varthabharthi


ವಿಶೇಷ-ವರದಿಗಳು

ಚಿನ್ನದ ಆಸ್ಕರ್ ಟ್ರೋಫಿಯ ಹಿಂದಿನ ಇತಿಹಾಸವೇನು ಮತ್ತು ಅದರ ಮೌಲ್ಯ ಕೇವಲ ಒಂದು ಡಾಲರ್ ಏಕೆ?

ವಾರ್ತಾ ಭಾರತಿ : 13 Mar, 2023

Photo: Encyclopedia Britannica

ಹದಿಮೂರೂವರೆ ಇಂಚು ಎತ್ತರದ, ಚಿನ್ನದ ಪೋಷಾಕಿನಲ್ಲಿ ಕಂಗೊಳಿಸುತ್ತಿರುವ ಆಸ್ಕರ್ ಪ್ರತಿಮೆಯು ವಿಶ್ವದ ಅತ್ಯಂತ ಪ್ರತಿಷ್ಠಿತ ಟ್ರೋಫಿಗಳಲ್ಲೊಂದಾಗಿದೆ.

ಇಂದು 24 ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಪ್ರದಾನಿಸಲಾಗಿದೆ. ಎರಡು ಆಸ್ಕರ್ ಪ್ರಶಸ್ತಿಗಳು ಭಾರತದ ಮುಡಿಗೇರಿದ್ದು, ತನ್ನ ಪ್ರಶಸ್ತಿ ವಿಜೇತರನ್ನು ಸ್ವಾಗತಿಸಲು ದೇಶವು ಸಜ್ಜಾಗಿದೆ. ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ಗುನೀತ್ ಮೋಂಗಾ ಅವರ ‘ದಿ ಎಲಿಫಂಟ್ ವಿಸ್ಪರರ್ ’ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಮತ್ತು ಎಸ್.ಎಸ್.ರಾಜಮೌಳಿಯವರ ‘ಆರ್ಆರ್ಆರ್’ಚಿತ್ರದ ‘ನಾಟು ನಾಟು ’ಗೀತೆ ಅತ್ಯುತ್ತಮ ಮೂಲ ಹಾಡಿಗಾಗಿ ಪ್ರಶಸ್ತಿಗಳಿಗೆ ಪಾತ್ರವಾಗಿವೆ. 

ಪ್ರಸಿದ್ಧ ಆಸ್ಕರ್ ಪ್ರತಿಮೆ ಸೃಷ್ಟಿಯಾಗಿದ್ದು ಹೇಗೆ, ಅದರ ವಿನ್ಯಾಸ ಏನನ್ನು ಸೂಚಿಸುತ್ತದೆ ಮತ್ತು ಅದಕ್ಕೆ ‘ಆಸ್ಕರ್’ಎಂಬ ಹೆಸರು ಬಂದಿದ್ದು ಹೇಗೆ ಎನ್ನುವುದರ ಕುರಿತು ಮಾಹಿತಿಗಳಿಲ್ಲಿವೆ...

ಪ್ರತಿಮೆಯ ವಿನ್ಯಾಸ ಮಾಡಿದ್ದು ಯಾರು?

1927ರಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಸ್ಥಾಪನೆಗೊಂಡ ಬೆನ್ನಿಗೇ ಅದರ ಗುರಿಗಳನ್ನು ಚರ್ಚಿಸಲು ಲಾಸ್ ಏಂಜೆಲಿಸ್ನ ಬಿಲ್ಟ್ಮೋರ್ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಭೋಜನ ಕೂಟದಲ್ಲಿ ವಾರ್ಷಿಕ ಪ್ರಶಸ್ತಿಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು. 

ಎಂಜಿಎಮ್ನ ಕಲಾ ನಿರ್ದೇಶಕ ಸೆಡ್ರಿಕ್ ಗಿಬ್ಬನ್ಸ್ ಅವರು ಚಲನಚಿತ್ರದ ಸುರುಳಿಯ ಮೇಲೆ ಖಡ್ಗವನ್ನು ಹಿಡಿದು ನಿಂತಿದ್ದ ವೀರಯೋಧನ ಸ್ಕೆಚ್ ರೂಪಿಸಿದ್ದರು. ಬಳಿಕ ಅಮೆರಿಕದ ಶಿಲ್ಪಿ ಜಾರ್ಜ್ ಮೇಟ್ಲಂಡ್ ಅವರು ಸ್ಕೆಚ್ಗೆ ಮೂರು ಆಯಾಮಗಳ ವಿನ್ಯಾಸವನ್ನು ನೀಡಿದ್ದರು. ಸುರುಳಿಯಲ್ಲಿನ ಐದು ವೃತ್ತಗಳು ಅಕಾಡೆಮಿಯ ಐದು ಮೂಲ ಶಾಖೆಗಳಾದ ನಟರು, ನಿರ್ದೇಶಕರು,ನಿರ್ಮಾಪಕರು,ತಂತ್ರಜ್ಞರು ಮತ್ತು ಲೇಖಕರನ್ನು ಸೂಚಿಸುತ್ತವೆ.

1920ರ ದಶಕದಲ್ಲಿ ತಾನು ಹಾಲಿವುಡ್ನಲ್ಲಿ ಇದ್ದ ಸಂದರ್ಭದಲ್ಲಿ ಪ್ರತಿಮೆಗಾಗಿ ಮಾಡೆಲ್ ಆಗಿದ್ದೆ ಎಂದು ಖ್ಯಾತ ಮೆಕ್ಸಿಕನ್ ನಟ ಮತ್ತು ನಿರ್ಮಾಪಕ ಎಮಿಲಿಯೊ ‘ಎಲ್ ಇಂಡಿಯೊ’ ಫೆರ್ನಾಂಡಿಝ್ ಹೇಳಿಕೊಂಡಿದ್ದರಾದರೂ ಅಕಾಡೆಮಿಯು ಅದನ್ನೆಂದೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.

13.5 ಇಂಚು ಎತ್ತರದ,8.5 ಪೌಂಡ್ ತೂಕದ ಮೊದಲ ಪ್ರತಿಮೆಗಳು ಚಿನ್ನದ ಲೇಪನ ಹೊಂದಿದ್ದ ಘನ ಕಂಚಿನದ್ದಾಗಿದ್ದವು, ನಂತರದ ವರ್ಷಗಳಲ್ಲಿ ಅವು ಬ್ರಿಟಾನಿಯಾ ಮಿಶ್ರಲೋಹದಲ್ಲಿ ರೂಪುಗೊಂಡಿದ್ದವು. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಲೋಹಗಳಿಗೆ ಕೊರತೆಯಾದಾಗ ಮೂರು ವರ್ಷಗಳ ಕಾಲ ಪ್ರತಿಮೆಗಳನ್ನು ಬಣ್ಣದ ಪ್ಲಾಸ್ಟರ್ನಿಂದ ರಚಿಸಲಾಗಿತ್ತು ಮತ್ತು ಪ್ರಶಸ್ತಿ ಪುರಸ್ಕೃತರು ನಂತರ ಅವುಗಳನ್ನು ಚಿನ್ನದ ಲೇಪನದ ಲೋಹದ ಪ್ರತಿಮೆಗಳನ್ನಾಗಿ ಮಾರ್ಪಡಿಸಿಕೊಂಡಿದ್ದರು.
            
ಇದನ್ನು ‘ಆಸ್ಕರ್ ’ಎಂದು ಏಕೆ ಕರೆಯಲಾಗುತ್ತದೆ?

ಅಕಾಡೆಮಿ ಅವಾರ್ಡ್ ಆಫ್ ಮೆರಿಟ್ ಎಂಬ ಅಧಿಕೃತ ಹೆಸರನ್ನು ಹೊಂದಿರುವ ಪ್ರತಿಮೆಯು ‘ಆಸ್ಕರ್ ’ಎಂದೇ ಪ್ರಸಿದ್ಧವಾಗಿದೆ ಮತ್ತು ಈ ಅಡ್ಡ ಹೆಸರನ್ನು ಅಕಾಡೆಮಿಯು 1939ರಲ್ಲಿ ಅಧಿಕೃತವಾಗಿ ಅಂಗೀಕರಿಸಿತ್ತು.

ಹೆಸರಿನ ಮೂಲದ ಬಗ್ಗೆ ತಿಳಿದಿಲ್ಲವಾದರೂ,ಅಕಾಡೆಮಿಯ ಗ್ರಂಥಪಾಲಕಿ ಮಾರ್ಗರೆಟ್ ಹೆರಿಕ್ ಅವರು ಮೊದಲ ಬಾರಿಗೆ ಟ್ರೋಫಿಯನ್ನು ನೋಡಿದಾಗ ಇದು ತನ್ನ ಚಿಕ್ಕಪ್ಪ ಆಸ್ಕರ್ರನ್ನು ಹೋಲುತ್ತದೆ ಎಂದು ಉದ್ಗರಿಸಿದ್ದರು ಎನ್ನುವುದು ಜನಪ್ರಿಯ ನಂಬಿಕೆಯಾಗಿದೆ ಮತ್ತು ಇದೇ ಹೆಸರು ಅನುರಣಿಸಿತ್ತು. ಹೆರಿಕ್ ನಂತರ ಅಕಾಡೆಮಿಯ ಕಾರ್ಯಕಾರಿ ನಿರ್ದೇಶಕಿಯ ಸ್ಥಾನಕ್ಕೆ ಏರಿದ್ದರು. ಆಸ್ಕರ್ ಹೆಸರಿನ ಬಳಕೆ ಅದಾಗಲೇ ವ್ಯಾಪಕವಾಗಿದ್ದು,1934ರಲ್ಲಿ ಹಾಲಿವುಡ್ ಅಂಕಣಕಾರ ಸಿಡ್ನಿ ಸ್ಕೋಲ್ಸ್ಕಿ ಅವರು ಮೊಟ್ಟಮೊದಲ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಕ್ಯಾಥರಿನ್ ಹೆಪ್ಬರ್ನ್ ಕುರಿತು ಲೇಖನವೊಂದನ್ನು ಬರೆದಾಗ ಅದನ್ನು ಬಳಸಿಕೊಂಡಿದ್ದರು.
  
ಆಸ್ಕರ್ ಟ್ರೋಫಿ ಎಲ್ಲಿ ಮತ್ತು ಹೇಗೆ ತಯಾರಾಗುತ್ತದೆ?

ಆರಂಭದಲ್ಲಿ ಇಲಿನಾಯಿಸ್ ನ ಸಿಡಬ್ಲ್ಯು ಶಮ್ವೇ ಆ್ಯಂಡ್ ಸನ್ಸ್ ಫೌಂಡ್ರಿಯಲ್ಲಿ ಆಸ್ಕರ್ ಟ್ರೋಫಿಗಳು ಸಿದ್ಧಗೊಳ್ಳುತ್ತಿದ್ದವು. ನಂತರ 1982ರಲ್ಲಿ ನಿರ್ಮಾಣದ ಹೊಣೆಯನ್ನು ಚಿಕಾಗೋದಲ್ಲಿಯ ಆರ್ಎಸ್ ಒವೆನ್ಸ್ ಆ್ಯಂಡ್ ಕಂಪನಿಗೆ ವಹಿಸಲಾಗಿತ್ತು. 2016ರಿಂದ ನ್ಯೂಯಾರ್ಕ್ ನ ಪಾಲಿಚ್ ಟ್ಯಾಲಿಕ್ಸ್ ಫೈನ್ ಆರ್ಟ್ ಫೌಂಡ್ರಿಯಲ್ಲಿ ಟ್ರೋಫಿಗಳು ನಿರ್ಮಾಣಗೊಳ್ಳುತ್ತಿವೆ. 

3ಡಿ ಪ್ರಿಂಟರ್ ಬಳಸಿ ಡಿಜಿಟಲ್ ಆಸ್ಕರ್ ಸೃಷ್ಟಿಯೊಂದಿಗೆ ಆರಂಭಗೊಳ್ಳುವ ಇಡೀ ನಿರ್ಮಾಣ ಪ್ರಕ್ರಿಯೆಯು ಮೂರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಇಲ್ಲಿ ನಿರ್ಮಾಣಗೊಂಡ ಕಂಚಿನ ಪ್ರತಿಮೆಗಳನ್ನು ನಂತರ ಚಿನ್ನದ ಲೇಪನಕ್ಕಾಗಿ ಎಪ್ನರ್ ಟೆಕ್ನಾಲಜಿಗೆ ರವಾನಿಸಲಾಗುತ್ತದೆ.  ಕೇವಲ 24 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆಯಾದರೂ, ಯಾವುದೇ ವಿಭಾಗದಲ್ಲಿ ಟೈ ಅಥವಾ ಒಂದಕ್ಕಿಂತ ಹೆಚ್ಚಿನ ವಿಜೇತರಿದ್ದರೆ ಅಂತಹ ಸಂದರ್ಭಗಳನ್ನು ನಿಭಾಯಿಸಲು ಪ್ರತಿ ವರ್ಷ 50 ಟ್ರೋಫಿಗಳನ್ನು ಸಿದ್ಧಗೊಳಿಸಲಾಗುತ್ತದೆ.

ಪ್ರತಿ ಟ್ರೋಫಿಯ ಉತ್ಪಾದನಾ ವೆಚ್ಚ 400 ಡಾ.ಗೂ ಅಧಿಕ ಎಂದು  ಹೇಳಲಾಗಿದ್ದರೂ ವಿಜೇತರು ಅಥವಾ ಇತರರು ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್ನ ಅಧಿಕೃತ ನಿಬಂಧನೆಯು ಹೇಳುತ್ತದೆ. ಅದರ ಮಾರಾಟ ಅಗತ್ಯವಾದರೆ ಒಂದು ಡಾಲರ್ ಗೆ ಅಕಾಡೆಮಿಗೇ ಮರಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)