varthabharthi


ವಿಶೇಷ-ವರದಿಗಳು

ಚುನಾವಣಾ ಹೊಸ್ತಿಲಲ್ಲೇ ‘ದಲಿತರ’ ರೇಷನ್ ಕಾರ್ಡ್ ಮಾಹಿತಿ ಸಂಗ್ರಹಿಸಿದ ಸರಕಾರ

ವಾರ್ತಾ ಭಾರತಿ : 9 Mar, 2023
-ಸಮೀರ್ ದಳಸನೂರು

ಬೆಂಗಳೂರು, ಮಾ. 9: ಚುನಾವನಾ ಹೊಸ್ತಿಲಲ್ಲೇ ಅನ್ನಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ಪಡಿತರ ಪಡೆಯುತ್ತಿರುವ ಎಸ್‍ಸಿ ಮತ್ತು ಎಸ್‍ಟಿ ಫಲಾನುಭವಿಗಳು ಹೊಂದಿರುವ ಪಡಿತರ ಚೀಟಿ (ರೇಷನ್ ಕಾರ್ಡ್)  ಬಗ್ಗೆ ರಾಜ್ಯ ಸರಕಾರ ಮಾಹಿತಿ ಪಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಸರಕಾರದ ಈ ನಡೆಯಲ್ಲಿ ರಾಜಕೀಯ ‘ಹಿಡನ್ ಅಜೆಂಡಾ’ ಅಡಗಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ (ಎಸ್‍ಟಿಪಿ- ಟಿಎಸ್‍ಪಿ) ನಿಗದಿತ ಬಜೆಟ್ ಅನುದಾನ ಹಂಚಿಕೆ ಹೆಸರಿನಲ್ಲಿ ರಾಜ್ಯ ಸರಕಾರ ಈ ರೀತಿ ಮೊದಲ ಬಾರಿಗೆ ರೇಷನ್ ಕಾರ್ಡ್‍ಗಳ ಬಗ್ಗೆ ಮಾಹಿತಿ ಕೇಳಿದೆ. ಅಲ್ಲದೆ, ಹಿಂದೆಮ್ಮೆ ರೇಷನ್ ಕಾರ್ಡ್‍ಗೆ ಆಧಾರ್ ದೃಢೀಕರಣ(ಈಕೆವೈಸಿ) ಪ್ರಕ್ರಿಯೆ ಸಂದರ್ಭದಲ್ಲಿಯೂ ಎಸ್ಸಿ ಮತ್ತು ಎಸ್ಟಿ ಜಾತಿ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ಈ ವೇಳೆ ಆ ಪಂಗಡದ ಫಲಾನುಭವಿಗಳು ತಮ್ಮ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಯವರಿಗೆ ನೀಡಿದ್ದರು. 

2022ರ ಡಿ.1ರಂದು ಸಮಾಜ ಕಲ್ಯಾಣ ಇಲಾಖೆ ಸಚಿವರ ನೃತೃತ್ವದಲ್ಲಿ ನಡೆದ ಸಭೆ ಉಲ್ಲೇಖಿಸಿ ಆಹಾರ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ, ಆಹಾರ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಫಲಾನುಭವಿಗಳಿಗೆ ವಿತರಿಸಲಾಗಿರುವ ಅಂತ್ಯೋದಯ, ಬಿಪಿಎಲ್ ಕಾರ್ಡ್‍ಗಳ ಸಂಖ್ಯೆ ಹಾಗೂ ಈ ಕಾರ್ಡ್‍ಗಳಲ್ಲಿ ಇರುವ ಸದಸ್ಯರ ಜಿಲ್ಲಾವಾರು ಮಾಹಿತಿಯನ್ನು ಜರೂರಾಗಿ ಒದಗಿಸುವಂತೆ ಆಯುಕ್ತರಿಗೆ ಕೋರಿದ್ದಾರೆ. 

ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆಯು ನ್ಯಾಯಬೆಲೆ ಅಂಗಡಿಗಳ ಮೂಲಕ ಎಸ್ಸಿ ಮತ್ತು ಎಸ್ಟಿ ಪಡಿತರ ಚೀಟಿಗಳ ಜತೆಗೆ ಸಾಮಾನ್ಯ ವರ್ಗದವರ ಫಲಾನುಭವಿಗಳು ಮಾಹಿತಿ ಸಂಗ್ರಹಿಸುತ್ತಿದೆ. 

ಹೇಗೆ ಮಾಹಿತಿ?: ಎಸ್‍ಸಿ ಮತ್ತು ಎಸ್‍ಟಿ ಪಡಿತರ ಚೀಟಿಗಳ ಮಾಹಿತಿ ಸಂಗ್ರಹಕ್ಕಾಗಿ ಆಹಾರ ಇಲಾಖೆ ಪ್ರತ್ಯೇಕವಾಗಿ ಅರ್ಜಿ ಸಿದ್ಧಪಡಿಸಿದೆ. ಅರ್ಜಿಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಎಸ್ಸಿ ಮತ್ತು ಎಸ್ಟಿ ಪಡಿತರ ಚೀಟಿಗಳ ಮಾಹಿತಿ ಸಂಗ್ರಹ ವಿವರವೆಂದು ನಮೂದಿಸಿದೆ. ತಾಲೂಕು ಹೆಸರು, ನ್ಯಾಯಬೆಲೆ ಅಂಗಡಿ ಸಂಖ್ಯೆ ಮತ್ತು ಹೆಸರು, ಪಡಿತರ ಚೀಟಿ ಸಂಖ್ಯೆ, ಪಡಿತರ ಚೀಟಿ ವಿಧ( ಬಿಪಿಎಲ್ ಮತ್ತು ಅಂತ್ಯೋದಯ), ಕುಟುಂಬದ ಮುಖ್ಯಸ್ಥರ ಹೆಸರು, ಎಸ್ಸಿ, ಎಸ್ಟಿ ಮತ್ತು ಸಾಮಾನ್ಯ ವರ್ಗ (ಜಾತಿ), ಕಾರ್ಡ್‍ನಲ್ಲಿ ಇರುವ ಸದಸ್ಯರ ಸಂಖ್ಯೆ ಹಾಗೂ ಷರಾ ಎಂಬ ಅಂಶವನ್ನು ಅರ್ಜಿ ಕಾಲಂನಲ್ಲಿ ಪ್ರಕಟಿಸಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯುವುದಕ್ಕೆ ಬರುವ ಪ್ರತಿ ಕಾರ್ಡ್‍ದಾರರ ಬಳಿ ಮಾಹಿತಿ ಪಡೆದು ಮಾಲೀಕರು ಅರ್ಜಿಯಲ್ಲಿ ನಮೂದಿಸಲಾಗುತ್ತಿದೆ. ಕೊನೆಗೆ ಅರ್ಜಿ ಕೆಳಗೆ ಆಹಾರ ನಿರೀಕ್ಷರ ಹೆಸರು ಮತ್ತು ಸಹಿ, ನ್ಯಾಯಬೆಲೆ ಸಂಚಾಲಕರ ಹೆಸರು ಮತ್ತು ರುಜು ಹಾಕಲಾಗುತ್ತದೆ. 

ಮತ್ತೊಂದೆಡೆ, ಪ್ರತಿ ವರ್ಷ ರಾಜ್ಯ ಸರಕಾರ, ಬಜೆಟ್‍ನಲ್ಲಿ ಅನ್ನಭಾಗ್ಯ ಯೋಜನೆಗಾಗಿ 3,500 ಕೋಟಿ ರೂ.ನಿಂದ 4 ಸಾವಿರ ಕೋಟಿ ರೂ.ವರೆಗೆ ಅನುದಾನ ನೀಡುತ್ತಿದೆ. ಸರಕಾರ ಅನುದಾನ ಮಂಜೂರಾದ ಬಳಿಕ ಯೋಜನೆಯಡಿ ಲಾನುಭವಿಗಳಿಗೆ ನೀಡಲಾಗುವ ಪಡಿತರಕ್ಕೆ ಖರ್ಚು ಮಾಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್‍ಟಿಪಿ-ಟಿಎಸ್‍ಪಿ ಅಡಿ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದರೂ ಬೇರೆ ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿರುವ ಬಗ್ಗೆ ಆರೋಪಗಳಿವೆ. 

ಹೀಗಿದ್ದರೂ, ಎಸ್‍ಟಿಪಿ-ಟಿಎಸ್‍ಪಿ ಅನುದಾನ ಹಂಚಿಕೆ ಸಂಬಂಧ ರಾಜ್ಯಾದ್ಯಂತ ಎಸ್ಸಿ ಮತ್ತು ಎಸ್ಟಿ ಹೊಂದಿರುವ ಪಡಿತರ ಕಾರ್ಡ್‍ಗಳ ಸಂಖ್ಯೆ ಮತ್ತು ಕಾರ್ಡ್‍ಗಳ ಸದಸ್ಯರ ಬಗ್ಗೆ ಸರಕಾರ ಮಾಹಿತಿ ಕೇಳಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

‘ಎಲ್ಲ ಇಲಾಖೆಗಳ ಪೈಕಿ ಫಲಾನುಭವಿಗಳ ಸಂಕ್ಷಿಪ್ತ ಮಾಹಿತಿ ಸಂಗ್ರಹಿಸುವಲ್ಲಿ ಆಹಾರ ನಾಗರಿಕ ಸಬರರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಮುಂದಿದೆ.ಹೀಗಾಗಿ, ಸಾಮಾನ್ಯ ವರ್ಗ, ಎಸ್ಸಿ ಎಸ್ಟಿ ಫಲಾನುಭವಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಈ ಪ್ರಕ್ರಿಯೆ ಜಾರಿಯಲ್ಲಿದೆ’

-ಎಂ.ಕನಗವಲ್ಲಿ, ಆಯುಕ್ತೆ, ಆಹಾರ ಇಲಾಖೆ

-----------------------------------------------

'ಉದ್ದೇಶವೇನು ಎಂಬುವುದು ಬಹಿರಂಗಪಡಿಸಿ':

‘ಏಕಾಏಕಿ ಎಸ್‍ಸಿ-ಎಸ್‍ಟಿ ಸಮುದಾಯ ಮಾಹಿತಿ ಕಲೆಹಾಕುವುದು ಏಕೆ? ಈಗಾಗಲೇ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಿದೆ.ಇದರ ನಡುವೆ ಮೂರು ತಿಂಗಳಿನಿಂದ ಮಾಹಿತಿ ಯಾವ ಕಾರಣಕ್ಕಾಗಿ. ಇದನ್ನು ಸರಕಾರ ಬಹಿರಂಗಪಡಿಸಬೇಕು. ಈ ಹಿಂದೆಯೇ ಈ ಸಮುದಾಐ ಮಾಹಿತಿ ಸರಕಾರದ ಬಳಿ ಇದ್ದರೂ,ತಾಜಾ ದತ್ತಾಂಶವೇಕೆ?

-ಮಾವಳ್ಳಿ ಶಂಕರ್, ದಸಂಸ ಹೋರಾಟಗಾರ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)