ಬೆಂಗಳೂರಿನ ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು, ಮಾ.9: ಬೆಂಗಳೂರು ನಗರದಲ್ಲಿ ನಂದಿನಿ ಹಾಲು ಹಾಗೂ ನಂದಿನಿ ಹಾಲಿನ ಉತ್ಪನ್ನಗಳ ಪೂರೈಕೆ ಕಡಿಮೆಯಾಗಿದ್ದು, ಹಾಲಿಗಾಗಿ ಹೋಟೆಲ್ ಮಾಲಕರು ಸೇರಿ ಗ್ರಾಹಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಅತ್ತ ಹೈನುಗಾರಿಕೆಯಿಂದ ನಷ್ಟ ಉಂಟಾಗುತ್ತಿದೆ ಎಂದು ರೈತರು ಹೈನುಗಾರಿಕೆ ತೊರೆಯುತ್ತಿದ್ದಾರೆ.
ರಾಜ್ಯದಲ್ಲಿ ಹಸುಗಳಿಗೆ ‘ಚರ್ಮಗಂಟು ರೋಗ’ ತಗುಲಿದ್ದು, ಹಾಲಿನ ಉತ್ಪಾದನೆಯಲ್ಲಿ ವ್ಯತ್ಯಯವಾಗಿದೆ. ಅಲ್ಲದೆ, ರೋಗದಿಂದ ಬಳಲಿದ ಹಸುಗಳು ಮರಣಹೊಂದಿವೆ. ಹಾಗಾಗಿ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಲು ಉತ್ಪಾದನೆ ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಹೈನುಗಾರಿಕೆಯಲ್ಲಿ ರೈತರು ಆಸಕ್ತಿ ಕಳೆದುಕೊಂಡ ಹಿನ್ನೆಲೆಯಲ್ಲಿ ಉತ್ಪಾದನೆ ಕುಸಿತಗೊಳ್ಳಲು ಮತ್ತೊಂದು ಪ್ರಮುಖ ಕಾರಣವಾಗಿದೆ.
ನಗರದ ಹೋಟೆಲ್‍ಗಳಿಗೆ ಒಂದು ದಿನಕ್ಕೆ 4 ಲಕ್ಷ ಲೀಟರ್ ನಷ್ಟು ಹಾಲು ಬೇಕಾಗಿರುತ್ತದೆ. ಬೇಡಿಕೆಯ ಶೇ.50ರಷ್ಟು ಹಾಲು ಮಾತ್ರ ಪೂರೈಕೆ ಆಗುತ್ತಿದೆ. ನೆರೆ ರಾಜ್ಯಗಳಿಗೆ ರಫ್ತಿನ ಪ್ರಮಾಣ ಕಡಿಮೆ ಮಾಡಿ, ನಗರದ ಹೋಟೆಲ್‍ಗಳಿಗೆ ಬೇಡಿಕೆಗೆ ತಕ್ಕಂತೆ ಹಾಲನ್ನು ಪೂರೈಕೆ ಮಾಡಬೇಕು ಎಂದು ಹೋಟೆಲ್ ಮಾಲಕರು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.
ಕಡಿಮೆ ಬೆಲೆಯಿರುವ ಕಾರಣಕ್ಕೆ ನಂದಿನಿ ಹಾಲನ್ನು ಹೋಟೆಲ್ ಮಾಲಕರು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಈಗ ನಂದಿನ ಹಾಲಿನ ಪ್ರಮಾಣ ಕಡಿಮೆಯಾದ ಕಾರಣ ಹೋಟೆಲ್ ಮಾಲಕರು ದುಬಾರಿ ಹಣವನ್ನು ಪಾವತಿಸಿ ಖಾಸಗಿ ಡೇರಿಗಳ ಹಾಲು ಹಾಗೂ ಹಾಲಿನ ಉತ್ಪನ್ನವನ್ನು ಪಡೆಯುವ ಸ್ಥಿತಿನಿರ್ಮಾಣವಾಗಿದೆ. ಹಾಗಾಗಿ ಈ ಆರ್ಥಿಕ ಹೊರೆಯನ್ನು ತಗ್ಗಿಸುವ ಸಲುವಾಗಿ ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸುತ್ತಿದ್ದಾರೆ.
ಹಾಲಿನ ಉತ್ಪಾದನೆ ದಿನಕ್ಕೆ 14 ರಿಂದ 15 ಲಕ್ಷ ಲೀಟರ್‍ನಿಂದ 12 ರಿಂದ 13 ಲಕ್ಷದ ವರೆಗೆ ಇಳಿಕೆಯಾಗಿದೆ. ಪ್ರತಿ ಲೀಟರ್ ಹಾಲಿಗೆ ನೆರೆ ರಾಜ್ಯಗಳಲ್ಲಿ 40 ರೂ.ಗಳನ್ನು ನೀಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ 30 ರೂ.ಪಾವತಿ ಮಾಡಲಾಗುತ್ತಿದೆ. ಹಾಗಾಗಿ ಹಾಲಿನ ಸಹಾಯಧನವನ್ನು ಹೆಚ್ಚಳ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪಶು ಆಹಾರದ ಬೆಲೆ ಹೆಚ್ಚಾಗಿದೆ. ರೈತರು ಬೆಳೆಯುವ ಮೆಕ್ಕೆ ಜೋಳ, ಗೋಧಿ, ಶೇಂಗಾ ಮುಂತಾದವುಗಳ ಬೆಲೆಗಳು 2017ಕ್ಕೂ ಮೊದಲು ಇದ್ದ ಬೆಲೆಗಳಿಗಿಂತ ಕಡಿಮೆ ಇವೆ. ತಮ್ಮ ಬೆಳೆಗಳಿಗೂ ಉತ್ತಮ ಬೆಲೆಯನ್ನು ರೈತರು ಪಡೆಯುತ್ತಿಲ್ಲ. ಆದರೂ ಹಿಂಡಿ, ಬೂಸಾ ಬೆಲೆ ಗಗನ ಮುಟ್ಟಿದೆ. ಹಾಗಾಗಿ ಹಾಲು ಮಾರಾಟದಿಂದಲೂ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದು ಹಾಲಿನ ಪೂರೈಕೆ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ.
‘ಪ್ರತಿ ತಿಂಗಳು 15 ರಿಂದ 20 ರೈತರು ಹಾಲು ಮಾರಾಟ ಮಾಡುವುದನ್ನು ನಿಲ್ಲಿಸುತ್ತಿದ್ದಾರೆ. ಹಾಗಾಗಿ ಹಾಲಿನ ಪ್ಯಾಕೆಟ್‍ಗಳು, ತುಪ್ಪ ಮತ್ತು ಇತರ ಉತ್ಪನ್ನಗಳ ಉತ್ಪಾದನೆಯನ್ನು ಕಡಿಮೆ ಮಾಡಿದೆ. 15 ಲಕ್ಷ ಲೀಟರ್ ಹಾಲಿನಲ್ಲಿ ನಗರದಾದ್ಯಂತ 11 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದೆ. ಮತ್ತೊಂದೆಡೆ ಬಮೂಲ್‍ನಲ್ಲಿ ಸರ್ವರ್ ಕೈಕೊಟ್ಟು ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದು ಇನ್ನು 2 ದಿನ ಮುಂದುವರೆಯುವ ಸಾಧ್ಯತೆ ಇದ್ದು, ಇಆರ್‍ಪಿ ಸಮಸ್ಯೆಯಿಂದಾಗಿ ಲಾರಿಗಳಿಗೆ ಸಿಸ್ಟಮ್‍ನ ಅನುಸಾರ ಡೇಟಾ ಲೋಡ್ ಮಾಡಲು ತೊಂದರೆಯಾಗುತ್ತಿದೆ’
-ನರಸಿಂಹಮೂರ್ತಿ, ಬಮೂಲ್(ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್)ನ ಅಧ್ಯಕ್ಷ
--------------------------------------------------------------------------
‘ಬಿಜೆಪಿ ಸರಕಾರವೇ ನನಗೆ ಕೊಟ್ಟಿರುವ ಮಾಹಿತಿ ಪ್ರಕಾರ 2019ರಲ್ಲಿ 1.29ಕೋಟಿ ಹಸು ಎಮ್ಮೆ, ಎತ್ತು, ಕೋಣಗಳಿದ್ದವು. ಅವು 2022ರ ಡಿಸೆಂಬರ್ ವೇಳೆಗೆ 1.15 ಕೋಟಿ ಇಳಿಕೆಯಾಗಿವೆ. ಈ 14ಲಕ್ಷ ಜಾನುವಾರುಗಳು ಎಲ್ಲಿಗೆ ಹೋದವು? ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಹೆಚ್ಚಾಗುವುದರ ಬದಲಿಗೆ ಕಡಿಮೆಯಾಗುವುದಕ್ಕೆ ಕಾರಣಗಳೇನು? ಸರಕಾರದÀ ಅನುದಾನದಿಂದ ನಡೆಯುತ್ತಿರುವ ಬಹುತೇಕ ಗೋಶಾಲೆಗಳಲ್ಲಿ ಗಂಡು ಕರುಗಳ ಪ್ರಮಾಣ ಶೇ.10ಕ್ಕಿಂತ ಕಡಿಮೆ ಇದೆ. ನಿಸರ್ಗ ತತ್ವದ ಪ್ರಕಾರ ಶೇ.50ರಷ್ಟು ಗಂಡು ಕರುಗಳು ಹುಟ್ಟುತ್ತವೆ. ಹಾಗಿದ್ದರೆ ಹುಟ್ಟಿದ ಗಂಡುಕರುಗಳು ಎಲ್ಲಿಗೆ ಹೋಗುತ್ತಿವೆ? ಬಿಂದ್ರಾಗಳು, ಜೈನ್‍ಗಳು, ಶರ್ಮಾ ಮುಂತಾದವರು ಮಾಡುತ್ತಿರುವ ಬೀಫ್ ಎಕ್ಸ್‍ಪೋರ್ಟ್ ಪ್ರಮಾಣ ಸಾವಿರಾರು ಕೋಟಿಗಳಿಗೆ ಏರಿಕೆಯಾಗಿರುವುದಾಗಿ ವರದಿಗಳಿವೆ’
-ಸಿದ್ದರಾಮಯ್ಯ, ವಿಪಕ್ಷ ನಾಯಕ
--------------------------------------------------------------------------
‘ಹಸುಗಳಿಗೆ ಬಂದ ಚರ್ಮಗಂಟು ರೋಗದ ಬಗ್ಗೆ ಸರಕಾರವು ನಿರ್ಲಕ್ಷ್ಯ ಮಾಡಿದೆ. ಹಾಗಾಗಿ ರಾಜ್ಯದಲ್ಲಿ ನೂರಾರು ಹಸುಗಳು ಮರಣ ಹೊಂದಿವೆ. ಅಲ್ಲದೆ ರೈತರು ಹಿಂಡಿ, ಬೂಸಾದಂತಹ ಪಶು ಆಹಾರ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ತಮ್ಮ ಹಸುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರೋಗಪೀಡಿತ ಹಸುಗಳಿಂದ ಕಡಿಮೆ ಪ್ರಮಾಣದ ಹಾಲು ಉತ್ಪಾದನೆ ಆಗುತ್ತಿದೆ. ಹಾಗಾಗಿ ಸರಕಾರ ಹೈನುಗಾರಿಕೆ ಕಡೆಗೆ ಹೆಚ್ಚು ಗಮನವನ್ನು ನೀಡಬೇಕು’
-ಈಶ್ವರ್ ಸಿರಿಗೇರೆ, ಹಾಲು ಉತ್ಪಾದಕ ರೈತ
--------------------------------------------------------------------------
‘ನಂದಿನಿಯ ಮೇಲೆ ಅಮಿತ್ ಶಾ ಅವರ ವಕ್ರದೃಷ್ಟಿ ಬಿದ್ದಿದ್ದಕ್ಕೂ, ಹಾಲಿನ ಅಭಾವ ಸೃಷ್ಟಿಯಾಗಿದ್ದಕ್ಕೂ ಸಂಬಂಧವಿದೆಯೇ ಬಸವರಾಜ ಬೊಮ್ಮಾಯಿ ಅವರೇ?, ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗಿದೆಯೇ ಅಥವಾ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗಿದೆಯೇ? ಇದೆಲ್ಲವೂ ನಂದಿನಿಯನ್ನು ಗುಜರಾತಿನ ಅಮುಲ್‍ಗೆ ಬಲಿ ಕೊಡಲು ಪೂರ್ವಸಿದ್ಧತೆಯೇ?. ರಾಜ್ಯದಲ್ಲಿ ಹಾಲು ಉತ್ಪಾದನೆ ಗಣನೀಯ ಕುಸಿತ ಕಂಡಿದೆ ಎಂದರೆ ಸಣ್ಣ ಕೃಷಿಕರು ಸಂಕಷ್ಟದಲ್ಲಿದ್ದಾರೆ ಎಂದರ್ಥ. ಪಶು ಆಹಾರದ ಬೆಲೆ ಏರಿಕೆ, ಜಾನುವಾರು ಸಂರಕ್ಷಣಾ ಕಾಯ್ದೆ, ಚರ್ಮಗಂಟು ರೋಗ, ಮುಂತಾದವುಗಳೇ ಇದಕ್ಕೆ ಕಾರಣ. ಸೋಕಾಲ್ಡ್ ಗೋರಕ್ಷಕ ಸರಕಾರ ಏಕೆ ಈ ಬಗ್ಗೆ ಚಿಂತಿಸುತ್ತಿಲ್ಲ? ಏಕೆ ರೈತರ ನೆರವಿಗೆ ಬರುತ್ತಿಲ್ಲ?’
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ