varthabharthi


ಕರ್ನಾಟಕ

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಿಧನ

ವಾರ್ತಾ ಭಾರತಿ : 11 Mar, 2023

ಮೈಸೂರು, ಮಾ.11: ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್.ಧ್ರುವನಾರಾಯಣ(61) ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಹಲವು ಕಾರ್ಯಕ್ರಮಗಳನ್ನು ಮುಗಿಸಿ ಶುಕ್ರವಾರ ರಾತ್ರಿ ಮನೆಗೆ ಆಗಮಿಸಿದ್ದ ಅವರಿಗೆ ಶನಿವಾರ ಮುಂಜಾನೆ 5:30ರ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಧ್ರುವನಾಯಣ ಅವರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಚಾಮರಾಜನಗರದಿಂದ ಎರಡು ಬಾರಿ ಸಂಸದರಾಗಿದ್ದ ಧ್ರುವನಾರಾಯಣ ಅವರು ಎರಡು ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದರು.

1983ರಲ್ಲಿ ರಾಜಕೀಯ ಪ್ರವೇಶಿಸಿದ್ದ ಅವರು 1999ರಲ್ಲಿ ಮೊದಲ ಬಾರಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ 2004ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ವಿರುದ್ಧ ಒಂದು ಮತದ ಅಂತರದ ರೋಚಕ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದರು. 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

2009ರಲ್ಲಿ ಚಾಮರಾಜನಗರದಿಂದ ಸಂಸದರಾಗಿ ಲೋಕಸಭೆ ಪ್ರವೇಶಿಸಿದ ಆರ್.ಧ್ರುವನಾರಾಯಣ ಅವರು 2014ರಲ್ಲಿ 1,41,182 ಮತಗಳ ಭಾರೀ ಅಂತರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಅವರು ಶ್ರೀನಿವಾಸ್ ಪ್ರಸಾದ್ ವಿರುದ್ಧ ಸೋಲುಂಡಿದ್ದರು.

ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)