varthabharthi


ಕಾಲಂ 9

‘19.20.21’ರ ಹಿನ್ನೆಲೆಯಲ್ಲಿ 10,552ರ ಬಗ್ಗೆ

ವಾರ್ತಾ ಭಾರತಿ : 9 Mar, 2023
ಶಿವಸುಂದರ್

 ಭಾಗ-2

ಈ ಹೋರಾಟದ ಭಾಗವಾಗಿಯೇ 2003ರಲ್ಲಿ ಪಾರ್ವತಿ ಮತ್ತು ಹಾಜಿಮಾ ಎಂಬ ಇಬ್ಬರು ಕಾರ್ಯಕರ್ತೆಯರನ್ನು ಸುಳ್ಳು ಎನ್‌ಕೌಂಟರಿನಲ್ಲಿ ಕಾಂಗ್ರೆಸ್ ಸರಕಾರ ಕೊಂದು ಹಾಕಿತು. (ಸಿನೆಮಾದಲ್ಲಿ ಈ ಇಬ್ಬರ ಬಗ್ಗೆ ಸೂಚ್ಯವಾಗಿ ತೋರಿಸಲಾಗಿದೆ. ಆದರೆ ನಕ್ಸಲರಿಗೂ ಪೊಲೀಸರಿಗೂ ನಿಜವಾದ ಮುಖಾಮುಖಿಯಾದಂತೆ ತೋರಿಸಲಾಗಿದೆ. ಆದರೆ ಈದು ಹಳ್ಳಿಯಲ್ಲಿ ಪಾರ್ವತಿ ಮನೆಯ ಹೊರಗಡೆ ನಿದ್ದೆಗಣ್ಣಿನಲ್ಲಿ ಕೂತಿದ್ದಾಗ ನಕ್ಸಲ್ ನಿಗ್ರಹ ಪಡೆ ಅವರನ್ನು ಬಂಧಿಸುವ ಸಾಧ್ಯತೆ ಇದ್ದರೂ ಗುಂಡಿಟ್ಟು ಕೊಂದರು ಹಾಗೂ ಮನೆಯೊಳಗೆ ಹೋಗಿ ಹಾಜಿಮಾ ಅವರನ್ನು ಕೊಂದು ಹಾಕಿದ್ದರು.) ಆನಂತರ ಸಾಕೇತ್ ರಾಜನ್, ಶಿವಲಿಂಗು, ಅಜಿತ್, ಮನೋಹರ್, ದಿನಕರ್, ಸುಂದರಿ ಇನ್ನಿತರ ಹತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು, ನಾಯಕರನ್ನು ಸರಕಾರಗಳು ಕೊಂದು ಹಾಕಿದವು. ಆದರೆ ಹೆಚ್ಚುತ್ತಿರುವ ನಕ್ಸಲ್ ಹೋರಾಟದ ಕಾವನ್ನು ಕಡಿಮೆ ಮಾಡಲೇ ಬೇಕಾದ ಅನಿವಾರ್ಯತೆಯಿಂದಾಗಿಯೂ ಬ್ರಹ್ಮನೇ ಬಂದರೂ ಆದಿವಾಸಿಗಳ ಎತ್ತಂಗಡಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಸರಕಾರವೇ ಆದಿವಾಸಿಗಳನ್ನು ಎತ್ತಂಗಡಿ ಮಾಡುವ ನೀತಿಯನ್ನು ಕೈಬಿಟ್ಟಿತು. ಇದರ ಹತ್ತಿಪ್ಪತ್ತು ಪಟ್ಟು ದೌರ್ಜನ್ಯಗಳನ್ನು ಮಧ್ಯಭಾರತದ ಆದಿವಾಸಿಗಳ ಮೇಲೆ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ‘ಆಪರೇಷನ್ ಗ್ರೀನ್ ಹಂಟ್’ ಹೆಸರಿನಲ್ಲಿ ಪ್ರಾರಂಭಿಸಿತು. ಅದಕ್ಕೆ ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಸಂಪೂರ್ಣವಾಗಿ ಬೆಂಬಲಿಸಿತು. ಏಕೆಂದರೆ ಮಧ್ಯಭಾರತದಲ್ಲಿ ಆದಿವಾಸಿಗಳನ್ನು ತುರ್ತಾಗಿ ಎತ್ತಂಗಡಿ ಮಾಡಿ ಅಲ್ಲಿನ ಖನಿಜ ಸಂಪತ್ತುಗಳನ್ನು ಲೂಟಿ ಮಾಡಲು ಬಹುರಾಷ್ಟ್ರೀಯ ಕಂಪೆನಿಗಳಿಗೆ ತೆರವು ಮಾಡಿಕೊಡಬೇಕಾದ ತುರ್ತು. ಹೀಗಾಗಿ ಇರುವ ಕಾನೂನುಗಳಡಿಯಲ್ಲಿ ಪ್ರತಿರೋಧವನ್ನು ಹತ್ತಿಕ್ಕಲು ಸಾಧ್ಯವಿಲ್ಲವಾದಾಗ ಯುಪಿಎ ಸರಕಾರ ಬಿಜೆಪಿಯ ಸಂಪೂರ್ಣ ಸಹಕಾರ ದೊಂದಿಗೆ ಸರಕಾರಕ್ಕೆ ಎದುರಾಡುವವರನ್ನು ಹೆಚ್ಚಿನ ಕಾನೂನಿನ ತೊಡಕಿಲ್ಲದೆ ಕೊಲ್ಲುವ ಅಥವಾ ವರ್ಷಾನುಗಟ್ಟಲೆ ಬಂಧಿಸುವ UAPA ಜಾರಿಗೆ ತಂದಿತು.

ಹೀಗಾಗಿ UAPA ಜಾರಿಯ ಹಿಂದೆ ಎಲ್ಲಾ ರಾಜಕೀಯ ಪಕ್ಷಗಳು ಸ್ಪಷ್ಟವಾಗಿ ಬೃಹತ್ ಖಾಸಗಿ ಉದ್ಯಮಿಗಳ ವರ್ಗ ಹಿತಾಸಕ್ತಿಯ ರಕ್ಷಣೆಗೆ ನಿಂತಿದ್ದು ಸ್ಪಷ್ಟ. ವಿರೋಧಿಸುವ ಜನರ ಮೇಲೆ ಪ್ರಭುತ್ವಕ್ಕೆ ಇರುವ ಆಕ್ರೋಶ ಮತ್ತು ಕ್ರೌರ್ಯದ ಮೂಲವೂ ಈ ವರ್ಗ ಹಿತಾಸಕ್ತಿಯೇ ಆಗಿದೆ. ಈ ಕ್ರೌರ್ಯಕ್ಕೆ ಕೇವಲ ಆಯಾ ಅಧಿಕಾರಿಗಳ ದುಷ್ಟತನ ಮಾತ್ರ ಕಾರಣ ಅಲ್ಲ. ಆನಂತರ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇದನ್ನು ಆದಿವಾಸಿಗಳ ವಿರುದ್ಧವಾಗಿ ಮಾತ್ರವಲ್ಲದೆ ಅಮಾಯಕ ಮುಸ್ಲಿಮರ ವಿರುದ್ಧವೂ ವಿಶೇಷವಾಗಿ ಬಳಸಲು ಪ್ರಾರಂಭಿಸಲಾಯಿತು. ಅಭಿವೃದ್ಧಿ ಮತ್ತು ದೇಶದ ಹಿತಾಸಕ್ತಿ ಎಂಬ ಮುಸುಕಿನಲ್ಲಿ ಬಿಜೆಪಿ ಈ ದೇಶದ ದಲಿತ-ಆದಿವಾಸಿ-ಅಲ್ಪಸಂಖ್ಯಾತರ ಮೇಲೆ ಯುದ್ಧವನ್ನೇ ಪ್ರಾರಂಭಿಸಿತು. ಇದಕ್ಕೆ ಖಿಅಅ ಅನ್ನು ವಿಸ್ತೃತವಾಗಿ ಬಳಸಿಕೊಂಡಿತು.

ಹೀಗೆ ಮೋದಿ ಸರಕಾರ ಈಗ ಕಾನೂನು ಬದ್ಧವಾಗಿ ನ್ಯಾಯದ ಹತ್ಯೆ ಮಾಡುತ್ತಿರುವುದು ನಿಜ.. ಆದರೆ ಅಂಥಾ ಅತ್ಯಂತ ಪ್ರಜಾತಂತ್ರವಿರೋಧಿ ಕಾನೂನನ್ನು ಮಾಡಿ ಮೋದಿ ಕೈಗೆ ಕೊಟ್ಟಿದ್ದು ಮಾತ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಎಂಬುದು ಈ ದೇಶದ ಪ್ರಜಾತಂತ್ರ ಎದುರಿಸುತ್ತಿರುವ ಸಂಕೀರ್ಣ ಸವಾಲಿಗೆ ದ್ಯೋತಕದಂತಿದೆ.
 
UAPAಯ ದುರ್ಬಳಕೆ ಮಾತ್ರವಲ್ಲ - UAPA ಬಳಕೆಯೇ ಸಂವಿಧಾನ ವಿರೋಧಿ 
ಹೀಗಾಗಿ UAPA ಹಾಗೂ NIA (National Investigation Agency)ಯ ವಿರುದ್ಧದ ಆಕ್ರೋಶವು ತಾರ್ಕಿಕವಾದ ಅಂತ್ಯ ಹಾಗೂ ನೈಜ ಪ್ರಜಾತಾಂತ್ರಿಕ ಪರಿಹಾರಗಳನ್ನು ಪಡೆದುಕೊಳ್ಳಬೇಕೆಂದರೆ ಖಿಅಅ ಪಾಪದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಪಾತ್ರವನ್ನು ಮತ್ತು UAPA ಸಂವಿಧಾನದ ಆತ್ಮವಾಗಿರುವ ಮೂಲಭೂತ ಹಕ್ಕುಗಳನ್ನು ಹೇಗೆ ಹರಣ ಮಾಡುತ್ತಿದೆಯೆಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಏಕೆಂದರೆ ಈ ಅನ್ಯಾಯವನ್ನು ವಿರೋಧಿಸುವ ಹಲವಾರು ಪ್ರಗತಿಪರರಲ್ಲಿ ಖಿಅಅ ಅಗತ್ಯವಿದೆ ಆದರೆ ಅದರ ದುರ್ಬಳಕೆಯನ್ನು ಮಾತ್ರ ವಿರೋಧಿಸಿದರೆ ಸಾಕೆಂಬ ತಪ್ಪು ಅಭಿಪ್ರಾಯವಿದೆ. ಖಿಅಅ ಹೇಗೆ ಜೀವಿಸುವ ಹಕ್ಕುಗಳನ್ನು ಒಳಗೊಂಡಂತೆ, ಅಭಿವ್ಯಕ್ತಿ, ಅನ್ಯಾಯದ ವಿರುದ್ಧ ರಕ್ಷಣೆ ಮಾಡಿಕೊಳ್ಳುವ ಎಲ್ಲಾ ನಾಗರಿಕ ಸ್ವಾತಂತ್ರ್ಯಗಳನ್ನು ಮತ್ತು ಎಲ್ಲಾ ಮೂಲಭೂತ ಹಕ್ಕುಗಳನ್ನು ಅಮಾನತು ಮಾಡುತ್ತದೆ ಎಂದು ಅರ್ಥವಾದರೆ UAPA  ದುರ್ಬಳಕೆಯಲ್ಲ, ಅದರ ಬಳಕೆಯೇ ಸಂವಿಧಾನ ವಿರೋಧಿ ಎಂದು ಅರ್ಥವಾಗುತ್ತದೆ. ಅದೇರೀತಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಈ ಕಾನೂನನ್ನು ಜಾರಿಗೆ ತರುವಾಗ ಸಂಸತ್ತಿನಲ್ಲಿ ಸಾಂಕೇತಿಕವಾದರೂ ಪ್ರತಿರೋಧ ವ್ಯಕ್ತಪಡಿಸಿದ ಎಡಪಕ್ಷಗಳನ್ನೂ ಹಾಗೂ ಒಂದೆರಡು ಪ್ರಾದೇಶಿಕ ಪಕ್ಷಗಳನ್ನು ಬಿಟ್ಟರೆ ಭಾರತದ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಇಂತಹ ಪ್ರಜಾತಂತ್ರ ವಿರೋಧಿ ಕಾನೂನನ್ನು ಸಮ್ಮತಿಸಿರುವುದು ಈ ದೇಶ ಎಂತಹ ಶಿಥಿಲ ಪ್ರಜಾತಂತ್ರದ ಹಂದರದ ಮೇಲೆ ನಿಂತಿದೆ ಎಂಬುದನ್ನೂ ಈ ಚುನಾವಣೆಯ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.

ತಾತ್ಕಾಲಿಕ POTAವನ್ನು ಶಾಶ್ವತ UAPAಗೊಳಿಸಿದ ಯುಪಿಎ ಸರಕಾರ:
ಒಂದು ಭಯೋತ್ಪಾದಕ ನಿಗ್ರಹ ಕಾಯ್ದೆಯಾಗಿ UAPA ಜಾರಿಯಾಗುವ ಮುನ್ನ 1985ರಲ್ಲಿ ಕಾಂಗ್ರೆಸ್ ಸರಕಾರ TADA (Terrorist And Disruptive Activities Prevention Act)ವನ್ನು ಜಾರಿಗೊಳಿಸಿತ್ತು. ಇದು ಭಯೋತ್ಪಾದನೆಯ ಹೆಸರಲ್ಲಿ ಪೊಲೀಸ್ ಸರ್ವಾಧಿಕಾರಗಳಿಗೆ ಹಾಗೂ ಹಿಂಸಾಚಾರಗಳಿಗೆ ಕಾನೂನು ಬದ್ಧ ಪರವಾನಿಗೆ ಕೊಟ್ಟಿತು. ಆದರೆ ಇದರಿಂದ ನಿಜವಾಗಿ ಭಯೋತ್ಪಾದನೆಯಲ್ಲಿ ತೊಡಗಿದ್ದ ಆತಂಕವಾದಿಗಳಿಗಿಂತ ಆಗಿನ ಕಾಂಗ್ರೆಸ್ ಸರಕಾರದ ನೀತಿಗಳನ್ನು ವಿರೋಧಿಸುತ್ತಿದ್ದ ರಾಜಕೀಯ ಭಿನ್ನಮತೀಯರು ಮತ್ತು ದಲಿತರು ಮತ್ತು ಆದಿವಾಸಿಗಳೇ ಹತ್ತಾರು ವರ್ಷ ಜೈಲಿನಲ್ಲಿ ಕೊಳೆಯುವಂತಾಯಿತು. ಇಷ್ಟಾದರೂ TADA ಕಾಯ್ದೆಯು ಒಂದು ತಾತ್ಕಾಲಿಕ ಕಾಯ್ದೆಯಾಗಿದ್ದು, ಎರಡು ವರ್ಷಗಳಿಗೊಮ್ಮೆ ಸಂಸತ್ತಿನ ಅನುಮೋದನೆಗೊಂಡು ವಿಸ್ತರಿಸಿಕೊಳ್ಳಬೇಕಾದ ಪ್ರಜಾತಾಂತ್ರಿಕ ಉಸ್ತುವಾರಿಯನ್ನಾದರೂ ಹೊಂದಿತ್ತು. ಆ ಕಾರಣದಿಂದಾಗಿಯೇ ದೇಶಾದ್ಯಂತ TADA ಕಾಯ್ದೆಯ ವಿರುದ್ಧ ಹೋರಾಟ ಭುಗಿಲೆದ್ದಿದ್ದರಿಂದ 1995ರಲ್ಲಿ ಸಂಸತ್ತಿನಲ್ಲಿ ಅದರ ವಿಸ್ತರಣೆ ಅನುಮೋದನೆಯಾಗದೆ TADA ರದ್ದಾಯಿತು.

1999ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ 2002ರಲ್ಲಿ Prevention Of Terrorrism Act- POTA ಎಂಬ ಅತ್ಯಂತ ಕರಾಳ ಕಾಯ್ದೆಯನ್ನು ಜಾರಿಗೆ ತಂದಿತು. ಇದು TADA ಕಾಯ್ದೆಯಲ್ಲಿದ್ದ ಎಲ್ಲಾ ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಅಂಶಗಳನ್ನು ಒಳಗೊಂಡಿದ್ದಲ್ಲದೆ ಆರೋಪಿಗೆ 180 ದಿನಗಳ ಕಾಲ ಜಾಮೀನು ನಿರಾಕರಿಸುವ, ನಿರಪರಾಧಿಯೆಂದು ಸಾಬೀತು ಮಾಡಿಕೊಳ್ಳುವ ಹೊಣೆಯನ್ನು ಆರೋಪಿಯ ಮೇಲೆ ವರ್ಗಾಸುವ, ಪೊಲೀಸ್ ಅಧಿಕಾರಿಯ ಮುಂದೆ ಮಾಡಿಕೊಳ್ಳುವ ತಪೊಪ್ಪಿಗೆಯನ್ನು ಸಾಕ್ಷಿಯೆಂದು ಪರಿಗಣಿಸುವ, ಸರಕಾರ ವಿರೋಧಿ ಅಭಿಪ್ರಾಯ ಹಾಗೂ ಪ್ರತಿಭಟನೆಗಳನ್ನು ದೇಶದ್ರೋಹಿ ಭಯೋತ್ಪಾದಕ ಕೃತ್ಯಗಳೆಂದು ಪರಿಗಣಿಸುವಂತಹ ಹತ್ತು ಹಲವು ಕರಾಳ ಅಂಶಗಳನ್ನು ಹೊಂದಿತ್ತು. ಆದರೂ ಅದು ಕೂಡಾ ಸಂಸತ್ತಿನಿಂದ ಪ್ರತೀ ಎರಡು ವರ್ಷಗಳಿಗೊಮ್ಮೆ ಅನುಮೋದನೆಗೊಳ್ಳಬೇಕಾಗಿದ್ದ ವಿಶೇಷವಾದ ಹಾಗೂ ತಾತ್ಕಾಲಿಕ ಕಾಯ್ದೆಯಾಗಿತ್ತು.

2004ರ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಸೋಲುವುದರೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಸರಕಾರ ಅಧಿಕಾರಕ್ಕೆ ಬಂದಿತು. ಈ ಸರಕಾರಕ್ಕೆ 59 ಸಂಸದರ ಬಲವನ್ನು ಹೊಂದಿದ್ದ ಎಡಪಕ್ಷಗಳು ಹೊರಗಿನಿಂದ ಬೆಂಬಲವನ್ನೂ ಕೊಟ್ಟವು ಹಾಗೂ ಈ ಬಹುಪಕ್ಷಗಳ ಸರಕಾರಕ್ಕೆ ಬುನಾದಿಯಾಗಿ ಒಂದು ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸಲಾಯಿತು. ಅದರಲ್ಲಿ ಪ್ರಜಾತಂತ್ರವಿರೋಧಿ POTA ಕಾಯ್ದೆಯು ರದ್ದುಗೊಳಿಸುವ ಆಶ್ವಾಸನೆಯನ್ನು ನೀಡಲಾಗಿತ್ತು. ಅದರಂತೆ ಯುಪಿಎ ಸರಕಾರ 2004ರ ಡಿಸೆಂಬರ್‌ನಲ್ಲಿ POTA ಕಾಯ್ದೆಯನ್ನೇನೋ ರದ್ದುಗೊಳಿಸುವ ಮಸೂದೆಯನ್ನು ಮಂಡಿಸಿತು. ಆದರೆ 1967ರಲ್ಲಿ ಜಾರಿ ಮಾಡಲಾಗಿದ್ದ UAPA ಕಾಯ್ದೆಗೆ ಆಮೂಲಾಗ್ರ ತಿದ್ದುಪಡಿಗಳನ್ನು ತರುವ ಮಸೂದೆಯನ್ನು ಅದರ ಜೊತೆಜೊತೆಗೇ ಮಂಡಿಸಿತು. ಹಳೆಯ UAPA ಕಾಯ್ದೆಗೆ ಟೆರರಿಸ್ಟ್ ಚಟುವಟಿಕೆಗಳನ್ನೂ ನಿಗ್ರಹಿಸುವ ಹೊಸ ಪರಿಚ್ಛೇದವನ್ನು ಸೇರಿಸಿತು. ಹಾಗೂ ಟೆರರಿಸಂ ಎಂದರೆ ಏನು? ಮತ್ತು ಯಾವ್ಯಾವ ಸಂಘಟನೆಗಳು ಟೆರರಿಸ್ಟ್ ಎಂದು ಎನ್‌ಡಿಎ ಸರಕಾರ ಘೋಷಿಸಿತ್ತೋ ಅದೆಲ್ಲವನ್ನೂ ಅನಾಮತ್ತಾಗಿ UAPA ಕಾಯ್ದೆಯ ಶೆಡ್ಯೂಲಿನಲ್ಲಿ ಸೇರಿಸಿತು.

ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ 1985ರ TADA ಅಥವಾ ಎನ್‌ಡಿಎ ಸರಕಾರದ POTA ಕಾಯ್ದೆಯ ತರಹ ಈ ಹೊಸ UAPA ಕಾಯ್ದೆ ಪ್ರತೀ ಎರಡು ವರ್ಷಗಳಿಗೊಮ್ಮೆ ಸಂಸತ್ತಿನಿಂದ ಅನುಮೋದನೆಗೊಳ್ಳುವ ತಾತ್ಕಾಲಿಕ ಕಾಯ್ದೆಯಾಗದೆ ಒಂದು ಶಾಶ್ವತ ಕಾಯ್ದೆಯಾಗಿಬಿಟ್ಟಿತು. 

ಆ ಅರ್ಥದಲ್ಲಿ TADA ಅಥವಾ ಅಗಳ ಮೇಲಿದ್ದ ಪ್ರಜಾತಾಂತ್ರಿಕ ಉಸ್ತುವಾರಿಯೂ ಸಹ POTA ಕಾಯ್ದೆ ಮೇಲೆ ಇರದಂತೆ ಕಾಂಗ್ರೆಸ್ ಸರಕಾರ ತಿದ್ದುಪಡಿಯನ್ನು ತಂದಿತು. ಹೀಗಾಗಿ ಇಂದಿನ ಪ್ರಜಾತಾಂತ್ರಿಕ ಕಗ್ಗೊಲೆಗೆ ಬೇಕಾದ ಶಾಸನ ಬಲವನ್ನು ಕೊಟ್ಟಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ!

ಕಾಂಗ್ರೆಸ್ ಸರಕಾರ ಮುಂದಿಟ್ಟ ಈ ಹೊಸ UAPA ಮಸೂದೆಯ ಬಗ್ಗೆ 2004ರ ಡಿಸೆಂಬರ್ 6 ಮತ್ತು 9ರಂದು ಲೋಕಸಭೆಯಲ್ಲಿ ಹಾಗೂ ಡಿಸೆಂಬರ್ 13ರಂದು ರಾಜ್ಯಸಭೆಯಲ್ಲಿ ಚರ್ಚೆಯಾಗುತ್ತದೆ.

(ನಾಳಿನ ಸಂಚಿಕೆಗೆ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)