varthabharthi


ವಿಶೇಷ-ವರದಿಗಳು

ಎಲ್ಲರ ಮನಸ್ಸನ್ನೂ ಮುಟ್ಟಲಿ ಮರಿಯಾನೆಯ ಪಿಸುಮಾತು

ವಾರ್ತಾ ಭಾರತಿ : 14 Mar, 2023
ಪೂರ್ವಿ

95ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಎಸ್.ಎಸ್.ರಾಜಮೌಳಿಯವರ ‘ಆರ್ಆರ್ಆರ್’ ಸಿನೆಮಾದ ‘‘ನಾಟು ನಾಟು’’ ಅತ್ಯುತ್ತಮ ಹಾಡು ಪ್ರಶಸ್ತಿಗೂ, ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಮತ್ತು ಗುನೀತ್ ಮೊಂಗಾ ನಿರ್ಮಿಸಿದ ‘ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿಗೂ ಪಾತ್ರವಾಗುವುದರೊಂದಿಗೆ ಭಾರತೀಯ ಸಿನೆಮಾ ಪಾಲಿಗೆ ಹೊಸ ದಾಖಲೆ ಬರೆದಿದೆ.

ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ಗೆದ್ದ ‘ಎಲಿಫೆಂಟ್ ವಿಸ್ಪರರ್ಸ್’ ಈ ವಿಭಾಗದಲ್ಲಿ ಆಸ್ಕರ್ ಗೆದ್ದ ಮೊದಲ ಭಾರತೀಯ ಸಾಕ್ಷ್ಯಚಿತ್ರವಾಗಿ ಇತಿಹಾಸ ಬರೆದಿದೆ. ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದ ಮೂರನೇ ಭಾರತೀಯ ಚಿತ್ರ ಇದಾಗಿತ್ತು. 1969ರಲ್ಲಿ ‘ದಿ ಹೌಸ್ ದಟ್ ಆನಂದ ಬಿಲ್ಟ್’ ಮತ್ತು 1979ರಲ್ಲಿ ‘ಆನ್ ಎನ್ ಕೌಂಟರ್ ವಿತ್ ಫೇಸಸ್’ ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದವು.

ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಜೊತೆಯಾಗಿ ಪ್ರಶಸ್ತಿ ಸ್ವೀಕರಿಸಿದರು. ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಪ್ರಶಸ್ತಿಯನ್ನು ತನ್ನ ತಾಯ್ನಾಡಿಗೆ ಸಮರ್ಪಿಸಿದರು. ಇಂಥದೊಂದು ಕಥೆಯನ್ನು ತಂದಿದ್ದಕ್ಕಾಗಿ ಕಾರ್ತಿಕಿ ಅವರಿಗೆ ಗುನೀತ್ ಕೃತಜ್ಞತೆ ಹೇಳಿದ್ದಾರೆ. ಭಾರತೀಯ ನಿರ್ಮಾಣಕ್ಕಾಗಿ ನಾವು ಮೊದಲ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದೇವೆ! ಇಬ್ಬರು ಮಹಿಳೆಯರು ಇದನ್ನು ಸಾಧಿಸಿದ್ದೇವೆ. ನಾನು ಇನ್ನೂ ಕಂಪಿಸುತ್ತಿದ್ದೇನೆ ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.

ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ನಿರ್ಮಾಪಕರಾದ ಗುನೀತ್ ಮೊಂಗಾ ಮತ್ತು ಅಚಿನ್ ಜೈನ್ ಅವರೊಂದಿಗೆ ನಿರ್ಮಿಸಿದ್ದ ಈ ಸಾಕ್ಷ್ಯಚಿತ್ರ ಡಿಸೆಂಬರ್ 2022ರಲ್ಲಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿತ್ತು. ಅಪಾರ ಮೆಚ್ಚುಗೆಗೆ ಪಾತ್ರ ವಾಗಿತ್ತು. ತಮಿಳುನಾಡಿನ ಮದುಮಲೈನ ಹುಲಿ ಸಂರಕ್ಷಿತ ಪ್ರದೇಶದ ಬೊಮ್ಮನ್ ಮತ್ತು ಬೆಳ್ಳಿ ಎಂಬ ದಂಪತಿಯ ಆರೈಕೆಯಲ್ಲಿ ರಘು ಎಂಬ ಅನಾಥ ಆನೆ ಹೊಸ ಬದುಕು ಕಂಡ ಕಥೆಯುಳ್ಳ ಸಾಕ್ಷ್ಯಚಿತ್ರ ಇದು. ಅನಾಥ ಆನೆಮರಿಯ ಆರೈಕೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ದಂಪತಿಯ ಭಾವನಾತ್ಮಕ ಕಥೆಯನ್ನು ಸೊಗಸಾಗಿ, ಆರ್ದ್ರವಾಗಿ ಕಟ್ಟಿಕೊಟ್ಟಿದೆ ‘ದಿ ಎಲಿಫಂಟ್ ವಿಸ್ಪರರ್ಸ್’. 41 ನಿಮಿಷಗಳ ಈ ಕಿರು ಸಾಕ್ಷ್ಯ ಚಿತ್ರ ನಿರ್ದೇಶಕಿಯ ಮೊದಲ ಸಾಕ್ಷ್ಯಚಿತ್ರವೆಂಬುದು ವಿಶೇಷ.

ಈ ಚಿತ್ರ ‘ಹೌಲ್ಔಟ್’, ‘ಹೌ ಡು ಯು ಮೆಸರ್ ಎ ಯಿಯರ್’, ‘ದಿ ಮಾರ್ಥಾ ಮಿಚೆಲ್ ಎಫೆಕ್ಟ್’ ಮತ್ತು ‘ಸ್ಟ್ರೇಂಜರ್ ಅಟ್ ದಿ ಗೇಟ್’ ಸಾಕ್ಷ್ಯಚಿತ್ರಗಳೊಂದಿಗೆ ಸ್ಪರ್ಧಿಸಿತ್ತು.
ಆನೆ ಮತ್ತು ಮನುಷ್ಯರ ನಡುವಿನ ಬಾಂಧವ್ಯವನ್ನು, ಅದರ ಹಿಂದಿನ ಭಾವನೆಯನ್ನು ಪರಿಣಾಮಕಾರಿಯಾಗಿ ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದವರು ಕ್ರಿಶ್ ಮಖಿಜಾ, ಕರಣ್ ಥಪ್ಲಿಯಾಲ್ (ಆಸ್ಕರ್ ನಾಮನಿರ್ದೇಶಿತ ಸಾಕ್ಷ್ಯಚಿತ್ರ ‘ರೈಟಿಂಗ್ ವಿತ್ ಫೈರ್’ನಲ್ಲಿ ಕೆಲಸ ಮಾಡಿದ್ದವರು) ಮತ್ತು ಆನಂದ್ ಬನ್ಸಲ್. 2017ರಲ್ಲಿ ಈ ಸಾಕ್ಷ್ಯಚಿತ್ರದ ಕೆಲಸ ಶುರುವಾಯಿತು.

ಮರಿಯಾನೆಗಳನ್ನು ಪೋಷಿಸಿದ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯ ಜೊತೆ ನಿಯತವಾಗಿ ತಾವು ಮಾತನಾಡುತ್ತಿರುವ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಕಾರ್ತಿಕಿ. ಪ್ರಶಸ್ತಿ ಬಂದುದಕ್ಕೆ ಆನೆಶಿಬಿರದಲ್ಲಿ ಸಂತಸ ತುಂಬಿದೆ. ಅವರ ಆನೆ ಪ್ರೀತಿ ಅವರ ಪಾಲಿಗೆ ಇಡೀ ಜಗತ್ತಿನ ಪ್ರೀತಿಯನ್ನು ತಂದುಕೊಟ್ಟಿದೆ. ಮಾತಾಡುವಾಗೆಲ್ಲ ಅವರು ಖುಷಿಯಿಂದ ಅತ್ತುಬಿಡುತ್ತಾರೆ. ಅವರ ಬಗ್ಗೆ ಜಗತ್ತಿನ ಜನರೆಲ್ಲ ಎಷ್ಟು ಪ್ರೀತಿಯಿಂದ ಮಾತನಾಡುತ್ತಿದ್ದಾರೆ ಎಂಬುದನ್ನು ಅವರಿಗೆ ತಿಳಿಸುವುದು ಈಗ ನನ್ನ ಕರ್ತವ್ಯವಾಗಿದೆ ಎಂದು ಕಾರ್ತಿಕಿ ಹೇಳಿದ್ದಾರೆ.

ಆನೆಮರಿಗಳೊಂದಿಗೆ ಕಳೆದ ದಿನಗಳನ್ನು ನೆನೆಯುವ ಕಾರ್ತಿಕಿ, ರಘುವನ್ನು ಮೊದಲು ಕಂಡಿದ್ದಾಗ ಅದು ಮೊಣಕಾಲಿನಷ್ಟೇ ಎತ್ತರಕ್ಕಿತ್ತು. ಈಗ ಅದು ನನಗಿಂತ ಎತ್ತರವಾಗಿದೆ. ಅದರ ಜೊತೆಗಿನ ಮತ್ತೊಂದು ಮರಿಯಾನೆ ಅಮ್ಮು ಕೂಡ ಈಗ ಎತ್ತರವಾಗಿದೆ. ಆಗ ಅದು ನಾಲ್ಕು ಅಡಿ ಎತ್ತರವಿತ್ತು. ನಮ್ಮ ಬಂಧುಗಳಂತೆ ಕಾಣಿಸುತ್ತವೆ ಅವು. ಬಹಳ ವಿಧೇಯವಾಗಿಯೂ ಇವೆ ಎನ್ನುತ್ತಾರೆ ಕಾರ್ತಿಕಿ.

ಹೆಚ್ಚಿನ ಚಿತ್ರಗಳು ಒಂದೋ ಮನುಷ್ಯರು ಪ್ರಾಣಿಗಳೊಂದಿಗಿನ ಬಾಂಧವ್ಯದಿಂದ ಖುಷಿಪಡುವುದನ್ನು ಚಿತ್ರಿಸುತ್ತವೆ. ಇಲ್ಲವೇ, ಕಾಡು ಪ್ರಾಣಿಗಳಿಂದ ಮನುಷ್ಯರು ಅಥವಾ ಮನುಷ್ಯರಿಂದ ಕಾಡುಪ್ರಾಣಿಗಳು ತೊಂದರೆಗೆ ಒಳಗಾಗುವುದನ್ನು ತೋರಿಸುತ್ತವೆ. ಆದರೆ, ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ, ಆನೆ ಮತ್ತು ಮನುಷ್ಯ ಸಂಬಂಧದಲ್ಲಿ ಅತಿ ಸೂಕ್ಷ್ಮ ಮತ್ತು ಭಾವನಾತ್ಮಕ ಘಳಿಗೆಗಳನ್ನು ಅರ್ಥ ಮಾಡಿಕೊಳ್ಳಲು ವೀಕ್ಷಕರಿಗೆ ನೆರವಾಗುತ್ತದೆ. ಆನೆಗಳ ಘನತೆಯನ್ನು ಚಿತ್ರಿಸುತ್ತಲೇ, ಅವುಗಳೊಂದಿಗೆ ಶತಮಾನಗಳಿಂದ ವಾಸಿಸುತ್ತಿದ್ದ ಮತ್ತು ಅವುಗಳ ಬಗ್ಗೆ ಕಾಳಜಿ ವಹಿಸಿದ ಸ್ಥಳೀಯ ಜನರ ಬಗ್ಗೆಯೂ ಅಷ್ಟೇ ಗಾಢವಾಗಿ ಹೇಳುತ್ತದೆ ಎನ್ನುವ ಕಾರ್ತಿಕಿ, ಪ್ರಾಣಿಗಳನ್ನು ಬೇರೆ ಎಂದು ನೋಡುವುದನ್ನು ನಿಲ್ಲಿಸುವ, ಅವುಗಳನ್ನು ನಮ್ಮಲ್ಲಿ ಒಬ್ಬರಂತೆ ನೋಡಬೇಕಿರುವ ಅಗತ್ಯದ ಬಗ್ಗೆ ಹೇಳುತ್ತಾರೆ. ಸ್ಥಳೀಯರು ಅಂತಹ ಆಳವಾದ ಪ್ರಾಚೀನ ಜ್ಞಾನವನ್ನು ಹೊಂದಿದ್ದಾರೆ ಮತ್ತು ಅವರು ಭೂಮಿಯ ಬಗ್ಗೆ ಗೌರವ ಹೊಂದಿದ್ದಾರೆ ಮಾತ್ರವಲ್ಲ, ತಮ್ಮ ನೆಲೆಯನ್ನು ಹಂಚಿಕೊಂಡು ಬದುಕಬಲ್ಲರು. ಇದು ಬಹಳ ದೊಡ್ಡ ವಿಚಾರ ಎನ್ನುತ್ತಾರೆ ಕಾರ್ತಿಕಿ.

2017ರಲ್ಲಿ, ಆ ಆನೆಮರಿಯನ್ನು ಮೊದಲು ಕಾರ್ತಿಕಿ ಗೊನ್ಸಾಲ್ವೆಸ್ ಕಂಡಾಗ ಅದು ಕೇವಲ ಮೂರು ತಿಂಗಳದ್ದಾಗಿತ್ತು. ಬೆಂಗಳೂರಿನಿಂದ ಊಟಿಯ ಮನೆಗೆ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ, ಅನಾಥ ಆನೆ ಮತ್ತು ಅದರ ಪೋಷಕ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದುದನ್ನು ಕಂಡಲ್ಲಿಂದ ಕಾರ್ತಿಕಿ ಕುತೂಹಲ ಆರಂಭವಾಯಿತು. ಬಳಿಕ ಐದು ವರ್ಷ ಅದರ ಬದುಕನ್ನು ಗಮನಿಸಿದ್ದ ಕಾರ್ತಿಕಿ ಅವರಿಗೆ ಆನೆಮರಿಯೊಂದಿಗೆ ಮಧುರ ಬಾಂಧವ್ಯ ಬೆಳೆದಿತ್ತು. ತಾವು ಅದಕ್ಕೆ ಸ್ನಾನ ಮಾಡಿಸಿದ್ದನ್ನೂ, ಅದು ತಮ್ಮ ತಲೆಗೂದಲು ಎಳೆಯುತ್ತಿದ್ದ ಕ್ಷಣಗಳನ್ನೂ ಸಂದರ್ಶನವೊಂದರಲ್ಲಿ ನೆನೆದಿದ್ದಾರೆ ಕಾರ್ತಿಕಿ. ಆನೆಮರಿಯ ಆಟ, ಆಹಾರ, ಸ್ನಾನ ಸೇರಿದಂತೆ 450 ಗಂಟೆಗಳಿಗೂ ಹೆಚ್ಚಿನ ಫೂಟೇಜ್ ಹೊಂದಿದ್ದ ಕಾರ್ತಿಕಿ, ಅಂತಿಮವಾಗಿ ಅದನ್ನು ಇಂಥದೊಂದು ಅಪರೂಪದ ಸಾಕ್ಷ್ಯಚಿತ್ರವಾಗಿ ರೂಪಿಸಿದರು. ಮನುಷ್ಯ ಮತ್ತು ಪ್ರಾಣಿಯ ನಡುವೆ ಬೆಳೆಯುವ ಸಂಬಂಧ ಎಷ್ಟೊಂದು ಗಾಢವಾಗಿರಬಲ್ಲದು ಎಂಬುದನ್ನು ಈ ಸಾಕ್ಷ್ಯಚಿತ್ರ ನಿರೂಪಿಸುತ್ತದೆ. ಅದೀಗ ಆಸ್ಕರ್ ಗೆಲ್ಲುವುದರೊಂದಿಗೆ ಭಾರತದ ಪಾಲಿನ ಹೆಮ್ಮೆಯಾಗಿ ದಾಖಲಾಗಿದೆ.

ಶೌನಕ್ ಸೇನ್ ಅವರ ‘ಆಲ್ ದಟ್ ಬ್ರೀಥ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶನ ಗೊಂಡಿತ್ತಾದರೂ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಆ ಕೊರತೆಯನ್ನು ‘‘ನಾಟು ನಾಟು’’ ಮತ್ತು ‘‘ದಿ ಎಲಿಫಂಟ್ ವಿಸ್ಪರರ್ಸ್’’ ತುಂಬಿಕೊಟ್ಟಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)