‘ಸಿಲಿಕಾನ್ ಸಿಟಿ’ಯ ಶೌಚಾಲಯ ಸಮಸ್ಯೆ
ಸಿಲಿಕಾನ್ ಸಿಟಿ ಎಂದೇ ಹೆಸರು ವಾಸಿಯಾಗಿರುವ ಬೆಂಗಳೂರು ಸ್ವಚ್ಛತೆ ವಿಚಾರದಲ್ಲಿ ಸದಾ ಹಿಂದುಳಿಯುತ್ತಿದೆ.
ಬೆಂಗಳೂರಿನಲ್ಲಿ ಸುಮಾರು ಒಂದು ಕೋಟಿ ಜನರು ನೆಲೆಸಿದ್ದಾರೆ. ಅವರು ಪ್ರತಿನಿತ್ಯ ಉದ್ಯೋಗ, ವ್ಯಾಪಾರ, ಸಭೆ, ಸಮಾರಂಭಗಳು ಮುಂತಾದವುಗಳಿಗೆ ನಗರದಲ್ಲಿ ಪ್ರಯಾಣಿಸಬೇಕಾಗುತ್ತದೆ. ಹೀಗಾಗಿ ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ 2 ರಿಂದ 5 ಬಾರಿಯಾದರೂ ಸಾರ್ವಜನಿಕ ಶೌಚಾಲಯಗಳನ್ನು ಬಳಸಬೇಕಾಗುತ್ತದೆ.
ಸರಕಾರವೇನೋ 2014ರ ‘ಸ್ವಚ್ಛ ಭಾರತ್ ಮಿಷನ್’ ಅಡಿಯಲ್ಲಿ ಬೆಂಗಳೂರಿನಾದ್ಯಂತ ಸುಮಾರು 478 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದೆ. ಆದರೆ ಇದರಲ್ಲಿ ಬಳಕೆಗೆ ಯೋಗ್ಯವಾದವು ಸುಮಾರು ಶೇ. 60 ಮಾತ್ರ. ಉಳಿದವು ಅಂದರೆ ಶೇ. 40 ಶೌಚಾಲಯಗಳು ನೀರಿನ ವ್ಯವಸ್ಥೆ ಇಲ್ಲದಿರುವುದು, ಕಿಟಕಿ, ಬಾಗಿಲು ಇಲ್ಲದಿರುವುದು, ಯಾವುದೇ ಪರಿಕರಗಳು ಇಲ್ಲದಿರುವುದು ಹೀಗೆ ಹಲವು ಸಮಸ್ಯೆಗಳಿಂದಾಗಿ ಬಳಕೆಗೆ ಯೋಗ್ಯವಾಗಿಲ್ಲ.
ಸಾರ್ವಜನಿಕ ಶೌಚಾಲಯಗಳು ಬಳಕೆದಾರರಿಂದ ಮೂತ್ರಕ್ಕೆ 5 ರೂ. ಹಾಗೂ ಮಲ ವಿಸರ್ಜನೆಗೆ 10 ರೂ. ಗಳನ್ನು ನಿರ್ವಹಣೆಗೆಂದು ಸಂಗ್ರಹಿಸಲಾಗುತ್ತಿದೆ. ಆದರೆ ಈ ಹಣ ಗುತ್ತಿಗೆದಾರರ ಜೇಬು ತುಂಬಿಸುತ್ತದೆಯೇ ಹೊರತು ಶೌಚಾಲಯಗಳಲ್ಲಿ ಯಾವುದೇ ಅಭಿವೃದ್ಧಿ ಕಂಡುಬರುತ್ತಿಲ್ಲ
ಸ್ವಚ್ಛ ಭಾರತ್ ಮಿಷನ್ ಅನುಸಾರ ಪ್ರತೀ 100 ಜನರಿಗೆ ಒಂದು ಶೌಚಾಲಯವನ್ನು ನಿರ್ಮಿಸಬೇಕು. ಆದರೆ ನಗರದಲ್ಲಿ ಇವು 200ರಿಂದ 400 ಜನರಿಗೆ ಒಂದರಂತೆ ನಿರ್ಮಾಣಗೊಂಡಿವೆ.
ಸಾರ್ವಜನಿಕ ಶೌಚಾಲಯಗಳಲ್ಲಿ ಕೇವಲ ಸ್ತ್ರೀ ಮತ್ತು ಪುರುಷರು ಬಳಸಬಹುದು ಎಂಬ ನಾಮ ಫಲಕಗಳಿರುತ್ತವೆ. ಆದರೆ ಇಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಿಶೇಷ ಚೇತನರು ಪ್ರತ್ಯೇಕ ಶೌಚಾಲಯಗಳಿಲ್ಲದೆ ದಿನನಿತ್ಯ ಪರದಾಡುತ್ತಿದ್ದಾರೆ. ಇದರಲ್ಲಿ ವಿಶೇಷ ಚೇತನರು ಅವರ ಲಿಂಗದ ಅನುಗುಣವಾಗಿ ಹೇಗೋ ಕಷ್ಟಪಟ್ಟು ಬಳಸುತ್ತಾರೆ. ಆದರೆ ಲಿಂಗತ್ವ ಅಲ್ಪಸಂಖ್ಯಾತರು ಸ್ತ್ರೀ ಮತ್ತು ಪುರುಷರ ಶೌಚಾಲಯದಲ್ಲಿ ಯಾವುದನ್ನು ಬಳಸಬೇಕು ಎಂಬ ಗೊಂದಲದಲ್ಲಿ ದಿನನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಸಾರ್ವಜನಿಕ ಶೌಚಾಲಯಗಳಲ್ಲಿ ನ್ಯಾಪ್ಕಿನ್ಗಳು, ಮ್ಯಾನ್ಸ್ಟ್ರಾಲ್ ಕಾಫ್ಗಳು ಹಾಗೂ ವಿಶ್ರಾಂತಿ ಕೊಠಡಿಗಳಿಲ್ಲದೆ ದಿನನಿತ್ಯ ಸ್ತ್ರೀಯರು ಬಳಲುತ್ತಿದ್ದಾರೆ. ಜೊತೆಗೆ ಹೊರಗಡೆ ಹೋದರೆ ಇಂತಹ ಅವ್ಯವಸ್ಥಿತ ಶೌಚಾಲಯಗಳನ್ನು ಬಳಸಬೇಕಾಗುತ್ತದೆ ಎಂದು ಕಡಿಮೆ ನೀರು ಕುಡಿಯುವುದು ಮತ್ತು ಮೂತ್ರವನ್ನು ಮನೆಗೆ ಬರುವವರೆಗೆ ತಡೆಹಿಡಿಯುತ್ತಿದ್ದಾರೆ. ಇದರಿಂದಾಗಿ ಅನೇಕ ಸ್ತ್ರೀಯರು ಸುಸ್ತು, ಕಿಡ್ನಿಸ್ಟೋನ್ ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಶೌಚಾಲಯ ನಿರ್ವಹಣೆಗಾರರು
ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ವಹಣೆ ಕೆಲಸ ಮಾಡುವವರು ಬಹುತೇಕ ಬಿಹಾರ ರಾಜ್ಯದವರಾಗಿದ್ದಾರೆ. ಇವರು ಶೌಚಾಲಯ ನಿರ್ವಹಣೆ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ ಗುತ್ತಿಗೆದಾರರಾಗಲೀ ಅಥವಾ ಸರಕಾರವಾಗಲೀ ಪ್ರತ್ಯೇಕ ನಿವೇಶನ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಹಾಗಾಗಿ ಇವರು ತಮ್ಮ ಕೆಲಸದ ಸ್ಥಳದಲ್ಲೇ ಸಾಮಗ್ರಿಗಳ ಕೊಠಡಿಯಲ್ಲಿ ವಾಸವಾಗಿದ್ದಾರೆ. ಅಲ್ಲೇ ಊಟ, ಅಲ್ಲೇ ಸ್ನಾನ, ಅಲ್ಲೇ ಮಲಗುವುದರಿಂದ ಅನೇಕ ರೋಗಗಳಿಂದ ಬಳಲುತ್ತಿದ್ದಾರೆ.
ಪ್ರತಿದಿನ ಸುಮಾರು 12 ರಿಂದ 18 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಇವರಿಗೆ ಯಾವುದೇ ರೀತಿಯ ಉದ್ಯೋಗ ಭದ್ರತೆ ಹಾಗೂ ಆರ್ಥಿಕ ಭದ್ರತೆ ಇರುವುದಿಲ್ಲ. ಇವರಲ್ಲಿ 15ರಿಂದ 20 ವರ್ಷ ಸೇವೆ ಸಲ್ಲಿಸಿದವರು ಇದ್ದರೂ ಸಂಬಳ ಮಾಸಿಕ 12 ರಿಂದ 15 ಸಾವಿರ ರೂ. ದಾಟುವುದಿಲ್ಲ.
ಆರ್ಥಿಕ ಭದ್ರತೆ ಇಲ್ಲದೆ ಇಂತಹ ಕೆಲಸವನ್ನು ಮಾಡುತ್ತಿದ್ದೇವೆ. ಹಾಗಾಗಿ ಸರಕಾರ ಇತ್ತೀಚೆಗೆ ಪೌರ ಕಾರ್ಮಿಕರನ್ನು ಖಾಯಂ ಮಾಡಿಕೊಂಡಂತೆ ತಮ್ಮನ್ನು ಸಹ ಖಾಯಂ ನೌಕರರನ್ನಾಗಿ ಮಾಡಿಕೊಳ್ಳಬೇಕು ಎಂಬುದು ಅವರ ಬೇಡಿಕೆಯಾಗಿದೆ.