ವಿಶೇಷ-ವರದಿಗಳು
ಮತ್ತೆ ಭ್ರಷ್ಟರ ಪಾಲಿನ ಸಿಂಹಸ್ವಪ್ನವಾದೀತೆ ಲೋಕಾಯುಕ್ತ?

ಒಂದು ಕಾಲದಲ್ಲಿ, ನಡುಬೀದಿಯಲ್ಲಿಯೇ ಭ್ರಷ್ಟರ ಬಣ್ಣ ಬಯಲು ಮಾಡುತ್ತಾ ಜನರ ಗಮನ ಸೆಳೆದಿತ್ತು ಲೋಕಾ ಯುಕ್ತ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರೇ ಅಧಿಕಾರದಿಂದಿಳಿದು ಜೈಲಿನೆಡೆಗೆ ಹೆಜ್ಜೆ ಹಾಕುವಂತೆ ಮಾಡಿತ್ತು. ಒಂದು ಹಂತದಲ್ಲಿ ಅದೇ ಸಂಸ್ಥೆ ಹಲ್ಲು ಕಿತ್ತ ಹಾವಿನಂತಾಯಿತು. ಮತ್ತೆ ಅಧಿಕಾರ ಸಿಕ್ಕ ಬಳಿಕ ಭ್ರಷ್ಟಾಚಾರದ ವಿರುದ್ಧ ಅಖಾಡಕ್ಕಿಳಿದಿರುವ ಲೋಕಾಯುಕ್ತ ಕಳೆದ ವಾರ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಪ್ರಕರಣ ದಾಖಲಿಸಿದೆ. ತಂದೆಯ ಪರವಾಗಿ 40 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಬಂಧಿಸಿದೆ. ತಲೆಮರೆಸಿಕೊಂಡಿದ್ದ ಮಾಡಾಳ್ ವಿರೂಪಾಕ್ಷಪ್ಪ ಕೂಡ ತನಿಖಾಧಿಕಾರಿ ಮುಂದೆ ಹಾಜರಾಗಿದ್ದಾರೆ. ಇಡೀ ಪ್ರಕರಣ ರಾಜ್ಯ ರಾಜಕಾರಣದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಲವು ವರ್ಷಗಳ ಹಿಂದೆ ಇದ್ದ ಗತ್ತಿಗೇ ಲೋಕಾಯುಕ್ತ ಮರಳಿದಂತೆ ಕಾಣುತ್ತಿದೆ.
ಕರ್ನಾಟಕ ಲೋಕಾಯುಕ್ತಕ್ಕೆ ರಾಜ್ಯದಲ್ಲಿ ಸಾರ್ವಜನಿಕ ಅಧಿಕಾರಿ ಗಳು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪಗಳ ತನಿಖೆ ಮಾಡುವ ಅಧಿಕಾರವಿದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿದ್ದು, ನೇರವಾಗಿ ರಾಜ್ಯ ಶಾಸಕಾಂಗಕ್ಕೆ ವರದಿ ಮಾಡುತ್ತದೆ. ಯಾವುದೇ ಕಾರ್ಯಕಾರಿ ಪ್ರಾಧಿ ಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ.
ಮುಖ್ಯಮಂತ್ರಿ, ಸಚಿವರು, ಶಾಸಕರು, ಇತರ ಅಧಿಕಾರಿಗಳು, ಸಾರ್ವಜನಿಕ ನೌಕರರ ವಿರುದ್ಧದ ದೂರುಗಳ ತನಿಖೆ, ಸಾಕ್ಷಿಗಳನ್ನು ಕರೆಸಿಕೊಳ್ಳುವ, ದಾಖಲೆಗಳನ್ನು ಕೋರುವ ಮತ್ತು ಅದರ ತನಿಖೆ ಗಳನ್ನು ಕೈಗೊಳ್ಳಲು ಅಗತ್ಯವಿದ್ದರೆ ಶೋಧನೆ ಮತ್ತು ವಶಪಡಿಸಿಕೊಳ್ಳುವ ಅಧಿಕಾರ ಅದಕ್ಕಿದೆ. ಆಡಳಿತಾತ್ಮಕ ಪ್ರಕ್ರಿಯೆ ಸುಧಾರಿಸಲು ಮತ್ತು ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತರು ಸರಕಾರಕ್ಕೆ ಶಿಫಾರಸು ಮಾಡಬಹುದು. ದುರಾಡಳಿತ ತಡೆಗಟ್ಟಲು ಕಾನೂನು ಮತ್ತು ನಿಬಂಧನೆಗಳ ಬದಲಾವಣೆಗಳಿಗೆ ಸಲಹೆ ನೀಡುವ ಅಧಿಕಾರವನ್ನೂ ಹೊಂದಿದೆ. ಲೋಕಾಯುಕ್ತ ತನ್ನ ಪೊಲೀಸ್ ವಿಭಾಗದ ಮೂಲಕ ತನಿಖೆ ನಡೆಸುವ ಅಧಿಕಾರವನ್ನು 1988ರ ಭ್ರಷ್ಟಾಚಾರ ತಡೆ ಕಾಯ್ದೆ ಮೂಲಕ ಪಡೆದಿದೆ.
ಲೋಕಾಯುಕ್ತ ಹೆಚ್ಚು ಸದ್ದು ಮಾಡಿದ್ದು ನ್ಯಾ. ಎನ್.ವೆಂಕಟಾಚಲ ಕಾಲದಲ್ಲಿ. ಲೋಕಾಯುಕ್ತವನ್ನು ಅವರು ಜನರ ಮನೆಬಾಗಿಲಿಗೆ ಕರೆತಂದರು ಎಂದು ಬಣ್ಣಿಸಲಾಗಿದೆ. ಭ್ರಷ್ಟರಿಗೆ ಸಿಂಹಸ್ವಪ್ನದಂತೆ ಕಾಡಿ, ಲೋಕಾಯುಕ್ತವನ್ನು ಮನೆಮಾತಾಗಿಸಿದ್ದರು.
ಅದಾದ ಬಳಿಕ ನ್ಯಾ.ಸಂತೋಷ್ ಹೆಗ್ಡೆಯವರು ಲೋಕಾಯುಕ್ತ ರಾಗಿದ್ದಾಗಲೂ ಈ ಸಂಸ್ಥೆ ಮತ್ತಷ್ಟು ಖ್ಯಾತಿಗೆ ಬಂತು. ಬಳ್ಳಾರಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂತೋಷ ಹೆಗ್ಡೆ ನೀಡಿದ ತನಿಖಾ ವರದಿಗಳು ರಾಜ್ಯದ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡಿದವು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಿ, ಜೈಲಿಗೆ ಹೋಗಬೇಕಾಯಿತು. ಅಕ್ರಮ ಗಣಿಗಾರಿಕೆ ಆರೋಪ ಜನಾರ್ದನ ರೆಡ್ಡಿಯನ್ನೂ ಜೈಲುಪಾಲಾಗಿಸಿತು.
ನ್ಯಾ. ಶಿವರಾಜ್ ಪಾಟೀಲ್ ನಿವೇಶನ ವಿವಾದದಲ್ಲಿ ಸಿಲುಕಿಕೊಂಡು ತಿಂಗಳ ಅವಧಿಯಲ್ಲಿಯೇ ರಾಜೀನಾಮೆ ನೀಡುವಂತಾಯಿತು. ಆ ಬಳಿಕ ಎರಡು ವರ್ಷ ಲೋಕಾಯುಕ್ತರ ನೇಮಕವಾಗಲೇ ಇಲ್ಲ. ಸೂಕ್ತ ಅಭ್ಯರ್ಥಿಯಿಲ್ಲವೆಂಬ ನೆಪವನ್ನು ಹೇಳುತ್ತ ಬರಲಾಯಿತು. ಆನಂತರ ಬಂದ ನ್ಯಾ. ಭಾಸ್ಕರ ರಾವ್ ಕೂಡ ಭ್ರಷ್ಟಾಚಾರ ಆರೋಪ ಹೊತ್ತು ರಾಜೀನಾಮೆ ನೀಡಿದರು.
ಆಮೇಲೆಯೂ ಮತ್ತೆರಡು ವರ್ಷ ಲೋಕಾಯುಕ್ತ ಹುದ್ದೆಯನ್ನು ಖಾಲಿ ಉಳಿಸಲಾಯಿತು. ಈ ನಡುವೆಯೇ ಅದರ ಅಧಿಕಾರ ಕಿತ್ತುಕೊಳ್ಳಲಾಯಿತು. ಭ್ರಷ್ಟಾಚಾರ ಕುರಿತ ದೂರುಗಳನ್ನು ಪರಿಶೀಲಿಸಿ ಪರಿಹಾರ ನೀಡುವುದಕ್ಕೆ ಅದರ ಅಧಿಕಾರ ಸೀಮಿತವಾಯಿತು. ಅಂಥ ಆವಧಿ ಯಲ್ಲಿ ನ್ಯಾ.ವಿಶ್ವನಾಥ ಶೆಟ್ಟಿಯವರು ಲೋಕಾಯುಕ್ತರಾದರು. ಅವರಿಗೆ ಅವರ ಕಚೇರಿಯಲ್ಲಿಯೇ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಆಘಾತಕಾರಿ ಘಟನೆಯೂ ನಡೆಯಿತು. ಹಾಲಿ ಲೋಕಾಯುಕ್ತ ಬಿ. ಎಸ್.ಪಾಟೀಲ್ ಅವರ ಕುಟುಂಬದ ವಿರುದ್ಧವೂ ಕೆಲವು ಸಾಮಾಜಿಕ ಹೋರಾಟಗಾರರು ಇತ್ತೀಚೆಗೆ ಆರೋಪ ಮಾಡಿದ್ದರು.
2022ರ ಆಗಸ್ಟ್ 11 ಲೋಕಾಯುಕ್ತ ಪಾಲಿಗೆ ಮಹತ್ವದ ದಿನವಾಯಿತು. ಅಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪಿನಿಂದಾಗಿ ಲೋಕಾಯುಕ್ತ ಮರುಜೀವ ಪಡೆಯಿತು. 2016ರಲ್ಲಿ ಲೋಕಾಯುಕ್ತದ ಹಲ್ಲು ಕಿತ್ತು ರಚಿಸಲಾಗಿದ್ದ ಎಸಿಬಿಯನ್ನು ರದ್ದುಗೊಳಿಸಿದ ಹೈಕೋರ್ಟ್, ಎಸಿಬಿ ವ್ಯಾಪ್ತಿಯಲ್ಲಿ ತನಿಖೆಗೊಳಪಟ್ಟ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆದೇಶಿಸಿತು. ಲೋಕಾಯುಕ್ತ ಪೊಲೀ ಸರಿಗೆ ನೀಡಲಾಗಿದ್ದ ತನಿಖಾ ಅಧಿಕಾರವನ್ನೂ ಮರುಸ್ಥಾಪಿಸಿ ಆದೇಶ ನೀಡಲಾಯಿತು.
ಎಸಿಬಿ ರಚನೆ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ, ಬೆಂಗಳೂರು ವಕೀಲರ ಸಂಘಗಳಲ್ಲದೆ ಇನ್ನೂ ಹಲವರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ್ದ ಕೋರ್ಟ್ ಈ ಮಹತ್ವದ ಆದೇಶ ನೀಡಿತ್ತು. ಹೈಕೋರ್ಟ್‌ನ ಈ ಅದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳು ವಜಾಗೊಂಡವು.
ಮತ್ತೊಂದು ಮಹತ್ವದ ಕೆಲಸ ಇನ್ನೂ ಆಗಬೇಕಿದೆ ಎನ್ನುತ್ತಿವೆ ವರದಿಗಳು. ಲೋಕಾಯುಕ್ತವನ್ನು ಸಿಂಧುಗೊಳಿಸಿದ ತನ್ನ 2022ರ ಆಗಸ್ಟ್ 11ರ ತೀರ್ಪಿನಲ್ಲಿಯೇ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಶಿಫಾರಸೊಂದನ್ನು ಮಾಡಿತ್ತು. ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಸರಕಾರಿ ಹಾಗೂ ಸಾರ್ವಜನಿಕ ನೌಕರರ ವಿರುದ್ಧ ವಿಚಾರಣೆ ನಡೆಸಿ ಸಲ್ಲಿಸುವ ವರದಿಗಳನ್ನು ಸರಕಾರ ಒಪ್ಪಿಕೊಂಡು ಕ್ರಮಕೈಗೊಳ್ಳುವುದನ್ನು ಕಡ್ಡಾಯಗೊಳಿಸುವುದಕ್ಕೆ ಪೂರಕವಾಗಿ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಶಿಫಾರಸು ಅದಾಗಿತ್ತು. ಈವರೆಗೂ ಕಾಯ್ದೆ ತಿದ್ದುಪಡಿಗೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ ಎನ್ನುತ್ತವೆ ವರದಿಗಳು.
ಲೋಕಾಯುಕ್ತದಿಂದ ಸಲ್ಲಿಕೆಯಾಗುವ ವರದಿಗಳಲ್ಲಿ ಹೆಚ್ಚಿನವು ತಿರಸ್ಕೃತಗೊಳ್ಳುತ್ತಿವೆ. ನೂರಾರು ವರದಿಗಳ ಸಂಬಂಧ ಯಾವುದೇ ತೀರ್ಮಾನ ಕೈಗೊಳ್ಳದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಹೈಕೋರ್ಟ್ ಶಿಫಾರಸು ಜಾರಿಗೆ ಬಂದರಷ್ಟೇ ಲೋಕಾಯುಕ್ತ ನಡೆಸುವ ವಿಚಾರಣೆಗೆ ಅರ್ಥವಿರುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾ ಗುತ್ತಿವೆ.
ಹೀಗೆ ಸ್ವತಂತ್ರ ಸಂಸ್ಥೆಯ ಮೇಲೆಯೂ ತನ್ನ ಹಿಡಿತವಿರಿಸಿಕೊಳ್ಳುವ ಅವಕಾಶವನ್ನು ಬಿಟ್ಟುಕೊಡಲು ಬಹುಶಃ ಯಾವುದೇ ಸರಕಾರಗಳೂ ಮನಸ್ಸು ಮಾಡುವುದಿಲ್ಲ. ಇದೆಲ್ಲದರ ನಡುವೆಯೂ ಲೋಕಾಯುಕ್ತ ಮತ್ತೊಮ್ಮೆ ಭ್ರಷ್ಟಾಚಾರದ ವಿರುದ್ಧ ಅಖಾಡದಲ್ಲಿ ನಿಂತಿದೆ. ಯಾವ ಲೋಕಾಯುಕ್ತದ ಕಾರಣದಿಂದ ಯಡಿಯೂರಪ್ಪ ಅಧಿಕಾರ ಕಳೆದು ಕೊಂಡಿದ್ದರೋ ಅದೇ ಲೋಕಾಯುಕ್ತದ ಹಿಡಿತಕ್ಕೆ ಈಗ ಅವರ ಆಪ್ತ ಮಾಡಾಳ್ ವಿರೂಪಾಕ್ಷಪ್ಪ ಸಿಲುಕಿದ್ದಾರೆ. ಚುನಾವಣೆ ಹತ್ತಿರವಿರು ವಾಗಲೇ ಈ ಬಹುದೊಡ್ಡ ರೇಡ್ ನಡೆದಿದೆ. ಮುಂದೇನಾಗುವುದೋ ನೋಡಬೇಕು.
ಲೋಕಾಯುಕ್ತ ಮತ್ತೆ ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಲಿರುವ ದಿನಗಳು ಬೇಗ ಬರಲಿ ಎಂದಷ್ಟೇ ಆಶಿಸಬಹುದು.
ಕರ್ನಾಟಕ ಲೋಕಾಯುಕ್ತದ ಹಾದಿ
ರಾಮಕೃಷ್ಣ ಹೆಗಡೆ ಕರ್ನಾಟಕದ ಮುಖ್ಯಮಂತ್ರಿಯಾದ ನಂತರ, 1983ರಲ್ಲಿ ತಾವು ನೀಡಿದ್ದ ಭರವಸೆಯಂತೆಯೆ ವಿಧಾನಸಭೆಯಲ್ಲಿ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ಮಸೂದೆ ಮಂಡಿಸಿದರು.
ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಮೂಲಕ ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಪ್ರಕಾರ, ಸುಪ್ರೀಂಕೋರ್ಟ್ ನ್ಯಾಯಾ ಧೀಶರಾಗಿ ಇಲ್ಲವೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಬೇಕು ಎಂದಿತ್ತು.
2015ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅದರ ಪ್ರಕಾರ ಹತ್ತು ವರ್ಷಗಳ ಕಾಲ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದವರನ್ನು ಲೋಕಾಯುಕ್ತ ಹುದ್ದೆಗೆ ಮತ್ತು ಐದು ವರ್ಷ ಸೇವೆ ಸಲ್ಲಿಸಿರುವವರನ್ನು ಉಪ ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಬಹುದು.
ಲೋಕಾಯುಕ್ತರನ್ನು ರಾಜ್ಯಪಾಲರು ಮುಖ್ಯಮಂತ್ರಿಯ ಸಲಹೆಯ ಮೇರೆಗೆ, ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ರು, ವಿಧಾನ ಪರಿಷತ್ ಸಭಾಪತಿ, ವಿಧಾನಸಭೆ ಸ್ಪೀಕರ್, ವಿಧಾನ ಪರಿಷತ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ರೊಂದಿಗೆ ಸಮಾಲೋಚಿಸಿ ನೇಮಕ ಮಾಡುತ್ತಾರೆ. ಆದರೆ, 2016ರಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ಲೋಕಾಯುಕ್ತದ ತನಿಖಾ ಅಧಿಕಾರವನ್ನು ಕಿತ್ತುಕೊಳ್ಳಲಾಯಿತು. ಎಸಿಬಿಯನ್ನು ರಚಿಸಲಾಯಿತು. 2022ರಲ್ಲಿ ಕರ್ನಾಟಕ ಹೈಕೋರ್ಟ್ ಎಸಿಬಿಯನ್ನು ವಿಸರ್ಜಿಸಿ, ಲೋಕಾಯುಕ್ತಕ್ಕೆ ಎಲ್ಲಾ ಪ್ರಕರಣಗಳನ್ನು ವರ್ಗಾಯಿಸಲು ಆದೇಶಿಸಿತು.
ಎಸಿಬಿಯಲ್ಲಿದ್ದ ಪ್ರಕರಣಗಳ ವಿವರ
ಗೃಹ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಎಸಿಬಿ 2016ರಲ್ಲಿ ಪ್ರಾರಂಭವಾದಾಗಿನಿಂದ 1,803 ಪ್ರಕರಣಗಳನ್ನು ದಾಖಲಿಸಿದೆ. ಹೆಚ್ಚಿನ ಪ್ರಕರಣಗಳು ವಿಚಾರಣೆಯಲ್ಲಿದ್ದರೂ, ಎಸಿಬಿ ಕೇವಲ 10 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡು ವಲ್ಲಿ ಯಶಸ್ವಿಯಾಗಿದೆ. 25 ಪ್ರಕರಣಗಳಲ್ಲಿ ಅಧಿಕಾರಿಗಳು ಖುಲಾಸೆಗೊಂಡಿದ್ದಾರೆ.
ದಾಖಲಾದ 1,803 ಪ್ರಕರಣಗಳ ಪೈಕಿ 753 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, 682 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈ ಪ್ರಕರಣಗಳಲ್ಲಿ, 391 ವರ್ಗ-1 ಮತ್ತು ಮೇಲ್ಪಟ್ಟವರು ಮತ್ತು ಜನಪ್ರತಿನಿಧಿಗಳು ಸೇರಿದಂತೆ 1,473 ಸರಕಾರಿ ಸಿಬ್ಬಂದಿಯನ್ನು ಬಂಧಿಸಲಾಗಿದೆ. 1,335 ಆರೋಪಿ ಅಧಿಕಾರಿಗಳನ್ನು ಅಮಾನತುಗೊಳಿಸಲಾ ಗಿದ್ದರೆ, 493 ಜನರ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗಿದೆ.
ಲೋಕಾಯುಕ್ತದಲ್ಲಿರುವ ಪ್ರಕರಣಗಳು
ಒಟ್ಟು 8,036 ಪ್ರಕರಣಗಳು ಲೋಕಾಯುಕ್ತದಲ್ಲಿ ಬಾಕಿ ಇವೆ. ಇದರಲ್ಲಿ 2,430 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 5 ವರ್ಷ
ಗಳಲ್ಲಿ 20,549 ದೂರು ಹಾಗೂ 2,431 ವಿಚಾರಣಾ ಪ್ರಕರಣ ಗಳು ದಾಖಲಾಗಿವೆ. ಗಂಭೀರವಲ್ಲದ 13 ಸಾವಿರ ಪ್ರಕರಣಗಳಲ್ಲಿ 12 ಸಾವಿರ ಪ್ರಕರಣಗಳು ಇತ್ಯರ್ಥವಾಗಿವೆ ಎನ್ನಲಾಗಿದೆ.
2017ರ ಜ. 28ರಿಂದ ಈವರೆಗೆ ಒಟ್ಟು 20,199 ದೂರು ಹಾಗೂ 2,677 ವಿಚಾರಣಾ ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ಅವಧಿಯಲ್ಲಿ 2,122 ಪ್ರಕರಣಗಳಲ್ಲಿ ಲೋಕಾಯುಕ್ತ ಕಾಯ್ದೆ ಕಲಂ 12(3)ರ ಅನ್ವಯ ಹಾಗೂ 587 ಕೇಸ್‌ಗಳಲ್ಲಿ ಕಲಂ 12(1)ರ ಅನ್ವಯ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕಳೆದ 5 ವರ್ಷ ಗಳಲ್ಲಿ 304 ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸಾರ್ವ ಜನಿಕರ ಕುಂದುಕೊರತೆಗಳ ನಿವಾರಣೆಗೆ ಲೋಕಾಯುಕ್ತರು ಪ್ರಯತ್ನಿಸಿದ್ದಾರೆ.
ಈ ಎಲ್ಲಾ ಪ್ರಕರಣಗಳ ಜೊತೆ ಹೈಕೋರ್ಟ್ ಆದೇಶ ನೀಡಿರುವಂತೆ ಎಸಿಬಿಯಲ್ಲಿ ತನಿಖಾ ಹಂತದಲ್ಲಿರುವ ಎಲ್ಲಾ ಪ್ರಕರಣಗಳು
ಲೋಕಾಯುಕ್ತಕ್ಕೆ ವರ್ಗಾವಣೆಯಾಗುವುದರಿಂದ ಲೋಕಾಯುಕ್ತ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ