ಪ್ರಧಾನಿ ಮೋದಿ ಸ್ವಾಗತಿಸಿ ಮಂಡ್ಯದಲ್ಲಿ ವಿವಾದಿತ 'ಉರಿಗೌಡ & ನಂಜೇಗೌಡ' ಹೆಸರಿನ ಫ್ಲೆಕ್ಸ್ ಪ್ರತ್ಯಕ್ಷ: ತೀವ್ರ ಆಕ್ಷೇಪ
ಸಾಮಾಜಿಕ ತಾಣದಲ್ಲಿ ಫ್ಲೆಕ್ಸ್ ತೆರವುಗೊಳಿಸುವಂತೆ ಒತ್ತಾಯ
ಮಂಡ್ಯ: ಮಾರ್ಚ್ 12 ರಂದು ಮಂಡ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ನಗರದಲ್ಲಿ ವಿವಾದಿತ 'ಉರಿಗೌಡ & ನಂಜೇಗೌಡ' ಹೆಸರಿನ ಫ್ಲೆಕ್ಸ್ ಹಾಕಿದ್ದು, ಸಾಮಾಜಿಕ ತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೇ, ತಕ್ಷಣ ಫ್ಲೆಕ್ಸ್ ತೆರವುಗೊಳಿಸುವಂತೆ ಹಲವರು ಒತ್ತಾಯಿಸಿದ್ದಾರೆ.
ಮಾರ್ಚ್ 12 ರಂದು (ರವಿವಾರ) ಪ್ರಧಾನಿ ಮೋದಿ ಅವರು ಮಂಡ್ಯದ ಗೆಜ್ಜಲಗೆರೆಯಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದು, ಅದೇ ದಿನ ಬೃಹತ್ ರೋಡ್‌ಶೋ ನಡೆಸಲಿದ್ದಾರೆ.ಈ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಿ 'ಉರಿಗೌಡ ಮತ್ತು ನಂಜೇಗೌಡ' ಹೆಸರಿನಲ್ಲಿ ಸ್ವಾಗತ ದ್ವಾರ ಅಳವಡಿಸಲಾಗಿದೆ.
ಪ್ರಧಾನಿ ಮೋದಿ ಅವರ ಭಾವಚಿತ್ರ ಇರುವ ಈ ಸ್ವಾಗತ ದ್ವಾರದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ''ಪ್ರಧಾನಿಯವರು ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷವು ಕಪೋಲಕಲ್ಪಿತವಾದ ' ಉರಿಗೌಡ & ನಂಜೇಗೌಡ' ಹೆಸರುಗಳಲ್ಲಿ ಹಾಕಿರುವ ಫ್ಲೆಕ್ಸ್ ಗಳನ್ನು ಕೂಡಲೇ ತೆರೆವು ಗೊಳಿಸಿ ಎಲ್ಲವೂ ಶಾಂತಿಯುತವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು'' ಎಂದು ಬರಹಗಾರ ರಾಜೇಂದ್ರ ಪ್ರಸಾದ್ ಅವರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಫೇಸ್ ಬುಕ್ ಪೋಸ್ಟ್ ಮಾಡಿರುವ ಅವರು, '' ಸದರಿ ಫ್ಲೆಕ್ಸ್ ಬೋರ್ಡ್ ನಲ್ಲಿ ಕೋಮು ಪ್ರಚೋದಿತ ಸುಳ್ಳು ಮತ್ತು ಅಶಾಂತಿ ಹರಡುವ ಉದ್ದೇಶಗಳು ಇರುವ ಕಾರಣ ಅದನ್ನ ಹಾಕಲು ಜಿಲ್ಲಾಡಳಿತವು ಅವಕಾಶ ನೀಡಬಾರದಿತ್ತು. ಸರ್ಕಾರದ ಸಾರ್ವಜನಿಕ ಕಾರ್ಯಕ್ರಮಗಳಲ್ಲೇ ಇಂತಹ ಕೋಮುವಾದಿ ಮತ್ತು ಸುಳ್ಳಿನ ಪೋಸ್ಟರ್ ಗಳನ್ನು ಬಳಸುವುದು, ಪ್ರಚಾರ ಮಾಡುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ''
''ತಾವು ಸಂಜೆಯೊಳಗೆ ಈ ವಿವಾದಾತ್ಮಕ ಫ್ಲೆಕ್ಸ್ ಬೋರ್ಡ್ ಗಳನ್ನು ತೆರೆವುಗೊಳಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್, ಜೆಡಿಎಸ್, ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ರಾಜಕೀಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇಂತಹ ಕೇಡಿನ ಕೆಲಸಗಳ ವಿರುದ್ದ ತೀವ್ರವಾದ ಪ್ರತಿಭಟನೆಯನ್ನ ನಾಳೆ ಹಮ್ಮಿಕೊಳ್ಳಲು ಕಾರಣವಾಗುತ್ತದೆ. ತಾವು ಇದಕ್ಕೆ ಅವಕಾಶ ಕೊಡದೇ ಯಾವುದೇ ಮುಲಾಜುಗಳಿಗೆ ಒಳಗಾಗದೇ ಸಕ್ಕರೆ ಕಾರ್ಖಾನೆ ವೃತ್ತದಲ್ಲಿರುವ (ಬಿ.ಜಿ ದಾಸೇಗೌಡ ವೃತ್ತ) ಫ್ಲೆಕ್ಸ್ ಬೋರ್ಡ್ ಗಳನ್ನ ತೆರೆವು ಗೊಳಿಸಬೇಕು'' ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗುರುರಾಜ್ ಎಂಬವರು ''ಇಂಥ ಘಾತುಕರಿಗೆ ಒಕ್ಕಲಿಗರೇ ಬುದ್ದಿ ಕಲಿಸಬೇಕು !'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಗುರುರಾಜ್ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ... ''ಇಷ್ಟು ಕುಲಗೆಟ್ಟ, ಅಸಹ್ಯದ ಪರಮಾವಧಿ ಮುಟ್ಟಿದ, ಕೆಟ್ಟಾ ಕೊಳಕರು ಕನ್ನಡ ನಾಡಿನ ಇತಿಹಾಸದಲ್ಲಿಯೇ ಇರಲಿಲ್ಲ.ನೆಲ ಮೂಲಕ್ಕೆ ನಿಷ್ಠರಾಗಿರುವ ಹಾಗೂ ಸ್ವಾಭಿಮಾನಕ್ಕೆ ಹೆಸರಾಗಿರುವ ಒಕ್ಕಲಿಗ ಜನಾಂಗಕ್ಕೇ ಅಪಚಾರ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ''
''ಮುಸ್ಲಿಮರ ಮೇಲಿನ ದ್ವೇಷವನ್ನು ಟಿಪ್ಪು ಮೂಲಕ ತೀರಿಸಿಕೊಳ್ಳಲು ಹೊರಟಿರುವ ಈ ಭಕ್ತ ಹೆಣಗಳಿಗೆ ಇತಿಹಾಸವಿರಲಿ;
ಸಂಸ್ಕೃತಿ-ಸಂಸ್ಕಾರಗಳ ಕನಿಷ್ಠ ಅರಿವೂ ಇಲ್ಲ''
''ಒಬ್ಬ ಅಯೋಗ್ಯ ಉರಿಗೌಡ-ನಂಜೇಗೌಡರ ಪ್ರತಿಮೆ ನಿರ್ಮಿಸುತ್ತೇನೆ ಎಂದು ಬೊಬ್ಬಿರಿದ ನಂತರ , ಇಲ್ಲೇ ಇಲ್ಲದ ಎರಡು ಹೆಸರುಗಳನ್ನು ಜೀವಂತಗೊಳಿಸುವ ಹರಾಮಿ ಕೆಲಸವನ್ನು ಎಗ್ಗು-ಸಿಗ್ಗಿಲ್ಲದೆ ನಡೆಸಲಾಗುತ್ತಿದೆ. ಈ ಸಗಣಿ ಹುಳುಗಳಿಗೆ ಈ ನಾಡಿನ ಒಕ್ಕಲಿಗರೇ ಪಾಠ ಕಲಿಸಬೇಕು, ಕಲಿಸುತ್ತಾರೆ. ಮನೆಗೂ ಕಳಿಸುತ್ತಾರೆ'' ಎಂದು ಬರೆದುಕೊಂಡಿದ್ದಾರೆ.
''ಬಿಜೆಪಿ ಎಂತಹ ಕೀಳುಮಟ್ಟಕ್ಕೂ ಇಳಿಯಬಲ್ಲದು. ಪ್ರಧಾನಿ ಆಗಮಿಸುವ ಕಾರ್ಯಕ್ರಮಕ್ಕೆ ಉರಿಗೌಡ, ನಂಜೇ ಗೌಡ ದ್ವಾರ !. ಇದು ಅಸಹ್ಯ. ಟಿಪ್ಪುಕೊಂದದ್ದು ಈ ಉರಿ, ನಂಜು ಎಂಬ ಬಿಜೆಪಿ ಕಲ್ಪನೆಯ ಕೂಸುಗಳು ಎಂದು ಪ್ರಧಾನಿ ನರೇಂದ್ರ ಮೋದಿ ಒಪ್ಪುತ್ತಾರಾ ? ಹೌದಾದರೆ ಅವರ ಬಹಿರಂಗವಾಗಿ ಹಾಗೆ ಘೋಷಿಸಲಿ.ಮಂಡ್ಯ ಜಿಲ್ಲಾಡಳಿತ ತಕ್ಷಣ ಈ ದ್ವಾರಗಳನ್ನು ತೆರವುಗೊಳಿಸಬೇಕು. ಮಂಡ್ಯದ ಜನತೆ ಇದನ್ನು ಪ್ರತಿಭಟಿಸಬೇಕು''
ಮುನೀರ್ ಕಾಟಿಪಳ್ಳ- ಡಿವೈಎಫ್ಐ ರಾಜ್ಯಾಧ್ಯಕ್ಷ ರು