎಚ್ಚರದಿಂದ.
ನಮ್ಮ ಕಾಲದ ಸೂಕ್ಷ್ಮ ಮನಸ್ಸಿನ ಹಾಗೂ ನಿಜಕ್ಕೂ ಪ್ರಗತಿಪರರಾದ ಲೇಖಕ, ಲೇಖಕಿಯರಿಗೆ ಮತ್ತೆ ಲಂಕೇಶರ ಈ ಬಗೆಯ ಬರಹಗಳಿಗೆ ಹೋಗಿ, ತಮ್ಮ ಬರವಣಿಗೆಯ ವೃತ್ತಿಯನ್ನು ಗಂಭೀರವಾಗಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ಮಾಡುವ ನಿಜವಾದ ಕಾತರವಿದೆಯೆ? ಥಟ್ಟನೆ ಮೊಬೈಲ್ ತೆರೆಯ ಅಕ್ಷರಗಳ ಮೇಲೆ ಬೆರಳಿಡುವ ಮುನ್ನ ಅಥವಾ ಬಾಯಲ್ಲೇ ವಾಕ್ಯ ಉಸುರಿ ತೆರೆಯ ಮೇಲೆ ಅಕ್ಷರ ಮೂಡಿಸುವ ಮುನ್ನ, ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆ ಕೇಳುವಂತೆ ‘ಇನ್ನೊಂದು ಗಳಿಗೆ ಕಾದರೆ ನಷ್ಟವೆ?’ ಎಂದು ಹೊಸ ಪ್ರತಿಮೆಗಾಗಿ ಕಾಯುವ ವ್ಯವಧಾನ, ವಿನಯಗಳಿವೆಯೇ? ಹಾಗೆಯೇ, ನಮ್ಮ ರಾಜಕೀಯ- ಸಾಮಾಜಿಕ ವಿಶ್ಲೇಷಕರಿಗೆ, ಸೂಕ್ಷ್ಮ ರಾಜಕಾರಣಿಗಳಿಗೆ, ನಾಯಕರುಗಳಿಗೆ ಲಂಕೇಶರಿಂದ ನಿತ್ಯ ಕಲಿಯುವ ಪಾಠಗಳಿವೆ ಎಂಬ ಅರಿವು ಮತ್ತೆ ಮೂಡಬಹುದೆ?
ಲಂಕೇಶರನ್ನು ಉತ್ತಮ ಬರವಣಿಗೆಯ ಅರ್ಥಪೂರ್ಣ ಸಂಕೇತದಂತೆ, ಒರೆಗಲ್ಲಿನಂತೆ ಇಟ್ಟುಕೊಂಡು ಅವರ ಬರಹ-ವ್ಯಕ್ತಿತ್ವಗಳನ್ನು ನೋಡುತ್ತಿದ್ದರೆ ಈ ಕಾಲದಲ್ಲಿ ಅವರು ಹೀಗೆಲ್ಲ ಮರುದನಿ ಪಡೆಯುತ್ತಿರುತ್ತಾರೆ ಎನ್ನಿಸುತ್ತದೆ. ಎಲ್ಲ ಕಾಲದಲ್ಲೂ ಕತೆಗಾರ, ನಾಟಕಕಾರ ಲಂಕೇಶರಂತೆ ತಮ್ಮನ್ನೂ, ತಮ್ಮ ಕೃತಿಯ ಪಾತ್ರಗಳನ್ನೂ ಆಳವಾಗಿ ಪರೀಕ್ಷೆ ಮಾಡುವ ಲೇಖಕ, ಲೇಖಕಿಯರು ಇದ್ದೇ ಇರುತ್ತಾರೆನ್ನುವುದು ನಿಜ. ಲಂಕೇಶರಂತೆ ವ್ಯವಸ್ಥೆಯನ್ನು ವಿರೋಧಿಸುವ, ಆಳುವ ವರ್ಗಗಳನ್ನು ತೀವ್ರ ಪರೀಕ್ಷೆಗೊಳಪಡಿಸುವ, ಎಕ್ಸ್ಪೋಸ್ ಮಾಡುವ ದಿಟ್ಟರು ಕೂಡ ಇದ್ದೇ ಇರುತ್ತಾರೆ. ಇದೇ ‘ವಾರ್ತಾಭಾರತಿ’ಯಲ್ಲಿ ಕಾಣಿಸಿಕೊಳ್ಳುವ ಜಿ. ಮಹಾಂತೇಶರ ತನಿಖಾ ವರದಿಗಳಾಗಲೀ ಅಥವಾ ‘ಫ್ಯಾಕ್ಟ್ ಚೆಕ್’ನ ಝುಬೈರ್ ಕಾಣಿಸುವ ಸತ್ಯಗಳಾಗಲೀ ಲಂಕೇಶರಿಗಿಂತ, ‘ಲಂಕೇಶ್ ಪತ್ರಿಕೆ’ಗಿಂತ ಮುಂದೆ ಹೋಗಿ ಸತ್ಯ ಮಂಡಿಸುವ ಛಾತಿ ತೋರಿ ಪ್ರಜಾಪ್ರಭುತ್ವವನ್ನು ಕಾಪಾಡುವ ದಿಟ್ಟ ದನಿಗಳಾಗಿವೆಯಲ್ಲವೆ?
ಇವತ್ತು ಲಂಕೇಶ್ ಇದ್ದಿದ್ದರೆ ಇಂಥ ಹೊಸಬರನ್ನು ನೋಡಿ, ತಮ್ಮ ಪತ್ರಿಕಾಮಾರ್ಗದ ಮಿತಿಯನ್ನೂ ಅರಿತು ಕಾಲಕ್ಕೆ ತಕ್ಕಂತೆ ತಮ್ಮನ್ನು ಮತ್ತೆ ಅಣಿಗೊಳಿಸಿಕೊಳ್ಳುತ್ತಿದ್ದರೇ? ಅಥವಾ ಪೊರೆ ಬಿಡುವ ಲೇಖಕರಾಗಿದ್ದ ಅವರು ಮತ್ತೊಂದು ಮಾರ್ಗ ಹುಡುಕುತ್ತಿದ್ದರೇ? ಈ ಥರದ ಪ್ರಶ್ನೆಗಳನ್ನು ಲಂಕೇಶರ ಓದುಗರ ಊಹೆಗೆ ಬಿಟ್ಟು, ನನ್ನ ಸುತ್ತ ಸದಾ ಅಡ್ಡಾಡುವ ಲಂಕೇಶ್ ಮೇಷ್ಟ್ರಿಗೆ, ‘ಹ್ಯಾಪಿ ಬರ್ತ್ಡೇ’ ಎನ್ನುವೆ; ಇಲ್ಲೇ ಎಲ್ಲೋ ಅವರ ‘ಮಿಯಾಂವ್’ ಎಂಬ ಕೀಟಲೆಯ ಥ್ಯಾಂಕ್ಸ್ ಕೇಳಿದಂತಾಗಿ ಮುದಗೊಳ್ಳುವೆ!