‘ಗಿಫ್ಟ್ ಪಾಲಿಟಿಕ್ಸ್’ಗೆ ಕಡಿವಾಣ ಹಾಕಿ
ಮಾನ್ಯರೇ,
ರಾಜ್ಯದೆಲ್ಲೆಡೆ ಈಗ ‘ಗಿಫ್ಟ್ ಪಾಲಿಟಿಕ್ಸ್’ ಸದ್ದು ಮಾಡುತ್ತಿದೆ. ಈಗಿನ ಎಲೆಕ್ಷನ್ ‘ವೋಟಿಗಾಗಿ ನೋಟು, ನೋಟಿಗಾಗಿ ವೋಟ್’ ಎನ್ನುವಂತಾಗಿದೆ. ಮತಪ್ರಭುಗಳಿಗೆ ಸಚಿವರು, ಶಾಸಕರು ಹಣದ ಆಸೆ ತೋರಿಸಿ ಮತಕೀಳುವ ಪ್ರಯತ್ನ ಮಾಡುತ್ತಿದ್ದಾರೆ. ಮುಂಬರುವ 2023ರ ಚುನಾವಣೆಗೆ ಅಭಿವೃದ್ಧಿ ದಾಖಲೆ ಹಿಡಿದುಕೊಂಡು ಹೋಗಬೇಕಿದ್ದ ರಾಜಕಾರಣಿಗಳು ಸೀರೆ, ಬೆಳ್ಳಿ ಸಾಮಗ್ರಿ, ಸಕ್ಕರೆ ಚೀಲ, ಎಲ್‌ಇಡಿ ಟಿವಿ, ಕುಕ್ಕರ್, ಫ್ಯಾನ್, ಫ್ರಿಜ್, ಲ್ಯಾಪ್‌ಟಾಪ್, ಮೊಬೈಲ್, ಸಾರಾಯಿ, ಬಾಡೂಟ ಹೀಗೆ ಹಲವಾರು ಆಮಿಷವೊಡ್ಡಿ ಮತಬೇಟೆಯಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕುರುಡು ಕಾಂಚಾಣ ಕುಣಿಯುತ್ತಿದೆ.
ಇಷ್ಟು ದಿನ ಕದ್ದು ಮುಚ್ಚಿ ಹಣ, ವಸ್ತುಗಳನ್ನು ಹಂಚಿಕೆ ಮಾಡುತ್ತಿದ್ದರು. ಆದರೆ ಈಗ ಬಹಿರಂಗವಾಗಿ ವಿತರಣೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಪ್ರಕರಣ ಕಣ್ಣೆದುರಿಗೆ ನಡೆಯುತ್ತಿದ್ದರೂ ಸರಕಾರ ಮಾತ್ರ ಮೌನವಾಗಿದೆ. ರಾಜ್ಯದಲ್ಲಿ ಚುನಾವಣಾ ಆಯೋಗ ಅಸ್ತಿತ್ವದಲ್ಲಿ ಇದೆಯೇ ಎಂಬ ಸಂಶಯ ಕಾಡುತ್ತಿದೆ. ಈ ರೀತಿ ಸರಕಾರ, ಚುನಾವಣಾ ಆಯೋಗ, ಪೋಲೀಸ್ ಇಲಾಖೆ ಮೌನವಾಗಿದ್ದರೆ ಪ್ರಜಾಪ್ರಭುತ್ವ ಉಳಿಯುವುದಾದರೂ ಹೇಗೆ..? ಗಿಫ್ಟ್ ರಾಜಕೀಯಕ್ಕೆ ಕಡಿವಾಣ ಹಾಕುವವರು ಯಾರು..? ಪ್ರಜಾಪ್ರಭುತ್ವ ಶಕ್ತಿಯಾಗಬೇಕಿದ್ದ ಮತದಾನವು ವ್ಯಾಪಾರೀಕರಣ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡಿ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಸಾಕು, ನಿಮ್ಮ ರಾಜಕೀಯ ‘ಹಂಗು’ ಮತಪ್ರಭುಗಳಿಗೆ ಬೇಡ.